ಕೊಡಗು ಜಿಲ್ಲೆಗೆ ಪ್ರತ್ಯೇಕ ಲೋಕಸಭಾ ಸ್ಥಾನ ಬೇಕಿದೆ: ಪ್ರತಾಪ್ ಸಿಂಹ
2008ರ ತನಕ ಮಂಗಳೂರು ಲೋಕಸಭೆ ಕ್ಷೇತ್ರಕ್ಕೆ ಸೇರಿದ್ದ ಕೊಡಗು ಕ್ಷೇತ್ರ ಪುನರ್ವಿಂಗಡಣೆ ನಂತರ 2009ರಿಂದ ಮೈಸೂರು ಲೋಕಸಭೆ ಕ್ಷೇತ್ರದಲ್ಲಿ ವಿಲೀನ ಆಗಿದೆ. ಹೀಗಾಗಿ ಕೊಡಗಿಗೆ ಪ್ರತ್ಯೇಕ ಲೋಕಸಭಾ ಸ್ಥಾನ ಇಲ್ಲ. ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಗೆ ಪ್ರತ್ಯೇಕ ಲೋಕಸಭಾ ಸ್ಥಾನ ನೀಡಬೇಕೆಂದು ಜಿಲ್ಲೆಯ ಜನರ ಅಭಿಪ್ರಯಾವೂ ಆಗಿದ್ದು, ಇದೀಗ ಸಂಸದ ಪ್ರತಾಪ್ ಸಿಂಹ ಧ್ವನಿ ಎತ್ತಿದ್ದಾರೆ.

ಮಡಿಕೇರಿ, ಜನವರಿ 28: ಕೊಡಗು (Kodagu) ಜಿಲ್ಲೆಗೆ ಪ್ರತ್ಯೇಕ ಲೋಕಸಭಾ ಸ್ಥಾನ (Lok Sabha Constituency) ಬೇಕಿದೆ. 2026ಕ್ಕೆ ಲೋಕಸಭಾ ಕ್ಷೇತ್ರ ಮರುವಿಂಗಡಣೆ ಆಗಲಿದೆ. ಈ ಸಂದರ್ಭದಲ್ಲಿ ರಾಜ್ಯದಲ್ಲಿ ಕ್ಷೇತ್ರಗಳು ಜಾಸ್ತಿಯಾಗುತ್ತವೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ (Pratap Simha) ಹೇಳಿದರು. ಮಡಕೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೈಸೂರಿನಲ್ಲಿ ಜನ ಸಂಖ್ಯೆ ಜಾಸ್ತಿ ಆಗುತ್ತಿದೆ. ಕೊಡಗು-ಮೈಸೂರು ಜೊತೆಯಲ್ಲೇ ಇರುತ್ತೆ ಅಂತೇನಿಲ್ಲ. ಕೊಡಗು ಬಹಳ ವಿಶಿಷ್ಟ ಸಂಸ್ಕೃತಿ ಇರುವ ಜಿಲ್ಲೆ. ಇದನ್ನು ರಕ್ಷಿಸುವ ದೃಷ್ಟಿಯಿಂದ ಪ್ರತ್ಯೇಕ ಲೋಕಸಭಾ ಸ್ಥಾನ ಬೇಕು. ಈ ವಿಚಾರದಲ್ಲಿ ನಾನು ಕೊಡಗಿನ ಜನರ ಜೊತೆ ಇದ್ದೇನೆ ಎಂದರು.
ಕಳೆದ ಏಳು ತಿಂಗಳಿನಲ್ಲಿ ಸಿದ್ದರಾಮಯ್ಯ ಏನೂ ಕಡಿದು ಕಟ್ಟೆ ಹಾಕಿಲ್ಲ. ಸರ್ಕಾರದಿಂದ ಏಳು ತಿಂಗಳಲ್ಲಿ 7 ರೂಪಾಯಿನೂ ಕೊಡಗಿಗೆ ತಂದಿಲ್ಲ. ಮೊನ್ನೆಯಷ್ಟೇ ಅಭಿವೃದ್ಧಿ ಯೋಜನೆಗಳಿಗೆ ಸಿಎಂ ಚಾಲನೆ ನೀಡಿದ್ದಾರೆ. ಅವೆಲ್ಲವೂ ಕೇಂದ್ರ ಸರ್ಕಾರದ ಯೋಜನೆಗಳು. ಮಂಥರ್ ಗೌಡರನ್ನು ನೋಡಿ ಶಾಸಕ ಪೊನ್ನಣ್ಣ ಕಲಿಯಬೇಕು. ತಾವು ಮಾಡದ ಕೆಲಸಕ್ಕೆ ಮಂಥರ್ ಗೌಡ ಕ್ರೆಡಿಟ್ ತೆಗೆದುಕೊಳ್ಳಲ್ಲ ಎಂದು ವಾಗ್ದಾಳಿ ಮಾಡಿದರು.
