ರೂಮಲ್ಲಿ ಗಲಾಟೆ, ಕಪಾಳಕ್ಕೆ ಹೊಡೆದಿದ್ದ ಗರ್ಲ್‌ಫ್ರೆಂಡ್‌! ಜ್ಞಾನೇಂದ್ರ ಕುಮಾರ್ ಪರಾರಿ ಹಿಂದಿನ ರೋಚಕ ಸಂಗತಿ ಬಯಲು

ಕೆಪಿಎಸ್​ಸಿ ಪಶುವೈದ್ಯರ ನೇಮಕಾತಿ ಹಗರಣ: ಕೆಪಿಎಸ್​ಸಿ ಪಶುವೈದ್ಯರ ನೇಮಕಾತಿ ಹಗರಣ ಪ್ರಕರಣದಲ್ಲಿ ಬಂಧಿತ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರ ಎಸ್ಕೇಪ್‌ ಕುರಿತ ಹಲವು ಅಂಶಗಳು ಸಿಐಡಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿವೆ. ದೆಹಲಿ, ಶ್ರೀಲಂಕಾ, ಚೆನ್ನೈ ಮೂಲಕ ನಡೆದ ಓಡಾಟದ ಬಗ್ಗೆಯೂ ತನಿಖೆ ನಡೆಯುತ್ತಿದೆ.

ರೂಮಲ್ಲಿ ಗಲಾಟೆ, ಕಪಾಳಕ್ಕೆ ಹೊಡೆದಿದ್ದ ಗರ್ಲ್‌ಫ್ರೆಂಡ್‌! ಜ್ಞಾನೇಂದ್ರ ಕುಮಾರ್ ಪರಾರಿ ಹಿಂದಿನ ರೋಚಕ ಸಂಗತಿ ಬಯಲು
ಜ್ಞಾನೇಂದ್ರ ಕುಮಾರ್ ಪರಾರಿ ಹಿಂದಿನ ಒಂದು ವಾರದ ರೋಚಕ ಸಂಗತಿ ಬಯಲು
Image Credit source: tv9
Edited By:

Updated on: Sep 03, 2026 | 9:35 AM

ಮುಖ್ಯಾಂಶಗಳು

  • ಜ್ಞಾನೇಂದ್ರ ಕುಮಾರ್ ಪರಾರಿ ಹಿಂದಿನ ರೋಚಕ ಮಾಹಿತಿ
  • ದೆಹಲಿ, ಶ್ರೀಲಂಕಾ ಮೂಲಕ ಸ್ಥಳ ಬದಲಾವಣೆ
  • ಸದ್ಯ ಹತ್ತು ದಿನಗಳ ಸಿಐಡಿ ಕಸ್ಟಡಿಯಲ್ಲಿ ವಿಚಾರಣೆ

ಬೆಂಗಳೂರು, ಸೆಪ್ಟೆಂಬರ್ 3: ಕೆಪಿಎಸ್​ಸಿ ಪಶುವೈದ್ಯರ ನೇಮಕಾತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರ ಪರಾರಿ ಪ್ರಕರಣದ ಹಿಂದೆ ಹಲವು ರೋಚಕ ಸಂಗತಿಗಳು ಇವೆ ಎಂಬ ಮಾಹಿತಿ ಸಿಐಡಿ ವಿಚಾರಣೆಯಲ್ಲಿ ಬಹಿರಂಗವಾಗಿರುವುದು ತಿಳಿದುಬಂದಿದೆ. ಪ್ರಭಾವಿ ವ್ಯಕ್ತಿಗಳ ಸೂಚನೆ ಹಾಗೂ ನಿರಂತರ ಮಾಹಿತಿಯ ಆಧಾರದ ಮೇಲೆ ಜ್ಞಾನೇಂದ್ರ ಕುಮಾರ್ ಸ್ಥಳ ಬದಲಾಯಿಸುತ್ತಿದ್ದರು ಎಂಬ ಅಂಶ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಮೊದಲಿಗೆ ಕೆಪಿಎಸ್​ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿತ್ತು. ಈ ದಾಳಿ ಬಳಿಕ ಮುಂದಿನ ಟಾರ್ಗೆಟ್‌ ತಾನೇ ಆಗಬಹುದು ಎಂಬುದು ಜ್ಞಾನೇಂದ್ರ ಕುಮಾರ್ ಅವರಿಗೆ ತಿಳಿದಿತ್ತು. ಇದಾದ ಬಳಿಕ ಅವರು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಎಸ್ಕೇಪ್‌ ಆಗಲು ಯೋಜನೆ ರೂಪಿಸಿದ್ದರು ಎಂದು ಸಿಐಡಿ ವಿಚಾರಣೆಯಲ್ಲಿ ಮಾಹಿತಿ ಲಭಿಸಿದೆ.

