Rahul Gandhi: ಮಂಡ್ಯದಲ್ಲಿ ರಾಹುಲ್ ಗಾಂಧಿ ಅಬ್ಬರದ ಭಾಷಣ: ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ
ಮಂಡ್ಯ ಈಗ ಚುನಾವಣಾ ರಾಜಕೀಯ ಚತುರತೆಯ ವೇದಿಕೆಯಾಗಿದೆ. ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ಗೆ ಬಲ ತುಂಬೋದಕ್ಕೆಂದೇ ಮಂಡ್ಯದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಇಂದು ರ‍್ಯಾಲಿ ನಡೆಸಿದರು. ಬಳಿಕ ನಗರದ ಪಿಇಎಸ್ ಕಾಲೇಜು ಮೈದಾನದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಮಂಡ್ಯ, ಏಪ್ರಿಲ್ 17: ನಾವು ಅಧಿಕಾರಕ್ಕೆ ಬಂದರೆ ಈಗಾಗಲೇ ನೀಡುತ್ತಿರುವ 24 ಸಾವಿರಕ್ಕೆ 1 ಲಕ್ಷ ರೂ. ಸೇರಿಸಿ ಬಡ ಮಹಿಳೆಯರಿಗೆ ವರ್ಷಕ್ಕೆ 1 ಲಕ್ಷ 24 ಸಾವಿರ ರೂ. ನೀಡುತ್ತೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ. ಮಂಡ್ಯದ ಪಿಇಎಸ್ ಕಾಲೇಜು ಮೈದಾನದಲ್ಲಿ ನಡೆದ ಕಾಂಗ್ರೆಸ್ (Congress) ಸಮಾವೇಶದಲ್ಲಿ ಮಾತನಾಡಿದ ಅವರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಸಂಬಳ ಹೆಚ್ಚಿಸುತ್ತೇವೆ. ಸರ್ಕಾರಿ, ಅರೆ ಸರ್ಕಾರಿ ನೌಕರರ ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸುತ್ತೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಉದ್ಯೋಗ ಭದ್ರತಾ ಯೋಜನೆ ಜಾರಿ ಮಾಡುತ್ತೇವೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನುಡಿದಂತೆ ನಡೆದಿದ್ದೇವೆ. 5 ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಬಡವರಿಗೆ, ಮಹಿಳೆಯರು, ಯುವಕರಿಗೆ ಅನುಕೂಲವಾಗಿದೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ರೈತರಿಗೆ ನ್ಯಾಯ ಸಿಕ್ಕಿಲ್ಲ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆ ಮಾಡಿದ್ದು, ಈ ವೇಳೆ ರೈತರ ಸಂಕಷ್ಟ ಕಂಡಿದ್ದೇನೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ
ಕೇಂದ್ರ ಸರ್ಕಾರ 20-25 ಉದ್ಯಮಿಗಳ ಏಳಿಗೆಗಾಗಿ ಕೆಲಸ ಮಾಡುತ್ತಿದೆ. ಉದ್ಯಮಿಗಳ 16 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದೆ. ಆದರೆ ರೈತರ ಸಾಲಮನ್ನಾ ಮಾಡಿಲ್ಲ ಎಂದು ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಇದನ್ನೂ ಓದಿ: Rahul Gandhi Rally in Karnataka: ಮಂಡ್ಯದಲ್ಲಿ ರಾಹುಲ್ ಗಾಂಧಿ ಅಬ್ಬರ, ಇಲ್ಲಿದೆ ನೇರಪ್ರಸಾರ
ಬೆಳೆ ವಿಮೆ ಯೋಜನೆಯಲ್ಲೂ ರೈತರಿಗೆ ದೇಶವ್ಯಾಪಿ ಅನ್ಯಾಯವಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ 3 ಯೋಜನೆಗಳನ್ನು ಜಾರಿ ಮಾಡುತ್ತೇವೆ. ಕನಿಷ್ಠ ಬೆಂಬಲ ಬೆಲೆ ಯೋಜನೆ, ರಾಷ್ಟ್ರಮಟ್ಟದಲ್ಲಿ ರೈತರ ಬೆಳೆ ಸಾಲ ಮನ್ನಾ ಮತ್ತು 30 ದಿನಗಳಲ್ಲಿ ಬೆಳೆ ವಿಮೆ ಪಾವತಿ ಮಾಡುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಕರಡಿ ಸಂಗಣ್ಣ ಕಾಂಗ್ರೆಸ್ ಸೇರಿದ್ದು ಅವರ ವೈಯಕ್ತಿಕ ನಿರ್ಧಾರ, ಕಾಮೆಂಟ್ ಮಾಡಲಾರೆ: ಬಿಎಸ್ ಯಡಿಯೂರಪ್ಪ
ಚುನಾವಣೆ ಸಂದರ್ಭದಲ್ಲಿ ಎರಡು ವಿಚಾರದಲ್ಲಿ ಹೋರಾಟ ನಡೆಯುತ್ತಿದೆ. ಒಂದು ಕಡೆ ಸಂವಿಧಾನ, ಮತ್ತೊಂದು ಕಡೆ ಸಂವಿಧಾನವನ್ನ ಮುಗಿಸುವ ಕೆಲಸ ನಡೆಯುತ್ತಿದೆ. ಕೆಲ ಸಂಸ್ಥೆಗಳು ಕೆಲವರನ್ನ ಒಳಗೆ ಬಿಟ್ಟು ಕೊಳ್ಳುತ್ತಿದೆ. ಸಂವಿಧಾನ ರಕ್ಷಣೆಗೆ ಕಾಂಗ್ರೆಸ್ ಮುಂದಾಗಿದೆ. 25 ಜನರಿಗಾಗಿ ಸರ್ಕಾರ ನಡೆಸುತ್ತಿದ್ದಾರೆ. ಶ್ರೀಮಂತರ ಸಾಲ ಮನ್ನಾ ಮಾಡಲು ಆಗುತ್ತದೆ, ರೈತರ ಸಾಲ ಮನ್ನಾ ಯಾಕೆ ಮಾಡುತ್ತಿಲ್ಲ ಎನ್ನುತ್ತಿದ್ದಾರೆ ಎಂದರು.
ಜೆಡಿಎಸ್, ಬಿಜೆಪಿ ಮೈತ್ರಿ ಬಗ್ಗೆ ರಾಹುಲ್ ಗಾಂಧಿ ಟೀಕೆ
ಚುನಾವಣಾ ಬಾಂಡ್ ಕಾನೂನುಬಾಹಿರವೆಂದು ಸುಪ್ರೀಂಕೋರ್ಟ್ ಹೇಳಿದೆ. ಚುನಾವಣಾ ಬಾಂಡ್ ಮೂಲಕ ಕೋಟ್ಯಂತರ ರೂಪಾಯಿ ಸಂಗ್ರಹಿಸಲಾಗಿದೆ. ಇದು ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು. ವಿಧಾನಸಭಾ ಚುನಾವಣೆ ವೇಳೆ ಜೆಡಿಎಸ್‌ನ್ನು ಬಿ ಟೀಮ್ ಎಂದು ಹೇಳಿದ್ದೆ. ಆದರೆ ಈಗ ಜೆಡಿಎಸ್, ಬಿಜೆಪಿ ಇಬ್ಬರೂ ಪಾರ್ಟನರ್ ಆಗಿದ್ದಾರೆ ಎಂದು ಟೀಕೆ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.