AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಸ್​ಎಂ ಕೃಷ್ಣ ಚಿತೆಗೆ ಮೊಮ್ಮಗ ಅಗ್ನಿಸ್ಪರ್ಶ: ರಾಜಕೀಯ ಮುತ್ಸದಿ ಪಂಚಭೂತಗಳಲ್ಲಿ ಲೀನ

SM Krshna Cremation: ಕರ್ನಾಟಕ ಮಾಜಿ ಮುಖ್ಯಮಂತ್ರಿ, ಮಾಜಿ ರಾಜ್ಯಪಾಲ, ಮಾಜಿ ವಿದೇಶಾಂಗ ಸಚಿವ, ರಾಜಕೀಯ ಮುತ್ಸದಿ ಎಸ್​ಎಂ ಕೃಷ್ಣ ಅವರ ಅಂತ್ಯಕ್ರಿಯೆ ಸೋಮನಹಳ್ಳಿಯಲ್ಲಿ ನಡೆಯಿತು. ವೈದಿಕ ಪಂಡಿತರಾದ ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಅಂತಿಮ ವಿಧಿವಿಧಾನದ ಬಳಿಕ ಮೊಮ್ಮಗ ಅಮರ್ತ್ಯ ಹೆಗ್ಡೆ ಅವರು ತಮ್ಮ ಅಜ್ಜನ(ಎಸ್​ಎಂ ಕೃಷ್ಣ) ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಈ ಮೂಲಕ ಎಸ್​ಎಂ ಕೃಷ್ಣ ಇನ್ನು ನೆನಪು ಮಾತ್ರ.

ಎಸ್​ಎಂ ಕೃಷ್ಣ ಚಿತೆಗೆ ಮೊಮ್ಮಗ ಅಗ್ನಿಸ್ಪರ್ಶ: ರಾಜಕೀಯ ಮುತ್ಸದಿ ಪಂಚಭೂತಗಳಲ್ಲಿ ಲೀನ
ಎಸ್​ಎಂ ಕೃಷ್ಣ ಪಂಚಭೂತಗಳಲ್ಲಿ ಲೀನ
ರಮೇಶ್ ಬಿ. ಜವಳಗೇರಾ
|

Updated on:Dec 11, 2024 | 6:11 PM

Share

ಮಂಡ್ಯ, (ಡಿಸೆಂಬರ್ 11): ರಾಜಕೀಯ ಮುತ್ಸದಿ ಎಸ್​ಎಂ ಕೃಷ್ಣ ಅವರ ಅಂತ್ಯಕ್ರಿಯೆ ಸರ್ಕಾರಿ ಗೌರವಗಳೊಂದಿಗೆ ಹುಟ್ಟುರಾದ ಸೋಮನಹಳ್ಳಿಯಲ್ಲಿಂದು ನಡೆಯಿತು. ವೈದಿಕ ಪಂಡಿತರಾದ ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ  ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತಿಮ ವಿಧಿವಿಧಾನಗಳ ಬಳಿಕ ಮೊಮ್ಮಗ ಅಮರ್ತ್ಯ ಹೆಗ್ಡೆ, ತಮ್ಮ ಅಜ್ಜ ಎಸ್.ಎಂ.ಕೃಷ್ಣ ಅವರ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಈ ಮೂಲಕ ರಾಜಕೀಯ ಮುತ್ಸದಿ ಎಸ್​ಎಂಕೆ ಪಂಚಭೂತಗಳಲ್ಲಿ ಲೀನರಾದರು.

