ಕೋಲಾರ: ಮೈತುಂಬಾ ಗಾಯ, ಇನ್ಫೆಕ್ಷನ್ ಭೀತಿ; ಕೆಜಿಎಫ್‌ನಲ್ಲಿ ಅದೊಂದು ಹುಳು ಕಾಟಕ್ಕೆ ಜನರು ತತ್ತರ

Kolar News: ಕೋಲಾರದ ಕೆಜಿಎಫ್ ಬೋರಿಲಾಲ್ ಪೇಟೆಯಲ್ಲಿ ಲಕ್ಷಾಂತರ ಕಂಬಳಿ ಹುಳುಗಳ ಕಾಟದಿಂದ ಜನರು ತತ್ತರಿಸಿದ್ದಾರೆ. ಚರ್ಮದ ತುರಿಕೆ, ಗಾಯಗಳಿಂದ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸ್ವಚ್ಛತೆಯ ಕೊರತೆ ಮತ್ತು ಹರಳು ಗಿಡಗಳ ಹೆಚ್ಚಳ ಇದಕ್ಕೆ ಕಾರಣವೆಂದಿದ್ದಾರೆ.

ಕೋಲಾರ: ಮೈತುಂಬಾ ಗಾಯ, ಇನ್ಫೆಕ್ಷನ್ ಭೀತಿ; ಕೆಜಿಎಫ್‌ನಲ್ಲಿ ಅದೊಂದು ಹುಳು ಕಾಟಕ್ಕೆ ಜನರು ತತ್ತರ
ಕಂಬಳಿ ಹುಳು
Image Credit source: tv9 kannada
Edited By:

Updated on: Aug 27, 2026 | 9:25 PM

ಕೋಲಾರ, ಆಗಸ್ಟ್​ 27: ಕೋಲಾರ (kolar) ಜಿಲ್ಲೆಯ ಕೆಜಿಎಫ್ ನಗರದ ಬೋರಿಲಾಲ್ ಪೇಟೆಯಲ್ಲಿ ಕಳೆದ ಕೆಲ ದಿನಗಳಿಂದ ಕಂಬಳಿ ಹುಳುಗಳ (Caterpillar) ಕಾಟ ಶುರುವಾಗಿದ್ದು, ಇಡೀ ಬಡಾವಣೆಯ ಜನರು ಬೆಚ್ಚಿಬಿದ್ದಿದ್ದಾರೆ. ಮನೆಯ ಗೋಡೆ, ಚಾವಣಿ, ರಸ್ತೆ, ಹಾಸಿಗೆ, ಒಣಹಾಕಿದ ಬಟ್ಟೆ ಹೀಗೆ ಎಲ್ಲಿ ನೋಡಿದರಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಕಂಬಳಿ ಹುಳುಗಳು ಹರಿದಾಡುತ್ತಿದ್ದು, ಜನರಿಗೆ ಕೂರಲು, ನಿಲ್ಲಲು ಹಾಗೂ ನೆಮ್ಮದಿಯಿಂದ ನಿದ್ದೆ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ ಎದುರಾಗಿದೆ.

ನಡೆದಿದ್ದೇನು?

ಕೋಲಾರ ಜಿಲ್ಲೆಯ ಕೆಜಿಎಫ್​ ನಗರದ ಬೋರಿಲಾಲ್ ಪೇಟೆಯಲ್ಲಿ ಕಳೆದ ಕೆಲವು ದಿನಗಳಿಂದ ಜನರಿಗೆ ಕಂಬಳಿ ಹುಳುಗಳ ಕಾಟ ಹೆಚ್ಚಾಗಿದೆ. ಒಂದಲ್ಲ ಎರಡು ಲಕ್ಷಾಂತರ ಕಂಬಳಿ ಹುಳುಗಳು ಏರಿಯಾದ ಮನೆಗಳಿಗೆ ಬಂದು ಸೇರಿಕೊಂಡಿವೆ. ಮನೆಯ ಗೋಡೆಗಳ ಮೇಲೆ, ರಸ್ತೆಯಲ್ಲಿ, ಜನರ ಬಟ್ಟೆಯ ಮೇಲೆ ಹೀಗೆ ಎಲ್ಲೆಂದರಲ್ಲಿ ಕಂಬಳಿ ಹುಳುಗಳು ಕಾಣಿಸುತ್ತಿದ್ದು, ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಮೈ ಕೆರೆತ, ಗಾಯ ಹಾಗೂ ಇನ್ಫೆಕ್ಷನ್ ಭೀತಿ

