ತುರ್ತು ಪರಿಸ್ಥಿತಿ ಹೇರಿದ್ದು ಮಾರಕ ಅಂತಾರೆ, ಆದರೆ ಆಪರೇಷನ್ ಕಮಲ ಕೂಡ ಪ್ರಜಾಪ್ರಭುತ್ವಕ್ಕೆ ಮಾರಕ: ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು
ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿದ್ದು ಮಾರಕ ಅಂತಾರೆ. ಆದರೆ ಆಪರೇಷನ್ ಕಮಲ ಕೂಡ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಬಿಜೆಪಿ ನಾಯಕರು ಪ್ರಜಾಪ್ರಭುತ್ವದ ಬಗ್ಗೆ ಬಹಳ ಮಾತನಾಡುತ್ತಾರೆ. ಹಾಗಿದ್ದರೆ ಮಧ್ಯಪ್ರದೇಶ ಸರ್ಕಾರವನ್ನು ಕಿತ್ತು ಹಾಕಿದವರು ಯಾರು ? ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ಕೆಡವಿದವರು ಯಾರು ? ಆಪರೇಷನ್ ಕಮಲಕ್ಕೆ ಪಾಪದ ಹಣ ಖರ್ಚು ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಕೊಪ್ಪಳ: ಇಂದಿರಾಗಾಂಧಿ (Indira Gandhi) ತುರ್ತು ಪರಿಸ್ಥಿತಿ (Emergency) ಹೇರಿದ್ದು ಮಾರಕ ಅಂತಾರೆ. ಆದರೆ ಆಪರೇಷನ್ ಕಮಲ ಕೂಡ ಪ್ರಜಾಪ್ರಭುತ್ವಕ್ಕೆ (Democracy) ಮಾರಕವಾಗಿದೆ. ಬಿಜೆಪಿ (BJP) ನಾಯಕರು ಪ್ರಜಾಪ್ರಭುತ್ವದ ಬಗ್ಗೆ ಬಹಳ ಮಾತನಾಡುತ್ತಾರೆ. ಹಾಗಿದ್ದರೆ ಮಧ್ಯಪ್ರದೇಶ ಸರ್ಕಾರವನ್ನು ಕಿತ್ತು ಹಾಕಿದವರು ಯಾರು ? ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ಕೆಡವಿದವರು ಯಾರು ? ಆಪರೇಷನ್ ಕಮಲಕ್ಕೆ ಪಾಪದ ಹಣ ಖರ್ಚು ಮಾಡುತ್ತಿದ್ದಾರೆ. 25 ರಿಂದ 30 ಕೋಟಿ ಹಣ ಒಬ್ಬ ಶಾಸಕರಿಗೆ ಕೊಡುತ್ತಾರೆ. ಇದೆಲ್ಲ ಲೂಟಿ ಹಣ ಎಂದು ಕೊಪ್ಪಳ ತಾಲೂಕಿನ ಬಸಾಪುರ ಬಳಿ ವಿಪಕ್ಷನಾಯಕ ಸಿದ್ದರಾಮಯ್ಯ (Siddaramaiah) ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯವರ ಬಳಿ ಹಣ ಮತ್ತು ಅಧಿಕಾರ ಎರಡೂ ಇದೆ ಹೀಗಾಗಿ ಅವರು ಆಪರೇಶನ್ ಕಮಲ ಮಾಡುತ್ತಿದ್ದಾರೆ. ರಾಜ್ಯದಲ್ಲೂ ಕಾಂಗ್ರೆಸ್ನ ಶಾಸಕರು ಬಿಜೆಪಿಗೆ ಹೋಗಿದ್ದಾರೆ. ಅವರೇ ಬಂದರು ನಾವೇನು ಕಾರಣ ಅಲ್ಲ ಅಂತ ಬಿಜೆಪಿಯರವರು ಹೇಳುತ್ತಾರೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತೆ ಸಿಎಂ ಆಗುತ್ತೇನೆ ಅನ್ನೋ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಸಿಎಂ ಆಗಬೇಕಂದರೆ ರಾಜ್ಯದ ಜನ ಆಶೀರ್ವಾದ ಮಾಡಬೇಕು. ನಾನೇ ಸಿಎಂ ಆಗುತ್ತೇನೆ ಎಂದು ಕೂರೋಕಾಗುತ್ತಾ? ?ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಯಾವ ಸ್ಥಾನಕ್ಕೆ ಹೋಗಿದೆ ? ಅಂತಹ ಪಾರ್ಟಿ ಅಧಿಕಾರಕ್ಕೆ ಬರುತ್ತಾ ? ನನ್ನ ಕಂಡ್ರೆ RSS ನವರಿಗೆ ಭಯ ಇದೆ. JDS ನವರಿಗೂ ನನ್ನ ಕಂಡರೆ ಭಯ ಇದೆ. ಹಾಗಾಗಿ ಅವರು ನನ್ನ ಟಾರ್ಗೆಟ್ ಮಾಡುತ್ತಾರೆ ಎಂದು ಹೇಳಿದರು.