ಮೋಡಬಿತ್ತನೆ ಸರ್ಕಾರದ ಮುಂದಿಲ್ಲ: ಸೆಪ್ಟೆಂಬರ್ ಮೊದಲ ವಾರದಲ್ಲಿ ಬರಗಾಲ ಘೋಷಣೆ ಸಾಧ್ಯತೆ: ಸಚಿವ ಎನ್ ಚಲುವರಾಯಸ್ವಾಮಿ
ಈ ಹಿಂದೆ ಮೋಡ ಬಿತ್ತನೆ ಮಾಡಿದಾಗ ಸೂಕ್ತ ಪ್ರತಿಫಲ ಸಿಕ್ಕಿಲ್ಲ. ಹಾಗಾಗಿ ಮೋಡಬಿತ್ತನೆ ಸರ್ಕಾರದ ಮುಂದೆ ಇಲ್ಲ. ಸೆಪ್ಟೆಂಬರ್ 4ರೊಳಗೆ ಬರ ಘೋಷಣೆ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದು, ಸೆಪ್ಟೆಂಬರ್ ಮೊದಲ ವಾರದಲ್ಲಿ ಬರಗಾಲ ಘೋಷಣೆ ಸಾಧ್ಯತೆ ಇದೆ ಎಂದು ಮಂಡ್ಯದಲ್ಲಿಕೃಷಿ ಖಾತೆ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.
ಮಂಡ್ಯ, ಆಗಸ್ಟ್ 28: ಕರ್ನಾಟಕ ರಾಜ್ಯದಲ್ಲಿ ಜೂನ್ ತಿಂಗಳಲ್ಲಿ ಮುಂಗಾರು ಮಳೆ (Rain) ಆಗಮನ ವಿಳಂಬವಾಗಿತ್ತು. ಹಾಗಾಗಿ ಅಲ್ಪ ಸ್ವಲ್ಪ ಮಳೆಯಾಗಿತ್ತು. ನಂತರ ಜುಲೈ ತಿಂಗಳಿನಲ್ಲಿ ವಾಡಿಕೆ ಮಳೆಯ ಸಾಮಾನ್ಯ ಪ್ರಮಾಣಕ್ಕಿಂತಾ ಶೇ. 3 ರಷ್ಟು ಹೆಚ್ಚುವರಿ ಮಳೆಯಾಗಿತ್ತು. ಅದರಲ್ಲಿಯೂ ಕಳರಾವಳಿ ಭಾಗದಲ್ಲಿ ಭಾರೀ ಮಳೆ ಆಗಿದ್ದು, ಜನರು, ರೈತರು ಸಂತಸಗೊಂಡಿದ್ದರು. ಆದರೆ ಆಗಸ್ಟ್ ತಿಂಗಳಲ್ಲಿ ರಾಜ್ಯದಲ್ಲಿ ಬರದ ಛಾಯೆ ಆವರಿಸಿದೆ. ಬಿಸಿಲಿನ ಬೇಗೆಗೆ ಜನರು ಕಂಗಾಲಾಗಿದ್ದಾರೆ. ಇವೆಲ್ಲದರ ಮಧ್ಯೆ ಮೋಡಬಿತ್ತನೆ ಎಂಬ ಮಾತು ಸಹ ಕೇಳಿಬರುತ್ತಿದ್ದು, ಈ ವಿಚಾರವಾಗಿ ಮಾತನಾಡಿರುವ ಕೃಷಿ ಖಾತೆ ಸಚಿವ ಎನ್. ಚಲುವರಾಯಸ್ವಾಮಿ, ಮೋಡಬಿತ್ತನೆ ಸರ್ಕಾರದ ಮುಂದೆ ಇಲ್ಲ ಎಂದಿದ್ದಾರೆ.
ಮಂಡ್ಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಮೋಡ ಬಿತ್ತನೆ ಮಾಡಿದಾಗ ಸೂಕ್ತ ಪ್ರತಿಫಲ ಸಿಕ್ಕಿಲ್ಲ. ಆಗಸ್ಟ್ 30ರೊಳಗೆ ಹಳ್ಳಿಗಳನ್ನು ವೀಕ್ಷಣೆ ಮಾಡಿ ವರದಿ ನೀಡಲು ಡಿಸಿಗಳಿಗೆ ತಿಳಿಸಿದ್ದೇವೆ. ಸೆಪ್ಟೆಂಬರ್ 4ರೊಳಗೆ ಬರ ಘೋಷಣೆ ಬಗ್ಗೆ ತೀರ್ಮಾನ ಮಾಡಿ, ಸೆಪ್ಟೆಂಬರ್ ಮೊದಲ ವಾರದಲ್ಲಿ ಬರಗಾಲ ಘೋಷಣೆ ಸಾಧ್ಯತೆ ಇದೆ ಎಂದು ತಿಳಿಸಿದರು.
