ಕಂದಾಯ ನ್ಯಾಯಾಲಯಗಳಲ್ಲಿ ಸಮರೋಪಾದಿಯಲ್ಲಿ ಪ್ರಕರಣಗಳ ವಿಲೇವಾರಿ: ಸಿದ್ದರಾಮಯ್ಯ ಫುಲ್ ಖುಷ್
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಹತ್ತು ವರ್ಷಗಳಿಗಿಂತ ಹೆಚ್ಚು ಹಳೆಯ ಭೂ ಪ್ರಕರಣಗಳನ್ನು ತ್ವರಿತವಾಗಿ ಪರಿಹರಿಸುವ ಬಗ್ಗೆ ಚರ್ಚಿಸಿದರು. ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿ ನ್ಯಾಯಾಲಯಗಳಲ್ಲಿ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ತಿಳಿಸಲಾಯಿತು. ಡಿಜಿಟಲೀಕರಣ ಮತ್ತು ಆಧಾರ್ ಸಂಯೋಜನೆಯಿಂದ ಭೂ ದಾಖಲೆಗಳ ಭದ್ರತೆ ಹೆಚ್ಚಿದೆ. ಭವಿಷ್ಯದಲ್ಲಿ ಪ್ರಕರಣಗಳ ವಿಲೇವಾರಿ ವೇಗ ಮತ್ತು ಗುಣಮಟ್ಟವನ್ನು ಸುಧಾರಿಸುವುದರ ಮೇಲೆ ಒತ್ತು ನೀಡಲಾಯಿತು.

ಬೆಂಗಳೂರು, ಜನವರಿ 29: 10 ವರ್ಷ, 5 ವರ್ಷಕ್ಕೂ ಅಧಿಕ ಅವಧಿಯಿಂದ ಬಾಕಿ ಇದ್ದ ಮುಕ್ಕಾಲು ಪ್ರಕರಣಗಳಿಗೆ ಒಂದೂವರೆ ವರ್ಷದಲ್ಲಿ ಮುಕ್ತಿ ಸಿಕ್ಕಿದೆ. ನಮ್ಮ ಸರ್ಕಾರ ಬಂದಾಗ 10 ಸಾವಿರಕ್ಕೂ ಹೆಚ್ಚು ಅವಧಿ ಮೀರಿದ ಪ್ರಕರಣಗಳು ಇದ್ದವು. ಈಗ ಕೇವಲ 369 ಪ್ರಕರಣಗಳು ಮಾತ್ರ ತಹಶೀಲ್ದಾರ್ ನ್ಯಾಯಾಲಯಗಳಲ್ಲಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ದಾಖಲೆ ಸಮೇತ ಸಚಿವ ಕೃಷ್ಣಬೈರೇಗೌಡ (Krishna Byregowda) ವಿವರಿಸಿದರು.
ಬರೀ quantity ವಿಲೇವಾರಿ ಸಾಲದು, quality ವಿಲೇವಾರಿ ಆದರೆ ಮಾತ್ರ ಮೇಲ್ಮನವಿಗಳಿಗೆ ಬ್ರೇಕ್ ಬೀಳುತ್ತದೆ. ಈ ದಿಕ್ಕಲ್ಲಿ ಹೆಚ್ಚಿನ ಗಮನ ಹರಿಸಿ ಎಂದು ಸಚಿವ ಕೃಷ್ಣಬೈರೇಗೌಡರಿಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೃಷ್ಣಾದಲ್ಲಿ ನಡೆಸಿದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಇತರೆ ಮುಖ್ಯಾಂಶಗಳು.
ಖಾತೆ ಬದಲಾವಣೆ ಪ್ರಕ್ರಿಯೆಯನ್ನು ಶೇ.65 ಪ್ರಕರಣಗಳಲ್ಲಿ ಒಂದು ದಿನದ ಒಳಗಾಗಿ ಮಾಡಲಾಗುತ್ತಿರುವುದು ಒಳ್ಳೆಯ ಸಂಗತಿ. ಅಟೋ ಮ್ಯುಟೇಶನ್ ಮೂಲಕ ಇದು ಸಾಧ್ಯವಾಗಿದೆ.
