AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲಂಗಾಣದಲ್ಲಿ ಕೊಲೆ, ಮಡಿಕೇರಿಯಲ್ಲಿ‌ ಸಾಕ್ಷ್ಯ ನಾಶ: ಕೊಡಗು ಪೊಲೀಸರ ಚಾಣಾಕ್ಷ್ಯ ಕಾರ್ಯಾಚರಣೆಗೆ ಸಿಕ್ಕಿಬಿದ್ದ ಹೈಟೆಕ್ ಕೊಲೆಗಾರರು

ಕೊಡಗು ಪೊಲೀಸರು ಒಂದು ಸಂಕೀರ್ಣ ಕೊಲೆ ಪ್ರಕರಣವನ್ನು ಬೇಧಿಸಿದ್ದಾರೆ. ಬುದ್ಧಿವಂತ ಮಹಿಳೆಯೊಬ್ಬಳು ಪ್ರಿಯಕರ ಮತ್ತು ಸ್ನೇಹಿತರ ಸಹಾಯದಿಂದ ಹಣಕ್ಕಾಗಿ ಪತಿಯನ್ನೇ ಹತ್ಯೆ ಮಾಡಿದ್ದು, ಶವವನ್ನು ಕೊಡಗು ಜಿಲ್ಲೆಯ ಸುಂಟಿಕೊಪ್ಪ ಬಳಿ ಸುಟ್ಟುಹಾಕಿ ಹೋಗಿದ್ದಳು. ಪೊಲೀಸರ ಸೂಕ್ಷ್ಮ ತನಿಖೆಯಿಂದ ಆರೋಪಿಗಳ ಬಂಡವಾಳ ಬಯಲಾಗಿದ್ದು, ಘಟನೆಗೆ ಸಂಬಂಧಿಸಿದ ಎಲ್ಲಾ ಅಂಶಗಳು ಬೆಳಕಿಗೆ ಬಂದಿವೆ.

ತೆಲಂಗಾಣದಲ್ಲಿ ಕೊಲೆ, ಮಡಿಕೇರಿಯಲ್ಲಿ‌ ಸಾಕ್ಷ್ಯ ನಾಶ: ಕೊಡಗು ಪೊಲೀಸರ ಚಾಣಾಕ್ಷ್ಯ ಕಾರ್ಯಾಚರಣೆಗೆ ಸಿಕ್ಕಿಬಿದ್ದ ಹೈಟೆಕ್ ಕೊಲೆಗಾರರು
ಆರೋಪಿಗಳಾದ ನಿಹಾರಿಕಾ, ನಿಖಿಲ್ ಮತ್ತು ಕೊಲೆಯಾದ ರಮೇಶ್
Gopal AS
| Updated By: Ganapathi Sharma|

Updated on: Oct 26, 2024 | 4:14 PM

Share

ಮಡಿಕೇರಿ, ಅಕ್ಟೋಬರ್ 26: ಆಕೆ ಅದೆಂಥ ಛಲಗಾತಿ ಅಂದರೆ ಮದುವೆಯಾಗಿ ಎರಡು ಮಕ್ಕಳಾದರೂ ಮತ್ತೆ ಓದಿ ಎಂಜಿನಿಯರ್ ಆಗಿದ್ದಳು. ಐಟಿ ಕಂಪೆನಿಯಲ್ಲಿ ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದಳು. ಅಷ್ಟೇ ಅಲ್ಲದೆ, ಸಖತ್ ಬುದ್ಧಿವಂತೆಯೂ ಆಗಿದ್ದಳು. ಆದರೆ ಅದೇ ಬುದ್ಧಿವಂತಿಕೆಯನ್ನು ಬದುಕಲು ಉಪಯೋಗಿಸದೆ ತನ್ನ ಪತಿಯ ಕೊಲೆಗೆ ಬಳಸಿದ್ದಳು. ಕೊಡಗು ಪೊಲಿಸರ ಚಾಣಾಕ್ಷ್ಯ ನಡೆಯಿಂದಾಗಿ ಈ ಕೊಲೆಗಾತಿ, ಆಕೆಯ ಪ್ರಿಯಕರ ವೈದ್ಯ ಮತ್ತು ಸ್ನೇಹಿತ ಇದೀಗ ಜೈಲು ಪಾಲಾಗಿದ್ದಾರೆ.