ಅಪರೇಷನ್ ಹಸ್ತದ ಅವಶ್ಯಕತೆ ಇಲ್ಲ
ಅಪರೇಷನ್ ಹಸ್ತದ ಅವಶ್ಯಕತೆ ಇಲ್ಲ, ನಾವು 136 ಸ್ಥಾನ ಗೆದ್ದಿದ್ದೇವೆ. ನಮ್ಮ ಪಕ್ಷದ ತತ್ವ, ಸಿದ್ಧಾಂತ ಒಪ್ಪಿ ಬಂದರೆ ಕರೆದುಕೊಳ್ಳುತ್ತೇವೆ. ನಾವು ಯಾರ ಮನೆಯ ಬಾಗಿಲನ್ನೂ ತಟ್ಟಿಲ್ಲ. ಮಂಡ್ಯ ಜಿಲ್ಲೆಯ ಇಬ್ಬರು ಮಾಜಿ ಶಾಸಕರು ಪಕ್ಷಕ್ಕೆ ಬರಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಮನಗರ ರಾಜೀವ್ ಗಾಂಧಿ ವಿವಿ ಸ್ಥಳಾಂತರಕ್ಕೆ ವಿರೋಧ; ಕುಮಾರಸ್ವಾಮಿ ಹೋರಾಟವನ್ನು ಸ್ವಾಗತಿಸಿದ ಡಿಕೆ ಶಿವಕುಮಾರ್
ನಾವು ಕೊಟ್ಟ ಮಾತಿನಂತೆ ಈಗಾಗಲೇ 4 ಗ್ಯಾರಂಟಿ ಜಾರಿಗೊಳಿಸಿದ್ದೇವೆ. 2-3 ದಿನಗಳಲ್ಲಿ ಮನೆ ಯಜಮಾನಿ ಖಾತೆಗೆ 2 ಸಾವಿರ ಹೋಗುತ್ತದೆ. ಆ.1ರಂದೇ 5 ಲಕ್ಷ ರೂ. ಬಡ್ಡಿ ರಹಿತ ಸಾಲ ಕೊಡುವ ಯೋಜನೆ ಜಾರಿಗೊಳಿಸಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: ಯಾರೇ ಬಂದರೂ, ಕಾಂಗ್ರೆಸ್ ಪಕ್ಷದ ಸಿದ್ಧಾಂತ, ತತ್ವ ಒಪ್ಪಿ ಬರುವವರಿಗೆ ಸ್ವಾಗತ: ಸಿಎಂ ಸಿದ್ದರಾಮಯ್ಯ
ಕೆಆರ್ಎಸ್ ಡ್ಯಾಂನಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಇಂದು ಕಾವೇರಿ ನಿರ್ವಹಣಾ ಪ್ರಾಧಿಕಾರದ ಸಭೆ ನಿಗದಿಯಾಗಿದೆ. ಸೆಪ್ಟೆಂಬರ್ 1ರಂದು ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತೆ. ನೀರು ಬಿಡಲು ಸಾಧ್ಯವಿಲ್ಲವೆಂದು ಮನವರಿಕೆ ಮಾಡಿಕೊಟ್ಟಿದ್ದೇವೆ. ಮಳೆಯಾಗದ ಹಿನ್ನೆಲೆ ನೀರು ಬಿಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದೇವೆ ಎಂದರು.
ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಚಲುವರಾಯಸ್ವಾಮಿ
ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ 2018ರಲ್ಲಿ ಸಿಎಂ ಆದಾಗ ಹಲವು ಯೋಜನೆಗಳನ್ನ ಕೊಟ್ಟಿದ್ದರು. ಹೀಗಾಗಿ ಅವರ ಮಾತನ್ನ ಕೇಳಿ ನಾವು ಮಾಡಬೇಕಿದೆ. ನಾವು ಏನು ಕೊಟ್ಟಿದ್ದೇವೆ ಅದನ್ನ ಮಾಡುತ್ತೇವೆ. ಆದರೆ ಕುಮಾರಸ್ವಾಮಿ ಕೇಳಿದನ್ನ, ಬಿಜೆಪಿ ಅವರು ಹೇಳಿದನ್ನ ಮಾಡಲಿಕ್ಕೆ ಅಲ್ಲ. ನಾವು ಏನು ಭರವಸೆ ಕೊಟ್ಟಿದ್ದೇವೆ ಅದನ್ನ ಈಡೇರಿಸುತ್ತೇವೆ ಎಂದು ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:47 pm, Mon, 28 August 23