ಕೆರಗೋಡಿಗೆ ಕುಮಾರಸ್ವಾಮಿ ಆಗಮಿಸುತ್ತಿದ್ದಂತೆ ಪ್ರತಿಭಟನೆಯಿಂದ ಕಾಲ್ಕಿತ್ತ ಬಿಜೆಪಿ ನಾಯಕರು; ದೋಸ್ತಿಗಳಲ್ಲಿ ಬಿರುಕು?
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಸೀಟು ಹಂಚಿಕೆ ಮಾತುಕತೆ ಮುಂದುವರಿದಿದೆ. ಮಂಡ್ಯವನ್ನು ಜೆಡಿಎಸ್ಗೆ ಬಿಟ್ಟುಕೊಡಲು ಸಿದ್ಧರಿಲ್ಲದ ಹಾಗೂ ಸುಮಲತಾಗೆ ಬೆಂಬಲ ಸೂಚಿಸುತ್ತಿರುವ ಬಿಜೆಪಿಯ ಕೆಲವು ನಾಯಕರು ಹಾಗೂ ಕುಮಾರಸ್ವಾಮಿ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ಕೆರಗೋಡು ಗ್ರಾಮದಲ್ಲಿ ಇಂದು ನಡೆದ ಪ್ರತಿಭಟನೆಯಲ್ಲಿ ಈ ಮುಸುಕಿನ ಗುದ್ದಾಟ ಬಹಿರಂಗವಾಗಿದೆ.
ಮಂಡ್ಯ, ಜ.29: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಸೀಟು ಹಂಚಿಕೆ ಮಾತುಕತೆ ಮುಂದುವರಿದಿದೆ. ಮಂಡ್ಯ (Mandya) ಕ್ಷೇತ್ರದ ಟಿಕೆಟ್ಗಾಗಿ ಸಂಸದೆ ಸುಮಲತಾ ಹಾಗೂ ಹೆಚ್ಡಿ ಕುಮಾರಸ್ವಾಮಿ (HD Kumaraswamy) ನಡುವೆ ಪೈಪೋಟಿ ನಡೆಯುತ್ತಿದೆ. ಮಂಡ್ಯವನ್ನು ಜೆಡಿಎಸ್ಗೆ ಬಿಟ್ಟುಕೊಡಲು ಸಿದ್ಧರಿಲ್ಲದ ಹಾಗೂ ಸುಮಲತಾಗೆ ಬೆಂಬಲ ಸೂಚಿಸುತ್ತಿರುವ ಬಿಜೆಪಿಯ (BJP) ಕೆಲವು ನಾಯಕರು ಹಾಗೂ ಕುಮಾರಸ್ವಾಮಿ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ಇಂದು ಕೆರಗೋಡು (Keragodu) ಗ್ರಾಮದಲ್ಲಿ ನಡೆದ ಪ್ರತಿಭಟನೆಗೆ ಕುಮಾರಸ್ವಾಮಿ ಆಗಮಿಸುತ್ತಿದ್ದಂತೆ ಬಿಜೆಪಿ ನಾಯಕರು ಸ್ಥಳದಿಂದ ಕಾಲ್ಕಿತ್ತಿರುವುದು ಇದಕ್ಕೆ ಪುಷ್ಠಿ ಎಂಬಂತಿದೆ.
ಹೌದು, ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದ ಧ್ವಜಸ್ತಂಭದಲ್ಲಿ ಗ್ರಾಮಸ್ಥರು ಸೇರಿಕೊಂಡು ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆ ನೆನಪಿಗಾಗಿ ಹನುಮ ಧ್ವಜ ಏರಿಸಿದ್ದರು. ಈ ಧ್ವಜವನ್ನು ಕಾಂಗ್ರೆಸ್ ಸರ್ಕಾರ ತೆರವುಗೊಳಿಸಿದೆ. ಇದು ಹಿಂದೂ ಸಂಘಟನೆಗಳು, ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದ್ದು, ನಡೆಯುತ್ತಿರುವ ಭಾರೀ ಪ್ರತಿಭಟನೆಗೆ ವಿಪಕ್ಷಗಳಾದ ಬಿಜೆಪಿ ಜೆಡಿಎಸ್ ಸಾಥ್ ನೀಡಿದೆ.
