ಪೊಲೀಸ್ ನೇಮಕಾತಿ ಪರೀಕ್ಷೆ ಯಶಸ್ವಿ: OMR, ಪ್ರಶ್ನೆ ಪತ್ರಿಕೆ ಸಂಖ್ಯೆ ಒಂದೇ ಆಗಿರಬೇಕಿಲ್ಲ ಎಂದ ಕೆಇಎ

Karnataka Police Constable Exam: ರಾಜ್ಯಾದ್ಯಂತ ಇಂದು ನಡೆದ ಪೊಲೀಸ್ ನೇಮಕಾತಿ ಪರೀಕ್ಷೆ ಅತ್ಯಂತ ಯಶಸ್ವಿಯಾಗಿ ನಡೆಸಲಾಯಿತು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಹೇಳಿದ್ದಾರೆ. OMR ಮತ್ತು ಪ್ರಶ್ನೆ ಪತ್ರಿಕೆ ಸಂಖ್ಯೆ ಒಂದೇ ಆಗಿರಬೇಕಿಲ್ಲ ಎಂದು ಕೆಇಎ ಸ್ಪಷ್ಟನೆ ನಿಡಿದೆ.

ಪೊಲೀಸ್ ನೇಮಕಾತಿ ಪರೀಕ್ಷೆ ಯಶಸ್ವಿ: OMR, ಪ್ರಶ್ನೆ ಪತ್ರಿಕೆ ಸಂಖ್ಯೆ ಒಂದೇ ಆಗಿರಬೇಕಿಲ್ಲ ಎಂದ ಕೆಇಎ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ
Image Credit source: google
Edited By:

Updated on: Aug 02, 2026 | 9:36 PM

ಬೆಂಗಳೂರು, ಆಗಸ್ಟ್​​ 02: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 3991 ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗಾಗಿ (Police Constable Exam) ಇಂದು ನಡೆದ ಪರೀಕ್ಷೆ ಅತ್ಯಂತ ಯಶಸ್ವಿಯಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾಹಿತಿ ನೀಡಿದೆ. ಜೊತೆಗೆ OMR ಸಂಖ್ಯೆ ಮತ್ತು ಪ್ರಶ್ನೆ ಪತ್ರಿಕೆ ಕ್ರಮಸಂಖ್ಯೆ ಒಂದೇ ಆಗಿರಬೇಕಿಲ್ಲ ಎಂದು ಸ್ಪಷ್ಟನೆ ನೀಡುವ ಮೂಲಕ ಗೊಂದಲಗಳಿಗೆ ತೆರೆ ಎಳೆದಿದೆ.

ಗೊಂದಲಗಳಿಗೆ ಕೆಇಎ ಸ್ಪಷ್ಟನೆ

ಪೊಲೀಸ್​ ಕಾನ್ಸ್​ಟೇಬಲ್ ಪರೀಕ್ಷೆ ವೇಳೆ ಗೊಂದಲ ವಿಚಾರವಾಗಿ ಇದೀಗ ಕೆಇಎ ಸ್ಪಷ್ಟನೆ ನೀಡಿದೆ. ಈ ಕುರಿತಾಗಿ ಮಾಧ್ಯಮ ಪ್ರಕರಣೆ ಹೊರಡಿಸಲಾಗಿದ್ದು, ‘ಪ್ರಾಧಿಕಾರವು ಯಾವುದೇ ಪ್ರಕಟಣೆ, ಸೂಚನೆ ಅಥವಾ ನಿಯಮಾವಳಿಗಳಲ್ಲಿ ಒಎಂಆರ್ ಸಂಖ್ಯೆ ಮತ್ತು ಪ್ರಶ್ನೆ ಪತ್ರಿಕೆಯ ಕ್ರಮಸಂಖ್ಯೆ ಒಂದೇ ಆಗಿರಬೇಕು ಎಂದು ಎಲ್ಲಿಯೂ ಹೇಳಿಲ್ಲ. ಒಎಂಆರ್ ಉತ್ತರ ಪತ್ರಿಕೆಯಲ್ಲಿ ಪ್ರಶ್ನೆ ಪತ್ರಿಕೆಯ ಕ್ರಮಸಂಖ್ಯೆ ಮತ್ತು ಪ್ರಶ್ನೆ ಪತ್ರಿಕೆಯ ವರ್ಷನ್ ಕೋಡ್ ಅನ್ನು ಬರೆಯಲು ಪ್ರತ್ಯೇಕ ಅವಕಾಶ ಕಲ್ಪಿಸಲಾಗಿರುತ್ತದೆ. ಒಂದು ವೇಳೆ ಎರಡೂ ಸಂಖ್ಯೆಗಳು ಒಂದೇ ಇರಬೇಕಾಗಿದ್ದಲ್ಲಿ, ಒಎಂಆರ್‌ನಲ್ಲಿ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆಯ ಕ್ರಮಸಂಖ್ಯೆಯನ್ನು ಪ್ರತ್ಯೇಕವಾಗಿ ಬರೆಯಲು ಸೂಚಿಸುವ ಅಗತ್ಯವೇ ಇರುತ್ತಿರಲಿಲ್ಲ’ ಎಂದಿದೆ.

ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಹೇಳಿದ್ದಿಷ್ಟು 

ಪರೀಕ್ಷೆ ಮುಕ್ತಾಯದ ಬಳಿಕ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಹೆಚ್.ಪ್ರಸನ್ನ, ‘ರಾಜ್ಯಾದ್ಯಂತ ಇಂದು ಬಹುನಿರೀಕ್ಷಿತ ಸಿವಿಲ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಯು ಅತ್ಯಂತ ಯಶಸ್ವಿಯಾಗಿ ಮತ್ತು ಸುಗಮವಾಗಿ ನಡೆದಿದೆ. ಬೆಂಗಳೂರಿನ 149 ಕೇಂದ್ರಗಳು ಸೇರಿದಂತೆ ರಾಜ್ಯದ ಒಟ್ಟು 884 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿದ್ದು, ಉಳಿಕೆ ಮೂಲ ವೃಂದಕ್ಕೆ ಶೇ. 92.52 ರಷ್ಟು ಹಾಗೂ ಕಲ್ಯಾಣ ಕರ್ನಾಟಕ ವೃಂದಕ್ಕೆ ಶೇ. 94 ರಷ್ಟು ಅಭ್ಯರ್ಥಿಗಳು ಹಾಜರಾಗಿದ್ದರು ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಪೊಲೀಸ್ ನೇಮಕಾತಿ ಪರೀಕ್ಷೆ ವೇಳೆ ಗೊಂದಲ: ಪ್ರಿಯಾಂಕ್​​ ಖರ್ಗೆ ರಾಜೀನಾಮೆಗೆ ಆಗ್ರಹ

‘ಇನ್ನು ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮಗಳಿಗೆ ಅವಕಾಶವಾಗದಂತೆ ವೆಬ್‌ಕಾಸ್ಟಿಂಗ್ ತಂತ್ರಜ್ಞಾನವನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಂಡು ಕೆಇಎ ಕಚೇರಿಯ ಕಮಾಂಡ್ ಸೆಂಟರ್ ಮೂಲಕ ಎಲ್ಲಾ ಕೊಠಡಿಗಳ ಮೇಲೂ ನಿರಂತರ ನಿಗಾ ವಹಿಸಲಾಗಿತ್ತು’ ಎಂದರು.

