ಆಸ್ತಿ ವಿಚಾರವಾಗಿ ಕೊಪ್ಪಳದಲ್ಲಿ ಸ್ವಾಮೀಜಿ ಮತ್ತು ಭಕ್ತರ ನಡುವೆ ಭಿನ್ನಾಭಿಪ್ರಾಯ

ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಟ್ಟಣದಲ್ಲಿರುವ ಸುಪ್ರಸಿದ್ಧ ಸಿದ್ದರಾಮೇಶ್ವರ ಸಂಸ್ಥಾನ ಮಠದ ಶ್ರೀಗಳು ಮತ್ತು ಕೆಲ ಭಕ್ತರು ಮತ್ತು ಸ್ವಾಮೀಜಿ ನಡುವೆ ಭಿನ್ನಾಭಿಪ್ರಾಯ ಸ್ಫೋಟಗೊಂಡಿದೆ. ಸ್ವಾಮೀಜಿ, ಭಕ್ತರ ಸ್ವಾಮೀಜಿಯಾಗದೇ ಕುಟುಂಬದ ಸ್ವಾಮೀಜಿಯಾಗುತ್ತಿದ್ದಾರೆ ಎಂದು ಭಕ್ತರು ಆರೋಪ ಮಾಡಿದ್ದಾರೆ.

ಆಸ್ತಿ ವಿಚಾರವಾಗಿ ಕೊಪ್ಪಳದಲ್ಲಿ ಸ್ವಾಮೀಜಿ ಮತ್ತು ಭಕ್ತರ ನಡುವೆ ಭಿನ್ನಾಭಿಪ್ರಾಯ
ಸಿದ್ಧರಾಮೇಶ್ವರ ಸಂಸ್ಥಾನ ಹಿರೇಮಠದಲ್ಲಿ ಜಮಾಯಿಸಿರುವ ಭಕ್ತರು
Follow us
| Updated By: ವಿವೇಕ ಬಿರಾದಾರ

Updated on: Sep 13, 2024 | 11:02 AM

ಕೊಪ್ಪಳ, ಸೆಪ್ಟೇಂಬರ್​​ 13: ಯಲಬುರ್ಗಾ (Yalaburga) ಪಟ್ಟಣದಲ್ಲಿರುವ ಸಿದ್ಧರಾಮೇಶ್ವರ ಸಂಸ್ಥಾನ ಹಿರೇಮಠ, ಕೊಪ್ಪಳ (Koppal) ಜಿಲ್ಲೆಯ ಸುಪ್ರಸಿದ್ಧ ಮಠವಾಗಿದೆ. ಕೊಪ್ಪಳ ಜಿಲ್ಲೆ ಸೇರಿದಂತೆ ರಾಜ್ಯದ ಅನೇಕ ಕಡೆ ಹನ್ನೆರಡಕ್ಕೂ ಹೆಚ್ಚು ಶಾಖಾ ಮಠಗಳು, ಶಿಕ್ಷಣ ಸಂಸ್ಥೆಗಳನ್ನು ಮಠ ಹೊಂದಿದೆ. ಸಾವಿರಕ್ಕೂ ಅಧಿಕ ವರ್ಷದ ಇತಿಹಾಸ ಹೊಂದಿರುವ ಸುಪ್ರಸಿದ್ಧ ಮಠದಲ್ಲಿ ಇದೀಗ ಸ್ವಾಮೀಜಿ ಮತ್ತು ಕೆಲ ಭಕ್ತರ ನಡುವೆ ಭಿನ್ನಾಭಿಪ್ರಾಯ, ಅಸಮಾಧನ ಸ್ಪೋಟಗೊಂಡಿದೆ. ಮಠದ ಪೀಠಾಧಿಪತಿಯಾಗಿರುವ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ವಿರುದ್ಧ, ಮಠದ ಕೆಲ ಭಕ್ತರು ಬಹಿರಂಗವಾಗಿ ಅಸಮಾಧಾನ ಹೊರಹಾಕುತ್ತಿದ್ದರೇ, ಭಕ್ತರ ವರ್ತನೆ ವಿರುದ್ಧ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಭಕ್ತರು ಮತ್ತು ಸ್ವಾಮೀಜಿ ನಡುವಿನ ಭಿನ್ನಾಭಿಪ್ರಾಯಕ್ಕೆ ಕಾರಣ, ಆಸ್ತಿ ಮತ್ತು ಮಠದ ನಿರ್ವಹಣೆ ವಿಚಾರ. ಮಠವನ್ನು ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ತಮ್ಮ ಸ್ವಂತ ಆಸ್ತಿಯಂತೆ ಬಾವಿಸಿದ್ದಾರೆ. ಮಠದ ಆಸ್ತಿಯನ್ನು ತಮ್ಮ ಸಂಬಂಧಿಕರಿಗೆ ನೀಡುತ್ತಿದ್ದಾರೆ. ಈಗಾಗಲೇ ಮಠದ ಆಸ್ತಿಯನ್ನು ಸಂಬಂಧಿಕರಿಗೆ ನೀಡಿ, ಮಠದ ಆಸ್ತಿಯನ್ನು ಅಕ್ರಮವಾಗಿ ಪರಬಾರೆ ಮಾಡಿದ್ದಾರೆ. ತಮ್ಮ ಸಂಬಂಧಿಕರನ್ನೇ ಇಟ್ಟುಕೊಂಡು ಮಠವನ್ನು ನಿರ್ವಹಣೆ ಮಾಡುತ್ತಿದ್ದಾರೆ. ಮಠಕ್ಕೆ ಬರುವ ಹಣದ ಲೆಕ್ಕವನ್ನು ಯಾರಿಗೂ ನೀಡುತ್ತಿಲ್ಲ. ಸ್ವಾಮೀಜಿ ಕೋಟ್ಯಂತರ ರೂಪಾಯಿ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಬೇರೆಕಡೆ ತಮ್ಮ ಸ್ವಂತ ಹೆಸರಲ್ಲಿ ಆಸ್ತಿಯನ್ನು ಖರೀದಿ ಮಾಡಿದ್ದಾರೆ. ಮಠ, ಕೇವಲ ಸ್ವಾಮೀಜಿಯವರ ಸ್ವತ್ತಲ್ಲ. ಅದು ಭಕ್ತರಿಗೆ ಕೂಡ ಸೇರಿದ್ದು ಅಂತ ಭಕ್ತರು ಸ್ವಾಮೀಜಿ ವಿರುದ್ಧ ಆರೋಪಿಸುತ್ತಿದ್ದಾರೆ.