ಭೂ ಪರಿವರ್ತನೆ ಸಂಪೂರ್ಣ ಪ್ರಕ್ರಿಯೆಯನ್ನು ಒಂದು ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕು. ಮಾಸ್ಟರ್ ಪ್ಲಾನ್ ಆದ ಕಡೆ ಮತ್ತೆ ಭೂ ಪರಿವರ್ತನೆ ಅಗತ್ಯವಿಲ್ಲ ಎಂದು ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಈ ಕುರಿತು ಆದೇಶವನ್ನು ಆದಷ್ಟು ಬೇಗನೆ ಹೊರಡಿಸಲು ಸಿಎಂ ಸೂಚನೆ ನೀಡಿದ್ದಾರೆ.
ನಗರ ಪ್ರದೇಶಗಳಲ್ಲಿ ಮಾಸ್ಟರ್ ಪ್ಲಾನ್ ಕಾಲದಿಂದ ಕಾಲಕ್ಕೆ ನವೀಕರಿಸಬೇಕು. ಮ್ಯುಟೇಶನ್, ಭೂ ಪರಿವರ್ತನೆ ಪ್ರಕರಣಗಳಲ್ಲಿ ಜನಸಾಮಾನ್ಯರಿಗೆ ಯಾವುದೇ ಕಿರುಕುಳ, ಅನಗತ್ಯ ವಿಳಂಬವಾಗದಂತೆ ಎಚ್ಚರಿಕೆ ವಹಿಸಿ ಎಂದು ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ ನೀಡಿದರು.
ಆದಷ್ಟು ಬೇಗನೆ ಮಾಸ್ಟರ್ ಪ್ಲಾನ್ ಸಿದ್ದಪಡಿಸಬೇಕು. ಕಂದಾಯ ನ್ಯಾಯಾಲಯಗಳಲ್ಲಿ ಪ್ರಕರಣಗಳನ್ನು ಆದ್ಯತೆ ಮೇರೆಗೆ ವಿಲೇವಾರಿ ಮಾಡಬೇಕು. ವಿಳಂಬಕ್ಕೆ ಅವಕಾಶ ಇರಬಾರದು. ತಹಶೀಲ್ದಾರ್ ನ್ಯಾಯಾಲಯಗಳಲ್ಲಿ 3 ತಿಂಗಳ ಒಳಗಾಗಿ ಪ್ರಕರಣಗಳ ವಿಲೇವಾರಿ ಮಾಡಬೇಕು ನಮ್ಮ ಸರ್ಕಾರ ಬಂದಾಗ 10 ಸಾವಿರಕ್ಕೂ ಹೆಚ್ಚು ಅವಧಿ ಮೀರಿದ ಪ್ರಕರಣಗಳು ಇದ್ದವು. ಈಗ ಕೇವಲ 369 ಪ್ರಕರಣಗಳು ಮಾತ್ರ ತಹಶೀಲ್ದಾರ್ ನ್ಯಾಯಾಲಯಗಳಲ್ಲಿವೆ. ಪ್ರಕರಣಗಳ ವಿಲೇವಾರಿ ತ್ವರಿತಗೊಳಿಸುವ ಜತೆಗೆ ನ್ಯಾಯದಾನದ ಗುಣಮಟ್ಟ ಸಹ ಸುಧಾರಿಸಬೇಕು.
ಜಿಲ್ಲಾಧಿಕಾರಿ ನ್ಯಾಯಾಲಯಗಳಲ್ಲಿ ಹತ್ತಾರು ವರ್ಷಗಳಿಂದ ಬಾಕಿ ಉಳಿದಿದ್ದ ಪ್ರಕರಣಗಳಲ್ಲಿ ಕೇವಲ ಒಂದು ವರ್ಷದಲ್ಲಿ ಶೇ36 ರಷ್ಟು ಪ್ರಕರಣಗಳ ವಿಲೇವಾರಿಯಾಗಿವೆ.
ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳ ನ್ಯಾಯಾಲಯಗಳಲ್ಲಿ ಪ್ರಕರಣಗಳು ಸಮರೋಪಾದಿಯಲ್ಲಿ ವಿಲೇವಾರಿ ಆಗುತ್ತಿದೆ. ಆದರೆ ಉಪ ವಿಭಾಗಾಧಿಕಾರಿ ನ್ಯಾಯಾಲಯಗಳಲ್ಲಿ ವಿಲೇವಾರಿ ವೇಗ ಕಡಿಮೆ ಇರುವುದನ್ನು ತಾಂತ್ರಿಕ ಕಾರಣಗಳ ಸಮೇತ ಸಚಿವ ಕೃಷ್ಣಬೈರೇಗೌಡರು ಸಿಎಂಗೆ ವಿವರಿದರು. ಇದನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಬೇಕು. ಉಪವಿಭಾಗಾಧಿಕಾರಿ ನ್ಯಾಯಾಲಯಗಳ ಕಾರ್ಯವೈಖರಿ ಸುಧಾರಿಸಬೇಕು. ಈ ಬಗ್ಗೆ ಉಪ ವಿಭಾಗಾಧಿಕಾರಿಗಳಿಗೆ ಕೊನೆಯ ಎಚ್ಚರಿಕೆ ಕೊಡಿ ಎಂದು ಸಿಎಂ ಸೂಚಿಸಿದರು.
ಜಿಲ್ಲಾಧಿಕಾರಿ ನ್ಯಾಯಾಲಯಗಳಲ್ಲಿ 9947 ಒಂದು ವರ್ಷಕ್ಕೂ ಅಧಿಕ ಅವಧಿಯಿಂದ ಬಾಕಿಯಿತ್ತು. ಈಗ ಇದರ ಪ್ರಮಾಣ ಕೇವಲ 6 ಸಾವಿರಕ್ಕೆ ಇಳಿದಿದೆ. ಬೆಂಗಳೂರು ವ್ಯಾಪ್ತಿಯಲ್ಲಿ ಪ್ರಕರಣಗಳ ತ್ವರಿತ ವಿಲೇವಾರಿಗೆ 18 ವಿಶೇಷ ಉಪವಿಭಾಗಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಜಮೀನು ಖಾತೆಗೆ ಆಧಾರ್ ಸೀಡಿಂಗ್ ಮಾಡಲಾಗುತ್ತಿದೆ. ರಾಜ್ಯದಲ್ಲಿ ಇದುವರೆಗೆ 2.22 ಕೋಟಿ ಖಾತೆಗಳಿಗೆ ಆಧಾರ ಸೀಡಿಂಗ್ ಮಾಡಲಾಗಿದ್ದು, ಇದರಿಂದ ನಕಲಿ ದಾಖಲೆ ಸೃಷ್ಟಿಸುವುದನ್ನು ತಡೆಯಲು ಸಾಧ್ಯವಾಗಿದೆ. ಭೂ ಪರಿವರ್ತನೆಯಾಗದೆ ವಾಣಿಜ್ಯ ಉದ್ದೇಶಗಳಿಗೆ ಜಮೀನು ಬಳಕೆ ಪ್ರಕರಣಗಳನ್ನು ಪತ್ತೆ ಹಚ್ಚಲು ಇದರಿಂದ ಸಾಧ್ಯವಾಗಿದೆ.
ಅನಧಿಕೃತ ಬಡಾವಣೆಗಳಿಗೆ ಖಾತಾ ನೀಡುವುದನ್ನು ಸ್ಥಗಿತಗೊಳಿಸಲು ಈಗಾಗಲೇ ಸೂಚನೆ ನೀಡಿದ್ದೇವೆ. ಒಂದು ಅವಧಿಗೆ ಬಿ ಖಾತಾ ನೀಡುವ ಪ್ರಕ್ರಿಯೆ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ, ಇನ್ನು ಮುಂದೆ ಅನಧಿಕೃತ ಬಡಾವಣೆಗಳು ತಲೆ ಎತ್ತದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ರಾಜ್ಯದಲ್ಲಿ ಹಲವು ಪ್ರಕರಣಗಳಲ್ಲಿ ಜಮೀನುಗಳ ಖಾತೆ ಇನ್ನೂ ನಿಧನ ಹೊಂದಿದವರ ಹೆಸರಿನಲ್ಲಿಯೇ ಇದೆ. ಪೌತಿ ಖಾತೆ ಅಭಿಯಾನದ ಮೂಲಕ ಮಾಲಿಕರ ಹೆಸರಿಗೆ ಜಮೀನು ಮಾಡುವ ನೋಂದಣಿ ಮಾಡುವ ಕಾರ್ಯವನ್ನು ತ್ವರಿತಗೊಳಿಸಬೇಕು ಎಂದು ಸೂಚನೆ ನೀಡಿದರು.
