AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೋಂಸ್ಟೇಗೆ ನೋಂದಣಿ ಕಡ್ಡಾಯ: ಕರ್ನಾಟಕದಾದ್ಯಂತ 500ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ

Karnataka News: ಕರ್ನಾಟಕದಲ್ಲಿ ಹೋಂಸ್ಟೇಗಳ ನೋಂದಣಿ ಕಡ್ಡಾಯ ಮಾಡಿದ ಬೆನ್ನಲ್ಲೇ, ಈಗಾಗಲೇ 500ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಸುರಕ್ಷತೆ, ಸ್ವಚ್ಛತೆ ಸೇರಿದಂತೆ ನಿಗದಿತ ಮಾನದಂಡಗಳನ್ನು ಪೂರೈಸಿದ ಹೋಂಸ್ಟೇಗಳಿಗೆ ಮಾತ್ರ ಸರ್ಕಾರ ಅಧಿಕೃತ ನೋಂದಣಿ ನೀಡಲಿದೆ. ಕೊಡಗಿನಲ್ಲಿ ನಡೆದ ಅತ್ಯಾಚಾರ ಪ್ರಕರಣದ ನಂತರ ಹೋಂಸ್ಟೇಗಳ ವಿಚಾರದಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ಹೋಂಸ್ಟೇಗೆ ನೋಂದಣಿ ಕಡ್ಡಾಯ: ಕರ್ನಾಟಕದಾದ್ಯಂತ 500ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ
ಹೋಂಸ್ಟೇ (ಸಾಂದರ್ಭಿಕ ಚಿತ್ರ)Image Credit source: Getty Images
ಗಣಪತಿ ಶರ್ಮಾ
|

Updated on: Jul 20, 2026 | 2:55 PM

Share

ಮುಖ್ಯಾಂಶಗಳು

  • 500ಕ್ಕೂ ಹೆಚ್ಚು ಹೋಂಸ್ಟೇಗಳಿಂದ ನೋಂದಣಿ ಅರ್ಜಿ
  • ಮಾನದಂಡ ಪೂರೈಸಿದವರಿಗೆ ಮಾತ್ರ ನೋಂದಣಿ ಪ್ರಮಾಣಪತ್ರ
  • ನೋಂದಣಿ ಪ್ರಮಾಣಪತ್ರಕ್ಕೆ ಐದು ವರ್ಷಗಳ ಮಾನ್ಯತೆ

ಬೆಂಗಳೂರು, ಜುಲೈ 20: ಕರ್ನಾಟಕದಲ್ಲಿ (Karnataka) ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಹೋಂಸ್ಟೇಗಳು (Homestays) ಪ್ರವಾಸೋದ್ಯಮ ಇಲಾಖೆಯಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು ಎಂದು ರಾಜ್ಯ ಸರ್ಕಾರ ಸೂಚಿಸಿದ್ದು, ಹೊಸ ಮಾರ್ಗಸೂಚಿಗಳ ಅನ್ವಯ ಈಗಾಗಲೇ 500ಕ್ಕೂ ಹೆಚ್ಚು ಹೋಂಸ್ಟೇಗಳು ನೋಂದಣಿಗೆ ಅರ್ಜಿ ಸಲ್ಲಿಸಿವೆ. ದಾಖಲೆಗಳ ಪರಿಶೀಲನೆ ಹಾಗೂ ಸ್ಥಳ ಪರಿಶೀಲನೆ ಪ್ರಕ್ರಿಯೆ ನಡೆಯುತ್ತಿದ್ದು, ಮಾನದಂಡಗಳನ್ನು ಪೂರೈಸಿದ ಹೋಂಸ್ಟೇಗಳಿಗೆ ಮಾತ್ರ ನೋಂದಣಿ ಪ್ರಮಾಣಪತ್ರ ನೀಡಲಾಗುತ್ತದೆ.

‘ಹೋಂಸ್ಟೇ ಎಸ್ಟಾಬ್ಲಿಷ್‌ಮೆಂಟ್ ನೋಂದಣಿ ಮಾರ್ಗಸೂಚಿ-2025’ ಅಡಿಯಲ್ಲಿ ಇನ್ನೂ ನೋಂದಣಿ ಮಾಡಿಸದ ಎಲ್ಲ ಹೋಂಸ್ಟೇ ಮಾಲೀಕರು ಕಡ್ಡಾಯವಾಗಿ ಅರ್ಜಿ ಸಲ್ಲಿಸುವಂತೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಆಯುಕ್ತ ವಿ. ರಾಮ್ ಪ್ರಸಾತ್ ಮನೋಹರ್ ಸೂಚಿಸಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಅಮೆರಿಕದ ಮಹಿಳೆಯ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಬಳಿಕ ಹೋಂಸ್ಟೇಗಳ ಸುರಕ್ಷತೆ ಹಾಗೂ ನಿಯಂತ್ರಣಕ್ಕೆ ಸರ್ಕಾರ ಹೆಚ್ಚಿನ ಒತ್ತು ನೀಡಿದೆ.

