ಜಸ್ಟ್ ಸಿಂಗಲ್ ಮಾವಿನ ಹಣ್ಣಿಗೆ 10 ಸಾವಿರ ರೂ.: ಇದು ಕರ್ನಾಟಕದಲ್ಲೇ ಬೆಳೆದ ತಳಿ ಯಾವುದು ಗೊತ್ತಾ?
ಧಾರವಾಡದಲ್ಲಿ ಐದು ದಿನಗಳ ಮಾವು ಮೇಳ ಆರಂಭವಾಗಿದೆ. ಒಂದು ಮಾವಿನ ಹಣ್ಣು 10,000 ರೂ.ಗೆ ಮಾರಾಟವಾಗಿದ್ದು ಮಾವು ಮೇಳದ ಆಕರ್ಷಣೆyಆಗಿದೆ. 30ಕ್ಕೂ ಹೆಚ್ಚು ರೈತರು ತಮ್ಮ ಮಾವುಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ. ವಿವಿಧ ತಳಿಯ ಮಾವುಗಳು ಲಭ್ಯ. ರೈತರಿಗೆ ಉತ್ತಮ ಬೆಲೆ ದೊರೆಯುವ ನಿರೀಕ್ಷೆ ಮತ್ತು ಗ್ರಾಹಕರಿಗೆ ಉತ್ತಮ ಮಾವುಗಳು ಲಭ್ಯವಾಗುವ ಅವಕಾಶವಿದೆ. ಮಾವು ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ಸರ್ಕಾರ 7 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.

ಧಾರವಾಡ, ಮೇ 13: ಹಣ್ಣುಗಳ ರಾಜ ಮಾವು (Mango). ಅದರಲ್ಲೂ ಧಾರವಾಡದಲ್ಲಿ (Dharwad) ಬೆಳೆಯುವ ಆಪೋಸಾ (ಆಲ್ಫ್ಯಾನ್ಸೋ) ಹಣ್ಣಿಗೆ ದೇಶದಲ್ಲಷ್ಟೇ ಅಲ್ಲ, ವಿದೇಶಗಳಲ್ಲಿಯೂ ಬೇಡಿಕೆ ಇದೆ. ಇಂಥ ಮಾವನ್ನು ಬೆಳೆಯುವ ರೈತರಿಗಾಗಿ ಮಾವು ಮಾರಾಟ ಮತ್ತು ವಿವಿಧ ಮಾವುಗಳ ಪ್ರದರ್ಶನಕ್ಕೆ ಅವಕಾಶವಾಗುವಂತೆ ಇಂದಿನಿಂದ (ಮೇ.13) ಐದು ದಿನಗಳವರೆಗೆ ಧಾರವಾಡ ತೋಟಗಾರಿಕೆ ಕಚೇರಿ ಆವರಣದಲ್ಲಿ ಮಾವು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿದೆ. ನಗರದ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಮಾವು ಮೇಳವನ್ನು ಜಿಲ್ಲಾಧಿಕಾರಿ ದಿವ್ಯಪ್ರಭು ಉದ್ಘಾಟಿಸಿದರು.
10 ಸಾವಿರ ರೂ.ಗೆ 1 ಮಿಯಾಜಾಕಿ ಮಾವಿನ ಹಣ್ಣು
ಈ ಬಾರಿಯೂ ಅತ್ಯಂತ ದುಬಾರಿ ಬೆಲೆಯ ಮಿಯಾಜಾಕಿ ಮಾವು ಈ ಮೇಳದ ಹೈಲೈಟ್ ಆಗಿದೆ. ಧಾರವಾಡ ಜಿಲ್ಲೆಯಲ್ಲಿ ಮಾವು ಬೆಳೆಯನ್ನು ಪ್ಯಾಶನ್ ಆಗಿ ತೆಗೆದುಕೊಂಡು ಬೆಳೆಯುವ ಪ್ರಮೋದ ಗಾಂವ್ಕರ್ ಮಿಯಾಜಾಕಿ ಹಣ್ಣನ್ನು ಮೇಳದಲ್ಲಿ ಪ್ರದರ್ಶನ ಹಾಗೂ ಮಾರಾಟಕ್ಕೆ ಇಟ್ಟಿದ್ದಾರೆ. ಮಿಯಾಜಾಕಿ ಒಂದು ಮಾವಿನ ಹಣ್ಣಿಗೆ 10 ಸಾವಿರ ರೂಪಾಯಿ ನಿಗದಿ ಮಾಡಿದ್ದಾರೆ. ಈ ಹಣ್ಣಿನೊಂದಿಗೆ ಅವರು 100 ವಿಧವಾದ ಮಾವು ಬೆಳೆದಿದ್ದಾರೆ. ಮಾರುಕಟ್ಟೆಯಲ್ಲಿ ಇವರ ಮಾವಿನ ಹಣ್ಣಿಗೆ ಭಾರಿ ಬೇಡಿಕೆ ಇದೆ.