146 ಕೋಟಿ ರೂ. ಯೋಜನೆಗೆ ಕಳೆದ ಫೆಬ್ರವರಿಯಲ್ಲಿ ಹಣ ಬಿಡುಗಡೆಯಾಗಲಿದೆ. ಇದು ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ ತಂದಿರುವ ಯೋಜನೆ ಎಂದು ಯೋಜನೆಗಳ ದಾಖಲೆ ಬಿಡುಗಡೆ ಮಾಡಿದರು. ವಿರಾಜಪೇಟೆ ಕ್ಷೇತ್ರದಲ್ಲಿ ಈಗ ಆಗುತ್ತಿರುವ ಅಬೀವೃದ್ಧಿ ಕೆಲಸಗಳು ಬೋಪಯ್ಯ ತಂದಿರುವುದು. ಅಮೃತ್-1, ಅಮೃತ- 2 ಕೇಂದ್ರ-ರಾಜ್ಯ ಸಹಭಾಗಿತ್ವದಲ್ಲಿ ಬೊಮ್ಮಾಯಿ ಸರ್ಕಾರ ಅನುದಾನ ನೀಡಿರುವುದು ಎಂದು ತಿಳಿಸಿದರು.
ಇದನ್ನೂ ಓದಿ: ಅಯೋಧ್ಯೆ ಬಾಲರಾಮನ ಮೂರ್ತಿ ಶಿಲೆಗೂ ದಂಡ: ಶ್ರೀನಿವಾಸ್ ಕಟ್ಟಿದ್ದ 80 ಸಾವಿರ ರೂ. ಬಿಜೆಪಿ ನೀಡಲಿದೆ- ಪ್ರತಾಪ್ ಸಿಂಹ
ಕೊಡಗು ಪ್ರತ್ಯೇಕ ಲೋಕಸಭಾ ಕ್ಷೇತ್ರಕ್ಕೆ ಧ್ವನಿ ಎತ್ತದಿದ್ದ ಹೆಚ್ ವಿಶ್ವನಾಥ್
ಕೊಡಗು ಪ್ರವಾಸೋದ್ಯಮಕ್ಕೆ ಸೂಕ್ತವಾದ ಸ್ಥಳವಾಗಿದೆ. ಆದರೆ ಕೊಡಗಿನ ಜನಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ. ಅಲ್ಲಿನ ಜನಕ್ಕೆ ಸಾಕಷ್ಟು ಅಕ್ರೋಶ ಇದೆ. ಕೊಡಗಿಗೆ ಜನರಿಗೆ ಪ್ರತ್ಯೇಕ ಲೋಕಸಭಾ ಕ್ಷೇತ್ರದ ಅಗತ್ಯ ಇದೆ ಎಂದು ಈ ಹಿಂದೆ ಮಾಜಿ ಸಚಿವ ಹೆಚ್ ವಿಶ್ವನಾಥ್ ಹೇಳಿದ್ದರು. ಕೊಡಗಿನ ಜನರು ಎದುರಿಸುತ್ತಿರುವ ಕಾಫಿ ಬೆಳೆಯ ಸಮಸ್ಯೆ ಬಗೆಹರಿಸಬೇಕಿದೆ. ಸರಣಿ ಸಮಸ್ಯೆಯ ಮಧ್ಯೆ ಕೊಡಗು ಸಿಲುಕಿದ್ದು, ಕೊಡಗಿನ ರಕ್ಷಣೆಗೆ ಎಲ್ಲರೂ ಕೈ ಜೋಡಿಸಬೇಕಿದೆ ಅಂತ ವಿಶ್ವನಾಥ್ ಹೇಳಿದ್ದರು.
ಕೊಡಗಿಗೆ ಪ್ರತ್ಯೇಕ ಲೋಕಸಭಾ ಸ್ಥಾನ ಇಲ್ಲ. ದಕ್ಷಿಣ ಕನ್ನಡ (ಮಂಗಳೂರು) ಕ್ಷೇತ್ರದ ಭಾಗವಾಗಿದ್ದ ಕೊಡಗು ಈಗ ಮೈಸೂರು ಲೋಕಸಭಾ ಸಂಸದೀಯ ಕ್ಷೇತ್ರದ ಭಾಗವಾಗಿದೆ. 2008ರ ತನಕ ಮಂಗಳೂರು ಲೋಕಸಭೆ ಕ್ಷೇತ್ರಕ್ಕೆ ಸೇರಿದ್ದ ಕೊಡಗು ಕ್ಷೇತ್ರ ಪುನರ್ವಿಂಗಡಣೆ ನಂತರ 2009ರಿಂದ ಮೈಸೂರು ಲೋಕಸಭೆ ಕ್ಷೇತ್ರದಲ್ಲಿ ವಿಲೀನ ಆಗಿದೆ. ಸ್ವಾತಂತ್ರ್ಯಾ ನಂತರ ಕೊಡಗು ಜಿಲ್ಲೆಗೆ ಸೇರಿದ ಕೇವಲ ಇಬ್ಬರು ಮಾತ್ರ ಜಿಲ್ಲೆಯನ್ನು ಲೋಕಸಭೆಯಲ್ಲಿ ಪ್ರತಿನಿಧಿಸಿದ್ದಾರೆ. ಈ ಕ್ಷೇತ್ರದ ಪ್ರಸ್ತುತ ಸಂಸದ ಪ್ರತಾಪ್ ಸಿಂಹ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