ಪ್ರೊ.ಭಗವಾನ್ ಅರೆ ಹುಚ್ಚ: ಒಕ್ಕಲಿಗರ ಬಗ್ಗೆ ಅವಹೇಳನಕಾರಿ ಹೇಳಿಕೆಗೆ ಜಿಟಿ ದೇವೇಗೌಡ ಕೆಂಡಾಮಂಡಲ

ಒಕ್ಕಲಿಗರು ಸಂಸ್ಕೃತಿ ಹೀನರು, ಈ ಮಾತು ನನ್ನದು ಅಲ್ಲ‌ ಕುವೆಂಪು ಅವರದ್ದು ಎಂದು ಹೇಳಿಕೆ ನೀಡಿದ ಪ್ರೋ.ಭಗವಾನ್ ವಿರುದ್ಧ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಹಾಗೂ ಬಿಜೆಪಿ ಶಾಸಕ ಸಿಎನ್ ಅಶ್ವತ್ಥ ನಾರಾಯಣ ಅವರು ಆಕ್ರೋಶ ಹೊರಹಾಕಿದ್ದಾರೆ.

ಪ್ರೊ.ಭಗವಾನ್ ಅರೆ ಹುಚ್ಚ: ಒಕ್ಕಲಿಗರ ಬಗ್ಗೆ ಅವಹೇಳನಕಾರಿ ಹೇಳಿಕೆಗೆ ಜಿಟಿ ದೇವೇಗೌಡ ಕೆಂಡಾಮಂಡಲ
ಒಕ್ಕಲಿಗರ ಬಗ್ಗೆ ಹೇಳಿಕೆ ನೀಡಿದ ಪ್ರೊ.ಭಗವಾನ್ ವಿರುದ್ಧ ಜಿಟಿ ದೇವೇಗೌಡ ಮತ್ತು ಸಿಎನ್ ಅಶ್ವತ್ಥನಾರಾಯಣ ಆಕ್ರೋಶ
Follow us
Sunil MH
| Updated By: Rakesh Nayak Manchi

Updated on:Oct 14, 2023 | 1:01 PM

ಬೆಂಗಳೂರು, ಅ.14: ಪ್ರೊ.ಕೆ.ಎಸ್. ಭಗವಾನ್ (Prof. KS Bhagawan) ಅರೆ ಹುಚ್ಚ, ಮನಸಿನ ಸ್ಥಿಮಿತತೆ ಕಳೆದುಕೊಂಡಿದ್ದಾರೆ ಎಂದು ಜೆಡಿಎಸ್ ಶಾಸಕ ಜಿಟಿ ದೇವೇಗೌಡ (G.T.Devegowda) ಹೇಳಿದ್ದಾರೆ. ಒಕ್ಕಲಿಗರು ಸಂಸ್ಕೃತಿ ಹೀನರು, ಈ ಮಾತು ನನ್ನದು ಅಲ್ಲ‌ ಕುವೆಂಪು ಅವರದ್ದು ಎಂದು ಭಗವಾನ್ ಹೇಳಿಕೆ ನೀಡಿದ್ದರು. ಪ್ರೊ.ಭಗವಾನ್​ ತನ್ನನ್ನು ತಾನೇ ಅಪಮಾನ ಮಾಡಿಕೊಂಡಿದ್ದಾರೆ. ಯಾರನ್ನೋ ಮೆಚ್ಚಿಸಲು ಈ ರೀತಿ ಹೇಳಿಕೆ ನೀಡಿದ್ದಾರೆ ಎಂದರು.

ಪ್ರೊ.ಭಗವಾನ್ ಸ್ವಲ್ಪ ಮೆಂಟಲ್ ಆಗಿದ್ದಾರೆ. ಆದ್ದರಿಂದ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಬೇಕು. ಅವರು ಕೂಡ ಒಳ್ಳೆಯ ಕುಟುಂಬದಿಂದ ಬಂದವರು. ಯಾರನ್ನೋ ಮೆಚ್ಚಿಸಲು ಈ ರೀತಿಯಾಗಿ ಮಾತನಾಡುತ್ತಾರೆ. ಅವರ ಹೇಳಿಕೆಯನ್ನು ತೀವ್ರವಾಗಿ ನಾನು ಖಂಡಿಸುತ್ತೇನೆ. ಯಾವುದೇ ಸಮುದಾಯದ ಬಗ್ಗೆ ಯಾರು ಕೂಡ ವಿವಾದಾತ್ಮಕ ಹೇಳಿಕೆಯನ್ನು ನೀಡಬಾರದು ಎಂದರು.

