ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದ ಆರೋಪಿ ಮಡಿಕೇರಿ ಸಂಪತ್ ಬಿಜೆಪಿ ಕಾರ್ಯಕರ್ತನಂತೆ -ಕೊಡಗು ಕಾಂಗ್ರೆಸ್ ಫೋಟೋ ಬಿಡುಗಡೆ
ಮೊಟ್ಟೆ ಎಸೆದ ಆರೋಪಿ ಸಂಪತ್ ಬಿಜೆಪಿ ಕಾರ್ಯಕರ್ತ ಎಂದು ಕೊಡಗುಯುವ ಕಾಂಗ್ರೆಸ್ ಮುಖಂಡರು ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ.
ಕೊಡಗು: ಮೊಟ್ಟೆ ಎಸೆದ ಆರೋಪಿ ಸಂಪತ್ ಬಿಜೆಪಿ (BJP) ಕಾರ್ಯಕರ್ತ ಎಂದು ಕೊಡಗು (Kodagu) ಯುವ ಕಾಂಗ್ರೆಸ್ (Congress) ಮುಖಂಡರು ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಆರೋಪಿ ಸಂಪತ್ ನಾನು ಕಾಂಗ್ರೆಸ್ (Congress) ಕಾರ್ಯಕರ್ತನೆ ಎಂದು ಹೇಳಿಕೊಂಡಿದ್ದನು. ಅಲ್ಲದೇ ಕಾಂಗ್ರೆಸ್ನಲ್ಲಿ ಹಿಂದೂಗಳಿಲ್ವಾ? ವಿಪಕ್ಷ ನಾಯಕ ಸಿದ್ದರಾಮಯ್ಯ ಹಿಂದೂಗಳೂ ದನದ ಮಾಂಸ ತಿಂತಾರೆ ಅಂದಿದ್ದು ತಪ್ಪಲ್ವಾ ? ಹಿಂದೂ ವಿರೋಧಿ ಹೇಳಿಕೆಯಿಂದ ನೋವಾಗಿತ್ತು. ಹೀಗಾಗಿ ಮೊಟ್ಟೆ ಹೊಡೆದೆ ಎಂದು ಹೇಳಿಕೆ ನೀಡಿದ್ದನು.
ಇದಾದ ಬಳಿಕ ಸದ್ಯ ಮಡಕೇರಿ ಕಾಂಗ್ರೆಸ್ ಮುಖಂಡರು ಆರೋಪಿ ಸಂಪತ್ ಬಿಜೆಪಿ ಕಾರ್ಯಕರ್ತನೆಂದು ಫೋಟೋ ಹರಿಬಿಟ್ಟಿದ್ದಾರೆ. ಪ್ರಸ್ತುತ ಫೋಟೋ ಎಲ್ಲೆಡೆ ಹರಿದಾಡುತ್ತಿದೆ. ಈ ಸಂಬಂಧ ಟ್ವೀಟ್ ಮಾಡಿದ ರಾಜ್ಯ ಕಾಂಗ್ರೆಸ್ “ಬಿಜೆಪಿ ಹೇಳುವ ಸುಳ್ಳುಗಳಿಗೆ ‘ಸತ್ಯ’ವೇ ಕಂಗೆಟ್ಟು ದೇಶ ಬಿಟ್ಟು ಓಡಿ ಹೋಗಲಿದೆ! ಈ ವ್ಯಕ್ತಿಯೊಂದಿಗೆ ಅಪ್ಪಚ್ಚು ರಂಜನ್ ಅವರಿಗೆ ಏನು ಕೆಲಸ? ಕಾರಿಗೆ ಮೊಟ್ಟೆ ಎಸೆದವರು ಕಾಂಗ್ರೆಸ್‌ನವರು ಎಂಬ ಕಟ್ಟುಕತೆ ಸೃಷ್ಟಿಸುವ ಮುನ್ನ ಉತ್ತರಿಸಿ”, ಎಂದು ಪ್ರಶ್ನಿಸಿದೆ.
“ಸ್ಥಳೀಯ ಕಾಂಗ್ರೆಸ್ ಮುಖಂಡರಿಗೇ ಪರಿಚಯವಿಲ್ಲದ ಆತ ಕಾಂಗ್ರೆಸ್ ಕಾರ್ಯಕರ್ತನಾಗುವುದು ಹೇಗೆ? ಮೊಟ್ಟೆ ಎಸೆದಿದ್ದು ಕಾಂಗ್ರೆಸ್ ಕಾರ್ಯಕರ್ತ ಎಂಬ ಕಾಗಕ್ಕ ಗುಬ್ಬಕ್ಕನ ಕತೆ ಕಟ್ಟಿರುವ ರಾಜ್ಯ ಬಿಜೆಪಿ ಘಟಕ ಉತ್ತರಿಸಬೇಕು. ಅವರು ಕಾಂಗ್ರೆಸ್ ಕಾರ್ಯಕರ್ತರೇ ಆಗಿದ್ದರೆ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಠಾಣೆಯಿಂದ ಜಾಮೀನು ಕೊಟ್ಟು ಕರೆತಂದಿದ್ದೇಕೆ? ಕಾಂಗ್ರೆಸ್ ಕಾರ್ಯಕರ್ತನಾಗಿದ್ದರೆ ಆತ ಅಪ್ಪಚ್ಚು ರಂಜನ್‌ಗೇಕೆ ಆಪ್ತನಾಗಿದ್ದಾನೆ ? “, ಎಂದು ಟ್ವೀಟ್ ಮಾಡಿದೆ
ಘಟನೆ ಹಿನ್ನೆಲೆ
ಮುಸ್ಲಿಮರ ಏರಿಯಾದಲ್ಲಿ ಸಾವರ್ಕರ್ ಫ್ಲೆಕ್ಸ್ ಯಾಕೆ ಹಾಕಬೇಕು ಎಂದು ಪ್ರಶ್ನಿಸಿದ್ದ ಸಿದ್ದರಾಮಯ್ಯ ಅವರ ವಿರುದ್ಧ ಕಿಡಿಕಾರಿದ ಬಿಜೆಪಿ ಕಾರ್ಯಕರ್ತರು, ಆಗಸ್ಟ 18 ರಂದು ಮಲೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ತರಳುತ್ತಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮೇಲೆ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದು ಕಪ್ಪು ಬಾವುಟ ಪ್ರದರ್ಶನ ಮಾಡಿದ್ದರು.
