ಕೊಡಗಿನಲ್ಲಿ ಕಾಫಿ ಬೆಳೆ-ಬೆಲೆ ಬಂಪರ್! ಆದರೆ ಕಳ್ಳಕಾಕರ ಕಾಟ, ಸಿಸಿಟಿವಿ ಖರೀದಿಗೆ ಮುಗಿಬಿದ್ದ ಮಾಲೀಕರು
ಕೊಡಗು ಜಿಲ್ಲೆಯಲ್ಲೀಗ ಕಾಫಿ ಸೀಸನ್.. ಭತ್ತದ ಗದ್ದೆಗಳೇ ಇದೀಗ ಕಾಫಿ ಒಣಗಿಸುವ ಕಣಗಳಾಗಿವೆ. ಇಂತಹ ಸ್ಥಳಗಳೇ ಇದೀಗ ಕಳ್ಳರಿಗೆ ಸುಲಭದ ತುತ್ತಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕಾಫಿ ಕಣಗಳಿಗೆ ಸೋಲಾರ್ ಆಧಾರಿತ ಸಿಸಿಟಿವಿ ಅಲಾರಂ ಇಟ್ಟುಕೊಂಡು ಕಾವಲುಗಾರರನ್ನ ನೇಮಿಸಿ ಕಾಫಿಯನ್ನ ರಕ್ಷಿಸಲಾಗುತ್ತಿದೆ. ಕಾವಲುಗಾರರಿಗೂ ಇದು ಆತಂಕವೇ. ಕಳ್ಳರು ಏನು ಅಪಾಯ ಮಾಡ್ತಾರೋ ಎಂಬ ಭಯವೂ ಇದೆ.
ಕೊಡಗು (Kodagu) ಜಿಲ್ಲೆಯಲ್ಲೀಗ ಕಾಫಿ ಸೀಸನ್.. ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ವರ್ಷ ಪರವಾಗಿಲ್ಲ ಎನ್ನುವಷ್ಟು ಬೆಳೆ ಬಂದಿದೆ. ಜೊತೆಗೆ ಬಂಪರ್ ಬೆಲೆ (Coffee Price) ಬೇರೆ ಇದೆ. ಆದರೆ ಕೊಡಗಿನ ಎಸ್ಟೇಟ್ ಮಾಲಿಕರಿಗೆಲ್ಲಾ ಖುಷಿಯ ಜೊತೆ ದೊಡ್ಡ ಆತಂಕವೂ ತಲೆ ದೋರಿದೆ. ಟನ್ಗಟ್ಟಲೆ ಕಾಫಿಯನ್ನ (Coffee) ಕಳ್ಳಕಾಕರಿಂದ ರಕ್ಷಿಸುವುದೇ ಒಂದು ಹರಸಾಹಸವಾಗಿದೆ. ಹಾಗಾಗಿ ಜಿಲ್ಲೆಯಲ್ಲಿ ಇದೀಗ ಸಿಸಿಟಿವಿ (CCTV) ಇನ್ನಿಲ್ಲದಂತೆ ಸೇಲ್ ಆಗ್ತಿದೆ.
ಕಾಫಿ ಕಣಜ ಕೊಡಗಿನಲ್ಲಿ ವಾರ್ಷಿಕ ಸರಾಸರಿ ಒಂದು ಲಕ್ಷದ 11 ಸಾವಿರ ಮೆಟ್ರಿಕ್ ಟನ್ ಕಾಫಿ ಉತ್ಪಾದಿಸಲಾಗುತ್ತದೆ. ಇದು ದೇಶದ ಒಟ್ಟು ಉತ್ಪಾದನೆಯ ಶೇ 44 ರಷ್ಟಿದೆ. ಅಂದ್ರೆ ಜಿಲ್ಲೆಯ ಕಾಫಿ ಅಗಾಧತೆಯನ್ನ ಊಹಿಸಬಹುದು. ಒಂದು ಸಂತೋಷದ ವಿಚಾರ ಅಂದ್ರೆ ಈ ಬಾರಿ ಫಸಲು ಚೆನ್ನಾಗಿದ್ದು ಕಾಫಿ ಬೆಲೆ ಕೂಡ ಈ ಹಿಂದೆಂದಿಗಿಂತಲೂ ಅತ್ಯುತ್ತಮವಾಗಿದೆ. 50 ಕೆಜಿ ಒಂದು ಬ್ಯಾಗ್ಗೆ 7500 ರೂ ವೆಗೆ ಬೆಲೆ ಇದೆ. ಕಳೆದ ವರ್ಷ ಇಷ್ಟೇ ಕಾಫಿಗೆ 5 ಸಾವಿರ ರೂ ಬೆಲೆ ಇತ್ತು. ಅಂದ್ರೆ ಈ ಬಾರಿ ಕಾಫಿಗೆ ಬಂಪರ್ ಬೆಲೆ ಬಂದಿದೆ ಅನ್ನೋದು ನಿಜ. ಆದ್ರೆ ಬಂಪರ್ ಬೆಲೆ ಜೊತೆ ಕಾಫಿ ಬೆಳೆಗಾರರಿಗೆ ಹೊಸ ತಲೆನೋವು ಶುರುವಾಗಿದೆ.
