ಪ್ರಧಾನಿ ಮೋದಿಯ ರಾಜಕೀಯ ಪುಡಾರಿ ಎಂದ ಸಿದ್ದರಾಮಯ್ಯಗೆ ಪಲಾಯನವಾದಿ ಎಂದು ವಿಜಯೇಂದ್ರ ತಿರುಗೇಟು

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಭ್ರಷ್ಟಾಚಾರದ ತೀವ್ರ ಆರೋಪಗಳನ್ನು ಮಾಡಿದ್ದಾರೆ. ಒಂದೂವರೆ ವರ್ಷಗಳ ಆಡಳಿತದಲ್ಲಿ ಯಾವುದೇ ಅಭಿವೃದ್ಧಿ ಕಾಣದಿರುವುದು ಮತ್ತು ಹಲವು ಹಗರಣಗಳಲ್ಲಿ ಸಿಲುಕಿರುವುದನ್ನು ವಿಜಯೇಂದ್ರ ಟೀಕಿಸಿದ್ದಾರೆ. ಅಲ್ಲದೆ, ಅಹಿಂದ ವರ್ಗಗಳಿಗೆ ನೀಡಿದ ಕೊಡುಗೆಗಳ ಕುರಿತು ಪ್ರಶ್ನಿಸಿದ್ದು, ತನಿಖೆಗೆ ಒಳಗಾಗಲು ಸಿದ್ದರಾಮಯ್ಯ ಹೆದರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ರಧಾನಿ ಮೋದಿಯ ರಾಜಕೀಯ ಪುಡಾರಿ ಎಂದ ಸಿದ್ದರಾಮಯ್ಯಗೆ ಪಲಾಯನವಾದಿ ಎಂದು ವಿಜಯೇಂದ್ರ ತಿರುಗೇಟು
ವಿಜಯೇಂದ್ರ
Follow us
TV9 Web
| Updated By: Ganapathi Sharma

Updated on:Nov 02, 2024 | 4:22 PM

ಬೆಂಗಳೂರು, ನವೆಂಬರ್ 2: ಪ್ರಧಾನಿ ನರೇಂದ್ರ ಮೋದಿಯವರನ್ನು ರಾಜಕೀಯ ಪುಡಾರಿಯ ರೀತಿಯಲ್ಲಿ ಸುಳ್ಳು ಆರೋಪಗಳನ್ನು ಮಾಡುವವರು ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿರುವುದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ಈ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್​​​ನಲ್ಲಿ ಸುದೀರ್ಘ ಸಂದೇಶ ಪ್ರಕಟಿಸಿರುವ ಅವರು, ಪ್ರಶ್ನೆಗಳ ಮಳೆಯನ್ನೇ ಸುರಿಸಿದ್ದಾರೆ. ಅಲ್ಲದೆ, ಪಲಾಯನವಾದಿ ಎಂದು ಟೀಕಿಸಿದ್ದಾರೆ.

ವಿಜಯೇಂದ್ರ ಎಕ್ಸ್​ ಸಂದೇಶ

ಸಿದ್ದರಾಮಯ್ಯನವರೇ, ಒಂದೂವರೆ ವರ್ಷದ ಆಡಳಿತದಲ್ಲಿ ನಿಮ್ಮ ಕೊಡುಗೆಗಳು ಏನೇನೂ ಇಲ್ಲ, ಅಭಿವೃದ್ಧಿಯ ಹಾದಿಯಲ್ಲಿ ಬರೀ ಶೂನ್ಯ, ಭ್ರಷ್ಟತೆಯ ಸಾಲು, ಸಾಲು ಹಗರಣಗಳು, ಸಾಮಾಜಿಕ ಶೋಷಣೆಗಳು, ಸ್ತ್ರೀ ಕುಲದ ಮೇಲಿನ ದೌರ್ಜನ್ಯಗಳು ಹತ್ತು ಹಲವು ಎಂದು ವಿಜಯೇಂದ್ರ ಟೀಕಿಸಿದ್ದಾರೆ.