ಪ್ರೊ.ಭಗವಾನ್ ಬಂಧನಕ್ಕೆ ಅಶ್ವತ್ಥ ನಾರಾಯಣ ಆಗ್ರಹ

ಹೇಳಿಕೆ ಖಂಡಿಸಿ ಮಾತನಾಡಿದ ಬಿಜೆಪಿ ‌ಶಾಸಕ ಡಾ. ಸಿಎನ್ ಅಶ್ವಥ್ ನಾರಾಯಣ, ವಿಚಾರವಾದಿ ಭಗವಾನ್ ಏನನ್ನು ಹೇಳಲು ಪ್ರಯತ್ನ ಮಾಡುತ್ತಿದ್ದಾರೆ ಅಂತಾ ಅವರೇ ಹೇಳಬೇಕು. ಹಿಂದೂ ಧರ್ಮದ ವಿರುದ್ಧ ಪ್ರಚಾರ ಮಾಡಬೇಕಾ ಏನು ಅಂತಾ ಸ್ಪಷ್ಟಪಡಿಸಬೇಕು. ಮಹಿಷ ಏನು ಬೇರೆ ಸಂಸ್ಕೃತಿಯಾ? ಹಿಂದೂ ಸಂಸ್ಕೃತಿಯ ಒಂದು ಭಾಗ ಆಗಿರುವಂತಹದ್ದು. ಮಹಿಷ ದುಷ್ಟ ಶಕ್ತಿಯನ್ನು ಪೂಜಿಸುತ್ತೇವೆ ಎಂಬ ಮನಸ್ಥಿತಿ ಇರುವ ಭಗವಾನ್ ಅವರನ್ನು ಕೂಡಲೇ ಸರ್ಕಾರ ಬಂಧಿಸಬೇಕು ಎಂದರು.

ಇದನ್ನೂ ಓದಿ: ಮುಂದಿನ ವರ್ಷ ಬೆಂಗಳೂರಿನಲ್ಲಿ ಮಹಿಷ ದಸರಾ ಆಚರಣೆ: ಸಾಮಾಜಿಕ ಹೋರಾಟಗಾರ ಬಿಆರ್​​ ಭಾಸ್ಕರ್ ಪ್ರಸಾದ್

ಭಗವಾನ್ ಮೇಲೆ ಸರ್ಕಾರ ಕೇಸ್ ದಾಖಲು ಮಾಡಬೇಕು. ರಾಮನಗರದಲ್ಲಿ ರಾಮನ ದೇವಸ್ಥಾನ ಪುನರ್ ನಿರ್ಮಾಣ ಮಾಡುವುದನ್ನು ಕೈಬಿಟ್ಟಿರುವ ಸರ್ಕಾರ ಭಗವಾನ್ ಅವರಂತಹ ವ್ಯಕ್ತಿಗೆ ಉತ್ತೇಜನ ಕೊಡುತ್ತಿದೆ. ಮಹಿಷನ ಉತ್ಸವಕ್ಕೆ ಅವಕಾಶ ಕೊಡುವ ಸರ್ಕಾರ ನಾವು ವಿಜಯದಶಮಿಗೆ, ಚಾಮುಂಡೇಶ್ವರಿಗೆ ವಿರುದ್ಧವಾಗಿರುವವರು ಅಂತಾ ನೇರವಾಗಿ ಹೇಳಲಿ ಎಂದರು.

