ಕೊಡಗಿನಲ್ಲಿ ಬಂದೂಕು ಸೌಲಭ್ಯ ದುರುಪಯೋಗ: ಲೈಸೆನ್ಸ್ಗಾಗಿ ನಕಲಿ ದಾಖಲೆ ಸೃಷ್ಟಿ
ಕೊಡಗು ಜಿಲ್ಲೆಯಲ್ಲಿ ಜಮ್ಮ ಜಾಗದ ಹೆಸರಿನಲ್ಲಿ ಬಂದೂಕು ಪರವಾನಗಿ ಪಡೆಯುವ ಅಕ್ರಮ ಪ್ರಕರಣ ಬೆಳಕಿಗೆ ಬಂದಿದೆ. ಜಮ್ಮ ಜಾಗದ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬಂದೂಕು ಪರವಾನಗಿ ಪಡೆದಿರುವುದು ಪತ್ತೆಯಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದು, ಇಂತಹ ಹೆಚ್ಚಿನ ಪ್ರಕರಣಗಳು ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಕೊಡಗು, ಜುಲೈ 09: ಬೇರೊಬ್ಬರ ಹೆಸರಿನಲ್ಲಿರುವ ಜಮ್ಮ ಜಾಗ (Jamma Land) ತಮ್ಮದೆಂದು ನಕಲಿ ದಾಖಲೆಗಳನ್ನು ನೀಡಿ ಬಂದೂಕು ಪರವಾನಿಗಿ (Gun License) ಪಡೆದಿರುವುದು ಪೊಲೀಸರ ತಪಾಸಣೆ ವೇಳೆ ಬಯಲಾಗಿದೆ. ಇತ್ತೀಚೆಗೆ ಭಾಗಮಂಡಲ ಪೊಲೀಸರು ಬಂದೂಕು ಪರವಾನಗಿ ನವೀಕರಣ ಪರಿಶೀಲಿಸುವ ಸಂದರ್ಭದಲ್ಲಿ ಈ ಅಕ್ರಮ ಬೆಳಕಿಗೆ ಬಂದಿದೆ.
ಭಾಗಮಂಡಲದ ಬಾಲಕೃಷ್ಣ ಎಂಬುವರು ಜಮ್ಮ ಜಾಗದ ಆಧಾರದ ಮೇಲೆ ಬಂದೂಕು ಪರವಾನಗಿ ಹೊಂದಿದ್ದಾರೆ. ಆದರೆ, ಇವರಿಗೆ ಅರಿವಿಲ್ಲದೆ ಮತ್ತೊಬ್ಬ ಬಾಲಕೃಷ್ಣ ಎಂಬುವರು ಆ ಜಮ್ಮ ಜಾಗ ತಮ್ಮದೆಂದು ನಕಲಿ ದಾಖಲೆಗಳನ್ನು ನೀಡಿ ಬಂದೂಕು ಖರೀದಿಸಿ, ಪರವಾನಗಿ ಪಡೆದಿದ್ದಾರೆ. ಒಂದೇ ಜಮ್ಮ ಜಾಗದ ಹೆಸರಲ್ಲಿ ಇಬ್ಬರು ಬಂದೂಕು ಪರವಾನಿಗಿ ಪಡೆದಿದ್ದು, ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ಈ ಹಿನ್ನೆಲೆಯಲ್ಲಿ ಪೊಲೀಸರು ಎಷ್ಟು ಜನ ಇದೇ ರೀತಿ ಅಕ್ರಮವಾಗಿ ಬಂದೂಕು ಪರವಾನಿಗೆ ಪಡೆದಿದ್ದಾರೆ ಎಂಬುವುದರ ಕುರಿತು ತನಿಖೆ ನಡೆಸುತ್ತಿದ್ದಾರೆ. ಇನ್ನು, ಜಿಲ್ಲಾಡಳಿತ ಪರಿಶಿಲಿಸದೆ ಹೇಗೆ ಬಂದೂಕು ಪರವಾನಿಗಿ ನೀಡಿದೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಬಂದೂಕು ಲೈಸೆನ್ಸ್ ಪಡೆಯುವುದು ಹೇಗೆ? ಅರ್ಜಿ ಸಲ್ಲಿಕೆ ಪ್ರಕ್ರಿಯೆ, ನಿಯಮಗಳೇನು? ಇಲ್ಲಿದೆ ಮಾಹಿತಿ
ಜಮ್ಮ ಜಾಗ ಎಂದರೇನು?