ಪ್ರಾಮಾಣಿಕರಾಗಿದ್ದರೆ ತನಿಖೆಗೆ ಏಕೆ ಹೆದರುತ್ತೀರಿ: ವಿಜಯೇಂದ್ರ ಪ್ರಶ್ನೆ

ಇಂದಿಗೂ ಕರ್ನಾಟಕದ ಲಕ್ಷಾಂತರ ಜನ ಗುಡಿಸಲು ವಾಸಿಗಳಾಗಿದ್ದಾರೆ, ಸ್ವಂತ ಸೂರಿಲ್ಲದೇ ವಸತಿ ಹೀನರಾಗಿದ್ದಾರೆ. ಇವರಿಗಾಗಿ ನೀವು ಒಂದೇ ಒಂದು ನಿವೇಶವನ್ನು ವಿತರಿಸಲಾಗಿಲ್ಲ. ಆದರೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 5 ಸಾವಿರಕ್ಕೂ ಹೆಚ್ಚು ನಿವೇಶನಗಳ ದರೋಡೆ ನಿಮ್ಮ ಬಲಗೈ ಬಂಟ ಸಚಿವ ಭೈರತಿ ಸುರೇಶ್ ರವರ ನೇತೃತ್ವದಲ್ಲಿ ಹಾಗೂ ನಿಮ್ಮ ಮಾರ್ಗದರ್ಶನದಲ್ಲಿ ನಡೆದಿದೆ ಎಂಬುದಕ್ಕೆ ನೀವೊಬ್ಬರೇ ಉಚಿತವಾಗಿ ಪಡೆದ 14 ನಿವೇಶನಗಳು ಸಾಕ್ಷಿ ಹೇಳುತ್ತಿವೆ. ಈ ನಿಟ್ಟಿನಲ್ಲಿ ನ್ಯಾಯಾಲಯಗಳು ನಿಮ್ಮ ವಿರುದ್ಧ ತೀರ್ಪಿತ್ತಿವೆ. ನೀವು ಪ್ರಾಮಾಣಿಕರೇ ಆಗಿದ್ದರೆ ಈಗಲೂ ಇಡಿ, ಸಿಬಿಐ ತನಿಖೆಗೆ ಏಕೆ ಹೆದರುತ್ತಿದ್ದೀರಿ? ನಿಮ್ಮ ಕೈ ಕೆಳಗಿನ ಅಧಿಕಾರಿಗಳಿರುವ ಲೋಕಾಯುಕ್ತದಿಂದಲೇ ತನಿಖೆ ಆಗುವಂತೆ ನೋಡಿಕೊಳ್ಳುತ್ತಿದ್ದೀರಿ. ನನ್ನ ನಿವೇಶನದ ಬೆಲೆ 62 ಕೋಟಿ ಎಂದು ಘೋಷಿಸಿದ ನೀವು ಬೇಷರತ್ತಾಗಿ ಮುಡಾಗೆ ನಿವೇಶನಗಳನ್ನು ಹಿಂದಿರುಗಿಸಿದ್ದು ಏಕೆ? ಎಂಬುದನ್ನು ಕರ್ನಾಟಕದ ಜನತೆ ಅರಿಯದಿರುವಷ್ಟು ಮುಗ್ಧರಲ್ಲ. ‘ಕಳ್ಳ ಬೆಕ್ಕು ಕಣ್ಣುಮುಚ್ಚಿಕೊಂಡು ಹಾಲು ಕುಡಿಯುತ್ತಿದ್ದರೆ’ ಅದನ್ನು ನೋಡಿಕೊಂಡು ಸ್ವಾಭಿಮಾನಿ ಕನ್ನಡಿಗರು ಸುಮ್ಮನಾಗಿಬಿಡುತ್ತಾರೆಂದು ನೀವು ಭಾವಿಸಿದ್ದರೆ ಅದು ನಿಮ್ಮ ಮೂರ್ಖತನವಷ್ಟೇ’ ಎಂದು ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಅಹಿಂದ ವರ್ಗಕ್ಕೆ ನೀವು ಕೊಟ್ಟಿದ್ದೇನು?’