ಪೊಲೀಸ್​ ನಿಯೋಜನೆ

ಕೆಲ ದಿನಗಳ ಹಿಂದೆ ಸಿದ್ದಯ್ಯ ಎಂಬ ಸೇವಕನ ಮೇಲೆ ಹಲ್ಲೆ ಮಾಡಿ ಮಠದಿಂದ ಹೊರಹಾಕಿದ್ದಾರೆ. ಯಾರಾದರು ಕೇಳಲು ಹೋದರೇ ನೀವು ಮಠಕ್ಕೆ ಬರಬೇಡಿ ಅಂತ ಹೇಳುತ್ತಿದ್ದಾರೆ ಎಂದು ಭಕ್ತರು ಆರೋಪಿಸುತ್ತಿದ್ದಾರೆ. ಮಠಕ್ಕೆ ಟ್ರಸ್ಟ್ ರಚನೆಯಾಗಬೇಕು. ಸ್ವಾಮೀಜಿ ಮತ್ತು ಭಕ್ತರು ಅದರಲ್ಲಿ ಇರಬೇಕು. ಟ್ರಸ್ಟ್ ಅಡಿಯಲ್ಲಿಯೇ ಮಠದ ವ್ಯವಹಾರ ನಿರ್ವಹಣೆಯಾಗಬೇಕು ಅನ್ನೋದು ಭಕ್ತರ ಪಟ್ಟಾಗಿದೆ. ಈ ಬಗ್ಗೆ ಮಠದಲ್ಲಿಯೇ ಸಭೆ ಸೇರಿರುವ ಭಕ್ತರು, ನಮ್ಮ ಬೇಡಿಕೆಗಳಿಗೆ ಸ್ಪಂಧಿಸದೆ ಇದ್ದರೆ, ಸ್ವಾಮೀಜಿಯ ಬದಲಾವಣೆಗೆ ನಾವೆಲ್ಲ ಮುಂದಾಗುತ್ತೇವೆ ಅಂತ ಹೇಳುತ್ತಿದ್ದಾರೆ. ಭಕ್ತರಿಗಿಲ್ಲದ ಸ್ವಾಮೀಜಿ ಯಾರಿಗೆ ಬೇಕು ಅಂತ ಹೇಳಿದ್ದಾರೆ.