400ಕ್ಕೂ ಹೆಚ್ಚು ಅರ್ಜಿಗಳ ಪರಿಶೀಲನೆ ನಡೆಸಿದ ಪ್ರವಾಸೋದ್ಯಮ ಇಲಾಖೆ

ಈವರೆಗೆ ಬಂದಿರುವ ಅರ್ಜಿಗಳ ಪೈಕಿ ಸುಮಾರು 400 ಅರ್ಜಿಗಳ ದಾಖಲೆಗಳನ್ನು ಪರಿಶೀಲಿಸಲಾಗಿದ್ದು, ಸ್ಥಳ ಪರಿಶೀಲನೆ ಪ್ರಗತಿಯಲ್ಲಿದೆ. ಪ್ರವಾಸೋದ್ಯಮ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ನಗರಾಭಿವೃದ್ಧಿ ಘಟಕದ ಅಧಿಕಾರಿಗಳು ಜಂಟಿಯಾಗಿ ಪರಿಶೀಲನೆ ನಡೆಸುತ್ತಿದ್ದಾರೆ.

ಹೋಂಸ್ಟೇಗಳ ನೋಂದಣಿಗೆ ಮಾನದಂಡವೇನು?

ಹೋಂಸ್ಟೇಗಳಲ್ಲಿ ಮೂಲಸೌಕರ್ಯ, ಸುರಕ್ಷತೆ, ಸ್ವಚ್ಛತೆ ಮತ್ತು ಕಾರ್ಯಾಚರಣೆಗೆ ಸಂಬಂಧಿಸಿದ ನಿಯಮಗಳನ್ನು ಪಾಲಿಸಲಾಗಿದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಲಿದ್ದಾರೆ. ನಿಗದಿತ ಮಾನದಂಡಗಳನ್ನು ಪೂರೈಸದ ಹೋಂಸ್ಟೇಗಳಿಗೆ ನೋಂದಣಿ ನೀಡುವುದಿಲ್ಲ. ಕೊರತೆಗಳನ್ನು ಸರಿಪಡಿಸಿದ ಬಳಿಕ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ಇರಲಿದೆ.

ಪರಿಶೀಲನೆ ಪೂರ್ಣಗೊಂಡ 45 ದಿನಗಳ ಒಳಗೆ ಸರ್ಟಿಫಿಕೇಟ್

ಪರಿಶೀಲನೆ ಪೂರ್ಣಗೊಂಡು ಸಂಬಂಧಿತ ಪ್ರಾಧಿಕಾರದ ಅನುಮೋದನೆ ದೊರೆತ ಬಳಿಕ 45 ದಿನಗಳೊಳಗೆ ನೋಂದಣಿ ಪ್ರಮಾಣಪತ್ರ ನೀಡಲಾಗುತ್ತದೆ. ಈ ಪ್ರಮಾಣಪತ್ರವು ಐದು ವರ್ಷಗಳ ಕಾಲ ಮಾನ್ಯವಾಗಿದ್ದು, ನಂತರ ನವೀಕರಣ ಕಡ್ಡಾಯವಾಗಲಿದೆ.

ಇದನ್ನೂ ಓದಿ: ಪ್ರವಾಸಿಗರೇ ಎಚ್ಚರ! 2000ಕ್ಕೂ ಹೆಚ್ಚು ಅಕ್ರಮ ಹೋಂಸ್ಟೇಗಳ ಕಪಿಮುಷ್ಠಿಯಲ್ಲಿ ಕೊಡಗು; ಕಠಿಣ ಕ್ರಮಕ್ಕೆ ಆಗ್ರಹ

ಈ ಕ್ರಮದಿಂದ ರಾಜ್ಯದಲ್ಲಿನ ಅಧಿಕೃತ ಹೋಂಸ್ಟೇಗಳ ವಿಶ್ವಾಸಾರ್ಹ ಡೇಟಾಬೇಸ್ ನಿರ್ಮಾಣವಾಗುವುದರ ಜೊತೆಗೆ, ಪ್ರವಾಸಿಗರಿಗೆ ಸುರಕ್ಷಿತ ಹಾಗೂ ಗುಣಮಟ್ಟದ ವಸತಿ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಉದ್ದೇಶವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us