ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ: ಇನ್ನೂ ಮೂರ್ನಾಲ್ಕು ಸಚಿವರ ರಾಜೀನಾಮೆ: ಅಶೋಕ್ ಹೊಸ ಬಾಂಬ್
ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರೂ. ದುರ್ಬಳಕೆ ಪ್ರಕರಣದ ತನಿಖೆಯನ್ನು ಸಿಐಡಿ ಕೈಗೆತ್ತುಕೊಂಡಿದ್ದು, ಈಗಾಗಲೇ ಹಲವರನ್ನು ಬಂಧಿಸಿ ಮಾಹಿತಿ ಕಲೆಹಾಕುತ್ತಿದೆ. ಇನ್ನು ಇದೇ ಪ್ರಕರಣಕ್ಕೆ ಸಂಬಂಧಸಿದಂತೆ ಈಗಾಗಲೇ ಓರ್ವ ಸಚಿವರ ತಲೆದಂಡವಾಗಿದೆ. ಯುವಜನ ಸೇವೆ, ಕ್ರೀಡೆ ಹಾಗೂ ಪರಿಶಿಷ್ಟ ಪಂಗಡಗಳ ಸಚಿವ ಬಿ.ನಾಗೇಂದ್ರ ಸ್ವಯಂ ಪ್ರೇರಿತರಾಗಿ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಮೂರ್ನಾಲ್ಕು ವಿಕೆಟ್ ಬೀಳಲಿವೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೊಸ ಬಾಂಬ್ ಸಿಡಿಸಿದ್ದಾರೆ.
ಕೋಲಾರ, (ಜೂನ್ 28): ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ. ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದೆ. ಇಂದು (ಜೂನ್ 28) ಕೋಲಾರದಲ್ಲೂ ಸಹ ವಿಪಕ್ಷ ನಾಯಕ ಆರ್ ಅಶೋಕ್ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿದೆ. ಈ ವೇಳೆ ಮಾತನಾಡಿದ ಅಶೋಕ್, ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ಸಂಬಂಧ ಒಂದು ವಿಕೆಟ್ ಬಿದ್ದಿದೆ. ಒಂದು ವಿಕೆಟ್ ಅಷ್ಟೇ ಅಲ್ಲ ಇನ್ನೂ ಮೂರ್ನಾಲ್ಕು ವಿಕೆಟ್ ಬೀಳಲಿದೆ. ಅಂದರೆ ಈ ಪ್ರಕರಣದಲ್ಲಿ ಇನ್ನೂ ಮೂರ್ನಾಲ್ಕು ಸಚಿವರು ರಾಜೀನಾಮೆ ನೀಡಲಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಕೋಲಾರದಲ್ಲಿ ಮಾತನಾಡಿದ ಅಶೋಕ್, ವಾಲ್ಮಿಖಿ ಅಭಿವೃದ್ದಿ ನಿಗಮದಲ್ಲಿ 187 ಕೋಟಿ ರೂಪಾಯಿ ಹಣ ಅವ್ಯವಹಾರ ಆಗಿದೆ. ಅದರಲ್ಲಿ ನಾಗೇಂದ್ರ ಪಾಲು 20 ಪರ್ಸೆಂಟ್ ಆದರೆ 80 ಪರ್ಸೆಂಟ್ ಲೂಟಿ ಮಾಡಿರೋದು ಸಿದ್ದರಾಮಯ್ಯ ಅಂಡ್ ಗ್ಯಾಂಗ್, ಅದಕ್ಕೆ ಸಿದ್ದರಾಮಯ್ಯನವರ ರಾಜೀನಾಮೆಗೆ ಪಟ್ಟು ಹಿಡಿದು ವಿಧಾನಸಭೆಯಲ್ಲಿ ಬಿಜೆಪಿ ಹೋರಾಟ ಮಾಡಲಿದೆ. ಒಂದು ವಿಕೆಟ್ ಬಿದ್ದಿರೋದಲ್ಲ ಇನ್ನು ಮೂರು ನಾಲ್ಕು ವಿಕೆಟ್ ಬೀಳೋದಿದೆ ಎಂದು ಸ್ಫೋಟಕ ಹೇಳಿಕೆ ನೀಡಿದರು.