ಅಹಿಂದ ಹೆಸರೇಳಿಕೊಂಡು ಬಂದ ನೀವು ಮಾತುಮಾತಿಗೂ ಅಹಿಂದ, ಅಹಿಂದ ಎಂದು ಪಠನೆ ಮಾಡುವ ನೀವು ‘ಹಿಂದ’ವರ್ಗಗಳಿಗೆ ನೀಡಿದ ಕಲ್ಯಾಣ ಕಾರ್ಯಕ್ರಮಗಳೇನು? ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮ, ದೇವರಾಜ ಅರಸು ಅಭಿವೃದ್ಧಿ ನಿಗಮ ಹಾಗೂ ಇತರ ಹಿಂದುಳಿದ ಹಾಗೂ ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿ ನಿಗಮಗಳಿಗೆ ನೀವು ಅಧಿಕಾರಕ್ಕೆ ಬಂದ ನಂತರ ಎಷ್ಟು ಅನುದಾನ ನೀಡಿದ್ದೀರೆನ್ನುವ ದಾಖಲೆಗಳನ್ನು ಬಿಡುಗಡೆ ಮಾಡಿ. ಶೋಷಿತ ವರ್ಗಗಳಿಗೆ ಅನುದಾನ ಬಿಡುಗಡೆ ಮಾಡುವ ಮಾತು ಹಾಗಿರಲಿ, ವಿಶ್ವಕವಿ ಎಂದು ಮಾನ್ಯತೆ ಪಡೆದ ಪೂಜ್ಯ ವಾಲ್ಮೀಕಿ ಅವರ ಹೆಸರಿರುವ ನಿಗಮದಲ್ಲಿ ಪರಿಶಿಷ್ಟ ಪಂಗಡದ, ಆದಿವಾಸಿ ಜನರ ಕಲ್ಯಾಣದ ಕಾರ್ಯಗಳಿಗೆ ಮೀಸಲಾಗಿ ಠೇವಣಿ ಇರಿಸಿದ್ದ ಬ್ಯಾಂಕ್ ಖಾತೆಗೆ ನಿಮ್ಮ ಸಚಿವರ ಮೂಲಕ ಕನ್ನ ಹಾಕಿಸಿದವರು ನೀವಲ್ಲ ಎಂಬುದನ್ನು ನೀವು ಸಾಬೀತು ಮಾಡಲು ಸಾಧ್ಯವೇ ಎಂದು ವಿಜಯೇಂದ್ರ ಪ್ರಶ್ನಿಸಿದ್ದಾರೆ.

ಕೆಐಡಿಬಿ ಮೂಲಕ ನಿಮ್ಮ ರಾಷ್ಟ್ರೀಯ ಅಧ್ಯಕ್ಷರ ಕುಟುಂಬ ಹಾಗೂ ಇತರ ಸ್ವಜನರಿಗೆ ಕೆಐಡಿಬಿಯಲ್ಲಿ ಮಂಜೂರಾಗಿರುವ ಸಿ.ಎ ನಿವೇಶನ ಹಗರಣವು ಸ್ವತಃ ನಿಮ್ಮ ರಾಷ್ಟ್ರೀಯ ಅಧ್ಯಕ್ಷರ ಕುಟುಂಬಕ್ಕೆ ಅಕ್ರಮವಾಗಿ ಮಂಜೂರಾತಿ ಮಾಡಿರುವ ಕಾರಣ ಅವರೂ ತಮ್ಮ ನಿವೇಶನ ಹಿಂದಿರುಗಿಸುವ ಘೋಷಣೆ ಮಾಡಿದ್ದಾರೆ. ಅಂದ ಮೇಲೆ ಕೆಐಡಿಬಿಯಿಂದ ಮಂಜೂರಾದ ನಿವೇಶನಗಳೂ ಅಕ್ರಮ ಎಂಬುದು ಸಾಬೀತಾದಂತಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

