
ಕೊಪ್ಪಳ, ಅಕ್ಟೋಬರ್ 29: ಕೊಪ್ಪಳ ಎಂದಾಕ್ಷಣ ನೆನಪಾಗುವುದು ಕೇವಲ ಕಲೆ, ಸಂಸ್ಕೃತಿಯಷ್ಟೇ ಅಲ್ಲ, ಬದಲಿಗೆ ಕಾರ್ಖಾನೆಗಳು. ಅವುಗಳಿಂದ ಹೊರಸೂಸುವ ವಿಪರೀತ ಹೊಗೆಯಿಂದ ಬೆಳೆ ಸೇರಿದಂತೆ ಉಸಿರಾಡುವ ಗಾಳಿ ಕೂಡ ಕಲುಷಿತವಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಜನರ ಆರೋಗ್ಯದ ಮೇಲೂ ಇದು ಪರಿಣಾಮ ಬೀರಿತ್ತು. ಹೀಗಾಗಿ ಜನರು ಪ್ರತಿಭಟನೆ ಮಾಡಿದ್ದರು. ಪ್ರತಿಭಟನೆಯ ಫಲವಾಗಿ ಇದೀಗ ಜಿಲ್ಲೆಯಲ್ಲಿನ ದೊಡ್ಡ ದೊಡ್ಡ 8 ಕಾರ್ಖಾನೆ ಮುಚ್ಚಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ಧರಿಸಿದೆ.
ಇಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಭೆ ಮಾಡಲಾಗಿದ್ದು, ಈ ವೇಳೆ ಕೊಪ್ಪಳ ತಾಲೂಕಿನ ವಿವಿಧ ಕಾರ್ಖಾನೆಗಳನ್ನು ಬಂದ್ ಮಾಡಲು ತೀರ್ಮಾನಿಸಲಾಗಿದೆ. ಈಗಾಗಲೇ ಮಾಲಿನ್ಯ ನಿಯಂತ್ರಣ ಮಂಡಳಿ ವೆಬ್ಸೈಟ್ನಲ್ಲಿ ಕಾರ್ಖಾನೆಗಳನ್ನು ಬಂದ್ ಮಾಡಲು ತೀರ್ಮಾನಿಸಿರುವ ಕುರಿತಾಗಿ ಆದೇಶದ ಪ್ರತಿ ಪ್ರಕಟಿಸಲಾಗಿದೆ.
ಇದನ್ನೂ ಓದಿ: ಕೊನೆಗೂ ಕೊಪ್ಪಳದಲ್ಲಿ ಎರಡು ಕಾರ್ಖಾನೆಗಳು ಸೀಜ್: ದಶಕಗಳ ಹೋರಾಟಕ್ಕೆ ಜಯ!
ಕೊಪ್ಪಳ ತಾಲೂಕಿನಲ್ಲಿರುವ ಬಾಬಾ ಅಖಿಲಾ, ಭದ್ರಶ್ರೀ, ಧ್ರುವ ದೇಶ, ಐಎಲ್ಸಿ ಸ್ಟೀಲ್, ಪಿಬಿಎಸ್ ಸ್ಟೀಲ್, ಎಸ್ಕೆ ಸ್ಟೀಲ್, ತನುಷ್ ಈ ಸ್ಪಾತ್ ಯೂನಿಟ್ ಒನ್ ಹಾಗೂ ಯುನಿಟ್ ಎರಡು ಬಂದ್ ಮಾಡಲು ತೀರ್ಮಾನಿಸಲಾಗಿದೆ. ಅಧಿಕೃತವಾಗಿ ಕೆಲವೇ ದಿನಗಳಲ್ಲಿ ಕಾರ್ಖಾನೆಗಳಿಗೆ ಮುಚ್ಚಳಿಕೆ ನೋಟಿಸ್ ಕೊಡುವ ಸಾಧ್ಯತೆ ಇದೆ. ಮಾಲಿನ್ಯ ನಿಯಂತ್ರಣ ಮಂಡಳಿ ಸಭೆಯಲ್ಲಿ ಕಾರ್ಖಾನೆಗಳನ್ನು ಬಂದ್ ಮಾಡಲು ತೀರ್ಮಾನ ಮಾಡಲಾಗಿದೆ.
ಕೊಪ್ಪಳ ತಾಲೂಕಿನಲ್ಲಿ ಅತೀ ಹೆಚ್ಚು ಸ್ಪೋನ್ಜ್ ಐರನ್ ಕಾರ್ಖಾನೆಗಳಿವೆ. ಇದರ ಹೊಗೆಯಿಂದ ಸಾಕಷ್ಟು ಜನರಿಗೆ ಆರೋಗ್ಯದ ಸಮಸ್ಯೆ ಉಂಟಾಗಿದೆ. ಮತ್ತೊಂದು ಕಡೆ ಬಲ್ಡೋಟಾ ಕಾರ್ಖಾನೆ ವಿರೋಧಿಸಿ ನಿರಂತರ ಧರಣಿ ನಡೆಯುತ್ತಿದ್ದು, ಅಕ್ಟೋಬರ್ 31ಕ್ಕೆ ಒಂದು ವರ್ಷವಾಗಲಿದೆ. ಈ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ 48 ಗಂಟೆ ಬಂದ್ಗೆ ಕರೆ ನೀಡಿದೆ.
ಇನ್ನು ಈ ಬಗ್ಗೆ ಟಿವಿ9ಗೆ ಕೊಪ್ಪಳ ಡಿಸಿ ಸುರೇಶ್ ಇಟ್ನಾಳ್ ಪ್ರತಿಕ್ರಿಯಿಸಿದ್ದು, ‘ಅಧಿಕೃತವಾಗಿ ಜಿಲ್ಲಾಡಳಿತಕ್ಕೆ ಇನ್ನೂ ಬಂದ್ ಮಾಡಲು ಸೂಚನೆ ಬಂದಿಲ್ಲ, ಸಭೆಯಲ್ಲಿ ಮಾತ್ರ ತೀರ್ಮಾನವಾಗಿದೆ. ನಮಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಕ್ಲೋಸರ್ ನೋಟಿಸ್ ಬರಬಹುದು’ ಎಂದು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.