ಘಟನೆ ವಿವರ

ಅಕ್ಟೋಬರ್ 8ನೇ ತಾರೀಖಿನಂದು ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪ ಸಮೀಪದ ಪನ್ಯ ಎಸ್ಟೇಟ್​ನಲ್ಲಿ ಅರೆ ಬೆಂದ ಸ್ಥಿತಿಯಲ್ಲಿ ದೇಹವೊಂದು ಪತ್ತೆಯಾಗುತ್ತದೆ. ಯಾರದ್ದೋ ದೇಹವನ್ನ ಇಲ್ಲಿ ತಂದು ಪೆಟ್ರೋಲ್ ಹಾಕಿ ಸುಡಲಾಗಿತ್ತು. ಸುಮಾರು ಮೂರರಿಂದ ನಾಲ್ಕು ದಿನಗಳ ಹಿಂದೆ ದೇಹ ಸುಟ್ಟಂತಿತ್ತು. ಆದರೆ ಮೃತದೇಹ ಯಾರದ್ದು ಎಂಬುದುಕ್ಕೆ ಯಾವುದೇ ಸುಳಿವು ಇರಲಿಲ್ಲ. ಯಾರೋ ಎಲ್ಲಿಯೋ ಕೊಲೆ ಮಾಡಿ ದೇಹ ತಂದು ಇಲ್ಲಿ ಪೆಟ್ರೋಲ್ ಹಾಕಿ ಸುಟ್ಟಿದ್ದರು. ಬಹಳ ಕಗ್ಗಂಟಾಗಿದ್ದ ಈ ಪ್ರಕರಣವನ್ನ ಬೇಧಿಸಲು ಸ್ವತಃ ಎಸ್ಪಿ ರಾಮಜರಾಜನ್ ಇನ್ನಿಲ್ಲದಂತೆ ತಲೆ ಕಡೆಸಿಕೊಂಡಿದ್ದರು. ಈ ಪ್ರಕರಣದ ತನಿಖೆಗಾಗಿ 16 ಪೊಲಿಸರ ನಾಲ್ಕು ವಿಶೇಷ ತಂಡ ರಚನೆ ಮಾಡಲಾಗಿತ್ತು. ನಾಲ್ಕು ದಿನಗಳ ಹಿಂದೆ ಈ ಭಾಗದಲ್ಲಿ ಓಡಾಡಿದ್ದ ವಾಹನಗಳ ವಿವರವನ್ನು ಸಿಸಿಟಿವಿಗಳಲ್ಲಿ ಪೊಲಿಸರು ಪರಿಶೀಲಿಸಿದ್ದಾರೆ. ಹೆದ್ದಾರಿಯಿಂದ ಕೇವಲ ಒಂದು ಕಿಲೋ ಮೀಟರ್ ದೂರದ ಗ್ರಾಮೀಣ ರಸ್ತೆ ಬದಿಯ ತೋಟದಲ್ಲಿ ಈ ಕೃತ್ಯ ನಡೆದಿರುತ್ತದೆ. ಹಾಗಾಗಿ ಆ ರಸ್ತೆ ಮಾತ್ರವಲ್ಲದೆ, ಮಡಿಕೇರಿ, ಸುಂಟಿಕೊಪ್ಪ ಕುಶಾಲನಗರ ಮಾದಾಪುರ ವ್ಯಾಪ್ತಿಯಲ್ಲಿ ಓಡಾಡಿದ್ದ ಸಾವಿರಾರು ವಾಹನಗಳ ಮಾಹಿತಿ ಪರಿಶೀಲನೆ ಮಾಡಲಾಗುತ್ತದೆ.