ಈ ಪ್ರಕರಣ ಸಂಬಂಧ 9 ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರು. ನಂತರ ಆರೋಪಿಗಳು ಜಾಮೀನು ಪಡೆದು ಹೊರಬಂದಿದ್ದಾರೆ. ಸಧ್ಯ ಮೊಟ್ಟೆ ಹೊಡೆದ ಆರೋಪಿ ಸಂಪತ್ ಬಂಧನಕ್ಕೂ ಮುನ್ನ ವಿಪಕ್ಷ ನಾಯಕ ಸಿದ್ದರಾಮಯ್ಯ ಹಿಂದೂಗಳೂ ದನದ ಮಾಂಸ ತಿಂತಾರೆ ಅಂದಿದ್ದು ತಪ್ಪಲ್ವಾ ? ಹಿಂದೂ ವಿರೋಧಿ ಹೇಳಿಕೆಯಿಂದ ನೋವಾಗಿತ್ತು. ಹೀಗಾಗಿ ಮೊಟ್ಟೆ ಹೊಡೆದಿದ್ದೆ ಎಂದು ಹೇಳಿದ್ದಾನೆ.
ಬಳಿಕ ಆರೋಪಿ ಸಂಪತ್ನನ್ನು ಕುಶಾಲನಗರ ಗ್ರಾಮಾಂತರ ಪೊಲೀಸರು ಕುಶಾಲನಗರ ಜೆಎಂಎಫ್ಸಿ ನ್ಯಾಯಾಲಯ ಆವರಣದಲ್ಲಿ ಬಂಧಿಸಿದ್ದಾರೆ. ಬಂಧನಕ್ಕೂ ಮೊದಲು ಸಂಪತ್ ಹೇಳಿಕೆ ನೀಡಿದ್ದಾನೆ.
ಮೊಟ್ಟೆ ಹೊಡೆದಿದ್ದರಿಂದ ಕೆಂಡಾಮಂಡಲರಾಗಿದ್ದ ಸಿದ್ದರಾಮಯ್ಯನವರು ಕೊಡಗಿನಿಂದ ಚಿಕ್ಕಮಗಳೂರಿಗೆ ತೆರಳುವ ಮುನ್ನ ಪೊಲೀಸ್ರ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಕಿಡಿಕಾರಿದ್ದರು. ನಮಗೂ ಮೊಟ್ಟೆಎಸೆಯಲು ಬರಲ್ವಾ? ನಾವು ಹೋರಾಟ ಶುರು ಮಾಡಿದರೆ ಮುಖ್ಯಮಂತ್ರಿ ಎಲ್ಲೂ ಓಡಾಡೋಕೆ ಆಗಲ್ಲ ಎಂದು ಬಿಜೆಪಿ ಮುಖಂಡರಿಗೆ ಖಡಕ್ ಎಚ್ಚರಿಕೆ ನೀಡಿದ್ದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಕಾರ್ಯಕರ್ತರಿಗೆ ಮೊಟ್ಟೆ ಹೊಡೆಯಲು ಬರುವುದಿಲ್ಲವೇ ಎಂದಿದ್ದಾರೆ. ಮುಖ್ಯಮಂತ್ರಿ ಹಾಗೂ ಸಚಿವರು ಓಡಾಡಲು ಆಗುತ್ತದೆಯೇ ಎಂದು ಸವಾಲು ಹಾಕುತ್ತಾರೆ. ಒಬ್ಬ ಮುಖ್ಯಮಂತ್ರಿಗಳಿಗೆ ಈ ರೀತಿ ನೇರವಾಗಿ ಹೇಳಿಕೆ ನೀಡುವುದು ಎಷ್ಟರ ಮಟ್ಟಿಗೆ ಸರಿ. ಈ ರೀತಿಯ ಪ್ರಚೋದನಕಾರಿ ಹೇಳಿಕೆ ನೀಡುವುದನ್ನು ಸಿದ್ದರಾಮಯ್ಯ ಬಿಡಬೇಕು ಎಂದು ದೂರು ನೀಡಿದ್ದರು.
Published On - 4:31 pm, Sat, 20 August 22