ಜಮ್ಮ ಜಾಗ ಎಂದರೆ ಕೊಡಗು ಜಿಲ್ಲೆಯಲ್ಲಿ ಹಿಂದೆ ಜಮ್ಮಾ ಪದ್ಧತಿಯಲ್ಲಿ ಹಂಚಿಕೆಯಾದ ಭೂಮಿ. ಜಮ್ಮಾ ಪದ್ಧತಿಯು ಕೊಡಗಿನ ಒಂದು ವಿಶಿಷ್ಟ ಭೂ ಆಡಳಿತ ಪದ್ಧತಿಯಾಗಿದ್ದು, ಇಲ್ಲಿ ಭೂಮಿಯನ್ನು ಜನ್ಮದ ಹಕ್ಕಿನ ಮೇಲೆ ಕುಟುಂಬಗಳಿಗೆ ಹಂಚಲಾಗುತ್ತಿತ್ತು. ಈ ಭೂಮಿಯನ್ನು ಜಮ್ಮಾ ಭೂಮಿ ಮತ್ತು ಬಾಣೆ ಭೂಮಿ ಎಂದು ಎರಡು ಭಾಗಗಳಾಗಿ ವಿಂಗಡಿಸಲಾಗಿತ್ತು. ಜಮ್ಮಾ ಭೂಮಿಯು ಭತ್ತದ ಗದ್ದೆಗಳಾಗಿದ್ದರೆ, ಬಾಣೆ ಭೂಮಿ ಎತ್ತರದ ಪ್ರದೇಶಗಳಲ್ಲಿತ್ತು ಮತ್ತು ಸಾಮಾನ್ಯವಾಗಿ ಅರಣ್ಯ ಪ್ರದೇಶವಾಗಿತ್ತು.
ಜಮ್ಮ ಭೂಮಿಗಳು ಕುಟುಂಬಗಳಿಗೆ ಜನ್ಮದ ಹಕ್ಕಿನಿಂದ ಬಂದಿದ್ದು, ಇದನ್ನು ಮಾರಾಟ ಮಾಡುವಂತಿಲ್ಲ. ಆದರೆ, ಉತ್ತರಾಧಿಕಾರವಾಗಿ ವರ್ಗಾಯಿಸಬಹುದಿತ್ತು. ಈ ಜಮ್ಮಾ ಜಾಗ ಅವರಿಗೆ ಬರೇ ಒಂದು ಭೂಮಿಯಲ್ಲ. ಬದಲಿಗೆ ಅದೊಂದು ಭಾವನೆ, ಗೌರವ, ಸವಲತ್ತು. ಹೀಗಾಗಿ ಜಮ್ಮ ಜಾಗ ಹೊಂದಿದವವರಿಗೆ ಜಿಲ್ಲೆಯಲ್ಲಿ ವಿಶಿಷ್ಟ ಗೌರವವಿದೆ. ಜಮ್ಮ ಜಾಗ ಹೊಂದಿವವರು ಬಂದೂಕು ಪರವಾನಗಿ ಸುಲಭವಾಗಿ ಪಡೆಯಬಹುದು. ಹೀಗಾಗಿ, ಜಿಲ್ಲೆಯಲ್ಲಿ ಸಾವಿರಾರು ಮಂದಿ ಬಂದೂಕು ಪರವಾನಗಿ ಹೊಂದಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:56 pm, Wed, 9 July 25







