ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಾಬಲ್ಯ ಕುಗ್ಗಿಸಲು ಡಿಕೆ ಶಿವಕುಮಾರ್ ತಂತ್ರ; ಮಂಡ್ಯದಲ್ಲಿ ತೀವ್ರಗೊಂಡ ಆಪರೇಷನ್ ಕಸರತ್ತು
Karnataka Politics and Operation Hasta; ಮಂಡ್ಯದಲ್ಲಿ ‘ಆಪರೇಷನ್ ಹಸ್ತ’ ಚಟುವಟಿಕೆ ಬಿರುಸಾಗಿದೆ. ಮಂಡ್ಯ ಭಾಗದ ಆಪರೇಷನ್ ಹಸ್ತದ ಜವಾಬ್ದಾರಿಯನ್ನು ಚಲುವರಾಯಸ್ವಾಮಿಗೆ ನೀಡಿರುವ ಡಿಸಿಎಂ ಡಿಕೆ ಶಿವಕುಮಾರ್, ಮಂಡ್ಯ ಹಾಗೂ ಮೈಸೂರು ಭಾಗದ ಶಾಸಕರು ಮತ್ತು ಮುಖಂಡರನ ಸೆಳೆಯಲು ಮುಂದಾಗಿದ್ದಾರೆ.
ಮಂಡ್ಯ, ಆಗಸ್ಟ್ 28: ಕರ್ನಾಟಕ ರಾಜಕೀಯದಲ್ಲಿ ‘ಆಪರೇಷನ್ ಹಸ್ತ (Operation Hasta)’ದ ಕೂಗು ಜೋರಾಗಿದ್ದು, ಬಿಜೆಪಿ ನಾಯಕರನ್ನು ಸೆಳೆಯಲು ಕಾಂಗ್ರೆಸ್ (Congress) ಮುಂದಾಗುತ್ತಿದೆ ಎಂಬುದು ಈವರೆಗೆ ದೊಡ್ಡ ಚರ್ಚೆಯ ವಿಷಯವಾಗಿತ್ತು. ಜತೆಗೆ ಜೆಡಿಎಸ್ ನಾಯಕರಿಗೂ ಆಡಳಿತ ಪಕ್ಷ ಗಾಳ ಹಾಕಿದೆ ಎಂಬುದು ವರದಿಯಾಗಿತ್ತು. ಆದರೆ, ಇದೀಗ ಮಂಡ್ಯ (Mandya) ಸೇರಿದಂತೆ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಪಕ್ಷವನ್ನು ಸಂಪೂರ್ಣ ಬಲಗುಂದುವಂತೆ ಮಾಡಲು ಉಪ ಮುಖ್ಯಮಂತ್ರಿ, ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ಎಂದೇ ಖ್ಯಾತಿವೆತ್ತಿರುವ ಡಿಕೆ ಶಿವಕುಮಾರ್ ತಂತ್ರ ಹೂಡಿದ್ದಾರೆ ಎಂಬುದು ತಿಳಿದುಬಂದಿದೆ. ಅದಕ್ಕಾಗಿ ಜಿಎಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ ಅವರ ಮಾಜಿ ಸ್ನೇಹಿತ, ಕೃಷಿ ಸಚಿವ ಚಲುವರಾಯಸ್ವಾಮಿ ಅವರಿಗೆ ಜವಾಬ್ದಾರಿ ವಹಿಸಿದ್ದಾರೆ.
