ಕೊಪ್ಪಳದಲ್ಲಿ ಹಿಂಗಾರು ಮಳೆ ಆರ್ಭಟ: ಕೈಗೆ ಬಂದ ತುತ್ತು ಬಾಯಿಗೆ ಬಾರದಂತಹ ಸ್ಥಿತಿಯಲ್ಲಿ ರೈತರು
ರೈತರಿಗೆ ಹೆಚ್ಚು ಮಳೆಯಾದರೂ ಸಂಕಷ್ಟ, ಮಳೆಯಾಗದಿದ್ದರೂ ಸಂಕಷ್ಟ. ಆದರೆ ಸೂಕ್ತ ಸಮಯದಲ್ಲಿ ಮಳೆಯಾದ್ರೆ ಮಾತ್ರ ರೈತರಿಗೆ ಅನಕೂಲವಾಗುತ್ತದೆ. ಇಲ್ಲದಿದ್ದರೆ ಮಳೆಯಿಂದ ಸಂಕಷ್ಟ ತಪ್ಪಿದಲ್ಲ. ಇದೀಗ ಕೊಪ್ಪಳ ಜಿಲ್ಲೆಯಲ್ಲಿ ಹಿಂಗಾರು ಮಳೆಯ ಆರ್ಭಟ ಜೋರಾಗಿದ್ದು, ಕೈಗೆ ಬಂದ ತುತ್ತು ರೈತರ ಬಾಯಿಗೆ ಬಾರದಂತಹ ಸ್ಥಿತಿ ನಿರ್ಮಾಣವಾಗಿದೆ.
ಕೊಪ್ಪಳ, ಅಕ್ಟೋಬರ್ 12: ಆ ರೈತರೆಲ್ಲಾ ಕಳೆದ ಮೂರ್ನಾಲ್ಕು ತಿಂಗಳು ಕಾಲ ಶ್ರಮವಹಿಸಿ ಮೆಕ್ಕೆಜೋಳ ಬೆಳೆದಿದ್ದಾರೆ. ಇದೀಗ ಕಟಾವು ಕೂಡ ಆಗಿದ್ದು, ಮಾರ್ಕೆಟ್ನಲ್ಲಿ ಮೆಕ್ಕೆಜೋಳಕ್ಕೆ ಉತ್ತಮ ಬೆಲೆ ಕೂಡ ಇದೆ. ಆದರೆ ಇದೀಗ ಬಹುತೇಕ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಹ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣ ಹಿಂಗಾರು ಮಳೆಯ (rain) ಆರ್ಭಟ.
ಹಿಂಗಾರು ಮಳೆಯ ಆರ್ಭಟ
ಜಿಲ್ಲೆಯ ಗಂಗಾವತಿ ತಾಲೂಕಿನ ಜಬ್ಬಲಗುಡ್ಡ, ಹೇಮಗುಡ್ಡ, ಮುಕ್ಕುಂಪಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮೆಕ್ಕೆಜೋಳ ಬೆಳೆದ ರೈತರ ಸ್ಥಿತಿ ಹೇಳತೀರದಾಗಿದೆ. ಹಿಂಗಾರು ಮಳೆಯ ಆರ್ಭಟ ಇವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಇದನ್ನೂ ಓದಿ: ಸ್ಮಶಾನಕ್ಕೆ ಹೋಗಲು ರಸ್ತೆಯೂ ಇಲ್ಲ, ಜಾಗವೂ ಒತ್ತುವರಿ; ಈ ಗ್ರಾಮದ ಜನರ ಕೂಗು ಕೇಳುವರಿಲ್ವಾ?
ಜಿಲ್ಲೆಯಲ್ಲಿ ಹಿಂಗಾರು ಮಳೆಯ ಆರ್ಭಟ ಜೋರಾಗಿದೆ. ಕಳೆದ ಎರಡ್ಮೂರು ದಿನಗಳದಿಂದ ಜಿಲ್ಲೆಯ ಹಲವಡೆ ಪ್ರತಿನಿತ್ಯ ಮಳೆಯಾಗುತ್ತಿದೆ. ಆದರೆ ಮಳೆಯಾದರೆ ಸಂತಸ ಪಡುವ ರೈತರು, ಇದೀಗ ಸ್ವಲ್ಪ ದಿನ ಮೋಡಗಳೆ, ಇಲ್ಲಿ ನಿಂತು ಮಳೆ ಸುರಿಸದೇ, ಸ್ವಲ್ಪ ಮುಂದೆ ಹೋಗಿ ಅಂತ ಹೇಳುತ್ತಿದ್ದಾರೆ. ಯಾಕಂದ್ರೆ ಕೊಪ್ಪಳ ಜಿಲ್ಲೆಯಲ್ಲಿ ಅತಿ ಹೆಚ್ಚು ರೈತರು ಮಕ್ಕೆಜೋಳವನ್ನು ಬೆಳೆಯುತ್ತಾರೆ. ಅದರಲ್ಲೂ ಕೊಪ್ಪಳ ತಾಲೂಕು, ಗಂಗಾವತಿ ತಾಲೂಕು, ಯಲಬುರ್ಗಾ, ಕುಷ್ಟಗಿ ತಾಲೂಕಿನ ಹೆಚ್ಚಿನ ರೈತರು ತಮ್ಮ ಮೊದಲ ಬೆಳೆಯನ್ನಾಗಿ ಮೆಕ್ಕೆಜೋಳವನ್ನು ಬೆಳೆಯುತ್ತಾರೆ. ಕಳೆದ ಮೂರ್ನಾಲ್ಕು ತಿಂಗಳ ಕಾಲ ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆ ಬೆಳದಿರೋ ರೈತರಿಗೆ, ಈ ಬಾರಿ ಭೂಮಿ ತಾಯಿ ಉತ್ತಮ ಫಲವನ್ನೇ ನೀಡಿದ್ದಾಳೆ.
