ಫ್ರಿಡ್ಜ್ , ಟಿವಿ ಆನ್ ಮಾಡಂಗಿಲ್ಲ, ಹೀಟರ್ ಅಂತ್ರೂ ಹಾಕುವಂತಿಲ್ಲ: ಕೊಡಗಿನಲ್ಲಿ ಇದೆಂಥಾ ಸ್ಥಿತಿ
ಯಾವತ್ತೋ ಒಂದು ದಿನ ಒಂದು ಗಂಟೆ ವಿದ್ಯುತ್ ವ್ಯತ್ಯಯವಾದರೇ ಸರ್ಕಾರ, ವಿದ್ಯುತ್ ಸರಬರಾಜು ಕಂಪನಿಗಳಿಗೆ ಹಿಡಿಶಾಪ ಹಾಕುತ್ತೇವೆ. ಆದರೆ, ಒಂದು ವಾರ ಕರೆಂಟ್ ಇಲ್ಲಾಂದ್ರೆ ಪರಿಸ್ಥಿತಿ ಹೇಗಿರಬಹುದು ಊಹಿಸಿ. ಹೌದು, ಒಂದೆರಡು ಮನೆಯಲ್ಲಿ ಅಲ್ಲ, ಇಡೀ ಕೊಡಗು ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಕರೆಂಟಿಲ್ಲ. ಜನರು ಕತ್ತಲಿನಲ್ಲೇ ಕಾಲ ಕಳೆಯುವಂತಾಗಿದೆ.

ಕೊಡಗು, ಮೇ 30: ಕಳೆದೊಂದು ವಾರದಿಂದ ಅಕಾಲಿಕ ಗಾಳಿ ಸಹಿತ ಮಳೆಯಾಗುತ್ತಿರುವುದರಿಂದ (Rain) ಕೊಡುಗು (Kodagu) ಜಿಲ್ಲೆಯ ವಿದ್ಯುತ್ ವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ. ಕಂಡ ಕಂಡಲ್ಲಿ ಮರಗಳು ಉರುಳಿ ಬಿದ್ದು 600ಕ್ಕೂ ಅಧಿಕ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಹೀಗಾಗಿ ಜಿಲ್ಲೆಯಾದ್ಯಂತ ಕರೆಂಟ್ ಕಟ್ ಆಗಿದೆ.
ಕೊಡಗು ಜಿಲ್ಲೆಯಲ್ಲಿ ಗುಡ್ಡ-ಗಾಡು, ಮರ, ಗಿಡಗಳೇ ಹೆಚ್ಚಾಗಿವೆ. ಹೀಗಾಗಿ, ಚೆಸ್ಕಾಂ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ಪ್ರತಿವರ್ಷ ಮಳೆಗಾಲಕ್ಕೂ ಮೊದಲೇ ಅಪಾಯಕಾರಿ ಮರಗಳನ್ನು ತೆರವು ಮಾಡುತ್ತವೆ. ಆದರೆ, ಈ ಬಾರಿ ಮುಂಗಾರು ಪೂರ್ವ ವರುಣಾರ್ಭಟ ಶುರುವಾಗಿರುವುದರಿಂದ ಚೆಸ್ಕಾಂಗೆ ತಯಾರಿ ಮಾಡಿಕೊಳ್ಳಲು ಸಮಯ ಸಿಗಲಿಲ್ಲವಂತೆ.
ಇದೀಗ, ಮಳೆ-ಗಾಳಿಯಿಂದಾಗಿ ವಿದ್ಯುತ್ ಕಂಬಗಳು ಧರೆಗೆ ಉರುಳಿ ಇಡೀ ಜಿಲ್ಲೆ ಕತ್ತಲಲ್ಲಿದೆ. ಗ್ರಾಮೀಣ ಭಾಗದ ಜನರಂತೂ ಕಳೆದ ಆರೇಳು ದಿನಗಳಿಂದ ವಿದ್ಯುತ್ ಇಲ್ಲದೆ ಪರದಾಡುತ್ತಿದ್ದಾರೆ. ಮಡಿಕೇರಿ ನಗರವೂ ಕೂಡ ಇದರಿಂದ ಹೊರತಾಗಿಲ್ಲ. ಇಡೀ ದಿನದಲ್ಲಿ ಆಗೊಮ್ಮೆ ಈಗೊಮ್ಮೆ ಬಂದು ಹೋಗುವ ಕರೆಂಟ್ ಕಣ್ಣಾಮುಚ್ಚಾಲೆ ಆಡುತ್ತಿದೆ. ಹೀಗಾಗಿ ನಗರವಾಸಿಗಳು ಹೈರಾಣಗಾಗಿದ್ದಾರೆ.
ಬೇರೆ ವಿಧಿ ಇಲ್ಲದೆ ಹಳೆಯ ಕಾಲದ ಇದ್ದಿಲು ಪದ್ಧತಿಗೆ ಮೊರೆ ಹೋಗಿ ಬಿಸಿ ಕಾಯಿಸಿಕೊಳ್ಳುತ್ತಿದ್ದಾರೆ. ಇಷ್ಟೇ ಅಲ್ಲದೇ ಗುರುವಾರ ನಡೆದ ಐಪಿಎಲ್ನ ಆರ್ಸಿಬಿ ಪಂದ್ಯವನ್ನು ಎಷ್ಟೋ ಮಂದಿ ನೋಡಲು ಆಗದೆ ಬೇಸರಪಟ್ಟುಕೊಂಡರು.
ಇದನ್ನೂ ಓದಿ: ಮಂಗಳೂರಿನಲ್ಲಿ ಮಗುಚಿ ಬಿದ್ದ ದೋಣಿ: ನಿಷೇಧವಿದ್ದರೂ ಸಮುದ್ರಕ್ಕಿಳಿದವರು ದುರಂತ ಸಾವು
ಸದ್ಯ ಜಿಲ್ಲೆಯಲ್ಲಿ ವಿದ್ಯುತ್ ವ್ಯವಸ್ಥೆ ಸರಿಪಡಿಸಲು ಲೈನ್ಮನ್ಗಳ ಕೊರತೆ ಗಂಭೀರವಾಗಿ ಕಾಡುತ್ತಿದೆ. ಬೇರೆ ಜಿಲ್ಲೆಗಳಿಂದ 74 ಮಂದಿ ಲೈನ್ ಮೆನ್ಗಳನ್ನ ಕರೆಸಲಾಗಿದ್ದರೂ ಅವರ ಸಂಖ್ಯೆ ಸಾಕಾಗುತ್ತಿಲ್ಲ. ಇನ್ನೂ 3-4 ದಿನ ಈ ಬವಣೆ ಇದ್ದಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.