ವಿಪಕ್ಷ ನಾಯಕ ಆರ್.ಅಶೋಕ್ ಕರೆಯಂತೆ ಇಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸಿದೆ. ಜೆಡಿಎಸ್ ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದೆ. ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರು ಭಾಗಿಯಾಗಿದ್ದರು. ಆದರೆ, ಹೆಚ್.ಡಿ.ಕುಮಾರಸ್ವಾಮಿ ಪ್ರತಿಭಟನೆಗೆ ಆಗಮಿಸುತ್ತಿದ್ದಂತೆ ಕೆಲವು ಬಿಜೆಪಿ ನಾಯಕರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಬಳಿ ಕುಮಾರಸ್ವಾಮಿ ಆಗಮಿಸುತ್ತಿದ್ದಂತೆ ಕಾರ್ಯಕರ್ತರ ಹರ್ಷೋದ್ಘಾರ ಆರಂಭವಾಯಿತು. ಶಿಳ್ಳೆ, ಚಪ್ಪಾಳೆ ಮೂಲಕ ಸಂಭ್ರಮಿಸಿದರು. ಕುಮಾರಸ್ವಾಮಿ ಅವರಿಗೆ ಕಾರ್ಯಕರ್ತರೊಬ್ಬರು ಕೇಸರಿ ಶಾಲು ಹಾಕಿದರು. ಇದನ್ನು ಧರಿಸಿದ ಕುಮಾರಸ್ವಾಮಿ ಅವರನ್ನು ಬಿಜೆಪಿ ಹಿರಿಯ ನಾಯಕ ಸಿಟಿ ರವಿ ಅವರು ವೇದಿಕೆಗೆ ಆಹ್ವಾನಿಸಿದರು. ಅದರಂತೆ ಕುಮಾರಸ್ವಾಮಿ ವೇದಿಕೆ ಬಳಿ ಬರುತ್ತಿದ್ದಂತೆ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ, ಮಾಜಿ ಶಾಸಕ ಪ್ರೀತಂಗೌಡ ಅಲ್ಲಿಂದ ತೆರಳಿದ್ದಾರೆ.
ಇದನ್ನೂ ಓದಿ: ಹನುಮ ಧ್ವಜ ತೆರವು ಪ್ರಕರಣ: ತಪ್ಪನ್ನು ತಿದ್ದಿಕೊಳ್ಳುವಂತೆ ಸಿದ್ದರಾಮಯ್ಯಗೆ ಎಚ್ಚರಿಕೆ ನೀಡಿದ ಕುಮಾರಸ್ವಾಮಿ
ವಿಪಕ್ಷ ನಾಯಕ ಅಶೋಕ್ ಅವರ ಕರೆ ಮೇರೆಗೆ ದೋಸ್ತಿಗಳು (ಬಿಜೆಪಿ-ಜೆಡಿಎಸ್) ಒಗ್ಗಟ್ಟಿನ ಪಾದಯಾತ್ರೆ, ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದರು. ಆದರೆ, ಕುಮಾರಸ್ವಾಮಿ ಪ್ರತಿಭಟನೆಗೆ ಎಂಟ್ರಿ ಕೊಡುತ್ತಿದ್ದಂತೆ ನಾರಾಯಣ್ ಗೌಡ, ಪ್ರೀತಂ ಗೌಡ ಎಕ್ಸಿಟ್ ಆಗಿರುವುದು ದೋಸ್ತಿಗಳಲ್ಲಿ ಉಂಟಾಗಿರುವ ಬಿರುಕಿಗೆ ಸಾಕ್ಷಿಯಾಗಿ ನಿಲ್ಲುವಂತಿದೆ.
