ಕೊಪ್ಪಳ ಉಸ್ತುವಾರಿ ಸ್ಥಾನಕ್ಕೆ ರಾಯರೆಡ್ಡಿ, ತಂಗಡಗಿ ಪೈಪೋಟಿ: ಬರ ಪರಿಶೀಲನೆ ನೆಪದಲ್ಲಿ ಸಕ್ರಿಯ

ಕೊಪ್ಪಳ ಜಿಲ್ಲಾ ಉಸ್ತುವಾರಿ ಸ್ಥಾನಕ್ಕಾಗಿ ಸಚಿವರಾದ ಬಸವರಾಜ ರಾಯರೆಡ್ಡಿ ಹಾಗೂ ಶಿವರಾಜ ತಂಗಡಗಿ ನಡುವೆ ಪೈಪೋಟಿ ಶುರುವಾಗಿದೆ ಎಂಬ ಚರ್ಚೆ ಇದೀಗ ಕಾಂಗ್ರೆಸ್ ವಲಯದಲ್ಲಿ ಜೋರಾಗಿದೆ. ಬರ ಪರಿಶೀಲನೆ ನೆಪದಲ್ಲಿ ಇಬ್ಬರೂ ನಾಯಕರು ಕೊಪ್ಪಳದಲ್ಲಿ ಸಕ್ರಿಯರಾಗಿರುವುದು ಹಾಗೂ ನೀಡಿರುವ ಹೇಳಿಕೆಗಳು ಕುತೂಹಲ ಮೂಡಿಸಿದೆ.

ಕೊಪ್ಪಳ ಉಸ್ತುವಾರಿ ಸ್ಥಾನಕ್ಕೆ ರಾಯರೆಡ್ಡಿ, ತಂಗಡಗಿ ಪೈಪೋಟಿ: ಬರ ಪರಿಶೀಲನೆ ನೆಪದಲ್ಲಿ ಸಕ್ರಿಯ
ಶಿವರಾಜ ತಂಗಡಗಿ
Image Credit source: tv9
Edited By:

Updated on: Aug 07, 2026 | 9:55 AM

ಮುಖ್ಯಾಂಶಗಳು

  • ಕೊಪ್ಪಳ ಉಸ್ತುವಾರಿಗೆ ಇಬ್ಬರು ಸಚಿವರ ಪೈಪೋಟಿ
  • ರಾಯರೆಡ್ಡಿ, ತಂಗಡಗಿ ಬಿರುಸಿನ ಚಟುವಟಿಕೆ
  • ಉಸ್ತುವಾರಿ ಯಾರಿಗೆ ಎಂಬ ಕುತೂಹಲ ಹೆಚ್ಚಳ

ಕೊಪ್ಪಳ, ಆಗಸ್ಟ್ 7: ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್‌ನ (Congress) ಇಬ್ಬರು ಸಚಿವರ ನಡುವೆ ಪೈಪೋಟಿ ಶುರುವಾಯಿತೇ ಎಂಬ ಚರ್ಚೆ ಇದೀಗ ಮುನ್ನೆಲೆಗೆ ಬಂದಿದೆ. ಸಚಿವರಾದ ಬಸವರಾಜ ರಾಯರೆಡ್ಡಿ ಹಾಗೂ ಶಿವರಾಜ ತಂಗಡಗಿ ಕೊಪ್ಪಳ (Koppal) ಜಿಲ್ಲಾ ಉಸ್ತುವಾರಿ ಸ್ಥಾನದ ಮೇಲೆ ಆಸಕ್ತಿ ಹೊಂದಿದ್ದಾರೆ ಎನ್ನಲಾಗುತ್ತಿದ್ದು, ಇಬ್ಬರ ಹೇಳಿಕೆಗಳು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿವೆ.

ಗದಗ ಜಿಲ್ಲೆಯ ಬರ ಪರಿಸ್ಥಿತಿ ಪರಿಶೀಲನೆಗೆ ತೆರಳಿದ್ದ ಸಚಿವ ಬಸವರಾಜ ರಾಯರೆಡ್ಡಿ, ಗುರುವಾರ ಯಲಬುರ್ಗಾ ಹಾಗೂ ಕುಕನೂರು ಭಾಗಗಳಲ್ಲಿ ಬರ ಪರಿಶೀಲನೆ ನಡೆಸಿದರು. ಸಚಿವ ಶಿವರಾಜ ತಂಗಡಗಿ ಅವರೊಂದಿಗೆ ರಾಯರೆಡ್ಡಿ ಈ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಇದಕ್ಕೂ ಮುನ್ನವೇ ಅವರು ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಭೇಟಿ ಮಾಡಿ ಪರಿಚಯ ಮಾಡಿಕೊಂಡಿದ್ದರು ಎನ್ನಲಾಗಿದೆ.

ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರ ಜವಾಬ್ದಾರಿ ಕುರಿತು ಮಾತನಾಡಿದ್ದ ರಾಯರೆಡ್ಡಿ, ಜಿಲ್ಲಾ ಉಸ್ತುವಾರಿ ಎಂದರೆ ವಿಶೇಷವಾದದ್ದೇನಿಲ್ಲ, ಕೆಡಿಪಿ ಸಭೆ ನಡೆಸುವುದು ಮತ್ತು ಧ್ವಜಾರೋಹಣ ಮಾಡುವುದು ಅಷ್ಟೇ ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದರು. ಆದರೆ ಇದೀಗ ಕೊಪ್ಪಳದ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಅವರು ನಡೆಸಿದ ಭೇಟಿಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ.

ಇತ್ತ ಸಚಿವ ಶಿವರಾಜ ತಂಗಡಗಿ ಅವರು ಜಿಲ್ಲಾ ಉಸ್ತುವಾರಿ ಸಚಿವರ ಜವಾಬ್ದಾರಿಯ ಮಹತ್ವವನ್ನು ಪ್ರತಿಪಾದಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಎಂದರೆ ಜಿಲ್ಲೆಗೆ ಮುಖ್ಯಮಂತ್ರಿ ಇದ್ದಂತೆ ಎಂದು ಅವರು ಹೇಳಿದ್ದಾರೆ. ರಾಯರೆಡ್ಡಿ ಅವರು ಜಿಲ್ಲಾ ಉಸ್ತುವಾರಿ ಕುರಿತು ಯಾವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆ ಎಂಬುದು ಗೊತ್ತಿಲ್ಲ ಎಂದೂ ತಂಗಡಗಿ ಪ್ರತಿಕ್ರಿಯಿಸಿದ್ದಾರೆ. ರಾಯರೆಡ್ಡಿ ಅವರು ತಮ್ಮಗಿಂತ ಹಿರಿಯ ನಾಯಕರು. ಆದರೆ ತಮ್ಮ ಮುಂದೆ ಅವರು ಆ ರೀತಿಯ ಯಾವುದೇ ನಡೆ ತೋರಿಸಿಲ್ಲ ಎಂದು ತಂಗಡಗಿ ಹೇಳಿದ್ದಾರೆ. ಅಲ್ಲದೆ, ರಾಯರೆಡ್ಡಿ ಅವರಿಗೆ ಎರಡು ಜಿಲ್ಲೆಗಳ ಬರ ಪರಿಶೀಲನೆ ಜವಾಬ್ದಾರಿ ನೀಡಲಾಗಿದ್ದರೆ ಮತ್ತೊಂದು ಜಿಲ್ಲೆಯನ್ನು ನೀಡಲಿ ಎಂದು ಅವರು ಹೇಳಿದ್ದಾರೆ.

ಮತ್ತೊಂದೆಡೆ, ರಾಯರೆಡ್ಡಿ ‘ನನಗೆ ಕೊಪ್ಪಳ ಎಂದು ಹೇಳಿದ್ದರು, ಹಾಗಾಗಿ ಕೊಪ್ಪಳಕ್ಕೆ ಬಂದಿದ್ದೇನೆ. ನನ್ನ ಜಿಲ್ಲೆಯಲ್ಲಿ ನಾನು ಇರಬೇಕು ಎಂಬ ಆಸೆ ನನಗಿದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಮೇಲೆ ಅಹಿಂದ ಶಾಸಕರ ಅಸಮಾಧಾನ, ಅಷ್ಟಕ್ಕೂ ಆಗಿದ್ದೇನು?

ಹೀಗಾಗಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸ್ಥಾನ ಯಾರಿಗೆ ಸಿಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ಸದ್ಯ ಇಬ್ಬರು ಸಚಿವರ ಹೇಳಿಕೆಗಳು ಹಾಗೂ ಕೊಪ್ಪಳದಲ್ಲಿ ಅವರ ಚಟುವಟಿಕೆಗಳು ಉಸ್ತುವಾರಿ ಸ್ಥಾನದ ಪೈಪೋಟಿಯ ಚರ್ಚೆಗೆ ಮತ್ತಷ್ಟು ಬಲ ನೀಡಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us