ಕೊಡಗು: 25 ವರ್ಷವಾದರೂ ಡಾಂಬರು ಕಾಣದ ಅಂಕನಹಳ್ಳಿ ಗ್ರಾಮದ ರಸ್ತೆ, ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರ
ಸೋಮವಾರಪೇಟೆ ತಾಲೂಕಿನ ಅಂಕನಹಳ್ಳಿ ಗ್ರಾಮದ ರಸ್ತೆಯು ಕಳೆದ 25 ವರ್ಷಗಳಿಂದ ಇದುವರೆಗೂ ಡಾಂಬರ್ ಕಂಡಿಲ್ಲ. ಹೀಗಾಗಿ ದುರಸ್ಥಿಯಾಗುವವರೆಗೂ ಈ ಬಾರಿ ಮತವನ್ನೇ ಹಾಕುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.
ಕೊಡಗು: ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಅಂಕನಹಳ್ಳಿ ಗ್ರಾಮದ ರಸ್ತೆಯು ಸುಮಾರು 3 ಕಿ.ಮೀ ಉದ್ದವಿದೆ. 60ಕ್ಕೂ ಅಧಿಕ ಮನೆಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಆದರೆ ಗ್ರಾಮಸ್ಥರು ಹೇಳುವ ಪ್ರಕಾರ ಕಳೆದ 25 ವರ್ಷಗಳಿಂದ ಈ ರಸ್ತೆಗೆ ಡಾಂಬರ್ನ್ನೇ ಹಾಕಿಲ್ಲವಂತೆ. ಹೀಗಾಗಿ ಇಲ್ಲಿ ಓಡಾಡುವ ಜನರ ಸ್ಥಿತಿ ಹೇಳತೀರದು. ಇನ್ನು ಈ ಊರಿನ ಶಾಲಾ ಮಕ್ಕಳ ಸ್ಥಿತಿಯಂತೂ ಹೇಳಲಸಾಧ್ಯ. ಒಂದು ಮಳೆ ಬಂದರೆ ಸಾಕು ಇಡೀ ರಸ್ತೆ ಮೊಣಕಾಲುದ್ದ ಕೆಸರಲ್ಲಿ ಹೂತುಹೋಗುತ್ತದೆ. ಇಂತಹ ರಸ್ತೆಯಲ್ಲಿ ಮೈತುಂಬಾ ಕೆಸರು ಮಾಡಿಕೊಂಡು ಶಾಲೆಗೆ ತೆರಳಬೇಕು. ಎಷ್ಟೋ ಬಾರಿ ಮಕ್ಕಳು ಅರ್ಧ ದಾರಿಗೆ ಹೋಗಿ ವಾಪಾಸ್ಸಾಗಿದ್ದು ಇದೆ. ಇನ್ನು ವಾಹನಗಳು ಉರುಳಿ ಬಿದ್ದು ಆಗಿರುವ ಅನಾಹುತಗಳಿಗೆ ಲೆಕ್ಕವೇ ಇಲ್ಲ.
ಸ್ಥಳೀಯ ಶಾಸಕ ಅಪ್ಪಚ್ಚು ರಂಜನ್ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಕೂಡ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾಡಳಿತಕ್ಕೂ ಹಲವು ಬಾರಿ ಮನವಿ ಮಾಡಿದ್ರೂ ಪ್ರಯೋಜನವಾಗಿಲ್ಲ. ಒಟ್ಟಾರೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಗ್ರಾಮವನ್ನ ಯಾರು ಉದ್ದಾರ ಮಾಡ್ತಾರೆ ಅನ್ನೋದೆ ಪ್ರಶ್ನೆಯಾಗಿದೆ. ಈ ಚುನಾವಣೆಯೊಳಗೆ ರಸ್ತೆ ದುರಸ್ಥಿಯಾಗುವವರೆಗೂ ಈ ಬಾರಿ ಮತವನ್ನೇ ಹಾಕುವುದಿಲ್ಲ ಅಂತ ಜನರು ಪಟ್ಟು ಹಿಡಿದ್ದಾರೆ.
ವರದಿ: ಗೋಪಾಲ್ ಸೋಮಯ್ಯ ಟಿವಿ9 ಕೊಡಗು
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