ಮಂಡ್ಯ ಲೋಕಸಭಾ ಕ್ಷೇತ್ರದ ಮೇಲೆ ಜೆಡಿಎಸ್ ಕಣ್ಣಿಟ್ಟಿದೆ. ಇನ್ನೊಂದೆಡೆ, ಕುಮಾರಸ್ವಾಮಿ ಅವರನ್ನು ಕೇಂದ್ರ ಸರ್ಕಾರದಲ್ಲಿ ಮಂತ್ರಿ ಸ್ಥಾನ ನೀಡುಲು ಎನ್ಡಿಎ ನಿರ್ಧರಿಸಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಅಲ್ಲದೆ, ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವ ಒತ್ತಾಯಗಳು ಕೇಳಿಬಂದಿದ್ದರೂ ಅವರು ಸ್ಪರ್ಧೆಯಿಂದ ದೂರ ಸರಿದಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಸ್ಪರ್ಧಿಸಬೇಕು ಎಂದು ಜೆಡಿಎಸ್ ನಾಯಕರು ದಂಬಾಲು ಬಿದಿದ್ದಾರೆ.
ಆದರೆ, ಇದಕ್ಕೆ ಜಿಲ್ಲೆಯ ಬಿಜೆಪಿ ನಾಯಕರು ಒಪ್ಪುತ್ತಿಲ್ಲ. ಮಂಡ್ಯ ಕ್ಷೇತ್ರದ ಟಿಕೆಟ್ ಬಿಡಲು ಸುಮಲತಾ ಅವರಿಗೇ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಸಂಸದೆ ಸುಮಲತಾ ಅವರು ಮಂಡ್ಯ ಕ್ಷೇತ್ರದಿಂದಲೇ ಸ್ಪರ್ಧಿಸಬೇಕು. ಮಂಡ್ಯವನ್ನ ಜೆಡಿಎಸ್ ನಾಯಕರಿಗೆ ಯಾಕೆ ಕೊಡಬೇಕು ಎಂದು ನಾರಾಯಣಗೌಡ ಹೇಳಿಕೆ ನಿಡಿದ್ದರು. ಜಿಲ್ಲೆಯಲ್ಲಿ ಬಿಜೆಪಿ ಚಿಗುರುತ್ತಿದೆ, ನಾನು ಶಾಸಕ ಆಗಿದ್ದವನು. ಹೈಕಮಾಂಡ್ ಸುಮಲತಾ ಸ್ಪರ್ಧೆಗೆ ಅವಕಾಶ ಕೊಡಬೇಕು ಎಂದು ಒತ್ತಾಯಿಸಿದ್ದರು.
ಇದನ್ನೂ ಓದಿ: ಮಂಡ್ಯ ಧ್ವಜ ವಿವಾದ: ನಿಷೇಧಾಜ್ಞೆ ಹೇರಿರುವ ಕೆರಗೋಡುನಲ್ಲಿ ಅಹಿತಕರ ಶಾಂತಿ, ಬಿಗಿ ಪೊಲೀಸ್ ಬಂದೋಬಸ್ತ್
ಅಲ್ಲದೆ, ಜನವರಿ 25 ರಂದು ಸುಮಲತಾರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು. ಈ ವೇಳೆ ಬಿಜೆಪಿಯಿಂದ ಸ್ಪರ್ಧೆ ಮಾಡುವ ಬಗ್ಗೆ ಸುಮಲತಾ ಅಂಬರೀಶ್ ತೀರ್ಮಾನ ತೆಗೆದುಕೊಂಡಿದ್ದಾರೆ. ಅಲ್ಲದೇ ಮಂಡ್ಯ ಬಿಟ್ಟು ನನಗೆ ಬೇರೆ ಕಡೆ ಟಿಕೆಟ್ ನೀಡಿದರೆ ರಾಜಕೀಯವೇ ಬೇಡ ಎಂದಿದ್ದಾರೆ. ಭೇಟಿ ಬಗ್ಗೆ ಮಾತನಾಡಿದ್ದ ನಾರಾಯಣಗೌಡ, ಕುಮಾರಸ್ವಾಮಿಗೆ ಕೇಂದ್ರ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ ಆಗುತ್ತಿದೆ. ಈ ಬಗ್ಗೆ ನಮ್ಮ ವಿರೋಧ ಇಲ್ಲ. ಸುಮಲತಾ ಅವರು ಕುಮಾರಸ್ವಾಮಿ ಅವರ ಜೊತೆ ಮಾತುಕತೆ ಮಾಡಿದ್ದಾರೋ ಇಲ್ಲವೋ ನಮಗೆ ಗೊತ್ತಿಲ್ಲ. ಅದೇ ವಿಚಾರದ ಬಗ್ಗೆ ಮಾತನಾಡಲು ಬಂದಿದ್ದೇವೆ ಎಂದಿದ್ದರು.
