ಅಧಿಕಾರಿಗಳ ನಿರ್ಲಕ್ಷ್ಯ: ಕೊಪ್ಪಳದಲ್ಲಿ ನಿಂತಲ್ಲೇ ನಿಂತು ಹಾಳಾಗುತ್ತಿರೋ ವಿಕಲಾಂಗ ಚೇತನರಿಗೆ ವಿತರಿಸಲು ತಂದಿದ್ದ ತ್ರಿಚಕ್ರ ಸ್ಕೂಟಿಗಳು

ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸುತ್ತದೆ. ಅದಕ್ಕಾಗಿ ಸಾವಿರಾರು ಕೋಟಿ ರೂಪಾಯಿ ಖರ್ಚು ಕೂಡ ಮಾಡುತ್ತದೆ. ಯೋಜನೆ ರೂಪಿಸಿ ಹಣ ಖರ್ಚು ಮಾಡೋ ಸರ್ಕಾರ, ಅವುಗಳನ್ನು ಫಲಾನುಭವಿಗಳಿಗೆ ತಲುಪಿಸಲು ಮಾತ್ರ ಹಿಂದೇಟು ಹಾಕುತ್ತದೆ. ಕೊಪ್ಪಳದಲ್ಲಿ ವಿಕಲಾಂಗಚೇತನರಿಗೆ ವಿತರಿಸಲು ತಂದಿದ್ದ ತ್ರಿಚಕ್ರ ಸ್ಕೂಟಿಗಳು, ಅಧಿಕಾರಿಗಳ ನಿರ್ಲಕ್ಷ್ಯದಿಂದ ನಿಂತಲ್ಲೇ ಹಾಳಾಗುತ್ತಿವೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ಅಧಿಕಾರಿಗಳ ನಿರ್ಲಕ್ಷ್ಯ: ಕೊಪ್ಪಳದಲ್ಲಿ ನಿಂತಲ್ಲೇ ನಿಂತು ಹಾಳಾಗುತ್ತಿರೋ ವಿಕಲಾಂಗ ಚೇತನರಿಗೆ ವಿತರಿಸಲು ತಂದಿದ್ದ ತ್ರಿಚಕ್ರ ಸ್ಕೂಟಿಗಳು
ಕೊಪ್ಪಳದಲ್ಲಿ ನಿಂತಲ್ಲೇ ನಿಂತು ಹಾಳಾಗುತ್ತಿರೋ ವಿಕಲಾಂಗ ಚೇತನರಿಗೆ ವಿತರಿಸಲು ತಂದಿದ್ದ ತ್ರಿಚಕ್ರ ಸ್ಕೂಟಿಗಳು
Follow us
ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 11, 2024 | 9:31 PM

ಕೊಪ್ಪಳ, ಅ.11: ವಿಕಲಾಂಗ ಚೇತನರಿಗೆ ಅಡ್ಡಾಡಲು ಅನಕೂಲವಾಗಲಿ, ಅವರು ಕೂಡ ಎಲ್ಲರಂತೆ ಒಂದಡೆಯಿಂದ ಇನ್ನೊಂದಡೆ ಹೋಗಲು, ಸ್ವಯಂ ಉದ್ಯೋಗ ಕೈಗೊಳ್ಳಲು ಅನುಕೂಲವಾಗಲಿ ಎಂದು ವಿಕಲಾಂಗಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಪ್ರತಿ ವರ್ಷ ತ್ರಿಚಕ್ರ ಸ್ಕೂಟರ್​ಗಳನ್ನು ವಿತರಣೆ ಮಾಡುತ್ತದೆ. 2023-24 ನೇ ಸಾಲಿನಲ್ಲಿ ಕೂಡ ರಾಜ್ಯದಲ್ಲಿರುವ ಸಾವಿರಾರು ವಿಕಲಾಂಗ ಚೇತನರಿಗೆ ತ್ರಿಚಕ್ರ ಸ್ಕೂಟಿಗಳನ್ನು ವಿತರಣೆ ಮಾಡಲು ಇಲಾಖೆ ಮುಂದಾಗಿತ್ತು. ಅದಕ್ಕಾಗಿ ಕಳೆದ ವರ್ಷವೇ ಫಲಾನುಭವಿಗಳ ಅರ್ಜಿ ಕರೆದು, ಜೊತೆಗೆ ಫಲಾನುಭವಿಗಳ ಪಟ್ಟಿಯನ್ನು ಕೂಡಾ ಸಿದ್ದ ಮಾಡಿಕೊಳ್ಳಲಾಗಿತ್ತು. ಆದ್ರೆ, 2024 ಮುಗಿಯುವುದಕ್ಕೆ ಕೆಲವೇ ತಿಂಗಳು ಬಾಕಿ ಉಳಿದಿದ್ದು, ಇನ್ನುವರೆಗೂ ಫಲಾನುಭವಿಗಳ ಕೈಗೆ ಮೂರು ಚಕ್ರದ ಸ್ಕೂಟಿ ಸಿಕ್ಕಿಲ್ಲ.