ಇನ್ನು ಈ ಕಂಬಳಿ ಹುಳುಗಳು ಕಚ್ಚಿದರೆ ಅಥವಾ ಮೈಮೇಲೆ ಓಡಾಡಿದರೆ ಸಾಕು ಮೈ ಕೆರೆತ, ತುರಿಗೆ ಉಂಟಾಗಿ ಮೈಮೇಲೆ ಗಾಯಗಳಾದಂತಾಗುತ್ತಿದೆ. ಇನ್ನು ಕೆಲವರಿಗೆ ಇನ್ಫೆಕ್ಷನ್ ರೀತಿ ಆಗಿ ಕೆರೆತದಿಂದ ಗಾಯಗಳಾಗುತ್ತಿದೆ. ಹಾಗಾಗಿ ದಿಕ್ಕು ಕಾಣದಂತಾಗಿರುವ ಬೋರಿಲಾಲ್ ಪೇಟೆಯ ಜನರು ಕೆಜಿಎಫ್ ನಗರಸಭೆ ಅಧಿಕಾರಿಗಳಿಗೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಕಂಬಳಿ ಹುಳುಗಳ ಕಾಟದಿಂದ ನಮ್ಮನ್ನು ರಕ್ಷಣೆ ಮಾಡುವಂತೆ ಮನವಿ ಮಾಡುತ್ತಿದ್ದಾರೆ.

ಅಧಿಕಾರಿಗಳ ದಂಡು ಭೇಟಿ

ಇನ್ನು ಕಂಬಳಿ ಹುಳುಗಳಿಂದ ಬೋರಿಲಾಲ್ ಪೇಟೆಯ ಜನ ಅನುಭವಿಸುತ್ತಿರುವ ತೊಂದರೆ ಕುರಿತು ಮಾಹಿತಿ ತಿಳಿದ ತಕ್ಷಣ ಕೋಲಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್ ಹಾಗೂ ಅಧಿಕಾರಿಗಳ ತಂಡ ಬೋರಿಲಾಲ್ ಪೇಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಬಡಾವಣೆಯಲ್ಲಿ ಸರಿಯಾದ ಸ್ವಚ್ಛತೆ ಇಲ್ಲದಿರುವುದು ಹಾಗೂ ಅಕ್ಕಪಕ್ಕದಲ್ಲಿ ವಿಪರೀತವಾಗಿ ಹರಳು ಗಿಡಗಳು (ಆವುಡಲಕಾಯಿ ಗಿಡಗಳು) ಬೆಳೆದಿರುವುದೇ ಈ ಕಂಬಳಿಹುಳುಗಳ ಸಂತತಿ ಲಕ್ಷಾಂತರ ಸಂಖ್ಯೆಯಲ್ಲಿ ಹೆಚ್ಚಾಗಲು ಪ್ರಮುಖ ಕಾರಣ ಎಂಬುದು ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ.

ಸದ್ಯ ಆರೋಗ್ಯ ಇಲಾಖೆ ಅಧಿಕಾರಿಗಳು ಕಂಬಳಿ ಹುಳುಗಳಿಂದ ತೊಂದರೆ ಅನುಭವಿಸುತ್ತಿರುವ ಜನರಿಗೆ ಸ್ಥಳದಲ್ಲೇ ಚಿಕಿತ್ಸೆ ವ್ಯವಸ್ಥೆ ಮಾಡಿದ್ದು, ಕೆಜಿಎಫ್ ನಗರಸಭೆ ಅಧಿಕಾರಿಗಳು ಕಂಬಳಿ ಹುಳುಗಳ ನಿಯಂತ್ರಣಕ್ಕೆ ಔಷಧಿ ಸಿಂಪಡಿಸಿದ್ದಾರೆ.

ಇದನ್ನೂ ಓದಿ: ಕೋಲಾರ ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?

ಒಟ್ಟಾರೆ ಕಳೆದ ಹಲವು ದಿನಗಳಿಂದ ಬೋರಿಲಾಲ್ ಪೇಟೆಯ ಜನರ ನಿದ್ದೆಗೆಡಿಸಿದ್ದ ಕಂಬಳಿ ಹುಳುಗಳ ನಿಯಂತ್ರಣಕ್ಕೆ ಅಧಿಕಾರಿಗಳ ತಂಡ ಮುಂದಾಗಿದೆ. ಕೂಡಲೇ ಏರಿಯಾವನ್ನು ಸ್ವಚ್ಛಗೊಳಿಸಿ ಹಾಗೂ ಔಷಧಿ ಸಿಂಪಡನೆ ಮಾಡಿ ಜನರನ್ನು ಆತಂಕದಿಂದ ದೂರ ಮಾಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us