ಆರೋಪಿಗಳ ಜಾಡು ಹಿಡಿದ ಪೊಲೀಸರು

ಅಷ್ಟೇ ಅಲ್ಲದೆ, ಮಡಿಕೇರಿಯಿಂದ ತುಮಕೂರು ವರೆಗೂ 500ಕ್ಕೂ ಅಧಿಕ ಸಿಸಿಟಿವಿ ದೃಷ್ಯವಾಳಿಗಳ ತನಿಖೆ ನಡೆಯುತ್ತದೆ. ಇಷ್ಟೆಲ್ಲ ತನಿಖೆಯ ಬಳಿಕ ಒಂದು ಕೆಂಪು ಬಣ್ಣದ ಬೆಂಜ್ ಕಾರಿನ ಮೇಲೆ ಇವರ ಅನುಮಾನ ಕೇಂದ್ರೀಕೃತವಾಗುತ್ತದೆ. ಈ ಕಾರು ಯಾರದ್ದು ಎಂದು ಪರಶೀಲನೆ ಮಾಡಿದಾಗ ಅದು ತೆಲಂಗಾಣದ ರಿಯಲ್ ಎಸ್ಟೇಟ್ ಉದ್ಯಮಿ 54 ವರ್ಷದ ರಮೇಶ್ ಅವರದ್ದು ಎಂಬುದು ಅರಿವಾದಾಗುತ್ತದೆ. ಅವರ ಬಗ್ಗೆ ಮಾಹಿತಿ ಕಲೆ ಹಾಕುತ್ತಾ ಸಾಗಿದಾಗ, ಅವರು ಒಂದು ವಾರದಿಂದ ಎಲ್ಲೂ ಕಾಣಸಿಗುತ್ತಿಲ್ಲ ಎಂಬ ಮಾಹಿತಿ ಬೆಳಕಿಗೆ ಬರುತ್ತದೆ. ಎಲ್ಲಿ ಹೋಗಿರಬಹುದು ರಮೇಶ್, ಅಂತ ತನಿಖೆ ನಡೆಸುತ್ತಲೇ ತೆಲಂಗಾಣದಲ್ಲಿ ಠಿಕಾಣಿ ಹೂಡಿದ ಕೊಡಗು ಪೊಲೀಸರು ರಮೇಶ್​ನ ಕುಟುಂಬದ ಬಗ್ಗೆ ಮಾಹಿತಿ ಕಲೆ ಹಾಕಿ ತನಿಖೆ ಮಾಡ್ತಾರೆ. ಈ ಸಂದರ್ಭ ರಮೇಶ್​ನ ಎರಡನೇ ಹೆಂಡತಿ ನಿಹಾರಿಕಾಳ ಮೇಲೆ ಅನುಮಾನ ಮೂಡುತ್ತದೆ. ಹಾಗೆಯೆ ಅವಳ ಜೊತೆ ಅತಿ ಸಲುಗೆಯಿಂದ ಇದ್ದ ಬೆಂಗಳೂರಿನ ಪಶು ವೈದ್ಯ ಡಾ. ನಿಖಿಲ್ ಹಾಗೂ ಆಕೆಯ ಸ್ನೇಹಿತ ಅಂಕುರ್​ ರಾಣಾನತ್ತಲೂ ತನಿಖೆಯ ಜಾಡು ಸಾಗುತ್ತದೆ. ಕೊನೆಗೆ ನಿಹಾರಿಕಾಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗಿ ಎಲ್ಲವೂ ಬಯಲಾಗುತ್ತದೆ.

