
ಕೋಲಾರ, ಆ.11: ಸಚಿವ ಸ್ಥಾನ ಕೈತಪ್ಪಿದ ವಿಚಾರವಾಗಿ ಬಂಗಾರಪೇಟೆ ಕ್ಷೇತ್ರದ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅವರು ಮತ್ತೊಮ್ಮೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೋಲಾರದಲ್ಲಿ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ನಾರಾಯಣಸ್ವಾಮಿ, “ಮುನಿಯಪ್ಪ ನಮ್ಮ ಬೆನ್ನಿಗೆ ಚೂರಿ ಹಾಕಿದ್ದಾರೆ” ಎಂದು ನೇರ ಆರೋಪ ಮಾಡಿದ್ದಾರೆ.
ನಿನ್ನೆ ನಡೆದ ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ತಾನು ಗೈರು ಹಾಜರಾಗಿದ್ದರ ಬಗ್ಗೆ ಸ್ಪಷ್ಟನೆ ನೀಡಿರುವ ನಾರಾಯಣಸ್ವಾಮಿ, “ನಾನು ಸಿಎಂ ಕಾರ್ಯಕ್ರಮದಲ್ಲಿ ಗರಂ ಆಗಿರಲಿಲ್ಲ. ಆದರೆ, ನನ್ನ ಬೆನ್ನಿಗೆ ಚೂರಿ ಹಾಕಿದ ಸಚಿವ ಮುನಿಯಪ್ಪ ಅವರನ್ನು ಮುಖ್ಯಮಂತ್ರಿಗಳು ನಿನ್ನೆ ಅತಿಯಾಗಿ ಹೊಗಳಿದರು. ಜಿಲ್ಲೆಯ ಪ್ರಮುಖ ನಾಯಕ, 7 ಬಾರಿ ಗೆದ್ದಿದ್ದಾರೆ ಎಂದು ಮುನಿಯಪ್ಪನವರನ್ನು ಹೊಗಳಿದ್ದು ನನಗೆ ನೋವು ತಂದಿದೆ,” ಎಂದು ಅಸಮಾಧಾನ ಹೊರಹಾಕಿದ್ದಾರೆ.
ಸಚಿವ ಮುನಿಯಪ್ಪ ಅವರ ರಾಜಕೀಯ ವರ್ಚಸ್ಸಿನ ಬಗ್ಗೆ ಪ್ರಶ್ನಿಸಿರುವ ನಾರಾಯಣಸ್ವಾಮಿ, “ಬಲಗೈ ಸಮುದಾಯ ಮತ ಹಾಕಿಲ್ಲ ಅಂದ್ರೆ ನೀವು ಎಲ್ಲಿ ಗೆಲ್ಲುತ್ತಿದ್ರಿ ಸ್ವಾಮಿ? 2019ರಲ್ಲಿ ಬಲಗೈ ಸಮುದಾಯದವರು ಸ್ವಲ್ಪ ಮುನಿಸಿಕೊಂಡಿದಕ್ಕೆ ನೀವು ಸೋತಿದ್ದನ್ನು ಮರೆತಿದ್ದೀರಾ?” ಎಂದು ಪ್ರಶ್ನಿಸಿದ್ದಾರೆ. ಜಿಲ್ಲೆಯಲ್ಲಿ ಬಲಗೈ ಸಮುದಾಯದ ಮತಗಳನ್ನು ಪಡೆದು, ನಂತರ ಅವರನ್ನು ಪರಿಗಣನೆಗೆ ತೆಗೆದುಕೊಳ್ಳದಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಜಿಲ್ಲೆಯಲ್ಲಿ ನಾನು ಮಾತ್ರ ಇರಬೇಕು, ಬೇರೆ ಯಾರೂ ಗೆಲ್ಲಬಾರದು ಎಂಬುದು ಅವರ (ಮುನಿಯಪ್ಪ) ಉದ್ದೇಶ. ಅವರು ಸಂಸದರಾಗಿದ್ದಾಗಲೂ ಇದೇ ಪ್ರಯತ್ನ ಮಾಡಿದ್ದರು. ಅವರು ಎಲ್ಲೆಲ್ಲಿ ಯಾರ್ಯಾರ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬುದು ಇಡೀ ಜಿಲ್ಲೆಗೆ ಜಗಜ್ಜಾಹೀರಾಗಿದೆ,” ಎಂದು ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ನೂತನ ಸಚಿವರ ಖಾತೆ ಕ್ಯಾತೆಗೆ ತೆರೆ ಎಳೆದ ಡಿಕೆ ಶಿವಕುಮಾರ್, ಯಾರಿಗೆ ಯಾವ ಇಲಾಖೆ?
ತಮ್ಮ ಮುಂದಿನ ರಾಜಕೀಯ ನಡೆ ಬಗ್ಗೆ ಮಾತನಾಡಿರುವ ಶಾಸಕರು, “ನನ್ನ ಅಸಮಾಧಾನದ ಬಗ್ಗೆ ಇನ್ನೂ ನಾಲ್ಕು ಗೋಡೆಗಳ ಮಧ್ಯೆ ಚರ್ಚೆ ಆಗಿಲ್ಲ. ಆ ಚರ್ಚೆ ನಡೆಯುವವರೆಗೂ ನಾನು ಅಂತರ ಕಾಯ್ದುಕೊಳ್ಳುತ್ತೇನೆ. ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣ ಹಾಗೂ ಕುಣಿಗಲ್ ಶಾಸಕ ಹೆಚ್.ಡಿ. ರಂಗನಾಥ್ ನನ್ನ ಜೊತೆ ಮಾತನಾಡಿದ್ದಾರೆ. ಸಿಎಂ ಜೊತೆ ಒನ್-ಟು-ಒನ್ ಮಾತನಾಡಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ನಾವಿನ್ನೂ ಕತ್ತಲಲ್ಲಿದ್ದೇವೆ, ಬೆಳಕು ಬರುವವರೆಗೂ ಕಾಯುತ್ತೇವೆ,” ಎಂದು ತಿಳಿಸಿದ್ದಾರೆ. ಒಟ್ಟಾರೆಯಾಗಿ, ಕೋಲಾರ ಕಾಂಗ್ರೆಸ್ ರಾಜಕೀಯದಲ್ಲಿನ ಈ ಆಂತರಿಕ ಕಚ್ಚಾಟ, ಮುಂಬರುವ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:33 pm, Tue, 11 August 26