ಇದರ ಬೆನ್ನಲ್ಲೇ, ಮಂಡ್ಯದಲ್ಲಿ ‘ಆಪರೇಷನ್ ಹಸ್ತ’ ಚಟುವಟಿಕೆ ಬಿರುಸಾಗಿದೆ. ಮಂಡ್ಯ ಭಾಗದ ಆಪರೇಷನ್ ಹಸ್ತದ ಜವಾಬ್ದಾರಿಯನ್ನು ಚಲುವರಾಯಸ್ವಾಮಿಗೆ ನೀಡಿರುವ ಡಿಸಿಎಂ ಡಿಕೆ ಶಿವಕುಮಾರ್, ಮಂಡ್ಯ ಹಾಗೂ ಮೈಸೂರು ಭಾಗದ ಶಾಸಕರು ಮತ್ತು ಮುಖಂಡರನ ಸೆಳೆಯಲು ಮುಂದಾಗಿದ್ದಾರೆ. ಇದರ ಬೆನ್ನಲ್ಲೇ, ಚಲುವರಾಯಸ್ವಾಮಿ ಅವರು ಜೆಡಿಎಸ್ನ ಮಾಜಿ, ಹಾಲಿ ಶಾಸಕರನ್ನು ಸೆಳೆಯಲು ಮುಂದಾಗಿದ್ದಾರೆ. ಈಗಾಗಲೇ ಇಬ್ಬರು ಮಾಜಿ ಶಾಸಕರು ಹಾಗೂ ಒಬ್ಬ ಹಾಲಿ ಶಾಸಕ ಸೇರಿದಂತೆ ಜೆಡಿಎಸ್ ಮುಖಂಡರನ್ನು ಸಂಪರ್ಕ ಮಾಡಲು ಚಲುವರಾಯಸ್ವಾಮಿ ಮುಂದಾಗಿದ್ದಾರೆ.
ಮಾಜಿ ಶಾಸಕ ಪುಟ್ಟರಾಜ್ ಸೇರಿ ಹಲವರ ಸಂಪರ್ಕ?
ಮಾಜಿ ಶಾಸಕ ಪುಟ್ಟರಾಜ್ ಸೇರಿದಂತೆ ಹಲವರನ್ನು ಸಂಪರ್ಕಿಸಲು ಚುವರಾಯಸ್ವಾಮಿ ಯತ್ನಿಸುತ್ತಿದ್ದಾರೆ. ಈ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಾಬಲ್ಯವನ್ನು ಸಂಪೂರ್ಣ ಕುಗ್ಗಿಸಲು ಕಾಂಗ್ರೆಸ್ ತಂತ್ರ ಹೂಡುತ್ತಿದೆ. ಸೂಕ್ತ ಸ್ಥಾನಮಾನದ ಭರವಸೆ ನೀಡಿ ಜೆಡಿಎಸ್ ನಾಯಕರ ಮನವಲಿಕೆ ಕಸರತ್ತು ನಡೆಸಲಾಗುತ್ತಿದೆ. ಕನಿಷ್ಠ 2 ರಿಂದ 3 ಮಾಜಿ ಶಾಸಕರು ಮತ್ತು ಪ್ರಮುಖ ಮುಖಂಡರನ್ನು ಕಾಂಗ್ರೆಸ್ನತ್ತ ಸೆಳೆಯಲು ಕಸರತ್ತು ಜೋರಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಕೃಷಿ ಕಾರ್ಮಿಕರ ಕೊರತೆಗೆ ಉಚಿತ ಗ್ಯಾರಂಟಿಗಳ ದೂರುತ್ತಿರುವ ಕಾಫಿ ಎಸ್ಟೇಟ್ ಮಾಲೀಕರು; ಕಾರ್ಮಿಕರ ಸಂಘಟನೆಗಳು ಹೇಳೋದೇನು?
ಮತ್ತೊಂದೆಡೆ, ಆಪರೇಷನ್ ಕಮಲ ಮೂಲಕ ಈ ಹಿಂದೆ ಬಿಜೆಪಿ ಸೇರಿದ್ದ ಪ್ರಮುಖ ನಾಯಕರನ್ನು ಪಕ್ಷಕ್ಕೆ ಸೆಳೆಯುವ ಯತ್ನವನ್ನೂ ಕಾಂಗ್ರೆಸ್ ಮುಂದುವರಿಸಿದೆ. ಲೋಕಸಭೆ ಚುನಾವಣೆ ದೃಷ್ಟಿಯಿಂದ ಈ ಯತ್ನಕ್ಕೆ ಆಡಳಿತ ಪಕ್ಷ ಕೈಹಾಕಿದೆ. ಎಸ್ಟಿ ಸೋಮಶೇಖರ್, ಶಿವರಾಮ ಹೆಬ್ಬಾರ್ ಸೇರಿದಂತೆ ಬಿಜೆಪಿಯ ಕೆಲವು ನಾಯಕರು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ರಾಜ್ಯದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