ಕಳ್ಳಕಾಕರಿಂದ ಚಿನ್ನದಂತಹ ಕಾಫಿ ಬೆಳೆಯನ್ನ ರಕ್ಷಿಸೋದೇ ತಲೆನೋವಾಗಿದೆ. ಕಾಫಿಯನ್ನ ಸುಮಾರು 10 ರಿಂದ 12 ದಿನಗಳ ಕಾಲ ಬಯಲಿನಲ್ಲಿ ಒಣಗಿಸಬೇಕಾಗುತ್ತದೆ. ಸಾಮಾನ್ಯವಾಗಿ ಕಾಫಿ ಒಣಗಿಸುವ ಕಣ ಮತ್ತು ಮಾಲೀಕನ ಮನೆ ದೂರವೇ ಇರುತ್ತದೆ. ಕಣದ ಕೊರತೆ ಇರುವವರು ಗದ್ದೆಯಲ್ಲೇ ಕಾಫಿ ಒಣಗಿಸುತ್ತಾರೆ, ಆದ್ರೆ ಹೀಗೆ ಎಲ್ಲೆಂದರಲ್ಲಿ ಕಾಫಿ ಹಾಕಿದರೆ ಕಳ್ಳಕಾಕರು ಬಹಳ ಸುಲಭವಾಗಿ ಕಾಫಿ ಕದಿಯುತ್ತಾರೆ. ಪ್ರತಿವರ್ಷ ಕಾಫಿ ಕಳ್ಳತನ ಪ್ರಕರಣಗಳು ವರದಿಯಾಗುತ್ತಲೇ ಇವೆ. ಹಾಗಾಗಿ ಕೊಡಗು ಪೊಲೀಸರಿಗೂ ಕಾಫಿ ಸೀಸನ್ ಬಂತೆದ್ರೆ ತಲೆನೋವೆ. ಈ ಕಾರಣದಿಂದ ಪೊಲೀಸ್ ಇಲಾಖೆ ಈಗಾಗಲೆ ಕಾಫಿ ಒಣಗಿಸುವ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸಿಕೊಳ್ಳುವಂತೆ ಸೂಚನೆ ನೀಡಿದೆ. ಇದನ್ನ ಬಹುತೇಕ ಎಸ್ಟೇಟ್ ಮಾಲೀಕರು ಪಾಲಿಸಲು ಮುಂದಾಗಿದ್ದಾರೆ.
Also Read: ವಿಶಿಷ್ಟ ಸಾಂಸ್ಕೃತಿಕ ಆಚಾರ ವಿಚಾರದ ಕೊಡಗು ಜಿಲ್ಲೆಗೆ ಪ್ರತ್ಯೇಕ ಲೋಕಸಭಾ ಸ್ಥಾನಮಾನ?
ಇನ್ನು ಭತ್ತದ ಕೊಯ್ಲು ಮುಗಿದಿರುವುದರಿಂದ ಭತ್ತದ ಗದ್ದೆಗಳೇ ಇದೀಗ ಕಾಫಿ ಒಣಗಿಸುವ ಕಣಗಳಾಗಿವೆ. ಇಂತಹ ಸ್ಥಳಗಳೇ ಇದೀಗ ಕಳ್ಳರಿಗೆ ಸುಲಭದ ತುತ್ತಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕಾಫಿ ಕಣಗಳಿಗೆ ಸೋಲಾರ್ ಆಧಾರಿತ ಸಿಸಿಟಿವಿ ಅಲಾರಂ ಇಟ್ಟುಕೊಂಡು ಕಾವಲುಗಾರರನ್ನ ನೇಮಿಸಿ ಕಾಫಿಯನ್ನ ರಕ್ಷಿಸಲಾಗುತ್ತಿದೆ. ಕಾವಲುಗಾರರಿಗೂ ಇದು ಆತಂಕವೇ. ಕಳ್ಳರು ಏನು ಅಪಾಯ ಮಾಡ್ತಾರೋ ಎಂಬ ಭಯವೂ ಇದೆ. ಆದ್ರೂ ಸಿಸಿಟಿವಿ ಇರೋದ್ರಿಂದ ಏನೂ ಆಗಲ್ಲ ಎಂಬ ನಿರೀಕ್ಷೆ ಅವರದ್ದು.
ಜನವರಿಯಲ್ಲಿ ಆರಂಭವಾಗುವ ಕಾಫಿ ಕೊಯ್ಲು ಸಾಮಾನ್ಯವಾಗಿ ಫೆಬ್ರವರಿ ಅಂತ್ಯದವರೆಗೂ ಮುಂದುವರಿಯುತ್ತದೆ. ಬಳಿಕ ಕಾಳುಮೆಣಸಿನ ಕೊಯ್ಲು ಆರಂಭವಾಗುತ್ತದೆ. ಕಾಳು ಮೆಣಸನ್ನ ಕಪ್ಪು ಬಂಗಾರ ಎಂದೇ ಕರೆಯಲಾಗುತ್ತದೆ. ಈ ಬೆಳೆಯನ್ನ ಕೂಡ ರಕ್ಷಿಸುವ ತಲೆನೋವು ಬೆಳೆಗಾರರಿಗಿದೆ. ಪೊಲೀಸರು ಕೂಡ ಕಾಫಿ ಮೆಣಸು ಖರೀದಿದಾರಿಗೆ ಹಲವು ಸೂಚನೆಗಳನ್ನ ಕೊಟ್ಟಿದ್ದಾರೆ. ಕಾಫಿ ಮೆಣಸು ಮಾರುವವರ ಸಂಪೂರ್ಣ ವಿವರ ತೆಗೆದಿಟ್ಟುಕೊಳ್ಳುವಂತೆ ಸೂಚಿಸಿದೆ. ಈ ಮೂಲಕ ಕೊಡಗಿನಲ್ಲಿ ಕಾಫಿ ಮೆಣಸು ಕಳ್ಳತನ ತಡೆಯಲು ಸಾಕಷ್ಟು ಯತ್ನ ನಡೆಸಲಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