ಕರ್ನಾಟಕ ರಾಜ್ಯೋತ್ಸವದ ಈ ಸಂದರ್ಭದಲ್ಲಿ ಪ್ರಧಾನಿಯವರನ್ನು ಉಲ್ಲೇಖಿಸಿ ಕುವೆಂಪುರವರ ‘ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆʼ ಎಂಬ ನಾಡಗೀತೆಯನ್ನು ನೆನಪಿಸಿದ್ದೀರಿ, ಆದರೆ ಕುವೆಂಪು ಅವರು ಬಣ್ಣಿಸಿದʼ ಸರ್ವಜನಾಂಗದ ಶಾಂತಿಯ ತೋಟ ಕದಡಿ ವಕ್ಫ್ ಹೆಸರಿನಲ್ಲಿ ಈ ನೆಲದ ಮಣ್ಣಿನ ಮಕ್ಕಳ ಹಾಗೂ ಶರಣ ಪರಂಪರೆಯ ಮಠ,ದೇವಸ್ಥಾನಗಳ ಭೂಮಿಯನ್ನು ಕಬಳಿಸಲು ಮೊಘಲ್ ಆಕ್ರಮಣಕಾರರ ರೀತಿಯಲ್ಲಿ ಭೂದಾಖಲೆಗಳಿಗೆ ಕನ್ನ ಹಾಕಿ ವಕ್ಫ್ ಹೆಸರಿನ ಕಪ್ಪು ಚುಕ್ಕೆಗಳನ್ನು ಅಚ್ಚೊತ್ತಿಸುತ್ತಿದ್ದೀರಿ, ಕುವೆಂಪು ಅವರ ಶಾಂತಿಯ ತೋಟ ಕರುನಾಡಿನಲ್ಲಿ ಅಶಾಂತಿ ಹಾಗೂ ಅರಾಜಕತೆಯ ಬೀಜಗಳನ್ನು ಬಿತ್ತಿ, ಅರಾಜಕತೆ ಸೃಷ್ಟಿಸಲು ಹೊರಟಿದ್ದೀರಿ. ಆ ಮೂಲಕ ನಿಮ್ಮ ಭ್ರಷ್ಟ ಮುಖವಾಡ ಮುಚ್ಚಿಕೊಳ್ಳುವ ಷಡ್ಯಂತ್ರ ರೂಪಿಸಿದ್ದೀರಿ. ಇದು ನೀವು ಕರ್ನಾಟಕಕ್ಕೆ ಕೊಡುತ್ತಿರುವ ಕೊಡುಗೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ಹೆಸರಿನಲ್ಲಿ ವ್ಯವಸ್ಥಿತ ಅಪಪ್ರಚಾರ ನಡೆಸಿದಿರಿ. ಆದರೆ 80% ಕಮಿಷನ್ ವಸೂಲಾತಿಯ ಕುಖ್ಯಾತಿಯ ಮಾಲೆ ನಿಮಗೆ ತೊಡಿಸಿದವರು 80% ಕಮಿಷನ್ ನೀಡಿದ ಗುತ್ತಿಗೆದಾರರೇ ಅಲ್ಲವೇ? ಪ್ರಧಾನಿಗಳನ್ನು ಟೀಕಿಸುವ ಭರದಲ್ಲಿ ಈ ಅಂಶವನ್ನು ನೀವು ಮರೆತಿರೇನೋ ಎಂದು ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ.

