Karnataka Rain: ಕರ್ನಾಟಕದಾದ್ಯಂತ ಅಬ್ಬರಿಸಿದ ವರುಣ: ಮಳೆಗೆ ಒಂದೇ ದಿನ 8 ಜನ ಬಲಿ
ಕರ್ನಾಟಕದಾದ್ಯಂತ ಗುಡುಗು-ಮಿಂಚು ಸಹಿತ ಭಾರಿ ಮಳೆಯಾಗುತ್ತಿದೆ. ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ನೀರು ನಿಂತು ಸಂಚಾರ ಸ್ಥಗಿತಗೊಂಡಿದೆ. ಗೋಕಾಕ್ ಮತ್ತು ಬೀದರ್‌ನಲ್ಲಿ ಧಾರಾಕಾರ ಮಳೆ ಆಗಿದ್ದು, ಹಲವು ಕಡೆ ಮನೆಗಳಿಗೆ ನೀರು ನುಗ್ಗಿದೆ. ಸಿಡಿಲು ಬಡಿದು ಹಲವರು ಸಾವನ್ನಪ್ಪಿದ್ದಾರೆ. ರಾಜ್ಯದ ವಿವಿಧೆಡೆ ಮಳೆಯಿಂದಾಗಿ ಅವಾಂತರಗಳಾಗಿವೆ.

ಬೆಂಗಳೂರು, ಮೇ 13: ಕರ್ನಾಟಕದಾದ್ಯಂತ ಗುಡುಗು-ಮಿಂಚು ಸಹಿತ ಭಾರಿ ಮಳೆಯಾಗುತ್ತಿದೆ (Karnataka Rain). ಬಿಸಿಲಿನಿಂದ ಹೈರಾಣಾಗಿದ್ದ ಜನರಿಗೆ ಮಳೆರಾಯ (Rain) ತಂಪೆರೆದಿದ್ದಾನೆ. ಕಾದು ಕೆಂಡದಂತಾಗಿದ್ದ ಭೂಮಿ ತಂಪಾಗಿದೆ. ಹಾಗೇ, ಮಳೆಯಿಂದ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಹಲವು ಕಡೆ ಮನೆಗಳಿಗೆ ನೀರು ನುಗ್ಗಿದೆ. ಕಟಾವಿಗೆ ಬಂದಿದ್ದ ಬೆಳೆ ನಾಶವಾಗಿದೆ. ಸಿಡಿಲು ಬಡಿದು ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು, ರಾಜ್ಯಾದ್ಯಂತ ಎಲ್ಲೆಲ್ಲಿ ಮಳೆಯಾಗಿದೆ. ಇಲ್ಲಿದೆ ವಿವರ.
ಮಳೆಗೆ ಒಂದೇ ದಿನ 8 ಜನ ಬಲಿ
ಇನ್ನು ಕರ್ನಾಟಕದಾದ್ಯಂತ ಇಂದು ಸುರಿದ ಧಾರಕಾರ ಮಳೆಯಿಂದಾಗಿ 8 ಜನರು ಸಾವನ್ನಪ್ಪಿದ್ದಾರೆ. ಕೊಪ್ಪಳದಲ್ಲೇ ಸಿಡಿಲಿನ ಹೊಡೆತಕ್ಕೆ ಇಬ್ಬರು, ಬಳ್ಳಾರಿ ಇಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ. ಇನ್ನು ಚಿಕ್ಕಮಗಳೂರು-1, ವಿಜಯಪುರದಲ್ಲೂ ಸಹ ಓರ್ವ ವ್ಯಕ್ತಿ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಹಾಗೇ ಗದಗನಲ್ಲಿ ಮಳೆ ನೀರಿಗೆ ಬೈಕ್ ಸವಾರ ಕೊಚ್ಚಿಕೊಂಡು ಹೋಗಿದ್ದಾನೆ. ಮತ್ತೊಂದಡೆ ಗೋಕಾಕ್ನಲ್ಲಿ ವ್ಯಕ್ತಿ ಚರಂಡಿಯಲ್ಲಿ ಕೊಚ್ಚಿ ಹೋಗಿದ್ದಾನೆ.
ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್
ಧಾರವಾಡದಲ್ಲಿ ಧಾರಾಕಾರ ಮಳೆಯಾದ ಹಿನ್ನೆಲೆಯಲ್ಲಿ ಮನಸೂರು ಬಳಿಯ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೆ ನೀರು ನಿಂತಿದೆ. ಇದರಿಂದ ಸಂಚಾರ ಸ್ಥಗಿತಗೊಂಡಿದೆ. 3 ಕಿಮೀಟರ್ವರೆಗೆ ಟ್ರಾಫಿಕ್ಜಾಮ್ ಆಗಿದೆ.
ಮಳೆಗೆ ಹುಬ್ಬಳ್ಳಿಯಲ್ಲಿ ಜನಜೀವನ ಅಸ್ತವ್ಯಸ್ತ
ಇನ್ನು ಹುಬ್ಬಳ್ಳಿಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಭಾರಿ ಮಳೆಯಿಂದ ರಸ್ತೆಗಳು ಹೊಳೆಯಂತಾಗಿವೆ. ಇನ್ನು ಗಣೇಶನಗರ, ಆನಂದನಗರದಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದ್ದು, ನೀರು ಹೊರಹಾಕಲು ನಿವಾಸಿಗಳು ಪರದಾಡುವಂತಾಗಿದೆ.
ಗೋಕಾಕ್ನಲ್ಲಿ ಧಾರಾಕಾರ ಮಳೆ
ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿ ಕಳೆದ ಧಾರಾಕಾರ ಮಳೆಯಾಗಿದೆ. ನಿರಂತರ ಮಳೆಗೆ ರಸ್ತೆಗಳ ಮೇಲೆ ನೀರು ನಿಂತಿದ್ದು, ಹಳ್ಳಗಳಾಗಿ ಮಾರ್ಪಟ್ಟಿವೆ. ಹಾಳಬಾಗ್ ಗಲ್ಲಿ, ಮಟನ್ ಮಾರ್ಕೆಟ್ ಒಳಗೆ ಮಳೆಯ ನೀರು ನುಗ್ಗಿದೆ. ದ್ವಿಚಕ್ರ ವಾಹನ ಹಾಗೂ ಕಾರು ನೀರಲ್ಲಿ ಮುಳುಗಡೆಯಾಗಿವೆ. ನಿರಂತರ ಮಳೆಗೆ ಗೋಕಾಕ್ ನಗರದ ಜನರು ಪರದಾಡಿದರು.
ಚರಂಡಿಯಲ್ಲಿ ಕೊಚ್ಚಿಹೋದ ವ್ಯಕ್ತಿ
ಇನ್ನು ಬೆಳಗಾವಿ ಜಿಲ್ಲೆಯ ಗೋಕಾಕ್ ಪಟ್ಟಣದಲ್ಲಿ ವ್ಯಕ್ತಿಯೋರ್ವ ಕಾಲು ಜಾರಿ ಬಿದ್ದು ಚರಂಡಿಯಲ್ಲಿ ಕೊಚ್ಚಿ ಹೋಗಿದ್ದಾನೆ. ಭಾರಿ ಮಳೆಯಿಂದಾಗಿ ಪಟ್ಟಣದ ಚರಂಡಿಗಳು ತುಂಬಿ ಹರಿಯುತ್ತಿದ್ದವು. ಇದರ ಮಧ್ಯ ಕುಡಿದ ಅಮಲಿನಲ್ಲಿದ್ದ ವ್ಯಕ್ತಿಯೋರ್ವ ಕಾಲು ಜಾರಿ ಬಿದ್ದಿದ್ದು, ಚರಂಡಿಯಲ್ಲಿ ಕೊಚ್ಚಿ ಹೋಗಿದ್ದಾನೆ. ಚರಂಡಿಯಲ್ಲಿ ಕೊಚ್ಚಿಹೋದ ಕಾಶಪ್ಪ ಶಿರಟ್ಟಿಗಾಗಿ ಪೊಲೀಸರು, ನಗರಸಭೆ ಸಿಬ್ಬಂದಿ ಶೋಧ ನಡೆಸಿದ್ದಾರೆ.