ಪ್ರಭಾವಿಗಳ ಸಲಹೆ ಮೇರೆಗೆ ಬೆಂಗಳೂರಿನಿಂದ ಪರಾರಿಯಾಗಿದ್ದ ಜ್ಞಾನೇಂದ್ರ ಕುಮಾರ್

ಕೆಲವರ ಸಲಹೆಯ ಮೇರೆಗೆ ಬಟ್ಟೆಗಳನ್ನು ಬ್ಯಾಗ್‌ನಲ್ಲಿ ಹಾಕಿಕೊಂಡು ಜ್ಞಾನೇಂದ್ರ ಕುಮಾರ್ ಬೆಂಗಳೂರಿನಿಂದ ಎಸ್ಕೇಪ್‌ ಆಗಿದ್ದರು ಎನ್ನಲಾಗಿದೆ. ಬೆಂಗಳೂರು ಏರ್‌ಪೋರ್ಟ್‌ನಿಂದ ನೇರವಾಗಿ ದೆಹಲಿಗೆ ತೆರಳಿದ್ದ ಅವರು, ಅಲ್ಲಿಂದ ನೋಯ್ಡಾಗೆ ತೆರಳಿ ರೂಮ್‌ವೊಂದನ್ನು ಬುಕ್‌ ಮಾಡಿಕೊಂಡಿದ್ದರು.

ಗರ್ಲ್‌ಫ್ರೆಂಡ್‌ಗೂ ಕರೆ, ರೂಮ್‌ನಲ್ಲಿ ಗಲಾಟೆ

ನೋಯ್ಡಾದ ರೂಮ್‌ನಲ್ಲಿ ಉಳಿದುಕೊಂಡಿದ್ದ ವೇಳೆ ಜ್ಞಾನೇಂದ್ರ ಕುಮಾರ್ ಗರ್ಲ್‌ಫ್ರೆಂಡ್‌ಗೆ ಕರೆ ಮಾಡಿ ಅಲ್ಲಿಗೆ ಕರೆಸಿಕೊಂಡಿದ್ದರು. ಆಕೆ ರಾಷ್ಟ್ರೀಯ ವಾಹಿನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಇಬ್ಬರೂ ರೂಮ್‌ನಲ್ಲಿ ಇದ್ದ ಸಂದರ್ಭದಲ್ಲಿ ಜ್ಞಾನೇಂದ್ರ ಕುಮಾರ್ ಅವರಿಗೆ ಪ್ರಭಾವಿ ವ್ಯಕ್ತಿಯೊಬ್ಬರಿಂದ ಕರೆ ಬಂದಿತ್ತು ಎನ್ನಲಾಗಿದೆ. ‘ಯಾವುದೇ ಕ್ಷಣದಲ್ಲಿ ನಿನ್ನ ಮೇಲೆ ಇಡಿ ದಾಳಿ ನಡೆಯಬಹುದು. ಹಗರಣದಲ್ಲಿ ನಿನ್ನ ಪಾತ್ರಕ್ಕೆ ಸಂಬಂಧಿಸಿದ ದಾಖಲೆಗಳು ಇಡಿ ಅಧಿಕಾರಿಗಳಿಗೆ ಸಿಕ್ಕಿವೆ. ಅಲ್ಲಿಂದ ಬೇರೆಡೆ ತೆರಳುವುದು ಉತ್ತಮ’ ಎಂದು ಆ ವ್ಯಕ್ತಿ ಸೂಚನೆ ನೀಡಿದ್ದರು.

ಜ್ಞಾನೇಂದ್ರ ಕುಮಾರ್ ಕಪಾಳಕ್ಕೆ ಹೊಡೆದಿದ್ದ ಗರ್ಲ್ ಫ್ರೆಂಡ್

ಈ ವಿಚಾರ ತಿಳಿದು ಜ್ಞಾನೇಂದ್ರ ಕುಮಾರ್ ಅವರ ಸ್ನೇಹಿತೆ ಕೋಪಗೊಂಡಿದ್ದರು. ಗಲಾಟೆ ವೇಳೆ ಜ್ಞಾನೇಂದ್ರ ಕುಮಾರ್ ಅವರ ಕಪಾಳಕ್ಕೆ ಹೊಡೆದಿದ್ದ ಆಕೆ, ‘ನಿನ್ನಿಂದಾಗಿ ನಾನು ಸಿಕ್ಕಿಬೀಳುತ್ತೇನೆ’ ಎಂದು ಹೇಳಿ ರೂಮ್‌ನಿಂದ ತೆರಳಿದ್ದರು ಎನ್ನಲಾಗಿದೆ.