ಮಾವು ಮಾರಾಟ ಮೇಳದಲ್ಲಿ ಸುಮಾರು 30 ಜನ ಮಾವು ಬೆಳೆಗಾರರು ಮಳಿಗೆಗಳನ್ನು ಹಾಕಿದ್ದಾರೆ. ಸಾರ್ವಜನಿಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಇದು ರೈತರಿಗೆ ಮತ್ತು ಮಾವು ಬೆಳೆಗಾರರಿಗೆ ಅನುಕೂಲವಾಗುತ್ತದೆ. ಸಾರ್ವಜನಿಕರಿಗೆ ಅದರಲ್ಲೂ ಗ್ರಾಹಕರಿಗೆ ಉತ್ತಮ ಬೆಲೆಗೆ, ರುಚಿಕರವಾದ ಮಾವು ಸಿಗುವುದಕ್ಕೆ ಇದೊಂದು ಸುವರ್ಣ ಅವಕಾಶವಾಗಿದೆ.
ಜಿಲ್ಲೆಯಲ್ಲಿ ಎಷ್ಟು ಎಕರೆಯಲ್ಲಿ ಮಾವು?
ಧಾರವಾಡ ಜಿಲ್ಲೆಯಲ್ಲಿ, ಮಾವು ಒಂದು ಪ್ರಮುಖ ಬೆಳೆಯಾಗಿದ್ದು ಒಟ್ಟು 29610 ಎಕರೆಗಳಲ್ಲಿ ಸುಮಾರು 8881 ರೈತರು ಮಾವು ಬೆಳೆಯುತ್ತಿದ್ದಾರೆ. ಸಾಂಪ್ರದಾಯಕವಾಗಿ ಎಕರೆಗೆ 4 ಟನ್ ಇಳುವರಿ ಬರುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಇಳುವರಿಯಲ್ಲಿ ಕುಂಠಿತವಾಗಿದ್ದು, ಎಕರೆಗೆ ಸುಮಾರು 1 ಟನ್ ಇಳುವರಿ ಬರುವ ಸಾಧ್ಯತೆ ಇದೆ. ಜಿಲ್ಲೆಯಿಂದ ಒಟ್ಟು 29000 ಟನ್ ಇಳುವರಿಯನ್ನು ಅಂದಾಜಿಸಲಾಗಿದೆ.
ಜಿಲ್ಲೆಯ ಯಾವ ಭಾಗದಲ್ಲಿ ಮಾವು ಬೆಳೆ?
ಧಾರವಾಡ ಜಿಲ್ಲೆಯು ಸಾಂಪ್ರದಾಯಕವಾಗಿ ಮಾವು ಬೆಳೆಯುವ ರಾಜ್ಯದ ಮುಖ್ಯ ಭಾಗವಾಗಿದ್ದು, ಪ್ರಮಖವಾಗಿ ಧಾರವಾಡ, ಕಲಘಟಗಿ, ಹುಬ್ಬಳ್ಳಿ ಮತ್ತು ಕುಂದಗೋಳ ತಾಲೂಕುಗಳಲ್ಲಿ ಮಾವು ಬೆಳೆಯನ್ನು ಬೆಳೆಯಲು ಸೂಕ್ತವಾದ ವಾತಾವರಣವಿರುವುದರಿಂದ ಉತ್ತಮ ಮಾವು ಬೆಳೆಯನ್ನು ಬೆಳೆಯಲಾಗುತ್ತಿದೆ.
ರೈತರಿಗೆ ಒಳ್ಳೆಯ ಬೆಲೆ ಸಿಗಬೇಕು ಎಂಬ ಉದ್ದೇಶದಿಂದ ಮೇಳವನ್ನು ಆಯೋಜನೆ ಮಾಡಲಾಗುತ್ತಿದೆ. ಧಾರವಾಡ ಜಿಲ್ಲೆಗೆ ಸರಕಾರದಿಂದ ಮಾವು ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ಆದೇಶ ನೀಡಿ, ಈಗಾಗಲೇ ಸುಮಾರು 7 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ.
