ಚಿನ್ನದ ನೆಲದಲ್ಲಿ ಮತ್ತೆ ಮರುಕಳಿಸಲಿದೆ ಕ್ರೀಡಾ ಗತವೈಭವ: 100 ವರ್ಷ ಇತಿಹಾಸವಿರುವ ಕ್ರೀಡಾಂಗಣಕ್ಕೆ ಪುನಶ್ಚೇತನ ಭಾಗ್ಯ

ಕೆಜಿಎಫ್​ನಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಐತಿಹಾಸಿಕ ಕ್ರೀಡಾಂಗಣಗಳು ಇದೀಗ ಪುನಶ್ಚೇತನಗೊಳ್ಳುತ್ತಿವೆ. ಸಂಸದ ಮಲ್ಲೇಶ್ ಬಾಬು ಮತ್ತು 'ಸೇವ್ ಕೆಜಿಎಫ್' ಅಭಿಯಾನದ ಮೂಲಕ ನೂರು ವರ್ಷಗಳ ಜಿಮಕಾನ ಫುಟ್‌ಬಾಲ್ ಕ್ರೀಡಾಂಗಣಕ್ಕೆ ಮರುಜೀವ ಸಿಕ್ಕಿದೆ. ದೇಶದ ಮೊದಲ ನೈಸರ್ಗಿಕ ಗಾಲ್ಫ್ ಕೋರ್ಸ್ ಕೂಡ ಅಭಿವೃದ್ಧಿಯಾಗುತ್ತಿದ್ದು, ಕೆಜಿಎಫ್‌ನಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಹೊಸ ಭರವಸೆ ಮೂಡಿಸಿದೆ.

ಚಿನ್ನದ ನೆಲದಲ್ಲಿ ಮತ್ತೆ ಮರುಕಳಿಸಲಿದೆ ಕ್ರೀಡಾ ಗತವೈಭವ: 100 ವರ್ಷ ಇತಿಹಾಸವಿರುವ ಕ್ರೀಡಾಂಗಣಕ್ಕೆ ಪುನಶ್ಚೇತನ ಭಾಗ್ಯ
ಜಿಮಕಾನ ಕ್ರೀಡಾಂಗಣ
Image Credit source: tv9 kannada
Edited By:

Updated on: May 25, 2026 | 8:34 PM

ಕೋಲಾರ, ಮೇ 25: ಚಿನ್ನದ ನೆಲದಲ್ಲಿ ನೂರಾರು ಯುವಕರಿಗೆ ಕ್ರೀಡೆಯ (Sports) ಮೂಲಕ ಜೀವನ ರೂಪಿಸಿಕೊಟ್ಟಿದ್ದ ಐತಿಹಾಸಿಕ ಕ್ರೀಡಾಂಗಣ. ಆದರೆ, ಚಿನ್ನದ ಗಣಿಗೆ ಬೀಗ ಬಿದ್ದ ಬೆನ್ನಲ್ಲೇ ಆ ಬೃಹತ್ ಮೈದಾನಕ್ಕೂ ಗ್ರಹಣ ಹಿಡಿದಿತ್ತು. ಆದರೆ ಇದೀಗ ಹತ್ತಾರು ವರ್ಷಗಳಿಂದ ಮೂಲೆಗುಂಪಾಗಿದ್ದ ಆ ಕ್ರೀಡಾಂಗಣಕ್ಕೆ ಕೊನೆಗೂ ಪುನರ್ಜನ್ಮ ಸಿಕ್ಕಿದೆ. ಕೋಲಾರ (kolar) ಜಿಲ್ಲೆಯ ಕೆಜಿಎಫ್‌ನಲ್ಲಿ ಕ್ರೀಡಾಂಗಣಗಳ ಪುನಶ್ಚೇತನ ಕಾರ್ಯ ಭರದಿಂದ ಸಾಗುತ್ತಿದ್ದು, ಚಿನ್ನದ ನೆಲದ ಕ್ರೀಡಾಭಿಮಾನಿಗಳಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.