ನಿಮ್ಮ ಕಾಂಗ್ರೆಸ್ ಗೆ ರಾಷ್ಟ್ರ ಮಟ್ಟದ ಅಸ್ತಿತ್ವವನ್ನು ಗಟ್ಟಿಗೊಳಿಸಲು ‘ಇಂಡಿ ಒಕ್ಕೂಟದ’ ಡಿ.ಎಂ.ಕೆ ತೃಪ್ತಿಪಡಿಸಲು ಕಾವೇರಿ ನೀರನ್ನು ತಮಿಳುನಾಡಿಗೆ ಹರಿಯಬಿಟ್ಟು ರೈತರ ಬೆಳೆಯನ್ನು ಒಣಗಿಸಿ ಬರಡು ಮಾಡಿದ್ದು ನೀವೇ ಅಲ್ಲವೇ? ಈ ನಿಟ್ಟಿನ ರೈತ ಹೋರಾಟಗಳನ್ನು ಹತ್ತಿಕ್ಕಲು ಅಮಾಯಕ ರೈತರ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಿ ಜೈಲಿಗೆ ದಬ್ಬಿದ್ದು ನೀವೇ ಅಲ್ಲವೇ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಬೆಳಗಾವಿಯಲ್ಲಿ ಹಾಡು ಹಗಲಲ್ಲೇ ನೀವಿದ್ದ ಕೂಗಳತೆಯ ದೂರದಲ್ಲೇ ಅಮಾಯಕ ಹೆಣ್ಣುಮಗಳನ್ನು ವಿವಸ್ತ್ರಗೊಳಿಸಿ ದೌರ್ಜನ್ಯ ನಡೆಸಿದಾಗ ನಿಮ್ಮ ಸರ್ಕಾರ ಕನಿಷ್ಟ ಸ್ಪಂದನೆಯನ್ನೂ ಮಾಡದೇ ದುಶ್ಯಾಸನ ಸರ್ಕಾರದಂತೆ ವರ್ತಿಸಿದ್ದನ್ನು ಕರ್ನಾಟಕದ ಹೆಣ್ಣುಮಕ್ಕಳು ಹೇಗೆ ಮರೆಯಲು ಸಾಧ್ಯ? ಹುಬ್ಬಳ್ಳಿಯಲ್ಲಿ ನಿಮ್ಮ ಪಕ್ಷದ ಮುಖಂಡರ ಪುತ್ರಿಯನ್ನು ಹಾಡು ಹಗಲಲ್ಲೇ ಕಾಲೇಜು ಆವರಣದಲ್ಲಿ ಇರಿದು ಕೊಂದ ಘಟನೆ ಜನತೆ ಇನ್ನೂ ಮರೆತಿಲ್ಲ. ನಾಡಿನಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯ ಶೋಷಣೆ ಹಾಗೂ ಅತ್ಯಾಚಾರ ಪ್ರಕರಣಗಳು ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ನೆಲಕಚ್ಚಿರುವುದನ್ನು ಪ್ರತಿಬಿಂಬಿಸುತ್ತಿವೆ. ಶಕ್ತಿ ಯೋಜನೆ ರೂಪಿಸಿರುವುದಾಗಿ ಬೊಬ್ಬೆಹೊಡೆಯುವ ನೀವು ಮಹಿಳೆಯರ ಆತ್ಮವಿಶ್ವಾಸದ ಶಕ್ತಿಯನ್ನೇ ಹುದುಗಿಸಿಬಿಟ್ಟಿದ್ದೀರಿ. ಈಗಾಗಲೇ ಅಸ್ತವ್ಯಸ್ತಗೊಂಡಿರುವ ಭಾಗ್ಯ ಯೋಜನೆಗಳು ಹಳ್ಳಹಿಡಿಯುವುದು ಖಚಿತ ಎಂದು ನಿಮ್ಮ ಉಪಮುಖ್ಯಮಂತ್ರಿಗಳೇ ಹೇಳಿರುವಾಗ ಈ ನಿಟ್ಟಿನಲ್ಲಿ ನಿಮ್ಮ ಪಕ್ಷದಲ್ಲೇ ಗೊಂದಲಗಳ ಗೂಡು ಸೃಷ್ಟಿಯಾಗಿರುವದನ್ನು ಕಂಡು ನಿಮ್ಮ ಪಕ್ಷದ ವರಿಷ್ಠ ಖರ್ಗೆಯವರು ಸಿಡಿಮಿಡಿಗೊಂಡಿರುವುದನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ ಎಂದು ವಿಜಯೇಂದ್ರ ಹೇಳಿದ್ದಾರೆ.

