ಮೇಘದೂತ್ ಆ್ಯಪ್: ಸ್ಥಳೀಯ ಹವಾಮಾನ ಮೂನ್ಸೂಚನೆಯನ್ನು ಪ್ರಾದೇಶಿಕ ಭಾಷೆಯಲ್ಲಿ ರೈತರಿಗೆ ತಲುಪಿಸುವ ಪ್ರಯತ್ನ
ರೈತರು ಮಾಡುವ ಕೃಷಿ ಚಟುವಟಿಕೆಗಳು ಶೇ.40 ರಷ್ಟು ಮಾತ್ರ ಬೆಳೆಯ ಮೇಲೆ ಪರಿಣಾಮ ಬೀರುತ್ತವೆ. ಉಳಿದ ಶೇ. 60 ರಷ್ಟು ಹವಾಮಾನ ಅಂಶಗಳಿಂದ ಕೂಡಿರುತ್ತವೆ ಹಾಗಾಗಿ ಇಂತಹ ಆ್ಯಪ್ ಬಳಕೆಯಿಂದ ರೈತರಿಗೆ ಇದು ಸಹಕಾರಿಯಾಗಲಿದೆ ಎಂದು ಕೆವಿಕೆ ವಿಜ್ಞಾನಿಗಳಾದ ಸ್ವಾತಿ ತಿಳಿಸಿದ್ದಾರೆ.
ಕೋಲಾರ : ಕೃಷಿಗೆ ಸಂಬಂಧಪಟ್ಟಂತೆ ರೈತರು ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ. ಮಳೆ ಬಿತ್ತನೆ ಬೀಜ, ರಸಗೊಬ್ಬರ ಹೀಗೆ ನಾನಾ ಆತಂಕಗಳು ರೈತರ ಮುಂದೆ ಇದೆ. ಹೀಗಾಗಿಯೇ ರೈತರಿಗೆ ನೆರವು ನೀಡಲು ವಿಶೇಷ ಆ್ಯಪ್ ಒಂದನ್ನು ತಯಾರಿಸಲಾಗಿದೆ. ಮೋಡ, ಮಳೆ ಹಾಗೂ ಬಿತ್ತನೆ ಕುರಿತಂತೆ ರೈತರಿಗೆ ಅವಶ್ಯಕವಾಗಿರುವ ಭವಿಷ್ಯದ ಮಾಹಿತಿಯನ್ನು ರೈತರ ಅಂಗೈನಲ್ಲೇ ಕೊಡುವ ಆ್ಯಪ್ (App) ಇದಾಗಿದೆ. ಇದರಿಂದ ರೈತರು ಆಕಾಶ ನೋಡಿ, ಮೋಡ, ಮಳೆ ನೋಡಿ ಕೆಲಸ ಮಾಡುವಂತಿಲ್ಲ ತಮ್ಮ ಮೊಬೈಲ್ ನೋಡಿಯೇ ಎಲ್ಲಾ ಮಾಹಿತಿ ತಿಳಿದುಕೊಳ್ಳಬಹುದು.
ಕೃಷಿ ಆಧಾರಿತ ಮತ್ತು ಸ್ಥಳೀಯ ಹವಾಮಾನ ಮೂನ್ಸೂಚನೆಯನ್ನು ಪ್ರಾದೇಶಿಕ ಭಾಷೆಯಲ್ಲಿ ರೈತರಿಗೆ ತಲುಪಿಸುವ ಪ್ರಯತ್ನ ಇದಾಗಿದೆ. ಇದಕ್ಕೆ ಭಾರತೀಯ ಹವಾಮಾನ ಇಲಾಖೆ ಹಾಗೂ ಭಾರತೀಯ ಸಂಶೋಧನಾ ಮಂಡಳಿ ಜಂಟಿಯಾಗಿ ಮೇಘದೂತ್ ಆ್ಯಪ್ ತಯಾರಿಸಿದೆ. ರೈತರು ಬೆಳೆಯುವ ಬೆಳೆಗಳಲ್ಲಿ ಅಧಿಕ ಇಳುವರಿ ಪಡೆಯಲು ಹವಾಮಾನ ಹಾಗೂ ಕೃಷಿ ಚಟುವಟಿಕೆಗಳು ಸಮತೋಲನದಿಂದ ಕೂಡಿರಬೇಕು ಹಾಗಾಗಿ ಇದರಿಂದ ಪ್ರೇರಿತರಾದ ಇಲಾಖೆಗಳು ಇಂತಹ ಆ್ಯಪ್ ಒಂದನ್ನು ರೈತರಿಗಾಗಿ ಮಾಡಿದ್ದಾರೆ.
ರೈತರು ಮಾಡುವ ಕೃಷಿ ಚಟುವಟಿಕೆಗಳು ಶೇ.40 ರಷ್ಟು ಮಾತ್ರ ಬೆಳೆಯ ಮೇಲೆ ಪರಿಣಾಮ ಬೀರುತ್ತವೆ. ಉಳಿದ ಶೇ. 60 ರಷ್ಟು ಹವಾಮಾನ ಅಂಶಗಳಿಂದ ಕೂಡಿರುತ್ತವೆ ಹಾಗಾಗಿ ಇಂತಹ ಆ್ಯಪ್ ಬಳಕೆಯಿಂದ ರೈತರಿಗೆ ಇದು ಸಹಕಾರಿಯಾಗಲಿದೆ ಎಂದು ಕೆವಿಕೆ ವಿಜ್ಞಾನಿಗಳಾದ ಸ್ವಾತಿ ತಿಳಿಸಿದ್ದಾರೆ.