ಮುಖ್ಯಾಂಶಗಳು

  • ಕೆಜಿಎಫ್​ನಲ್ಲಿ ಮತ್ತೆ ಕ್ರೀಡಾ ಸುಗ್ಗಿ ಆರಂಭವಾಗುವ ಲಕ್ಷಣಗಳು ಗೋಚರ
  • ಸಮಾನ ಮನಸ್ಕರ ಹೋರಾಟ ಹಾಗೂ ಅಭಿಯಾನಕ್ಕೆ ಸ್ಪಂದಿಸಿದ ಸಂಸದ ಮಲ್ಲೇಶ್ ಬಾಬು
  • ಕೆಜಿಎಫ್ ಕ್ರೀಡಾಭಿವೃದ್ಧಿಯ ಹೊಸ ಹಾದಿ

ಕೋಲಾರ ಜಿಲ್ಲೆಯ ಕೆಜಿಎಫ್ ನಗರ ಕೇವಲ ಚಿನ್ನಕ್ಕೆ ಮಾತ್ರವಲ್ಲ, ಕ್ರೀಡಾ ಚಟುವಟಿಕೆಗಳಿಗೂ ಅಷ್ಟೇ ಪ್ರಸಿದ್ಧಿ ಪಡೆದಿದೆ. ಇಲ್ಲಿ ಫುಟ್‌ಬಾಲ್, ಹಾಕಿ, ಕ್ರಿಕೆಟ್, ಬ್ಯಾಸ್ಕೆಟ್‌ಬಾಲ್ ಹಾಗೂ ಬ್ಯಾಡ್ಮಿಂಟನ್ ಸೇರಿದಂತೆ ಹಲವು ಕ್ರೀಡಾಂಗಣಗಳಿವೆ. ಈ ಪೈಕಿ ಉರಿಗಾಂ ಏರಿಯಾದಲ್ಲಿರುವ ಸುಮಾರು ನೂರು ವರ್ಷಗಳ ಇತಿಹಾಸ ಹೊಂದಿರುವ ‘ಜಿಮಕಾನ ಫುಟ್‌ಬಾಲ್ ಕ್ರೀಡಾಂಗಣ’ ನೂರಾರು ಜನರಿಗೆ ಕ್ರೀಡೆಯ ಮೂಲಕ ಉದ್ಯೋಗ ಕಲ್ಪಿಸಿಕೊಟ್ಟ ಇತಿಹಾಸ ಹೊಂದಿದೆ.

ಇದನ್ನೂ ಓದಿ: ಮನುಷ್ಯರಿಗಷ್ಟೇ ಅಲ್ಲ, ಇನ್ಮುಂದೆ ಬೆಳೆಗಳಿಗೂ ಬರಲಿದೆ ಕ್ಲಿನಿಕ್: ಕೋಲಾರ ಜಿಲ್ಲಾಡಳಿತದಿಂದ ಮಹತ್ವದ ಹೆಜ್ಜೆ!

ಇಂದಿರಾ ಗಾಂಧಿ, ತಮಿಳುನಾಡಿನ ಮಾಜಿ ಸಿಎಂ ಎಂ.ಜಿ.ಆರ್ ಹಾಗೂ ಪ್ರಖ್ಯಾತ ನಟ ಶಿವಾಜಿ ಗಣೇಶನ್ ಸೇರಿದಂತೆ ಹಲವು ಗಣ್ಯರು ಈ ಮೈದಾನಕ್ಕೆ ಭೇಟಿ ನೀಡಿದ್ದರು. ಆದರೆ, ಚಿನ್ನದ ಗಣಿ ಮುಚ್ಚಿದ ನಂತರ ನಿರ್ವಹಣೆಯ ಕೊರತೆ ಹಾಗೂ ಕಾನೂನಾತ್ಮಕ ಕಾರಣಗಳಿಂದಾಗಿ ಈ ಕ್ರೀಡಾಂಗಣಕ್ಕೆ ಬೀಗ ಜಡಿಯಲಾಗಿತ್ತು.