ಒಎಂಆರ್ ಪ್ರತಿ ಸ್ಕ್ಯಾನ್: ವೆಬ್​​ಸೈಟ್​ಗೆ ಅಪ್​​ಲೋಡ್ ಮಾಡುವ ಕೆಲಸ ಆರಂಭ

‘ಪಾರದರ್ಶಕತೆಯ ಭಾಗವಾಗಿ ಪರೀಕ್ಷೆ ಮುಕ್ತಾಯವಾದ ತಕ್ಷಣವೇ ಒಎಂಆರ್ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿ ಕೆಇಎ ವೆಬ್​​ಸೈಟ್​ಗೆ ಅಪ್​​ಲೋಡ್ ಮಾಡುವ ಕೆಲಸ ಆರಂಭಿಸಲಾಗಿದೆ. ಬೆಂಗಳೂರು, ಕಲಬುರಗಿ, ಹುಬ್ಬಳ್ಳಿ, ಮೈಸೂರು, ದಾವಣಗೆರೆ, ವಿಜಯಪುರ ಹಾಗೂ ರಾಯಚೂರು ನಗರಗಳಲ್ಲಿ ಒಎಂಆರ್ ಸ್ಕ್ಯಾನಿಂಗ್‌ಗೆ ವಿಶೇಷ ವ್ಯವಸ್ಥೆ ಮಾಡಿದ್ದು, ಸಂಜೆ 7 ಗಂಟೆವರೆಗೆ ಬೆಳಗಿನ ಪರೀಕ್ಷೆಯ 20 ಜಿಲ್ಲೆಗಳ ಒಎಂಅರ್ ಪ್ರತಿಗಳನ್ನು ವೆಬ್​​ಸೈಟ್​ಗೆ ಅಪ್​​ಲೋಡ್ ಮಾಡುವ ಕೆಲಸ ಪೂರ್ಣಗೊಳಿಸಲಾಗಿದೆ. ಉಳಿದ ಜಿಲ್ಲೆಗಳ ಒಎಂಆರ್ ಪ್ರತಿಗಳನ್ನು ಸ್ಕ್ಯಾನ್ ಮಾಡುವ ಕೆಲಸ ಪ್ರಗತಿಯಲ್ಲಿದೆ’ ಎಂದು ಅವರು ಹೇಳಿದ್ದಾರೆ.

ಪರೀಕ್ಷೆ ವೇಳೆ ವಿಜಯಪುರದಲ್ಲಿ ನಡೆದ ಪ್ರಕರಣ ಕುರಿತು ವರದಿ ಕೇಳಿದ ಕೆಇಎ

‘ವಿಜಯಪುರ ಜಿಲ್ಲೆಯ ತಿಕೋಟಾದ ಶಾರದಾಂಬಾ ಪಿಯು ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಒಎಂಆರ್ ಉತ್ತರ ಪತ್ರಿಕೆ ಮತ್ತು ಪ್ರಶ್ನೆ ಪತ್ರಿಕೆಯ ಕ್ರಮ ಸಂಖ್ಯೆಗಳು ಹೊಂದಾಣಿಕೆ ಆಗುತ್ತಿಲ್ಲ ಎಂದು ಗೊಂದಲ ಸೃಷ್ಟಿಸಿದ ಕೆಲ‌ ಅಭ್ಯರ್ಥಿಗಳು ತಮ್ಮ ಬಳಿ ಇದ್ದ ಒಎಂಆರ್ ಮತ್ತು ಪ್ರಶ್ನೆ ಪತ್ರಿಕೆ ಸಮೇತ ಕಾಂಪೌಂಡ್ ಹಾರಿ ಹೊರ ನಡೆದಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳಿಂದ ವರದಿ ಕೇಳಲಾಗಿದೆ’ ಎಂದು ಹೆಚ್.ಪ್ರಸನ್ನ ಹೇಳಿದರು.

‘ಕೆಇಎ ನಿಯಮ ಪ್ರಕಾರ ಪ್ರಶ್ನೆ ಪತ್ರಿಕೆ‌ ಮತ್ತು ಒಎಂಆರ್ ಉತ್ತರ ಪತ್ರಿಕೆಗಳ ಕ್ರಮ ಸಂಖ್ಯೆ ಹೊಂದಾಣಿಕೆ ಆಗಬೇಕೆಂದೇನೂ ಇಲ್ಲ. ಈ ಬಗ್ಗೆ ಸ್ಥಳೀಯ ಸಿಬ್ಬಂದಿ ಮನEKದಟ್ಟು ಮಾಡಿದರೂ ಕೆಲವರು ಗೊಂದಲ ಸೃಷ್ಟಿಸಿದ್ದಾರೆ. ನಿಯಮ ಪ್ರಕಾರ ಪರೀಕ್ಷೆ ಮುಗಿದ‌ ನಂತರವೇ ಅಭ್ಯರ್ಥಿಗಳು ಕೇಂದ್ರದಿಂದ ಹೊರ ಹೋಗಬೇಕು, ಆದರೆ ಈ ಕೇಂದ್ರದಲ್ಲಿ ಕೆಲವರು ಪರೀಕ್ಷೆ ಆರಂಭವಾದ ಅರ್ಧ ಗಂಟೆಯಲ್ಲೇ ಒಎಂಆರ್ ಉತ್ತರ ಪತ್ರಿಕೆ ಹಾಗೂ ಪ್ರಶ್ನೆ ಪತ್ರಿಕೆಯೊಂದಿಗೆ ಪರೀಕ್ಷಾ ಕೇಂದ್ರದಿಂದ ಹೊರ ನಡೆದಿದ್ದಾರೆ. ಅದೂ ಕಾಂಪೌಂಡ್ ಹಾರಿ ಓಡಿ ಹೋಗಿದ್ದು, ಇದು ಕಾನೂನು ಪ್ರಕಾರ ಅಪರಾಧ’ ಎಂದಿದ್ದಾರೆ.