ಇಷ್ಟಾಗಿಯೂ ಕೇಂದ್ರವನ್ನು ಪದೇಪದೇ ಉಲ್ಲೇಖಿಸುತ್ತಲೇ ಇರುತ್ತೀರಿ, ಕನ್ನಡ ನಾಡಿನ ಕಾನೂನು ಸುವ್ಯವಸ್ಥೆಗೆ ಭಂಗ ತಂದ ದೇಶದ್ರೋಹಿ ಶಕ್ತಿಗಳನ್ನು ಬಿಜೆಪಿ ಸರ್ಕಾರದಲ್ಲಿ ಬಂಧಿಸಿ ಸೆರೆಮನೆಗೆ ಕಳುಹಿಸಿದ್ದರೆ, ಅವರನ್ನು ಆರೋಪ ಮುಕ್ತಗೊಳಿಸಲು ಕೇಸುಗಳನ್ನು ವಾಪಾಸು ಪಡೆದುಕೊಳ್ಳುವ ನಿರ್ಧಾರ ಕೈಗೊಳ್ಳುತ್ತೀರಿ, ನಾಡು ನುಡಿಯ ಕಾಳಜಿಯ ಕುರಿತು ಡೋಂಗಿ ಮಾತುಗಳನ್ನಾಡುತ್ತೀರಿ. ಈ ರಾಜ್ಯದಲ್ಲಿ ನೀವು ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿ ಎಂಬ ಪದ ಸಂಪೂರ್ಣವಾಗಿ ಮಾಸಿ ಹೋಗಿದೆ. ಅಭಿವೃದ್ಧಿಯ ವಿಚಾರ ಬಂದಾಗಲೆಲ್ಲ ರಾಜ್ಯದ ಸಂಪನ್ಮೂಲವನ್ನು ಬರಿದು ಮಾಡಿ ಸರ್ಕಾರದ ಖಜಾನೆಯನ್ನು ಖಾಲಿ ಮಾಡಿಕೊಂಡು ಕುಳಿತಿರುವ ನೀವು ಆಧಾರವಿಲ್ಲದೇ ಕೇಂದ್ರದ ಅನುದಾನಗಳು ಹರಿದು ಬರುತ್ತಿಲ್ಲವೆಂದು ಸುಳ್ಳು ಆರೋಪ ಮಾಡುತ್ತೀರಿ. ಆ ಮೂಲಕ ಜವಾಬ್ದಾರಿಯಿಂದ ನುಣುಚಿಕೊಳ್ಳುವ ವ್ಯರ್ಥ ಪ್ರಯತ್ನ ನಡೆಸುತ್ತಿದ್ದೀರಿ, ಈ ಕುತಂತ್ರದ ಜಾಣ್ಮೆಯ ಆಟ ಹೆಚ್ಚು ದಿನ ನಡೆಯುವುದಿಲ್ಲ. ನಿಮ್ಮ ಪಕ್ಷದ ಶಾಸಕರೇ ನಿಮ್ಮ ಮೇಲೆ ಮುಗಿಬೀಳಲು ಸಮಯ ಕಾಯುತ್ತಿದ್ದಾರೆ. ರಾಜ್ಯದ ಅಭಿವೃದ್ಧಿಗಾಗಿ 52,903 ಕೋಟಿ ರೂ. ಅನುದಾನ ಬಳಸಲಾಗುತ್ತಿದೆ ಎಂದು ಹೇಳಿಕೊಂಡಿದ್ದೀರಿ ಅದು ನಿಜವೇ ಆಗಿದ್ದರೆ, ಕರ್ನಾಟಕದ 224 ಶಾಸಕರ ಕ್ಷೇತ್ರಗಳಿಗೆ ನೀವು ಬಿಡುಗಡೆ ಮಾಡಿರುವ ಅನುದಾನಗಳ ಮಾಹಿತಿ ಬಹಿರಂಗಗೊಳಿಸಿ, ಇದಾಗದಿದ್ದರೆ ಕನಿಷ್ಟ ನಿಮ್ಮ ಪಕ್ಷದ ಶಾಸಕರ ಕ್ಷೇತ್ರಗಳಿಗೆ ಬಿಡುಗಡೆ ಮಾಡಿರುವ ಅನುದಾನಗಳ ವಿವರವನ್ನಾದರೂ ಜನತೆಯ ಮುಂದಿಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸವಾಲು ಹಾಕಿದ್ದಾರೆ.

