ಹೆಂಡತಿಯರು ಬೇಕೆಂದು ತೆಂಗಿನಮರವೇರಿದ್ದ ಪತಿರಾಯ
ಹೆಂಡತಿಯರಿಬ್ಬರೂ ಗಂಡ ಬೇಡ ಎಂದು ತವರು ಮನೆ ಸೇರಿದ್ದರೆ, ಗಂಡ ಮಾತ್ರ ಹೆಂಡತಿಯರು ಬೇಕು ಅಂತ ಪಟ್ಟು ಹಿಡಿದು ತೆಂಗಿನ ಮರವೇರಿ ಕುಳಿತು ಪ್ರತಿಭಟಿಸಿದ ಘಟನೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ನಡೆದಿದೆ.

ಬಳ್ಳಾರಿ: ಹೆಂಡತಿಯರಿಬ್ಬರೂ ಗಂಡ ಬೇಡ ಎಂದು ತವರು ಮನೆ ಸೇರಿದ್ದರೆ, ಗಂಡ ಮಾತ್ರ ಹೆಂಡತಿಯರು ಬೇಕು ಅಂತ ಪಟ್ಟು ಹಿಡಿದು ತೆಂಗಿನ ಮರವೇರಿ ಕುಳಿತು ಪ್ರತಿಭಟಿಸಿದ ಘಟನೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ನಡೆದಿದೆ.
ಕಾನಾಹೊಸಹಳ್ಳಿ ಸಮೀಪದ ದಾಸೋಬನಹಳ್ಳಿಯ ಗೊಲ್ಲರಹಟ್ಟಿಯ ದೊಡ್ಡಪ್ಪ (40) ಮರವೇರಿದ ವ್ಯಕ್ತಿ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಸೋದರ ಸೊಸೆಯೊಂದಿಗೆ ಮೊದಲು ಮದುವೆಯಾಗಿದ್ದ. ಮಕ್ಕಳಾಗದ ಕಾರಣ ಆಕೆ ತವರು ಸೇರಿದಳು. ನಂತರ ಕೂಡ್ಲಿಗಿ ಸಮೀಪದ ಶಿವಪುರ ಗೊಲ್ಲರಹಟ್ಟಿಯ ಯುವತಿಯೊಂದಿಗೆ ಎರಡನೇ ಮದುವೆಯಾಗಿ ಮೂರು ಗಂಡುಮಕ್ಕಳನ್ನು ಪಡೆದ. ಆದರೂ, ಗಂಡಹೆಂಡತಿಯ ನಡುವೆ ಸಾಮರಸ್ಯ ಸಾಧಿಸದೆ ಆಕೆಯೂ ಮಕ್ಕಳನ್ನು ಬಿಟ್ಟು ತವರು ಸೇರಿದಳು.
ದಿಕ್ಕುಗಾಣದ ದೊಡ್ಡಪ್ಪ ನಿನ್ನೆ ಸಂಜೆ ನಾಲ್ಕು ಗಂಟೆಗೆ ಹೀಗೆ ಮರ ಏರಿ ಪ್ರತಿಭಟಿಸಿದ. ಮರದಿಂದ ಕೆಳಗಿಳಿಯುವಂತೆ ಗ್ರಾಮಸ್ಥರು, ಮಕ್ಕಳು ಹೇಳಿದರೂ ಕೆಳಗಿಳಿಯಲಿಲ್ಲ. ಕೂಡಲೇ ಗ್ರಾಮಸ್ಥರು ಕಾನಹೊಸಹಳ್ಳಿ ಠಾಣೆಗೆ ಮಾಹಿತಿ ನೀಡಿದರು. ಪೊಲೀಸರ ಮನವರಿಕೆಗೂ ಜಗ್ಗದೆ ಸಂಜೆ 3 ರಿಂದ ರಾತ್ರಿ 10-30 ರ ತನಕ ಸುಮಾರು 8ತಾಸು ಮರದಲ್ಲೇ ಇದ್ದ. ಗ್ರಾಮಸ್ಥರು ರಾಜಿಪಂಚಾಯತಿ ಮಾಡಿಸಲು ಮುಂದೆ ಬಾರದಿರುವುದು ಮತ್ತು ಮೂರೂ ಮಕ್ಕಳನ್ನು ನಿಭಾಯಿಸುವಲ್ಲಿ ಬೇಸತ್ತಿರುವುದು ಅವನ ಈ ನಡೆವಳಿಕೆಗೆ ಕಾರಣ.

ರಾತ್ರಿಯಾದರೂ ಮರದಲ್ಲೇ ಇದ್ದ ದೊಡ್ಡಪ್ಪ.

ಭರವಸೆ ಮೇರೆಗೆ ಮರದಿಂದ ಇಳಿದ ವ್ಯಕ್ತಿ
ನಂತರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಎಚ್. ನಾಗರಾಜ ರಾತ್ರಿ 8ಕ್ಕೆ ಸ್ಥಳಕ್ಕೆ ಬಂದು ದೊಡ್ಡಪ್ಪನೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರೂ ಸಹ ಕೆಳಗಿಳಿಯಲಿಲ್ಲ. ಕೊನೆಗೆ ಅವನ ಇಚ್ಛೆಯಂತೆ ಮೊದಲ ಹೆಂಡತಿಯನ್ನು ಮರದ ಬಳಿಗೆ ಕರೆಸಲಾಯಿತು. ಅಗ್ನಿಶಾಮಕ ದಳದ ಸಿಬ್ಬಂದಿಯ ಸಹಕಾರದೊಂದಿಗೆ ಅಂತೂ ರಾತ್ರಿ 11 ಗಂಟೆಗೆ ಕೆಳಗೆ ಇಳಿದ.
– ಬಸವರಾಜ ಹರನಹಳ್ಳಿ
ತವರಿನಿಂದ ವಾಪಸ್ ಬಾರದ ಪತ್ನಿ! ಪತಿರಾಯ ಆತ್ಮಹತ್ಯೆ ಮಾಡ್ಕೊಂಡ್ಬಿಟ್ಟ..