ಉದ್ದೇಶಿತ ಮಾವು ಅಭಿವೃದ್ಧಿ ಕೇಂದ್ರವನ್ನು ಧಾರವಾಡ ತಾಲೂಕಿನ ಕುಂಭಾಪುರ ಫಾರ್ಮ್‌ನಲ್ಲಿ ಆರಂಭಿಸಲು ನಿರ್ಧರಿಸಲಾಗಿದೆ. ಶೀಘ್ರದಲ್ಲಿ ಕಟ್ಟಡ ಕಾಮಗಾರಿ ಪ್ರಾರಂಭವಾಗಲಿದೆ. ಮಾವು ಅಭಿವೃದ್ಧಿ ಕೇಂದ್ರವು ಜಿಲ್ಲೆಯ ರೈತರಿಗೆ ಮಾತ್ರವಲ್ಲದೇ, ಸುತ್ತಲಿನ ಜಿಲ್ಲೆಗಳಲ್ಲಿ ಮಾವು ಬೆಳೆಯುವ ರೈತರಿಗೂ ಪ್ರಯೋಜನವಾಗಲಿದೆ. ಈ ಮಾವು ಅಭಿವೃದ್ಧಿ ಕೇಂದ್ರದಲ್ಲಿ ಕೋಲ್ಡ್ ಸ್ಟೋರೇಜ್ ವ್ಯವಸ್ಥೆ, ಹಣ್ಣು ಮಾಡುವುದು, ರೈತರಿಗೆ ಗ್ರೇಡಿಂಗ್ ವ್ಯವಸ್ಥೆ, ಮಾವು ಬೆಳೆಯ ತರಬೇತಿ, ರೈತರಿಗೆ ಬೇಕಾದ ಎಲ್ಲ ಮಾಹಿತಿಯನ್ನು ನೀಡುವ ಸಮಗ್ರ ಮಾಹಿತಿ ಕೇಂದ್ರವಾಗಿ ನಿರ್ವಹಿಸುತ್ತದೆ.
ಬಗೆಬಗೆಯ ಮಾವು ಲಭ್ಯ
ಹಣ್ಣುಗಳ ರಾಜ ಮಾವಿನ ಹಣ್ಣುಗಳ ವಿವಿಧ ಬಗೆಬಗೆಗಳಾದ ಸುಂದರ ಶಾ, ಪೈರಿ, ಜಿರಗಿಮಾವು, ಉಪ್ಪಿನಕಾಯಿ ತಳಿ, ಅರ್ಕಾ ನೀಲಕಿರಣ, ಸುವರ್ಣರೇಖಾ, ಧಾರವಾಡ ರಸಪೂರಿ, ಖಾದರ್, ಫರ್ನಾಡಿನ್, ಕಿಶನ್ ಭಾಗ್, ಫಜಲಿ, ದಿಲಪಸಂದ, ರತ್ನಾ, ಗೂಂಗ, ಹಿಮಸಾಗರ, ಆಮ್ರಪಾಲ, ಲಕನೌ ಸಫೇದ್, ನಿರಂಜನ, ಸಿಂಧು, ಕಲಪಡಿ, ನೀಲಗೋವಾ, ಮಲ್ಲಿಕಾ, ಅರ್ಕಾ ಪುನೀತ, ಲಾಂಗ್ರಾ, ನಾಜೂಕ ಪಸಂದ, ಚರಕು ರಸಂ ಮುಂತಾದ ಹಲವಾರು ತಳಿಗಳ ಮಾವಿನ ಹಣ್ಣುಗಳು ಮೇಳದಲ್ಲಿ ಸಾರ್ವಜನಿಕರಿಗೆ ಲಭ್ಯ ಇವೆ. ಮೇಳದಲ್ಲಿ ವಿದೇಶಗಳಿಗೆ ರಫ್ತಾಗುವ ಮಾವಿನ ತಳಿಗಳಾದ ಆಪೋಸಾ, ಕೇಸರ್ ಸೇರಿದಂತೆ ವಿವಿಧ ತಳಿಗಳನ್ನು ಮಾರಾಟ ಮಾಡಲಾಗುತ್ತಿದೆ.