ಬೀದರ್ ಜನರಿಗೆ ತಂಪೆರೆದ ಮಳೆರಾಯ
ಬೀದರ್ ಜಿಲ್ಲೆಯಲ್ಲಿ ಗುಡುಗು-ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದೆ. ಬಿಸಿಲಿನ ಝಳಕ್ಕೆ ಬಸವಳಿದಿದ್ದ ಜನರಿಗೆ ವರುಣ ತಂಪೆರೆದಿದ್ದಾನೆ. ಮುಂಗಾರು ಪೂರ್ವ ಮಳೆಯಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಆದರೆ, ಬಿರುಗಾಳಿ ಸಹಿತ ಮಳೆಯಿಂದಾಗಿ ಬೀದರ್ ನಗರದಾದ್ಯಂತ ವಿದ್ಯುತ್ ವ್ಯತ್ಯಯವಾಗಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ. ಧಾರಾಕಾರ ಮಳೆಯಿಂದಾಗಿ ನಗರದ ನೆಹರು ಜಿಲ್ಲಾ ಕ್ರೀಡಾಂಗಣ ಕೆರೆಯಂತಾಗಿದೆ.
ಕೊಚ್ಚಿಹೋದ ಬೈಕ್ ಸವಾರ
ಗದಗ ತಾಲೂಕಿನ ಬೆನಕೊಪ್ಪ ಗ್ರಾಮದಲ್ಲಿ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಬೈಕ್ ಸವಾರ ಕೊಚ್ಚಿಕೊಂಡು ಹೋಗಿದ್ದಾನೆ. ಶರಣಪ್ಪ ಹಡಗಲಿ (39) ಕೊಚ್ಚಿಕೊಂಡು ಹೋದ ವ್ಯಕ್ತಿ. ಶರಣಪ್ಪ ಪತ್ನಿಯ ತವರು ಮನೆ ಬೆನಕೊಪ್ಪಕ್ಕೆ ಹೊರಟ್ಟಿದ್ದರು. ಸಂಜೆ ಸುರಿದ ಭಾರಿ ಮಳೆಗೆ ತುಂಬಿ ಹಳ್ಳ ಹರಿಯುತ್ತಿತ್ತು. ತುಂಬಿ ಹರಿಯುತ್ತಿದ್ದ ಹಳ್ಳದಲ್ಲೇ ಬೈಕ್ ಓಡಿಸಲು ಹೋಗಿ ಕೊಚ್ಚಿಕೊಂಡು ಹೋಗಿದ್ದಾರೆ. ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಶೋಧ ಕಾರ್ಯ ನಡೆದಿದೆ. ಗದಗ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಸಿಡಿಲು ಬಡಿದು ಸಾವು
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದಲ್ಲಿ ಸಿಡಿಲು ಬಡಿದು ರೈತನೋರ್ವ ಮೃತಪಟ್ಟಿದ್ದಾರೆ. ಮಲ್ಲಪ್ಪ ತಾಳಿಕೋಟೆ (47) ಮೃತ ದುರ್ದೈವಿ. ಮಲ್ಲಪ್ಪ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದೆ. ಮತ್ತೊಂದೆಡೆ ಮುದ್ದೇಬಿಹಾಳ ತಾಲೂಕಿನ ಚವನಭಾವಿ ಗ್ರಾಮದಲ್ಲಿ ರೈತ ಸಿದ್ದಪ್ಪ ಉಂಡಿ ಎಂಬುವವರಿಗೆ ಸೇರಿದ ಜಮೀನಿನಲ್ಲಿದ್ದ ತೆಂಗಿನ ಮರಕ್ಕೆ ಸಿಡಿಲು ಬಡಿದು ಬೆಂಕಿ ಹೊಂತಿಕೊಂಡಿದೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಗೆದ್ಲೆಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ಕುರಿಗಾಹಿ ಮೃತಪಟ್ಟಿದ್ದಾರೆ. ಗೆದ್ಲೆಹಳ್ಳಿಗ್ರಾಮದ ಲೋಕೇಶಪ್ಪ (65) ಮೃತ ದುರ್ದೈವಿ. ಕುರಿ ಮೇಯಿಸಲು ತೆರಳಿದ್ದಾಗ ಘಟನೆ ನಡೆದಿದೆ. ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇನ್ನು, ಸಿಡಿಲು ಬಡಿದು ಬಳ್ಳಾರಿಯಲ್ಲಿ ಇಬ್ಬರು, ವಿಜಯಪುರದಲ್ಲಿ ಮತ್ತು ಚಿಕ್ಕಮಗಳೂರಿನಲ್ಲಿ ತಲಾ ಓರ್ವ ಹಾಗೂ ಕೊಪ್ಪಳದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಾರವಾಡ ಗ್ರಾಮದಲ್ಲಿ ಸಿಡಿಲು ಬಡಿದು ಎರಡು ಮನೆಗಳಿಗೆ ಹಾನಿಯಾಗಿದೆ. ಎರಡೂ ಮನೆಯ ಕುಟುಂಬದವರು ಅದೃಷ್ಟವಶಾತ್ ಪಾರಾಗಿದ್ದಾರೆ. ಮೀಟರ್ ಬೋರ್ಡ್, ಮನೆಯ ಹೆಂಚು, ವಿದ್ಯುತ್ ದೀಪಗಳು, ಯಂತ್ರೋಪಕರಣಗಳಿಗೆ ಭಾಗಶಃ ಹಾನಿಯಾಗಿದೆ. ಮನೆಯ ಎದುರಿನ ತೆಂಗಿನ ಮರ, ಮನೆಯ ಗೋಡೆ ಸಿಡಿಲು ಬಡಿದು ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ನಿರೀಕ್ಷಕರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಆಲಿಕಲ್ಲು ಮಳೆಯ ಆರ್ಭಟ: ಸಿಡಿಲು ಬಡಿದು 6 ಜನ ಸಾವು..!
ಬೆಂಗಳೂರಿನಲ್ಲೂ ಮಳೆ
ಮಳೆರಾಯ ರಾಜಧಾನಿ ಬೆಂಗಳೂರಿಗೆ ಮತ್ತೆ ಎಂಟ್ರಿ ಕೊಟ್ಟಿದ್ದಾನೆ. ಬೆಂಗಳೂರಿನ ಹೃದಯ ಭಾಗ ಮೆಜೆಸ್ಟಿಕ್, ಮಲ್ಲೇಶ್ವರಂ, ರಾಜಾಜಿನಗರ, ಯಶವಂತಪುರ, ರೇಸ್ ಕೋರ್ಸ್, ಆನಂದ್ ರಾವ್ ಸರ್ಕಲ್ ಸುತ್ತಮುತ್ತ ಭಾಗದಲ್ಲಿ ಮಳೆಯಾಗುತ್ತಿದೆ. ಮಳೆ ಹಿನ್ನೆಲೆ ಪ್ರಮುಖ ವೃತ್ತಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬೆಂಗಳೂರಿನಲ್ಲಿ ಗಾಳಿ ಮಳೆಗೆ ಮರಗಳು ಧರೆಗುರುಳಿವೆ. ಬಿಬಿಎಂಪಿ 8 ವಲಯದಲ್ಲಿ 27ಕ್ಕೂ ಹೆಚ್ಚು ಮರ ಹಾಗೂ 94 ಕೊಂಬೆಗಳು ಧರೆಗುರುಳಿರುವೆ. ಈ ಪೈಕಿ ಒಟ್ಟು 8 ಮರ ಹಾಗೂ 39 ಕೊಂಬೆಗಳನ್ನು ಈವರೆಗೆ ತೆರವು ಮಾಡಲಾಗಿದೆ. ದಕ್ಷಿಣ, ಬೊಮ್ಮನಹಳ್ಳಿ ವಲಯದಲ್ಲಿ ಹೆಚ್ಚು ಮರಗಳು ಬಿದ್ದಿವೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:30 pm, Tue, 13 May 25








