ಕೊಡಗಿನ ಅರೆಭಾಷಿಕ ಗೌಡ ಸಮುದಾಯದ ಕೈಲ್ಮುಹೂರ್ತ ವಿಶೇಷ; ಭತ್ತ ನಾಟಿ ಸಂಪೂರ್ಣದ ಖುಷಿ
ಸತತ 3 ತಿಂಗಳು ಗದ್ದೆಯಲ್ಲಿ ಉಳುಮೆ, ಬಿತ್ತನೆ, ನಾಟಿ ಮಾಡಿ ಆಯಾಸಗೊಳ್ಳುವ ರೈತಾಪಿ ವರ್ಗ ನಾಟಿ ಕಾರ್ಯ ಪೂರ್ಣಗೊಂಡ ಬಳಿಕ ಹೀಗೆ ಒಟ್ಟಾಗಿ ಸೇರಿ ಸಂಭ್ರಮಿಸುತ್ತಾರೆ. ಇದು ಕೊಡಗಿ ಕೃಷಿ ಆಧಾರಿತ ಸಾಂಪ್ರದಾಯಿಕ ವ್ಯವಸ್ಥೆಗೆ ಕನ್ನಡಿ ಹಿಡಿಯುತ್ತದೆ.
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಯಾವಾಗ ಭತ್ತದ ನಾಟಿ ಮಾಡುವ ಕಾರ್ಯ ಸಂಪೂರ್ಣವಾದಾಗ ರೈತರೆಲ್ಲಾ ಸೇರಿ ವಿಶಿಷ್ಟ ಹಬ್ಬವೊಂದನ್ನು ಆಚರಿಸುತ್ತಾರೆ. ಒಂದು ರೀತಿಯಲ್ಲಿ ಈ ವಿಶೇಷವನ್ನು ಆಯುಧ ಪೂಜೆಯೆಂದೂ ಹೇಳಬಹುದು. ನಾಟಿ ಕಾರ್ಯಗಳಿಗೆ ಬಳಸಿದ ಪರಿಕರಗಳು, ಗೋವು ಮತ್ತು ಆಯುಧಗಳನ್ನು ಪೂಜಿಸಿ ಬಾಡೂಟ ಮಾಡಿ ಸಂಭ್ರಮಿಸುವ ಹಬ್ಬವೇ ಕೈಲ್ಮೂಹೂರ್ತ. ಕೊಡಗಿನ ಅರೆಭಾಷಿಕ ಗೌಡ ಸಮುದಾಯ ಕೂಡ ಈ ಹಬ್ಬವನ್ನು ಒಂದಾಗಿ ಆಚರಿಸಿ ಸಂಭ್ರಮಿಸಿದರು.
ಬಿಳಿಯ ಕುಪ್ಪಸ ತೊಟ್ಟು, ತಲೆಮೇಲೆ ಪೇಟ ಧರಿಸಿ, ಕೈಯಲ್ಲಿ ಕೋವಿ, ಕತ್ತಿ ಹಿಡಿದು ಹೀಗೆ ಗತ್ತು ಗಾಂಭೀರ್ಯದಿಂದ ಪೋಸ್ ಕೊಡುತ್ತಿರುವವರು ಕೊಡಗಿನ ಅರೆಭಾಷಿಕ ಗೌಡ ಸಮುದಾಯದವರು. ಕೊಡಗಿನಲ್ಲಿ ವಿಶಿಷ್ಟ ಸಂಸ್ಕೃತಿ ಆಚಾರ ವಿಚಾರ ಹೊಂದಿರುವ ಸಮುದಾಯ ಇದಾಗಿದ್ದು, ವರ್ಷಕ್ಕೊಮ್ಮೆ ಕೈಲ್ ಮುಹೂರ್ತ ಹಬ್ಬವನ್ನು ಬಹಳ ಸಡಗರ ಸಂಭ್ರಮ ಮತ್ತು ಭಕ್ತಿಭಾವದಿಂದ ಆಚರಿಸುತ್ತಾರೆ. ಅದರಲ್ಲೂ ಗದ್ದೆ ಕೆಲಸಗಳು ಪೂರ್ಣಗೊಂಡ ಬಳಿಕ ಸಮುದಾಯದ ಮಂದಿಯೆಲ್ಲಾ ಒಂದೆಡೆ ಸೇರಿ ಈ ಹಬ್ಬವನ್ನು ಆಚರಿಸಿ ಸಂಭ್ರಮಿಸುತ್ತಾರೆ. ಕೃಷಿಗೆ ಬಳಸುವ ನೇಗಿಲು, ನೊಗ, ಸೇರಿದಂತೆ ಇತರ ಪರಿಕರಗಳನ್ನು ತೊಳೆದು ಸ್ವಚ್ಛಗೊಳಿಸಿ ದೇವರ ಕೋಣೆಗೆ ತಂದು ಪೂಜಿಸುತ್ತಾರೆ. ಗದ್ದೆ ಕೆಲಸ ಮಾಡಲು ನೆರವು ನೀಡಿದ ಈ ಕೃಷಿ ಸಲಕರಣೆಗಳಿಗೆ ನಮಸ್ಕರಿಸಿ ಪೂಜಿಸಿ ಬಳಿಕ ಅಟ್ಟಕ್ಕೇರಿಸುತ್ತಾರೆ. ಇದರ ಜೊತೆಗೆ ಕೋವಿ ಮತ್ತು ಇತರ ಆಯುಧಗಳನ್ನು ಕೂಡ ಇಲ್ಲಿ ಪೂಜಿಸುತ್ತಾರೆ. ಪೂಜಾ ಕಾರ್ಯದ ಬಳಿಕ ಸಮುದಾಯದ ಮಂದಿಯೆಲ್ಲಾ ಸೇರಿ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ತೊಡಗುತ್ತಾರೆ. ಗಂಡಸರು ಹೆಂಗಸರು ಮಕ್ಕಳೂ ಎಲ್ಲರೂ ಈ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಗುರಿಯನ್ನು ಪರೀಕ್ಷಿಸುತ್ತಾರೆ
ವಿಶೇಷ ಅಂದರೆ ಹಿಂದಿನ ಕಾಲದಲ್ಲಿ ಕೈಲ್ ಮುಹೂರ್ತ ಹಬ್ಬದ ಬಳಿಕ ಊರಿನ ಮಂದಿಯೆಲ್ಲಾ ಸೇರಿ ಕಾಡಿಗೆ ಬೇಟೆಗೆ ಹೋಗುತ್ತಿದ್ದರು. ಈ ಸಂದರ್ಭ ತಮ್ಮ ಮನೆಯ ಮಕ್ಕಳಿಗೆ ಕೋವಿ ಹಿಡಿಯುವುದು ಹೇಗೆ? ಅದನ್ನು ಬಳಸುವುದು ಹೇಗೆ ಎಂದು ಹಿರಿಯರು ಕಲಿಸಿಕೊಡುತ್ತಿದ್ದರು. ಈಗ ಬೇಟೆಗೆ ಹೋಗುವುದಿಲ್ಲವಾದರೂ ಮಕ್ಕಳಿಗೆ ಕೋವಿ ಕಲಿಸುವುದನ್ನು ಈಗಲೂ ಕೂಡ ಹಿರಿಯರು ಪಾಲಿಸಿಕೊಂಡು ಬರುತ್ತಿದ್ದಾರೆ. ಹೀಗೆ ಕೋವಿ ಹಬ್ಬದ ಬಳಿಕ ಎಲ್ಲರೂ ಸೇರಿ ಬಾಡೂಟ ಸವಿಯುತ್ತಾರೆ. ಈ ಊಟದಲ್ಲಿ ಕೊಡಗಿನ ವಿಶೇಷ ಪಂದಿಕರಿ ಮತ್ತು ಕಡಂಬುಟ್ಟ್ ಅನ್ನ ಎಲ್ಲರೂ ಸವಿಯುತ್ತಾರೆ. ಈ ಹಬ್ಬಕ್ಕೆ ದೂರ ದೂರದ ಊರುಗಳಲ್ಲಿ ನೆಲೆಸಿರುವ ಸಮುದಾಯದ ಮಂದಿ ಆಗಮಿಸಿ ಪಾಲ್ಗೊಂಡು ಸಂಭ್ರಮಿಸುತ್ತಾರೆ.
ಸತತ 3 ತಿಂಗಳು ಗದ್ದೆಯಲ್ಲಿ ಉಳುಮೆ, ಬಿತ್ತನೆ, ನಾಟಿ ಮಾಡಿ ಆಯಾಸಗೊಳ್ಳುವ ರೈತಾಪಿ ವರ್ಗ ನಾಟಿ ಕಾರ್ಯ ಪೂರ್ಣಗೊಂಡ ಬಳಿಕ ಹೀಗೆ ಒಟ್ಟಾಗಿ ಸೇರಿ ಸಂಭ್ರಮಿಸುತ್ತಾರೆ. ಇದು ಕೊಡಗಿ ಕೃಷಿ ಆಧಾರಿತ ಸಾಂಪ್ರದಾಯಿಕ ವ್ಯವಸ್ಥೆಗೆ ಕನ್ನಡಿ ಹಿಡಿಯುತ್ತದೆ.
ವಿಶೇಷ ವರದಿ: ಗೋಪಾಲ್ ಸೋಮಯ್ಯ ಐಮಂಡ ಟಿವಿ9 ಕೊಡಗು
ಇದನ್ನೂ ಓದಿ:
ನವರಾತ್ರಿ ಉತ್ಸವ ಹಿನ್ನೆಲೆ: ಮಡಿಕೇರಿ ಕಡೆ ಯಾರೂ ಪ್ರವಾಸಕ್ಕೆ ಬರಬೇಡಿ- ಕೊಡಗು ಜಿಲ್ಲಾಡಳಿತದಿಂದ ಮಹತ್ವದ ಆದೇಶ
Madikeri Dasara 2021: ಮಡಿಕೇರಿ ದಸರಾ: ಕರಗಗಳಿಗೆ ಪೂಜೆ ಸಲ್ಲಿಸಿ ವಿದ್ಯುಕ್ತ ಚಾಲನೆ