ಭೂ ದಾಖಲೆಗಳ ರಕ್ಷಣೆಗೆ, ವಂವಕರಿಂದ ದುರುಪಯೋಗ ಆಗದಂತೆ, ದಾಖಲೆ ತಿದ್ದಲು ಅವಕಾಶ ಆಗದಂತೆ “ಭೂ ಸುರಕ್ಷಾ” ಪರಿಣಾಮಕಾರಿಯಾಗಿ ಜಾರಿಯಾಗಲಿ ಎಂದು ಸಿಎಂ ಸೂಚನೆ ನೀಡಿದ್ದಾರೆ.
ಈಗಾಗಲೇ 8 ಕೋಟಿ ಮೂಲ ದಾಖಲೆಗಳ ಕಂಪ್ಯೂಟರೀಕರಣ. ಖದೀಮರು ತಿದ್ದಲು ಅವಕಾಶ ಆಗದಂತೆ ದಾಖಲೆಗಳಿಗೆ ಡಿಜಿಟಲ್ ಭದ್ರತೆ ಕುರಿತು ಮುಖ್ಯಮಂತ್ರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ವಿವರಿಸಿದರು.
ಇತರೆ ಹೈಲೈಟ್ಸ್ಗಳು
ತಂತ್ರಾಂಶವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಕಂದಾಯ ವ್ಯವಸ್ಥೆಯಲ್ಲಿ ಸುಧಾರಣಾ ಕಾರ್ಯ ಕೈಗೊಳ್ಳಲಾಗಿದೆ. ನಕ್ಷಾ ಯೋಜನೆ ಮೂಲಕ ನಗರ ಪ್ರದೇಶದಲ್ಲಿ ಡ್ರೋನ್ ಸರ್ವೆ ಮೂಲಕ ಪ್ರಾಪರ್ಟಿ ಕಾರ್ಡು ನೀಡುತ್ತಿದ್ದೇವೆ. 21 ಜಿಲ್ಲೆಗಳಲ್ಲಿ ಡ್ರೋನ್ ಮೂಲಕ ಸರ್ವೇ ಕಾರ್ಯವನ್ನು ಕೈಗೊಳ್ಳಲಾಗಿದೆ. ಉಳಿದ ಜಿಲ್ಲೆಗಳಲ್ಲೂ ಡ್ರೋನ್ ಸರ್ವೆ ಆರಂಭಿಸಲು ಸಿಎಂ ಸೂಚನೆ ನೀಡಿದರು.
ಭೂ ಸುರಕ್ಷಾ ಯೋಜನೆ ಮೂಲಕ ಭೂ ದಾಖಲೆಗಳ ಕಂಪ್ಯೂಟರೀಕರಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಇದುವರೆಗೆ ಸುಮಾರು 8 ಕೋಟಿ ಮೂಲ ದಾಖಲೆಗಳ ಕಂಪ್ಯೂಟರೀಕರಣ ಪೂರ್ಣಗೊಳಿಸಲಾಗಿದೆ. ಎಲ್ಲಾ 31 ಜಿಲ್ಲೆಗಳಲ್ಲಿ ದಾಖಲೆಗಳ ಕಂಪ್ಯೂಟರೀಕರಣ ಕಾರ್ಯ ನಡೆಯುತ್ತಿದೆ.
ಹಲವು ವರ್ಷಗಳಿಂದ ಸರ್ಕಾರಿ ಜಮೀನು ಸಾಗುವಳಿ ಮಾಡುತ್ತಿರುವ ರೈತರಿಂದ ಸದರಿ ಜಮೀನು ಸ್ವಾಧೀನಪಡಿಸುವ ಸಂದರ್ಭದಲ್ಲಿ ಎಕ್ಸ್ ಗ್ರೇಷಿಯಾ ನೀಡುವ ಬಗ್ಗೆ ಸೂಕ್ತ ಪ್ರಸ್ತಾವನೆಯನ್ನು ಸಲ್ಲಿಸಬೇಕು.