ಹೋರಾಟಕ್ಕೆ ಸ್ಪಂದಿಸಿದ ಸಂಸದ ಮಲ್ಲೇಶ್ ಬಾಬು

ಹೀಗೆ ಅಳಿವಿನ ಅಂಚಿನಲ್ಲಿದ್ದ ಕ್ರೀಡಾಂಗಣವನ್ನು ಉಳಿಸಲು ‘ಸೇವ್ ಕೆಜಿಎಫ್’ ಎಂಬ ಘೋಷವಾಕ್ಯದೊಂದಿಗೆ ಸ್ಥಳೀಯ ಮುಖಂಡ ಜ್ಯೋತಿಬಸು ನೇತೃತ್ವದಲ್ಲಿ ಕಳೆದ ಒಂದು ವರ್ಷದಿಂದ ಸಮಾನ ಮನಸ್ಕರು ಹೋರಾಟ ಮತ್ತು ಅಭಿಯಾನ ನಡೆಸಿದ್ದರು. ಈ ಹೋರಾಟಕ್ಕೆ ಸ್ಪಂದಿಸಿದ ಸಂಸದ ಮಲ್ಲೇಶ್ ಬಾಬು, ಕೇಂದ್ರ ಗಣಿ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರೀಡಾಂಗಣವನ್ನು ಸ್ವಚ್ಛಗೊಳಿಸುವ ಮೂಲಕ ಮತ್ತೆ ಕ್ರೀಡಾ ಚಟುವಟಿಕೆಗಳು ಆರಂಭವಾಗುವಂತೆ ಮಾಡಿದ್ದಾರೆ.

ಇದರ ಜೊತೆಗೆ ದೇಶದ ಮೊದಲ ನ್ಯಾಚುರಲ್ ಗಾಲ್ಫ್ ಕ್ರೀಡಾಂಗಣ ಎಂಬ ಖ್ಯಾತಿ ಹೊಂದಿರುವ, 14 ಹೋಲ್‌ಗಳ ಬೃಹತ್ ಗಾಲ್ಫ್ ಕೋರ್ಟ್ ಅನ್ನು ಸದ್ಯ ಅಭಿವೃದ್ಧಿಪಡಿಸಲಾಗುತ್ತಿದೆ. ಅಷ್ಟೇ ಅಲ್ಲದೆ, ನಗರದಲ್ಲಿರುವ ಬಾಂಬೆ ಫುಟ್‌ಬಾಲ್ ಕ್ರೀಡಾಂಗಣ ಮತ್ತು ಹಾಕಿ ಮೈದಾನವನ್ನೂ ನವೀಕರಿಸಲಾಗುತ್ತಿದ್ದು, ಕೆಜಿಎಫ್‌ನಲ್ಲಿ ಮತ್ತೆ ಕ್ರೀಡಾ ವೈಭವ ಮರುಕಳಿಸುವ ಲಕ್ಷಣಗಳು ಗೋಚರಿಸುತ್ತಿವೆ.

ಜಿಮಕಾನ ಕ್ರೀಡಾಂಗಣದ ಹಿನ್ನೆಲೆ

ಜಿಮಕಾನ ಕ್ರೀಡಾಂಗಣವನ್ನು ಮೊದಲು ಬ್ರಿಟಿಷರು 1905 ರಲ್ಲಿ ಆರಂಭಿಸಿದ್ದರು. ಆಗ ಇದು ಕೇವಲ ಸಾಮಾನ್ಯ ಆಟದ ಮೈದಾನವಾಗಿತ್ತು. 1956 ರಲ್ಲಿ ಚಿನ್ನದ ಗಣಿ ರಾಷ್ಟ್ರೀಕರಣಗೊಂಡು ಕೇಂದ್ರ ಸರ್ಕಾರದ ಒಡೆತನಕ್ಕೆ ಬಂದ ನಂತರ, 1972 ರಲ್ಲಿ ಇದನ್ನು ಸುಸಜ್ಜಿತ ಫುಟ್‌ಬಾಲ್ ಕ್ರೀಡಾಂಗಣವನ್ನಾಗಿ ಪರಿವರ್ತಿಸಲಾಯಿತು. ಇಲ್ಲಿ ತರಬೇತಿ ಪಡೆದ ನೂರಾರು ಗಣಿ ಕಾರ್ಮಿಕರ ಮಕ್ಕಳು ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ, ಕ್ರೀಡಾ ಕೋಟಾದಡಿ HAL, BEL, BHEL ನಂತಹ ಪ್ರತಿಷ್ಠಿತ ಕೇಂದ್ರ ಸರ್ಕಾರಿ ಸಂಸ್ಥೆಗಳಲ್ಲಿ ಉದ್ಯೋಗ ಪಡೆದುಕೊಂಡಿದ್ದಾರೆ.