ನಿವೃತ್ತ ಐಎಎಸ್ ಅಧಿಕಾರಿಯ ಭೇಟಿ

ಇದರ ನಡುವೆ ರಾಜ್ಯದ ಗಣ್ಯರ ಸೂಚನೆಯಂತೆ ಪ್ರಭಾವಿ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರು ಬೆಂಗಳೂರಿನಿಂದ ದೆಹಲಿಗೆ ತೆರಳಿ ಜ್ಞಾನೇಂದ್ರ ಕುಮಾರ್ ಅವರನ್ನು ಭೇಟಿಯಾಗಿದ್ದರು ಎಂಬುದೂ ತಿಳಿದುಬಂದಿದೆ. ಈ ವೇಳೆ ಇಡಿ ಅಧಿಕಾರಿಗಳು ಬಂಧಿಸಿದರೆ ಏನು ಹೇಳಬೇಕು, ದಾಖಲೆಗಳನ್ನು ತೋರಿಸಿದಾಗ ಹೇಗೆ ಉತ್ತರಿಸಬೇಕು ಹಾಗೂ ತನಿಖೆಯನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತು ಹಲವು ಸೂಚನೆಗಳನ್ನು ನೀಡಿದ್ದರು.

ಬಳಿಕ ಜ್ಞಾನೇಂದ್ರ ಕುಮಾರ್ ದೆಹಲಿಯಲ್ಲೇ ಉಳಿದುಕೊಂಡಿದ್ದು, ತಮ್ಮ ಮೂವರು ಬ್ಯಾಚ್‌ಮೇಟ್‌ಗಳನ್ನು ಕೂಡ ಅಲ್ಲಿಗೆ ಕರೆಸಿಕೊಂಡಿದ್ದರು. ನಂತರ ನಾಲ್ವರೂ ದೆಹಲಿಯಿಂದ ಶ್ರೀಲಂಕಾಗೆ ತೆರಳಿದ್ದರು ಎಂಬ ಮಾಹಿತಿ ತನಿಖೆಯಲ್ಲಿ ಹೊರಬಿದ್ದಿದೆ.

ಶ್ರೀಲಂಕಾದಿಂದ ಚೆನ್ನೈ, ಬಳಿಕ ಬೆಂಗಳೂರಿಗೆ

ಜ್ಞಾನೇಂದ್ರ ಕುಮಾರ್ ಸೇರಿದಂತೆ ನಾಲ್ವರು ಶ್ರೀಲಂಕಾದಲ್ಲಿ ಎರಡು ದಿನ ಉಳಿದುಕೊಂಡಿದ್ದರು. ಈ ನಡುವೆ ಲುಕ್‌ಔಟ್‌ ನೋಟಿಸ್‌ ಹೊರಡಿಸುವ ಸಾಧ್ಯತೆಯ ಬಗ್ಗೆ ಅವರಿಗೆ ಮಾಹಿತಿ ಲಭಿಸಿತ್ತು. ಲುಕ್‌ಔಟ್‌ ನೋಟಿಸ್‌ ಜಾರಿಯಾದರೆ ಇಡಿ ಅಧಿಕಾರಿಗಳ ಕೈಗೆ ಸಿಲುಕುವ ಸಾಧ್ಯತೆ ಇದೆ ಎಂಬ ಹಿನ್ನೆಲೆಯಲ್ಲಿ ಅವರು ತಕ್ಷಣ ಕೊಲಂಬೊದಿಂದ ಚೆನ್ನೈಗೆ ಮರಳಿದ್ದರು.