ಇದನ್ನೂ ಓದಿ: ವಕ್ಫ್ ವಿವಾದ: ಸಿಎಂ ಕೇವಲ ನೋಟಿಸ್ ವಾಪಸ್ ಪಡೆದರೆ ಸಮಸ್ಯೆ ಬಗೆಹರಿಯಲ್ಲ ಎಂದ ತೇಜಸ್ವಿ ಸೂರ್ಯ

ಚರ್ಚೆ, ಹೋರಾಟಗಳಿಗೆ ಅಂಜುವ ಪದ ನಮ್ಮ ಪಕ್ಷದ ಸಿದ್ಧಾಂತದ ಪಟ್ಟಿಯಲ್ಲಿ ಇಲ್ಲವೇ ಇಲ್ಲ. ಅದೇನಿದ್ದರೂ ನಿಮ್ಮ ಕಾಂಗ್ರೆಸ್ ಹಾಗೂ ನಿಮ್ಮಲ್ಲಿದೆ. ಇದಕ್ಕೆ ಉದಾಹರಣೆ ನೀವು 14 ನಿವೇಶನ ಹಿಂದಿರುಗಿಸಿ 62 ಕೋಟಿ ಪಡೆಯುವ ಘೋಷಣೆಯ ಸವಾಲಿನಿಂದ ಪಲಾಯನವಾದ ಮಾಡಿದ್ದು ಎಂದು ವಿಜಯೇಂದ್ರ ಟೀಕಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 4:19 pm, Sat, 2 November 24