ಇದೊಂದು ಲೂಟಿ ಸರ್ಕಾರ ಎಂದು ಜನಕ್ಕೆ ಅರ್ಥವಾಗಿದೆ. 2000 ರೂಪಾಯಿ ಹೆಸರಲ್ಲಿ ಜನರನ್ನು ಲೂಟಿ ಮಾಡಿದ್ದಾರೆ, ರಾಜ್ಯದಲ್ಲಿ ಡೆಂಗ್ಯೂ ಜ್ವರ ತಾಂಡವಾಡುತ್ತಿದೆ, ಜನ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಕುಡಿಯೋ ನೀರು ಕೊಡಲು ಇವರ ಬಳಿ ಹಣ ಇಲ್ಲ. ರಾಜ್ಯದಲ್ಲಿ ಸರ್ಕಾರ ಪಾಪರ್ ಆಗಿದೆ ಎಂದು ಸಿದ್ದರಾಂಯ್ಯ ಸರ್ಕಾರದ ವಿರುದ್ಧ ಅಶೋಕ್ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಡಿಸಿಸಿ ಬ್ಯಾಂಕ್ ನೇಮಕಾತಿಯಲ್ಲಿ ಗೋಲ್ ಮಾಲ್: ಕೋರ್ಟ್ ಮೊರೆ ಹೋದ ಉದ್ಯೋಗ ವಂಚಿತರು
ಬಾರ್ ಮತ್ತು ವೈನ್ಸ್ ಸ್ಟೋರ್ಗಳಿಗೆ ಹಣ ಟ್ರಾನ್ಸ್ಫರ್ ಮಾಡಿ ಅವರಿಂದ ಬ್ಲಾಕ್ ಮನಿ ತೆಗೆದುಕೊಂಡಿದೆ. ಕಳೆದ ವರ್ಷ ಹಾಲಿನ ಬೆಲೆ ಏರಿಕೆ ಮಾಡಿ ರೈತರಿಗೆ ಕೊಡ್ತೀವಿ ಎಂದು ನಯಾ ಪೈಸೆ ಕೊಟ್ಟಿಲ್ಲ. ಈಗ ಮತ್ತೆ ಹಾಲಿನ ಬೆಲೆ ಏರಿಕೆ ಮಾಡಿದೆ. ನಾಲ್ಕು ಲಕ್ಷ ಕೋಟಿ ಬಜೆಟ್ ಮಾಡೋ ಸರ್ಕಾರಕ್ಕೆ ಜ್ನಾನ ಇದ್ದಿದ್ದರೆ ಅದನ್ನು ವೈಜ್ನಾನಿಕವಾಗಿ ಏನು ಮಾಡಬೇಕು ಅನ್ನೋದನ್ನ ಪ್ಲಾನ್ ಮಾಡಬೇಕಿತ್ತು. ಸರ್ಕಾರ ಮಣ್ಣು ತಿನ್ನುತ್ತಿತ್ತಾ ಅದನ್ನು ಬಿಟ್ಟು ಈಗ ಹಾಲಿನ ಬೆಲೆ ಏರಿಕೆ ಮಾಡೋದು ಸರಿ ಅಲ್ಲ ಎಂದು ಕಿಡಿಕಾರಿದರು.
ಪೆಟ್ರೋಲ್-ಡೀಸಲ್, ಸ್ಟಾಂಪ್ ಡ್ಯೂಟಿ ಎಲ್ಲಾ ಬೆಲೆ ಏರಿಕೆ ಮಾಡಿದ್ದಾರೆ, ಜುಲೈ-1 ರಿಂದ ಮತ್ತೆ ಮದ್ಯದ ಬೆಲೆ ಏರಿಕೆ, ಬಡವರು ಕೂಲಿ ಮಾಡೋರು ಕುಡಿಯೋ ಮದ್ಯ ಬೆಲೆ ಏರಿಕೆ ಮಾಡಿ ದುಬಾರಿ ಬೆಲೆಯ ಮದ್ಯದ ಬೆಲೆ ಕಡಿಮೆ ಮಾಡಿದೆ. ಫ್ರೀಗಳ ಹೆಸರಲ್ಲಿ ಅವೈಜ್ನಾನಿಕ ಯೋಜನೆ ಜಾರಿಗೆ ತಂದು ಯೋಜನೆಗೆ ಹಣಹೊಂದಿಸಲು ಯೋಗ್ಯತೆ ಇಲ್ಲದೆ ಜನರನ್ನು ಲೂಟಿ ಮಾಡುತ್ತಿದೆ, ಇದರ ವಿರುದ್ದ ನಾವು ಹೋರಾಟ ಮಾಡುತ್ತಿದ್ದೇವೆ ಎಂದರು.
ವಾಲ್ಮಿಕಿ ಅಭಿವೃದ್ದಿ ನಿಗಮದ ಅವ್ಯವಹಾರ ಪ್ರಕರಣ ದೇಶವೇ ಬೆಚ್ಚಿಬೀಳುವಂತ ಹಗರಣ. ಈ ಕುರಿತು ಸಿಐಡಿ ಅಲ್ಲ ಸಿಬಿಐ ತನಿಖೆಯಾಗಬೇಕು.ವಾಲ್ಮಿಕಿ ಅಭಿವೃದ್ದಿ ನಿಗಮದ ಭ್ರಸ್ಟಾಚಾರ ತನಿಖೆ ಸರಿಯಾಗಿ ಆಗುತ್ತಿಲ್ಲ. ಬ್ಯಾಂಕ್ ನಿಮಯದ ಪ್ರಕಾರ ಸಿಬಿಐ ತನಿಖೆ ಆಗಬೇಕಿತ್ತು. ಕಾಂಗ್ರೆಸ್ ಸರ್ಕಾರ ಪ್ರಕರಣ ಮುಚ್ಚಿಹಾಕುವ ಸಲುವಾಗಿ ಸಿಐಡಿ ತನಿಖೆ ಮಾಡಿಸುತ್ತಿದೆ. ಸಿಕ್ಕಿರುವ ಅಪರಾದಿ ಹೇಳಿರುವಂತೆ ಸರ್ಕಾರದಿಂದಲೇ ನನಗೆ ಜೀವ ಬೆದರಿಕೆ ಇದೆ ಎಂದು ಹೇಳಿದ್ದಾನೆ. ಈಗಲೂ ಬಿಜೆಪಿ ಪ್ರಕರಣವನ್ನು ಸಿಬಿಐ ತನಿಖೆಗೆ ಆಗ್ರಹಿಸುತ್ತದೆ ಎಂದು ತಿಳಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.