ಸುಳ್ಳು ಸುದ್ದಿ ಹಬ್ಬಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ: ಹೆಚ್.ಪ್ರಸನ್ನ

‘ಏನೇ ತಕರಾರು ಇದ್ದರೂ ಪರೀಕ್ಷಾ ಕೇಂದ್ರದೊಳಗೆ ಇದ್ದೇ ಅಭ್ಯರ್ಥಿಗಳು ಅಲ್ಲಿನ ಪ್ರಾಂಶುಪಾಲರು ಅಥವಾ‌ ಮೇಲಧಿಕಾರಿಗಳನ್ನು‌ ಕೇಳಬೇಕಿತ್ತು. ಪ್ರಶ್ನೆ ಪತ್ರಿಕೆ ಕೊಡುವುದು ತಡ ಆಗಿದ್ದರೆ ಹೆಚ್ಚುವರಿ ಸಮಯಕ್ಕೆ ಬೇಡಿಕೆ ಸಲ್ಲಿಸಬೇಕಿತ್ತು. ಅದು ಬಿಟ್ಟು ಪರೀಕ್ಷಾ ಸಾಮಾಗ್ರಿ ತೆಗೆದುಕೊಂಡು ಕಾಂಪೌಂಡ್ ಹಾರಿ ಓಡಿ‌ಹೋಗಿದ್ದು ಯಾವ ಉದ್ದೇಶಕ್ಕೆ? ನ್ಯಾಯ ಸಮ್ಮತವಾದ ಪರೀಕ್ಷೆ ನಡೆಸಬೇಕೆನ್ನುವ ಉದ್ದೇಶದಿಂದ ಸಿಎಂ ಹಾಗೂ ಗೃಹ ಸಚಿವರು ಮೂರುವರೆ ಗಂಟೆ ಅಧಿಕಾರಿಗಳ ಸಭೆ ನಡೆಸಿ ಸೂಚನೆಗಳನ್ನು ನೀಡಿದ್ದರು. ಅಲ್ಲದೆ, ಪರೀಕ್ಷೆಯನ್ನು ವಿವಾದಗಳು ಇಲ್ಲದೆ ಸುಗಮವಾಗಿ‌ ನಡೆಸಲು ಪ್ರಾಧಿಕಾರ ಕೂಡ ಅವಿರತ ಶ್ರಮ ಹಾಕಿತ್ತು. ಇದ್ಯಾವುದನ್ನೂ ಲೆಕ್ಕಿಸದೆ ವಿನಾಕಾರಣ ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಹೆಚ್.ಪ್ರಸನ್ನ ಎಚ್ವರಿಕೆ ನೀಡಿದರು.

ಇದನ್ನೂ ಓದಿ: ಪ್ರಶ್ನೆ ಪತ್ರಿಕೆ, OMR ಸೀಟ್ ನಂಬರ್ ಮಿಸ್ ಮ್ಯಾಚ್: ಗೊಂದಲಗಳಿಗೆ ಡಿಸಿ ತೆರೆ

ಕಷ್ಟ‌ಪಟ್ಟು‌ ಓದುವ ಅಭ್ಯರ್ಥಿಗಳಿಗೆ ಅನ್ಯಾಯ ಆಗಬಾರದು. ಈ ರೀತಿ ಗೊಂದಲ ಸೃಷ್ಟಿಸುವವರ ಉದ್ದೇಶ ಏನು ಎನ್ನುವುದು ತನಿಖೆ ಮೂಲಕ‌ ಗೊತ್ತಾಗಬೇಕು. ಇಷ್ಟರ‌‌‌ ನಡುವೆಯೂ ತಿಕೋಟಾ ಕೇಂದ್ರದಲ್ಲಿ 120 ಅಭ್ಯರ್ಥಿಗಳು ಯಶಸ್ವಿಯಾಗಿ ಪರೀಕ್ಷೆ ಬರೆದಿದ್ದಾರೆ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:35 pm, Sun, 2 August 26

Loading...
Unable to load recommendations.
Follow Us