ಇಂತಹ ಗೊಂದಲ ಇರುವ ಸರ್ಕಾರ ಯಾಕೆ ದಸರಾ ಮಾಡುತ್ತದೆ? ಸರ್ಕಾರ ಮಹಿಷಾಸುರನ ಪರವಾಗಿದ್ದಾರೋ ಅಥವಾ ಚಾಮುಂಡೇಶ್ವರಿಯನ್ನು ಪೂಜಿಸುತ್ತಾರೋ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಅಶ್ವತ್ಥ ನಾರಾಯಣ ಸವಾಲು ಹಾಕಿದರು.

ಒಕ್ಕಲಿಗರಷ್ಟು ಸಂಸ್ಕೃತಿ ಆಚರಣೆಯ ಸಮುದಾಯ ಬೇರೆ ಇಲ್ಲ. ಭಗವಾನ್ ಅವರಂತಹ ಬುದ್ಧಿ ಏರುಪೇರಾಗಿರುವ ವ್ಯಕ್ತಿಗಳು ನಮ್ಮ ಒಕ್ಕಲುತನದ ಬಗ್ಗೆ ತಿಳಿಸುವ ಮೂರ್ಖತನದ ಪ್ರಯತ್ನ ಬೇಕಿಲ್ಲ. ಕುವೆಂಪು ಹೆಸರು ಬಳಸಿಕೊಳ್ಳುವುದು ಬೇಡ. ನಿನಗೇನಾದರೂ ಶಕ್ತಿ, ತಾಕತ್ ಇದ್ದರೆ ನೀನು ಮಾತಾಡಪ್ಪ. ನಿನಗೆ ಭಗವಂತ ಕೊಟ್ಟ ನರ ಅಂತಾ ಏನಾದರೂ ಇದ್ದರೆ ಮಾತಾಡು ಎಂದು ಸವಾಲು ಹಾಕಿದರು.

ತಲೆ ತಿರುಕ ಭಗವಾನ್ ಎಂದ ಆರ್ ಅಶೋಕ

ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಮಾತನಾಡಿದ ಬಿಜೆಪಿ ಶಾಸಕ ಆರ್ ಅಶೋಕ, ಯಾವನೋ ಒಬ್ಬ ತಲೆ ತಿರುಕ ಭಗವಾನ್ ಅಂತಾ ಒಕ್ಕಲಿಗರ ಬಗ್ಗೆ ಮಾತಾಡಿದ್ದಾನೆ. ಅವನೊಬ್ಬ ಮೆಂಟಲ್ ಗಿರಾಕಿ. ಅವಹೇಳನಕಾರಿಯಾಗಿ ಮಾತಾಡಿ ಒಕ್ಕಲಿಗ ಜನಾಂಗಕ್ಕೆ ಅವಮಾನ ಮಾಡಿದ್ದಾರೆ. ನಾನು ನಮ್ಮ‌ ಸ್ವಾಮೀಜಿ ಜೊತೆ ಮಾತಾಡುತ್ತೇನೆ ಎಂದರು. ಭಗವಾನ್ ಕಾರ್ಯಕ್ರಮಕ್ಕೆ ಹೋಗುವವರು ಎಲ್ಲಾ ಕಾಂಗ್ರೆಸ್​ನವರೇ. ರಕ್ಷಣೆ ಕೊಡುವವರೂ‌ ಕಾಂಗ್ರೆಸ್​ನವರು, ಬೆಂಬಲ ಕೊಡುವವರೂ ಕಾಂಗ್ರೆಸ್​ನವರು. ಈಗ ಭಗವಾನ್ ಹೇಳಿಕೆಗೆ ಕಾಂಗ್ರೆಸ್ ಉತ್ತರಿಸಬೇಕು. ಕೂಡಲೇ ಅವನನ್ನು ಬಂಧಿಸಿ ಜೈಲಿಗಟ್ಟಬೇಕು. ಇಲ್ಲದಿದ್ದರೆ ಇದು ದೊಡ್ಡ ಗಲಾಟೆಗೆ ನಾಂದಿಯಾಗುತ್ತದೆ. ಅಶಾಂತಿಗೆ ದೂಡಲು ಇದು ಕಾರಣ ಆಗುತ್ತದೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:29 pm, Sat, 14 October 23