ಅದೃಷ್ಟವೆನ್ನುವಂತೆ ಮಾರುಕಟ್ಟೆಯಲ್ಲಿ ಕೂಡ ಪ್ರತಿ ಕ್ವಿಂಟಲ್ ಮೆಕ್ಕೆಜೋಳಕ್ಕೆ ಎರಡು ಸಾವಿರದ ಐನೂರು ರೂಪಾಯಿವರಗೆ ಬೆಲೆಯಿದೆ. ಉತ್ತಮ ಬೆಲೆ ಇರೋದರಿಂದ ರೈತರು ಮೆಕ್ಕೆಜೋಳವನ್ನು ಕಟಾವು ಮಾಡಿ, ರಾಶಿ ಮಾಡುತ್ತಿದ್ದಾರೆ. ಆದರೆ ಹಿಂಗಾರು ಮಳೆ ಅಬ್ಬರ ಜೋರಾಗುತ್ತಿರುವದರಿಂದ ಮಳೆಯಿಂದ ಮೆಕ್ಕೆಜೋಳವನ್ನು ರಕ್ಷಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ.
ಇದನ್ನೂ ಓದಿ: ವಿಷದ ಬಟ್ಟಲಾಗುತ್ತಿದೆಯಾ ಕರ್ನಾಟಕ ಭತ್ತದ ಕಣಜ? ಅಧಿಕ ಇಳುವರಿಗಾಗಿ ಹೆಚ್ಚಿದ ರಾಸಾನಿಯಕ, ಕ್ರಿಮಿನಾಶಕ ಬಳಕೆ
ಮೆಕ್ಕೆಜೋಳವನ್ನು ರಾಶಿ ಮಾಡಿದ ನಂತರ ನೇರವಾಗಿ ಮಾರುಕಟ್ಟೆಗೆ ಸಾಗಾಟ ಮಾಡಿದ್ರೆ, ವ್ಯಾಪರಸ್ಥರು ಮೆಕ್ಕೆಜೋಳವನ್ನು ಖರೀದಿಸೋದಿಲ್ಲ. ಅದರಲ್ಲಿ ಮಾಯಿಶ್ಚರೈಸರ್ ಇದ್ದು, ಒಣಗಿದ ನಂತರ ತೆಗೆದುಕೊಂಡು ಬರುವಂತೆ ಹೇಳುತ್ತಾರಂತೆ. ಮೆಕ್ಕೆಜೋಳ ಒಣಗಬೇಕಾದರೆ ಒಂದು ವಾರಗಳ ಕಾಲ ಅದನ್ನು ಬಿಸಿಲಲ್ಲಿ ಒಣಗಿಸಬೇಕು. ಹೆಚ್ಚಿನ ರೈತರಿಗೆ ಮೆಕ್ಕೆಜೋಳವನ್ನು ಸಂಗ್ರಹಿಸಿಡಲಿಕ್ಕೆ ಜಾಗ ಇಲ್ಲದೇ ಇರೋದರಿಂದ ರಸ್ತೆಗಳಲ್ಲಿ ಮೆಕ್ಕೆಜೋಳವನ್ನು ಹಾಕಿ ಒಣಗಿಸುತ್ತಿದ್ದಾರೆ. ಆದರೆ ಮೇಲಿಂದ ಮೇಲೆ ಮಳೆಯಾಗುತ್ತಿರುವದರಿಂದ ಮೆಕ್ಕೆಜೋಳದಲ್ಲಿ ಮಳೆ ನೀರು ಹೋಗುತ್ತಿದೆಯಂತೆ. ಮಳೆ ನೀರು ಹೋದರೆ ಮೆಕ್ಕೆಜೋಳ ಹಾಳಾಗಿ ಹೋಗುತ್ತದೆ. ಅದನ್ನು ಯಾರು ಖರೀದಿ ಮಾಡೋದಿಲ್ಲ ಎಂದು ರೈತ ತಿಮ್ಮಪ್ಪ ಅಳಲುತೊಡಿಕೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:23 pm, Sat, 12 October 24