ಅತಿ ಬುದ್ಧಿವಂತೆ ನಿಹಾರಿಕಾ

29 ವರ್ಷದ ನಿಹಾರಿಕಾ ಮೂಲತಃ ತೆಲಂಗಾಣ ರಾಜ್ಯದ ಯಾದಾದ್ರಿ ಜಿಲ್ಲೆಯ ಮೋಂಗೀರ್ ನಗರದ ನಿವಾಸಿ. 16 ವರ್ಷದವಳಾಗಿದ್ದಾಗ ಆಕೆಯ ಅಪ್ಪ ಸಾವನ್ನಪ್ಪಿದ್ದರು. ಹಾಗಾಗಿ ತಾಯಿ ಆಕೆಯನ್ನ 16 ವರ್ಷಕ್ಕೆ ವಿವಾಹ ಮಾಡಿಸಿದ್ದರು. ಆಕೆಗೆ ಎರಡೂ ಮಕ್ಕಳೂ ಜನಿಸಿವೆ. ಆದರೆ ಗಂಡನ ಜೊತೆ ವೈಮನಸ್ಯದಿಂದಾಗಿ ಡೈವೋರ್ಸ್​ ಪಡೆಯುತ್ತಾಳೆ. ಶಾಲಾ ದಿನಗಳಲ್ಲಿ ಅತಿ ಬುದ್ಧಿವಂತೆಯಾಗಿದ್ದ ಆಕೆ ಪರೀಕ್ಷೆಗಳಲ್ಲಿ ಶೇಕಡಾ 90ಕ್ಕೂ ಅಧಿಕ ಮಾರ್ಕ್ಸ್​ ಪಡೆಯುತ್ತಿದ್ದಳು. ಹಾಗಾಗಿ ಡೈವೋರ್ಸ್​ ಬಳಿಕ ಕಷ್ಟಪಟ್ಟು ಎಂಜಿನಿಯರಿಂಗ್ ಪಾಸ್ ಮಾಡಿ ಹಲವು ಬಗೆಯ ಕಂಪ್ಯೂಟರ್​ ಕೋರ್ಸ್​ಗಳನ್ನೂ ಮಾಡುತ್ತಾಳೆ. ಬಳಿಕ ಬೆಂಗಳೂರಿನ ಟಿಸಿಎಸ್​ ಸೇರಿದಂತೆ ಹಲವೆಡೆ ಹಲವು ವರ್ಷಗಳ ಕಾಲ ಕೆಲಸ ಮಾಡುತ್ತಾಳೆ. ಆಕೆಗೆ 1 ಲಕ್ಷದ 20 ಸಾವಿರ ರೂ ಸಂಬಳ ಇತ್ತು. ಇದರ ಮಧ್ಯೆ ಆಕೆಗೆ ಹರ್ಯಾಣ ಮೂಲದ ವ್ಯಕ್ತಿಯೊಬ್ಬನ ಜೊತೆ ಪ್ರೇಮಾಂಕುರವಾಗಿ ಅಲ್ಲಿಗೆ ಹೋಗಿ ಕೆಲ ಸಮಯ ನೆಲೆಸಿರುತ್ತಾಳೆ. ಆದರೆ ಅಲ್ಲಿ ಆತನಿಗೆ ಹಣಕಾಸಿನ ವ್ಯವಹಾರದಲ್ಲಿ ಮೋಸ ಮಾಡಿ ಜೈಲು ಸೇರಿರುತ್ತಾಳೆ. ಅಲ್ಲಿ ಪರಿಚಯವಾಗುವ ಮಹಿಳೆಯ ಮಗನೇ ಅಂಕುರ್​ ರಾಣಾ. ಆತನೂ ಅಪರಾಧಿ ಹಿನ್ನೆಲೆಯವನು. ಬಳಿಕ ಬೆಂಗಳೂರಿಗೆ ಬರುವ ಆಕೆಗೆ ರಮೇಶನ ಪರಿಚಯವಾಗಿ ವಿವಾಹವಾಗುತ್ತಾಳೆ.

ತೆಲಂಗಾಣದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ರಮೇಶ್​ಗೆ 2018ರಲ್ಲಿ ನಿಹಾರಿಕಾಳ ಪರಿಚಯವಾಗಿ ಅದು ಪ್ರೇಮಕ್ಕೆ ತಿರುಗಿ ರಿಜಿಸ್ಟರ್ ವಿವಾಹವಾಗಿರುತ್ತಾರೆ. ಆಕೆಯ ಐಷಾರಾಮಿ ಜೀವನಕ್ಕೆ ಬೇಕಾದ ಹಣಕಾಸು ವ್ಯವಸ್ಥೆಯನ್ನು ರಮೇಶನೇ ಪೂರೈಸುತ್ತಿದ್ದ. ನಿಹಾರಿಕಾಗೆ ಐಷಾರಾಮಿ ಬದುಕಿನ ಖಯಾಲಿ ಇತ್ತು.

ಬೆಂಗಳೂರಿನ ಪಶು ವೈದ್ಯನ ಜತೆ ಅಕ್ರಮ ಸಂಬಂಧ

ಬೆಂಗಳೂರಿನ ರಾಮಮೂರ್ತಿ ನಗರದ ಪಶು ವೈದ್ಯ ಡಾ. ನಿಖಿಲ್ ಜೊತೆ ನಿಹಾರಿಕಾಗೆ ಅಕ್ರಮ ಸಂಬಂಧ ಇರುತ್ತದೆ. ನಿಹಾರಿಕಾ ತನ್ನ ನಾಯಿಗೆ ಚಿಕಿತ್ಸೆ ನೀಡಲೆಂದು ಪಶುವೈದ್ಯ ನಿಖಿಲ್ ಬಳಿ ತೆರಳಿದ್ದಾಗ ಇವರಿಬ್ಬರ ಮಧ್ಯೆ ಅಕ್ರಮ ಸಂಬಂಧ ಬೆಳೆದಿದೆ. ಈ ಮಧ್ಯೆ ರಿಯಲ್ ಎಸ್ಟೇಟ್​ ಹಣಕಾಸು ವಿಚಾರಕ್ಕೆ ಸಂಬಂಧಪಟ್ಟಂತೆ ನಿಹಾರಿಕಗೂ ರಮೇಶ್​ಗೂ ತೀವ್ರ ಭಿನ್ನಾಭಿಪ್ರಾಯ ಮೂಡಿ, ರಮೇಶ್ ನಿಹಾರಿಕಾಗೆ ಹಣ ನೀಡುವುದನ್ನ ನಿಲ್ಲಕಿಸಿದ್ದ. ರಮೇಶ್​ನಿಂದ ಈಕೆ 8 ಕೋಟಿ ರೂ ಹಣ ನಿರೀಕ್ಷೆ ಮಾಡಿದ್ದಳಂತೆ. ಆದರೆ ಚಿಕ್ಕಾಸು ಗಿಟ್ಟುವುದಿಲ್ಲ ಎಂಬುದು ಗೊತ್ತಾದಾಗ ತನ್ನ ಸ್ನೇಹಿತ ಅಂಕುರ್ ರಾಣಾ ಜೊತೆಗೂ ರಮೇಶ್​ಗೆ ಮುಹೂರ್ತ ಫಿಕ್ಸ್​ ಮಾಡುತ್ತಾಳೆ. ಅಕ್ಟೋಬರ್​ ಒಂದಕ್ಕೆ ಹೈದ್ರಾಬಾದ್ ಸಮೀಪದ ಉಪ್ಪಳ್​ಗೆ ಬರುವಂತೆ ಪತಿ ರಮೇಶ್​ಗೆ ಕರೆ ಮಾಡುತ್ತಾಳೆ. ಅದರಂತೆ ಅಲ್ಲಿಗೆ ಬಂದ ​ರಮೇಶ್​ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡುತ್ತಾರೆ. ಬಳಿಕ ರಮೇಶ್ ಮನೆಗೆ ತೆರಳಿ ಅಲ್ಲಿಂದ ಆತನ ಬೆಂಜ್ ಕಾರು ಹಾಗೂ ಹಣ ತೆಗೆದುಕೊಂಡು ಡೆಡ್​ ಬಾಡಿ ಜೊತೆಗೇ​ ಬೆಂಗಳೂರಿಗೆ ಬಂದು ಅಲ್ಲಿ ತನ್ನ ಸ್ನೇಹಿತ ಡಾ ನಿಖಿಲ್​ನ ಜೊತೆಗೂಡಿ ಕೊಡಗಿಗೆ ಬರುತ್ತಾಳೆ. ಯಾರಿಗೂ ಶಂಕೆ ಬಾರದಂತೆ ಕಾಫಿ ತೋಟಕ್ಕೆ ತೆರಳಿ ಅಲ್ಲಿ ಹೆಣವನ್ನ ಬಿಸಾಕಿ ಪೆಟ್ರೋಲ್ ಹಾಕಿ ಸುಟ್ಟು ಪರಾರಿಯಾಗಿದ್ದಾರೆ. ಹೆಣದ ಗುರುತೂ ಯಾರಿಗೂ ಸಿಗದಂತೆ ಮಾಡಲು ಇವರು ಕೊಡಗಿನ ಕಾಫಿ ತೋಟವನ್ನು ಬಳಸಿದ್ದರು. ಕೊಲೆ ನಡೆದು ನಾಲ್ಕು ದಿನಗಳ ಕಾಲ ಆ ಡೆಡ್​ಬಾಡಿಯನ್ನ ಕಾರಿನಲ್ಲೇ ಇಟ್ಟುಕೊಂಡಿದ್ದರು. ಎಲ್ಲಿಯೂ ಸ್ವಲ್ಪವೂ ಶಂಕೆ ಬಾರದಂತೆ ಸಹಜವಾಗಿಯೇ ವರ್ತಿಸಿದ್ದರು.