ಕೊಪ್ಪಳ ನಗರದ ಸುರಭಿ ವೃದ್ದಾಶ್ರಮದಲ್ಲಿ, ಜಿಲ್ಲೆಯ ಫಲಾನುಭವಿಗಳಿಗೆ ನೀಡಬೇಕಾಗಿದ್ದ ನೂರಾ ಇಪ್ಪತ್ತೈದಕ್ಕೂ ಹೆಚ್ಚು ತ್ರಿಚಕ್ರ ವಾಹನಗಳನ್ನು ನಿಲ್ಲಿಸಲಾಗಿದೆ. ಅಚ್ಚರಿಯಂದರೆ, ಕಳೆದ ಆರು ತಿಂಗಳ ಹಿಂದೆಯೇ ಇಲ್ಲಿ ತ್ರಿಚಕ್ರ ಸ್ಕೂಟಿಗಳನ್ನು ತಂದು ನಿಲ್ಲಿಸಲಾಗಿದೆ. ಆದ್ರೆ, ಇಲ್ಲಿವರೆಗೆ ಫಲಾನುಭವಿಗಳಿಗೆ ವಿತರಣೆ ಮಾಡಿಲ್ಲ.

ಇದನ್ನೂ ಓದಿ:Video: ವಿಶೇಷ ಚೇತನ ವ್ಯಕ್ತಿಗೆ ಬ್ರಿಡ್ಜ್‌ ದಾಟಲು ನೆರವಾದ ಟ್ರಾಫಿಕ್‌ ಪೊಲೀಸ್, ಈ ಕಾರ್ಯವನ್ನು ಶ್ಲಾಘಿಸಿದ ಸಿಎಂ

ಕಳೆದ ಮಾರ್ಚ್ ತಿಂಗಳಲ್ಲಿಯೇ ಫಲಾನುಭವಿಗಳಿಗೆ ಈ ಮೂರು ಚಕ್ರದ ಸ್ಕೂಟಿಗಳನ್ನು ವಿತರಣೆ ಮಾಡಬೇಕಿತ್ತು. ಆದ್ರೆ, ಲೋಕಸಭಾ ಚುನಾವಣೆ ನೀತಿ ಸಂಹಿತೆ ಬಂದಿದ್ದರಿಂದ ಅವುಗಳ ವಿತರಣೆ ಮಾಡಿರಲಿಲ್ಲ. ಆದ್ರೆ, ಇದೀಗ ನೀತಿ ಸಂಹಿತೆ ಮುಗಿದು ಅನೇಕ ತಿಂಗಳಾದರೂ ಕೂಡ ಫಲಾನುಭವಿಗಳಿಗೆ ವಿತರಿಸಿಲ್ಲ. ಈ ಬಗ್ಗೆ ಇಲಾಖೆಯ ಉಪ ನಿರ್ದೇಶಕರನ್ನ ಕೇಳಿದ್ರೆ, ‘ಮೂರು ಚಕ್ರದ ಸ್ಕೂಟಿಗಳನ್ನು ಪೂರೈಕೆ ಮಾಡಲು ಟೆಂಡರ್ ಪೆಡದಿದ್ದ ಸಂಸ್ಥೆ, ಆರ್​ಸಿ ಕಾರ್ಡ್​ಗಳನ್ನು ಕಳುಹಿಸಲು ವಿಳಂಭ ಮಾಡಿತ್ತು. ಆರ್ ಸಿ ಕಾರ್ಡ್ ಇಲ್ಲದೇ ಸ್ಕೂಟಿಗಳನ್ನು ವಿತರಣೆ ಮಾಡೋದು ಸರಿಯಲ್ಲ ಎನ್ನುವ ಉದ್ದೇಶದಿಂದ ಮಾಡಿರಲಿಲ್ಲ. ಇದೀಗ ಆರ್ ಸಿ ಕಾರ್ಡ್​ಗಳು ಬಂದಿದ್ದು, ಹಂತಹಂತವಾಗಿ ತಾಲೂಕುವಾರು ಫಲಾನುಭವಿಗಳನ್ನು ಕರೆಸಿ, ವಿತರಣೆ ಮಾಡುತ್ತಿದ್ದೇವೆ ಅಂತಿದ್ದಾರೆ.

ಸೂಕ್ತ ಸಮಯದಲ್ಲಿ ಫಲಾನುಭವಿಗಳಿಗೆ ಸ್ಕೂಟಿಗಳನ್ನು ವಿತರಣೆ ಮಾಡಿದ್ದರೆ, ಫಲಾನುಭವಿಗಳಿಗೆ ಕೂಡ ಅನುಕೂಲವಾಗುತ್ತದೆ. ಸ್ಕೂಟಿಗಳು ಕೂಡ ಸರಿಯಾಗಿರುತ್ತವೆ. ಆದ್ರೆ, ಅವು ಹಾಳಾದ ಮೇಲೆ ವಿತರಣೆ ಮಾಡಿದರೆ ಅದರಿಂದ ಯಾರಿಗೂ ಪ್ರಯೋಜನವಿಲ್ಲದಂತಾಗುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಸರಿಯಾದ ಕ್ರಮ ಕೈಗೊಳ್ಳಬೇಕಿದೆ. ಜೊತೆಗೆ ಮುಂದಿನ ದಿನದಲ್ಲಿ ಈ ರೀತಿಯ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