ಮುಂಬೈನ ಬಾಂದ್ರಾದಲ್ಲಿ ಪೈಪ್‌ಲೈನ್ ಒಡೆದು 50 ಅಡಿ ಎತ್ತರಕ್ಕೆ ಹಾರಿದ ನೀರು
ಮುಂಬೈನ ಬಾಂದ್ರಾದಲ್ಲಿ ಪೈಪ್‌ಲೈನ್ ಒಡೆದು 50 ಅಡಿ ಎತ್ತರಕ್ಕೆ ಹಾರಿದ ನೀರು
ಧನರಾಜ್ ಮಿಮಿಕ್ರಿ ಕಲೆಗೆ ಭೇಷ್ ಎನ್ನಬೇಕು; ಬಿಗ್ ಬಾಸ್ ಮನೆಯ ಫನ್ನಿ ವಿಡಿಯೋ
ಧನರಾಜ್ ಮಿಮಿಕ್ರಿ ಕಲೆಗೆ ಭೇಷ್ ಎನ್ನಬೇಕು; ಬಿಗ್ ಬಾಸ್ ಮನೆಯ ಫನ್ನಿ ವಿಡಿಯೋ
ಮಂಗಳೂರಿನ ತಲಪಾಡಿಯಲ್ಲಿ ತಡೆಗೋಡೆ ಕುಸಿತ; ಸ್ಪೀಕರ್ ಯುಟಿ ಖಾದರ್ ಭೇಟಿ
ಮಂಗಳೂರಿನ ತಲಪಾಡಿಯಲ್ಲಿ ತಡೆಗೋಡೆ ಕುಸಿತ; ಸ್ಪೀಕರ್ ಯುಟಿ ಖಾದರ್ ಭೇಟಿ
ಆದಾಯಕ್ಕೆ ಮೀರಿದ ಆಸ್ತಿ ಪ್ರಕರಣದಲ್ಲಿ ಜಮೀರ್​ಗೆ ಸಮನ್ಸ್ ಜಾರಿಯಾಗಿತ್ತು
ಆದಾಯಕ್ಕೆ ಮೀರಿದ ಆಸ್ತಿ ಪ್ರಕರಣದಲ್ಲಿ ಜಮೀರ್​ಗೆ ಸಮನ್ಸ್ ಜಾರಿಯಾಗಿತ್ತು
ಕೆಪಿಸಿಸಿ ಅಧ್ಯಕ್ಷನಾದವನಿಗೆ ಮತಸೆಳೆಯುವ ಸಾಮರ್ಥ್ಯವಿರಬೇಕು: ಜಾರಕಿಹೊಳಿ
ಕೆಪಿಸಿಸಿ ಅಧ್ಯಕ್ಷನಾದವನಿಗೆ ಮತಸೆಳೆಯುವ ಸಾಮರ್ಥ್ಯವಿರಬೇಕು: ಜಾರಕಿಹೊಳಿ
ಭಾರತಕ್ಕೆ ಅವಮಾನಿಸಿದರಾ ಬಿಲ್ ಗೇಟ್ಸ್?
ಭಾರತಕ್ಕೆ ಅವಮಾನಿಸಿದರಾ ಬಿಲ್ ಗೇಟ್ಸ್?
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕೂಗಿನ ಬಗ್ಗೆ ತನಗೇನೂ ಗೊತ್ತಿಲ್ಲವೆಂದ ಸಚಿವೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕೂಗಿನ ಬಗ್ಗೆ ತನಗೇನೂ ಗೊತ್ತಿಲ್ಲವೆಂದ ಸಚಿವೆ
ಉಡುಪಿಯಲ್ಲಿ ಮಂದಾರ್ತಿ ಮೇಳದ ಚೌಕಿ ಮನೆಗೂ ನುಗ್ಗಿದ ಮಳೆ ನೀರು
ಉಡುಪಿಯಲ್ಲಿ ಮಂದಾರ್ತಿ ಮೇಳದ ಚೌಕಿ ಮನೆಗೂ ನುಗ್ಗಿದ ಮಳೆ ನೀರು
ಉಗ್ರಂ ಮಂಜು-ಗೌತಮಿಯ ತಪ್ಪುಗಳ ಎತ್ತಿ ತೋರಿಸಿದ ಹನುಮಂತು
ಉಗ್ರಂ ಮಂಜು-ಗೌತಮಿಯ ತಪ್ಪುಗಳ ಎತ್ತಿ ತೋರಿಸಿದ ಹನುಮಂತು
ಕಾಂಗ್ರೆಸ್ ತತ್ವ ಸಿದ್ಧಾಂತಗಳು ಬಸನಗೌಡ ಯತ್ನಾಳ್​ಗೆ ಒಗ್ಗಲ್ಲ: ಲಕ್ಷ್ಮಣ್
ಕಾಂಗ್ರೆಸ್ ತತ್ವ ಸಿದ್ಧಾಂತಗಳು ಬಸನಗೌಡ ಯತ್ನಾಳ್​ಗೆ ಒಗ್ಗಲ್ಲ: ಲಕ್ಷ್ಮಣ್