ನಾಪತ್ತೆ ದೂರು ನೀಡಲು ಮುಂದಾದಾಗ ಪೊಲೀಸ್ ಬಲೆಗೆ

ದೇಹ ಸುಟ್ಟ ಬಳಿಕ ಉಪ್ಪಳ್​ಗೆ ತೆರಳಿ ಸ್ವಲ್ಪ ದಿನ ಬಿಟ್ಟು ರಮೇಶ್ ನಾಪತ್ತೆ ಅಂತ ದೂರು ನೀಡಲು ರೆಡಿಯಾಗಿದ್ದಾಗಲೇ ಕೊಡಗು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಸದ್ಯ ನಿಹಾರಿಕಾ, ಅಂಕುರ್ ಮತ್ತು ಡಾ ನಿಖಿಲ್​ನನ್ನು ಕೊಡಗು ಪೊಲಿಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಕೇವಲ ಒಂದೇ ಒಂದು ಸಣ್ಣ ಕ್ಲೂ ಹಿಡಿದು ಮಡಿಕೇರಿಯಿಂದ ಹೈದರಾಬಾದ್, ತೆಲಂಗಾಣ, ಹರಿದ್ವಾರದವರೆಗೂ ಕಾರ್ಯಾಚರಣೆ ನಡೆಸಿ ಮೂವರು ಹಂತಕರನ್ನ ಹೆಡೆ ಮುರಿ ಕಟ್ಟಿ ಕೊಡಗು ಪೊಲಿಸರು ಶಹಬ್ಬಾಸ್​​ಗಿರಿ ಪಡೆದಿದ್ದಾರೆ. ಅಂಕುರ್ ಪತ್ನಿ ಇತ್ತೀಚೆಗೆ ನಾಪತ್ತೆಯಾಗಿದ್ದು, ಅಂಕುರನೇ ಆಕೆಯನ್ನ ಕೊಲೆ ಮಾಡಿರುವ ಸಾಧ್ಯತೆ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