ಇದನ್ನೂ ಓದಿ: ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶ ಹಬ್ಬ

ಭಕ್ತರ ಆರೋಪ ಅಲ್ಲಗಳೆದ ಸ್ವಾಮೀಜಿ

ಇತ್ತ ಕೆಲ ಭಕ್ತರು ಸ್ವಾಮೀಜಿ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕುತ್ತಿದ್ದರೆ, ತಮ್ಮ ಬೇಡಿಕೆಗೆ ಪಟ್ಟು ಹಿಡದಿದ್ದಾರೆ. ಆದರೆ, ಕೆಲ ಭಕ್ತರು ಮಾಡುತ್ತಿರುವ ಆರೋಪವನ್ನು ಸ್ವಾಮೀಜಿ ಅಲ್ಲಗಳೆಯುತ್ತಿದ್ದಾರೆ. ಈ ಹಿಂದೆ ಕೂಡಾ ಕೆಲ ಭಕ್ತರು, ಮಠದ ಆಸ್ತಿಯನ್ನು ಅಕ್ರಮವಾಗಿ ಕಬಳಿಸಿದ್ದಾರೆ. ಇದೀಗ ಮತ್ತೆ ನಮಗೆ ಮಾನಸಿಕ ಕಿರಿಕಿರಿಯನ್ನು ಮಾಡಿ, ಮಠದ ಆಸ್ತಿಯನ್ನು ಕಬಳಿಸಲು ಮುಂದಾಗಿದ್ದಾರೆ. ವಿನಾಕಾರಣ ತಮಗೆ ತೊಂದರೆ ಕೊಡುತ್ತಿದ್ದಾರೆ ಅಂತ ಹೇಳುತ್ತಿದ್ದಾರೆ. ಇನ್ನು ತಮ್ಮ ಮಠ ಗುರು ಪರಂಪರೆಯ ಮಠವಾಗಿದೆ. ಹೀಗಾಗಿ ಇಲ್ಲಿ ಟ್ರಸ್ಟ್ ರಚನೆ ಮಾಡಲು ಬರುವುದಿಲ್ಲ. ಮಠದ ಅನೇಕ ಭಕ್ತರು ನಮ್ಮ ಜೊತೆ ಇದ್ದಾರೆ. ಆದ್ರೆ ಕೆಲ ಭಕ್ತರು ನಮ್ಮ ವಿರುದ್ಧ ಆಧಾರರಹಿತ ಆರೋಪ ಮಾಡುತ್ತಿದ್ದಾರೆ. ನಾವು ಮಠದ ಆಸ್ತಿಯನ್ನು ಸಂಬಂಧಿಕರಿಗೆ ನೀಡಿಲ್ಲ ಅಂತ ಹೇಳಿದ್ದಾರೆ.

ಮಠದ ಮುಂದೆ ಪೊಲೀಸರ ನಿಯೋಜನೆ

ಮಠದಲ್ಲಿ ಸ್ವಾಮೀಜಿ ಮತ್ತು ಭಕ್ತರ ನಡುವಿನ ಭಿನ್ನಾಭಿಪ್ರಾಯ ಸ್ಟೋಟಗೊಂಡಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಯಲಬುರ್ಗಾ ಠಾಣೆಯ ಪೊಲೀಸರು ಕಳೆದ ಎರಡು ದಿನಗಳಿಂದ ಮಠದ ಮುಂದೆ ಬೀಡು ಬಿಟ್ಟಿದ್ದಾರೆ. ಒಂದು ಡಿಆರ್ ತುಕಡಿಯನ್ನು ಮಠದ ಮುಂದೆ ನಿಯೋಜಿಸಲಾಗಿದೆ. ಆದರೆ ಭಕ್ತರು ಮತ್ತು ಸ್ವಾಮೀಜಿ ನಡುವಿನ ಸಂಘರ್ಷ ತೀರ್ವ ಸ್ವರೂಪ ಪಡೆದುಕೊಂಡಿದೆ. ಟ್ರಸ್ಟ್ ರಚನೆ ಬಗ್ಗೆ ಭಕ್ತರು ವಾರದ ಗಡುವು ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