ಅಗ್ನಿ ಸ್ಪರ್ಶಕ್ಕೂ ಮುನ್ನ ಎಸ್​ಎಂ ಕೃಷ್ಣ ಅವರ ಚಿತೆಗೆ ಪತ್ನಿ ಪ್ರೇಮಾ, ಪುತ್ರಿಯರು, ಸಂಬಂಧಿಕರು ಗಂಧದ ಕಟ್ಟಿಗೆ ಇಟ್ಟು ವಿದಾಯ ಹೇಳಿದರು.  ಬಳಿಕ ಮಂಡ್ಯ ಜಿಲ್ಲಾ ಪೊಲೀಸ್‌ ಇಲಾಖೆಯಿಂದ ಮೃತರ ಗೌರವಾರ್ಥವಾಗಿ ಮೂರು ಸುತ್ತು  ಕುಶಾಲತೋಪು ಸಿಡಿಸಿ ಗೌರವ ಸಲ್ಲಿಸಲಾಯಿತು. ಪಾರ್ಥಿವ ಶರೀರದ ಮೇಲೆ ಹೊದಿಸಲಾಗಿದ್ದ ತ್ರಿವರ್ಣ ಧ್ವಜವನ್ನು ಗೌರವ ಪೂರ್ವಕವಾಗಿ ಎಸ್.ಎಂ.ಕೃಷ್ಣ ಅವರ ಪತ್ನಿ ಪ್ರೇಮಾ ಅವರಿಗೆ ಹಸ್ತಾಂತರಿಸಲಾಯ್ತು. ನಂತರ ಅಂತಿಮವಾಗಿ ಮೊಮ್ಮಗ ಅಮರ್ತ್ಯ ಹೆಗ್ಡೆ ಎಸ್.ಎಂ.ಕೃಷ್ಣ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.

ಇದನ್ನೂ ಓದಿ: ವಿಡಿಯೋ: ರಾಜಕೀಯ ಗುರುವಿಗೆ ಹೆಗಲು ಕೊಟ್ಟು ವಿದಾಯ ಹೇಳಿದ ಡಿಕೆ ಬ್ರದರ್ಸ್

ಅಗ್ನಿ ಸಂಸ್ಕಾರದ ಮೂಲಕ ಪಂಚಗವ್ಯಾದಿಂದ ಶುದ್ಧೀಕರಣ ಮಾಡಲಾಯಿತು. ಹಾಗೇ ದೋಷ ನಿವಾರಣೆಗೆ ಗರುಡ ಪೂಜಾ ಕಾರ್ಯ, ದೋಷಗಳ ಪ್ರಾಯಶ್ಚಿತ್ತ ಮಾಡಲಾಯಿತು. ಇನ್ನು ಚಿತೆಗೆ 1 ಟನ್ ಶ್ರೀಗಂಧದ ಕಟ್ಟಿಗೆ ಜತೆ  ಇತರೆ ಕಟ್ಟಿಗೆ ಹಾಗೂ 50 ಕೆಜಿ ತುಪ್ಪದಿಂದ ಅಭಿಷೇಕ ಕ್ರಿಯೆ ಕಾರ್ಯ ಮಾಡಲಾಯ್ತು.

ಇದಕ್ಕೂ ಮೊದಲು ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸ್ಪೀಕರ್‌ ಯು.ಟಿ ಖಾದರ್‌, ನಿರ್ಮಲಾನಂದನಾಥ ಸ್ವಾಮೀಜಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಎಚ್​ಡಿ ಕುಮಾರಸ್ವಾಮಿ, ಶಾಸಕರು, ಸಚಿವರು ಸೇರಿದಂತೆ ಹಲವು ರಾಜಕಾರಣಿಗಳು, ಮಠಾಧೀಶರು, ಸ್ವಾಮೀಜಿಗಳು ಸರ್ಕಾರಿ ಉನ್ನತ ಅಧಿಕಾರಿಗಳು ಎಸ್​ಎಂ ಕೃಷ್ಣ ಅವರಿಗೆ  ಪುಷ್ಪ ನಮನ ಸಲ್ಲಿಸಿ ಅಗಲಿದ ನಾಯಕನಿಗೆ ವಿದಾಯ ಹೇಳಿದರು.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 5:33 pm, Wed, 11 December 24