ಇಂಥ ಮೇಳಗಳು ರೈತರಿಗೆ ಹಾಗೂ ಸಾರ್ವಜನಿಕರಿಗೆ ಅತೀ ಅವಶ್ಯಕ: ಜಿಲ್ಲಾಧಿಕಾರಿ
ಈ ಬಗ್ಗೆ ಟಿವಿ9 ಜೊತೆಗೆ ಮಾತನಾಡಿದ ಜಿಲ್ಲಾಧಿಕಾರಿ ದಿವ್ಯಪ್ರಭು,, ಮಾವು ಬೆಳೆಗಾರರಿಂದ ಮತ್ತು ಸಾರ್ವಜನಿಕರಿಂದ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಮಾವು ಮೇಳವನ್ನು ಆಯೋಜಿಸಲಾಗಿದೆ. ಧಾರವಾಡ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಇದು ಸಹ ಒಂದಾಗಿದೆ. ಮಾವು ಮಾರಾಟ ಮೇಳದಲ್ಲಿ ಸುಮಾರು ಅನೇಕ ಬೆಳೆಗಾರರು ಮಳಿಗೆಗಳನ್ನು ಹಾಕಿದ್ದಾರೆ. ಸಾರ್ವಜನಿಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಇದು ರೈತರಿಗೆ ಮತ್ತು ಮಾವು ಬೆಳೆಗಾರರಿಗೆ ಅನುಕೂಲವಾಗುತ್ತದೆ. ಸಾರ್ವಜನಿಕರಿಗೆ ಅದರಲ್ಲೂ ಗ್ರಾಹಕರಿಗೆ ಉತ್ತಮ ಬೆಲೆಗೆ, ರುಚಿಕರವಾದ ಮಾವು ಸಿಗುವುದಕ್ಕೆ ಇದೊಂದು ಸುವರ್ಣ ಅವಕಾಶವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಂಚೆ ಮೂಲಕ ಮನೆ ಬಾಗಿಲಿಗೆ ಬರಲಿದೆ ಮಾವು: ಇಂದೇ ಆರ್ಡರ್ ಮಾಡಿ, ಇಲ್ಲಿದೆ ವಿವರ
ಮೇಳವನ್ನು 15 ದಿನಕ್ಕೆ ವಿಸ್ತರಿಸಿ: ಪ್ರಮೋದ ಗಾಂವ್ಕರ್
ಈ ಬಗ್ಗೆ ಟಿವಿ9 ಡಿಜಿಟಲ್ ಜೊತೆ ಮಾತನಾಡಿದ ಮಾವು ಬೆಳೆಗಾರ ಪ್ರಮೋದ ಗಾಂವ್ಕರ್, ಮಾವು ಬೆಳೆಗಾರರಿಗೆ ಇಂಥ ಮೇಳದ ಅವಶ್ಯಕತೆ ಇದೆ. ಕಳೆದ ಬಾರಿ ಮೂರು ದಿನಗಳ ಕಾಲ ಮೇಳವನ್ನು ಆಯೋಜಿಸಲಾಗಿತ್ತು. ಈ ಬಾರಿ ಅದನ್ನು ಐದು ದಿನಗಳಿಗೆ ವಿಸ್ತರಿಸಲಾಗಿದೆ. ಮುಂದಿನ ವರ್ಷಗಳಲ್ಲಿ ಕನಿಷ್ಟ 15 ದಿನಗಳವರೆಗಾದರೂ ಈ ಮೇಳ ನಡೆಯಬೇಕಿದೆ. ಅಂದಾಗ ಮಾತ್ರ ರೈತರಿಗೆ ಇದರ ಅನುಕೂಲ ಸಿಗುತ್ತೆ. ಇನ್ನು ಅನೇಕ ರೈತರಿಗೆ ಮಾವಿನ ಬೆಳೆಯ ಬಗ್ಗೆ ಮಾಹಿತಿ ನೀಡುವ ಅಗತ್ಯವಿದ್ದು, ನಮ್ಮ ತೋಟಕ್ಕೆ ತೋಟಗಾರಿಕೆ ಇಲಾಖೆಯಿಂದ ಪ್ರಗತಿಪರ ಮಾವು ಬೆಳೆಗಾರ ರೈತರೊಂದಿಗೆ ಭೇಟಿ ಕೊಡಿಸಿ, ಮಾಹಿತಿ ನೀಡಲಾಗುವುದು ಎಂದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:51 pm, Tue, 13 May 25