ಚೆನ್ನೈನಿಂದ ನೇರವಾಗಿ ದೇವನಹಳ್ಳಿ ಏರ್‌ಪೋರ್ಟ್‌ಗೆ ಬಂದ ಜ್ಞಾನೇಂದ್ರ ಕುಮಾರ್ ಬಳಿಕ ರೆಸಾರ್ಟ್‌ವೊಂದರಲ್ಲಿ ವಾಸ್ತವ್ಯ ಹೂಡಿದ್ದರು. ಯಾವುದೇ ಕಾರಣಕ್ಕೂ ಇಡಿ ನೋಟಿಸ್‌ಗೆ ಉತ್ತರಿಸದಂತೆ ಪ್ರಭಾವಿ ವ್ಯಕ್ತಿಗಳಿಂದ ಅವರಿಗೆ ಸೂಚನೆ ಬಂದಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಸಿಐಡಿ ನೋಟಿಸ್‌, ವಿಚಾರಣೆ ನಡುವೆಯೇ ಬಂಧನ

ಈ ನಡುವೆ ಸಿಐಡಿ ನೋಟಿಸ್‌ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ನೋಟಿಸ್‌ ಹಿನ್ನೆಲೆಯಲ್ಲಿ ಜ್ಞಾನೇಂದ್ರ ಕುಮಾರ್ ಎರಡು ದಿನ ಸಿಐಡಿ ಕಚೇರಿಗೆ ಹಾಜರಾಗಿದ್ದರು. ಎರಡನೇ ದಿನ ವಿಚಾರಣೆ ಎದುರಿಸಿದ ಬಳಿಕ ಮನೆಗೆ ತೆರಳಲು ಸಿಐಡಿ ಕಚೇರಿಯಿಂದ ಹೊರಬರಲು ಮುಂದಾಗಿದ್ದ ವೇಳೆ ಅವರಿಗೆ ಮೊಬೈಲ್‌ ಕರೆ ಬಂದಿತ್ತು ಎನ್ನಲಾಗಿದೆ. ಇಡಿ ಅಧಿಕಾರಿಗಳು ಮನೆ ಬಳಿ ಕಾದು ಕುಳಿತಿದ್ದಾರೆ ಎಂಬ ಮಾಹಿತಿಯನ್ನು ಪ್ರಭಾವಿ ವ್ಯಕ್ತಿಯೊಬ್ಬರು ನೀಡಿದ್ದರು. ಅಲ್ಲಿಂದ ಹೊರಬರದಂತೆ ಹಾಗೂ ಮತ್ತೆ ಸಿಐಡಿ ಕಚೇರಿಯೊಳಗೆ ತೆರಳುವಂತೆ ಸೂಚನೆ ನೀಡಲಾಗಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಸಿಐಡಿ ಕಚೇರಿಯಿಂದ ಹೊರಬಂದರೆ ಇಡಿ ಅಧಿಕಾರಿಗಳು ಬಂಧಿಸುವ ಸಾಧ್ಯತೆ ಇದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಜ್ಞಾನೇಂದ್ರ ಕುಮಾರ್ ಮತ್ತೆ ಸಿಐಡಿ ಕಚೇರಿಯೊಳಗೆ ತೆರಳಿದ್ದರು. ಈ ಹಿಂದೆ ನೀಡಲಾಗಿದ್ದ ನೋಟಿಸ್‌ಗೆ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಮಧ್ಯರಾತ್ರಿ ಜ್ಞಾನೇಂದ್ರ ಕುಮಾರ್ ಅವರನ್ನು ಬಂಧಿಸಿದ್ದಾರೆ ಎಂಬುದು ತಿಳಿದುಬಂದಿದೆ. ಸದ್ಯ ಸಿಐಡಿ ಅವರನ್ನು 10 ದಿನಗಳ ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದೆ.

ಇದನ್ನೂ ಓದಿ: ಕೆಪಿಎಸ್​​​​ಸಿ ಹಗರಣ: ಸಿಐಡಿ ಮುಂದೆ ಮತ್ತಷ್ಟು ಅಭ್ಯರ್ಥಿಗಳ ತಪ್ಪೊಪ್ಪಿಗೆ, ಸಿಎಂ ಡಿಕೆಶಿ ಮಹತ್ವದ ಹೇಳಿಕೆ

ಪಶುವೈದ್ಯರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜ್ಞಾನೇಂದ್ರ ಕುಮಾರ್ ಅವರ ಪಾತ್ರ, ಪ್ರಭಾವಿ ವ್ಯಕ್ತಿಗಳೊಂದಿಗಿನ ಸಂಪರ್ಕ ಹಾಗೂ ಎಸ್ಕೇಪ್‌ ಸಂದರ್ಭದಲ್ಲಿ ಅವರಿಗೆ ನೆರವು ನೀಡಿದವರು ಯಾರು ಎಂಬ ಕುರಿತು ಸಿಐಡಿ ತನಿಖೆ ಮುಂದುವರಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us