1980ರಲ್ಲಿ ಚಿನ್ನದ ಗಣಿಯ ಶತಮಾನೋತ್ಸವ ಕಾರ್ಯಕ್ರಮಕ್ಕಾಗಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಕೂಡ ಇಲ್ಲಿಗೆ ಆಗಮಿಸಿದ್ದರು. ಹೀಗೆ ಭವ್ಯ ಇತಿಹಾಸವಿರುವ ಈ ಕ್ರೀಡಾಂಗಣಗಳು ಮರುಜೀವ ಪಡೆದರೆ, ಇಂದಿನ ಯುವ ಪೀಳಿಗೆಗೆ ಕ್ರೀಡಾ ಕ್ಷೇತ್ರದಲ್ಲಿ ಹೊಸ ಭವಿಷ್ಯ ಸಿಗಲಿದೆ ಎಂಬುದು ಸ್ಥಳೀಯರ ಆಶಯವಾಗಿದೆ.

ಇದನ್ನೂ ಓದಿ: ಕೋಲಾರದ ರೇಷ್ಮೆ ಬೆಳೆಗಾರರಿಗೆ ತಟ್ಟಿದ ಬಿಸಿಲ ಧಗೆ: ಗೂಡು ಕಟ್ಟದ ಹುಳುಗಳು; ತಾಪಮಾನ ನಿಯಂತ್ರಣಕ್ಕೆ ಹರಸಾಹಸ

ಒಟ್ಟಾರೆಯಾಗಿ, ಚಿನ್ನದ ಗಣಿಗೆ ಬೀಗ ಬಿದ್ದ ನಂತರ ತುಕ್ಕು ಹಿಡಿದಿದ್ದ ಕೆಜಿಎಫ್‌ನ ಕ್ರೀಡಾ ಇತಿಹಾಸಕ್ಕೆ ಸಂಸದ ಮಲ್ಲೇಶ್ ಬಾಬು ಹಾಗೂ ಸ್ಥಳೀಯರ ಹೋರಾಟದ ಮೂಲಕ ಕೊನೆಗೂ ಪುನರ್ಜನ್ಮ ಸಿಕ್ಕಂತಾಗಿದೆ. ಇಲ್ಲಿನ ಎಲ್ಲಾ ಮೈದಾನಗಳು ಸಂಪೂರ್ಣವಾಗಿ ಪುನಶ್ಚೇತನಗೊಂಡರೆ, ಕೆಜಿಎಫ್‌ನಲ್ಲಿ ಚಿನ್ನದ ಇತಿಹಾಸದಷ್ಟೇ ಪ್ರಸಿದ್ಧಿ ಪಡೆದಿದ್ದ ಕ್ರೀಡಾ ಗತವೈಭವ ಮರುಕಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:33 pm, Mon, 25 May 26

Rajendra Simha BL

18 ವರ್ಷಗಳ ಹಿಂದೆ ಉತ್ತಮ ಸಮಾಜಕ್ಕಾಗಿ ಟಿವಿ9 ಚಾನೆಲ್​​ ಆರಂಭವಾದಾಗಿನಿಂದ ನನ್ನ ಮಾಧ್ಯಮ ಕಾಯಕವೂ ಆರಂಭ ಪಡೆಯಿತು. ಸ್ನಾತಕೋತ್ತರ ಪದವಿ ಮುಗಿಸಿದ್ದ ನಾನು ಚಿನ್ನದ ನಾಡು, ಕೃಷಿಕರ ಬೀಡು ಕೋಲಾರ ಜಿಲ್ಲೆಯ ಹಿರಿಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಟಿವಿ9 ಸಂಸ್ಥೆಯ ಆಶೋತ್ತರಗಳಿಗೆ ತಕ್ಕಂತೆ ಕೋಲಾರ ಜನತೆಯ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡಿದ್ದೇನೆ. ನನ್ನದು ಸಾಮಾಜಿಕ ಕಳಕಳಿ ಇರುವ ಟಿವಿ9 ಸಂಸ್ಥೆಯಲ್ಲಿ ಕೆಲಸ ಅನ್ನೋದಕ್ಕಿಂತ ಉತ್ತಮ ಸಮಾಜಕ್ಕಾಗಿ ನನ್ನ ಸೇವೆ ಅನ್ನುವ ಭಾವನೆಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ.

Read More
Follow Us