ಕೇಂದ್ರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಜಿಲ್ಲಾ ಕೃಷಿ ಹವಾಮಾನ ಘಟಕ ಸ್ಥಾಪನೆ ಮಾಡಿದ್ದು, ಸ್ವಯಂ ಚಾಲಿತವಾಗಿ ಈ ಹವಾಮಾನ ಉಪಕರಣ ರೈತರಿಗೆ ಮಾಹಿತಿ ನೀಡಲಿದೆ. ಇದು 5 ಕೀಮೀ ವ್ಯಾಪ್ತಿಯಲ್ಲಿ ಗರಿಷ್ಠ ಹಾಗೂ ಕನಿಷ್ಠ ತಾಪಮಾನ, ತೇವಾಂಶ, ಗಾಳಿಯ ವೇಗ ಮತ್ತು ದಿಕ್ಕು, ಮಣ್ಣಿನ ತೇವಾಂಶ ಮತ್ತು ಉಷ್ಣಾಂಶ, ಮಳೆ ಪ್ರಮಾಣದ ಕುರಿತು ಪ್ರತಿನಿತ್ಯ 15 ನಿಮಿಷಕ್ಕೊಮ್ಮೆ ಮಾಹಿತಿ ನೀಡುತ್ತದೆ.
ಇದು ಮುಂದಿನ 5 ದಿನಗಳ ಹವಾಮಾನದ ಸ್ಥಿತಿಗತಿ, ಆ ಹವಾಮಾನ ಅಂಶಗಳಿಗೆ ಸರಿಯಾಗಿ ರೈತರು ಬೆಳೆಗಳಲ್ಲಿ ಕೈಗೊಳ್ಳಬೇಕಾದ ನಿರ್ವಹಣಾ ಕ್ರಮಗಳನ್ನು ಫೇಸ್ಬುಕ್ ಹಾಗೂ ವಾಟ್ಸಾಪ್ ಮೂಲಕ ಮಾಹಿತಿ ನೀಡುತ್ತದೆ. ಇದು ಸ್ಥಳೀಯವಾಗಿ ಹವಾಮಾನ ಮುನ್ಸೂಚನೆ ನೀಡುತ್ತದೆ. ಈಗಾಗಲೆ ಹವಾಮಾನ ವೈಪರೀತ್ಯದಿಂದ ರೈತರು ತಾವು ಬೆಳೆದ ಬೆಳೆಗಳನ್ನು ಕಳೆದುಕೊಂಡು ಪರದಾಡುವ ಸ್ಥಿತಿ ಬಂದಿದೆ, ಇದರಿಂದ ರೈತರನ್ನು ತಪ್ಪಿಸಿ, ಕೃಷಿಯನ್ನು ಲಾಭದಾಯಕವಾಗಿಸಲು ಇದು ಅನುಕೂಲಕರವಾಗಿದೆ ಎಂದು ರೈತ ನಾರಾಯಣಗೌಡ ತಿಳಿಸಿದ್ದಾರೆ.
ಒಟ್ಟಾರೆ ಶ್ರಮ ವಹಿಸಿ ಬೆಳೆ ಬೆಳೆಯುವ ರೈತರಿಗೆ ತಮ್ಮ ಬೆಳೆಯನ್ನು ಹವಾಮಾನ ವೈಪರೀತ್ಯದಿಂದ ಉಳಿಸಿಕೊಳ್ಳುವುದೇ ಒಂದು ಸವಾಲು. ಇಂಥಹ ಸಂದರ್ಭದಲ್ಲಿ ಈ ಆ್ಯಪ್ ನಿಜಕ್ಕೂ ರೈತರಿಗೆ ಒಂದು ಅಂಗೈನಲ್ಲಿರುವ ಹವಾಮಾನ ಇಲಾಖೆ ಅಂದರೆ ತಪ್ಪಾಗುವುದಿಲ್ಲ.
ವರದಿ : ರಾಜೇಂದ್ರ ಸಿಂಹ
ಇದನ್ನೂ ಓದಿ: ಬಿಜಿನೆಸ್ ಬಿಟ್ಟು ಕೃಷಿಯತ್ತ ವಾಲಿದ ಪದವೀಧರ; ಕೈ ಹಿಡಿದು ಕಾಪಾಡುತ್ತಿದೆ ’ಹಳದಿ ಕಲ್ಲಂಗಡಿ‘
ಕೊವಿಡ್ ಲಸಿಕೆ ಪಡೆಯಲು ಸುಲಭ ಮಾರ್ಗ ಸೃಷ್ಟಿಸಿದ ಕುಂದಾಪುರದ ಯುವಕ; ಹೊಸ ಆ್ಯಪ್ ಕಂಡುಹಿಡಿಯುವಲ್ಲಿ ಯಶಸ್ವಿ