ಇನ್ನೋಂದೆಡೆ, ಯಾರೇನೇ ಮೈತ್ರಿ ಮಾಡಿಕೊಂಡರೂ ನನ್ನ ನಿಲುವಿಗೆ ನಾನು ಬದ್ಧ ಎಂದು ಸುಮಲತಾ ಅವರು ಕಡ್ಡಿಮುರಿದ ಹಾಗೆ ಹೇಳಿಕೆ ನೀಡಿದ್ದರು. ಎಲ್ಲೂ ನನ್ನ ಬಗ್ಗೆ ಕಳಂಕ ಕಪ್ಪು ಚುಕ್ಕೆ ಇಲ್ಲ. ಪಾರ್ಲಿಮೆಂಟ್ ನಲ್ಲಿ ಮಾತಾಡಿರುವುದು ಎಲ್ಲರಿಗೂ ಗೊತ್ತಿದೆ. ಬಿಜೆಪಿನೇ ಮಂಡ್ಯ ಸೀಟು ಉಳಿಸಿಕೊಳ್ಳುತ್ತೆ ಅನಿಸುತ್ತದೆ. ನಾನು ಕಾಂಗ್ರೆಸ್ನಿಂದ ಸ್ಪರ್ಧಿಸಲು ಪ್ರಯತ್ನಿಸಿಲ್ಲ. ನನ್ನ ಬೆಂಬಲಿಗರಲ್ಲಿ ಇರುವ ಸುಮಾರು ಜನ ಕಾಂಗ್ರೆಸ್ ಕಾರ್ಯಕರ್ತರು ಅವರ ಪಕ್ಷಕ್ಕೆ ಕರೆಯುತ್ತಿದ್ದಾರೆ. ಆದರೆ, ನನಗೆ ಒಂದು ಕಮಿಟ್ ಮೆಂಟ್ ಇದೆ. ಮೋದಿ ನೇತೃತ್ವ ಸರಿ ಅನ್ನಿಸುತ್ತಿದೆ ಎಂದು ಹೇಳುವ ಮೂಲಕ ಬಿಜೆಪಿಯಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು.
ಕುಮಾರಸ್ವಾಮಿ ಅವರಿಗೆ ಮಂಡ್ಯದಲ್ಲಿ ಮಾತ್ರವಲ್ಲದೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಸ್ಪರ್ಧಿಸುವ ಒತ್ತಾಯಗಳು ಕೂಡ ಕೇಳಿಬರುತ್ತಿವೆ. ಅದಾಗ್ಯೂ, ಬಿಜೆಪಿ ಹೈಕಮಾಂಡ್ ಮಂಡ್ಯ ಟಿಕೆಟ್ ಯಾರಿಗೆ ಕೊಡುತ್ತದೆ ಎಂಬುದನ್ನು ಕಾದುನೋಡಬೇಕಿದೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