AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಲ್ಕೇ ದಿನದಲ್ಲಿ ಕೆಆರ್​​​ಎಸ್​​ಗೆ ಹರಿದುಬಂತು 11 ಅಡಿ ನೀರು: ಹಲವು ವರ್ಷಗಳ ಬಳಿಕ ಮೇ ತಿಂಗಳಲ್ಲೇ 100 ಅಡಿ ಭರ್ತಿ

ಕಳೆದ ನಾಲ್ಕು ದಿನದ ಹಿಂದಷ್ಟೇ ಮೈಸೂರು ಭಾಗದ ಜೀವನಾಡಿ ಕೆಆರ್ ಎಸ್ ಡ್ಯಾಂ ನೀರಿನ ಮಟ್ಟ 89 ಅಡಿಗೆ ಕುಸಿದಿತ್ತು.‌ ಬರಿದಾಗುತ್ತಿದ್ದ ಜಲಾಶಯ ನೋಡೋದಕ್ಕೆ ಕೆರೆಯಂತೆ ಕಾಣುತ್ತಿತ್ತು, ಇದೀಗ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದರಿಂದ ಡ್ಯಾಂಗೆ ‌ಜೀವ‌‌ ಕಳೆ ಬಂದಿದೆ. ಇದರಿಂದ ಮಂಡ್ಯ ಜಿಲ್ಲೆಯ ರೈತರ ಸಂತಸಕ್ಕೆ‌ ಕಾರಣವಾಗಿದ್ರೆ, ಮತ್ತೊಂದೆಡೆ ಸಿಲಿಕಾನ್ ಸಿಟಿ ಬೆಂಗಳೂರಿನ ಆತಂಕ‌ ದೂರ ಮಾಡಿದೆ. ಹಾಗಾದ್ರೆ, ಸದ್ಯ ಜಲಾಶಯದಲ್ಲಿ ನೀರು ಎಷ್ಟಿದೆ? ಎನ್ನುವ ವಿವರ ಇಲ್ಲಿದೆ.

ನಾಲ್ಕೇ ದಿನದಲ್ಲಿ ಕೆಆರ್​​​ಎಸ್​​ಗೆ ಹರಿದುಬಂತು 11 ಅಡಿ ನೀರು: ಹಲವು ವರ್ಷಗಳ ಬಳಿಕ ಮೇ ತಿಂಗಳಲ್ಲೇ 100 ಅಡಿ ಭರ್ತಿ
KRS
ದಿಲೀಪ್​, ಚೌಡಹಳ್ಳಿ
| Updated By: ರಮೇಶ್ ಬಿ. ಜವಳಗೇರಾ|

Updated on: May 30, 2025 | 7:48 PM

Share

ಮಂಡ್ಯ, (ಮೇ 30): ಸಿಲಿಕಾನ್ ಸಿಟಿ ಬೆಂಗಳೂರಿಗೆ (Bengaluru) ಜೀವ ಜಲ‌ ಪೂರೈಸುವ ಕೆಆರ್ ಎಸ್ ಡ್ಯಾಂಗೆ (KRS Reservoir) ಜೀವ ಕಳೆ ಬಂದಿದೆ. ಹಲವು ವರ್ಷಗಳ ಬಳಿಕ ಮೇ ತಿಂಗಳಲ್ಲೇ ಭಾರೀ ಪ್ರಮಾಣದ ಒಳ ಹರಿವು ಬರುತ್ತಿದೆ. ಕಳೆದೊಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ (Rain) ಕೇವಲ ನಾಲ್ಕೇ ದಿನದಲ್ಲಿ ಕೆಆರ್‌ಎಸ್ (KRS) ಜಲಾಶಯಕ್ಕೆ 11 ಅಡಿ ನೀರು ಹರಿದುಬಂದಿದೆ. ಮಂಡ್ಯ(Mandya) ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಅಣೆಕಟ್ಟೆಗೆ ಭಾರೀ ಪ್ರಮಾಣದ ಒಳಹರಿವು ಬರುತ್ತಿದ್ದು ಜಲಾಶಯ 100 ಅಡಿ ಭರ್ತಿಯಾಗಿದೆ.

ಕಳೆದ ನಾಲ್ಕು ದಿನಗಳ ಹಿಂದೆ ಕೇವಲ 150 ಕ್ಯೂಸೆಕ್ ಒಳಹರಿವು ಕೆಆರ್‌ಎಸ್ ಜಲಾಶಯಕ್ಕೆ ಬರ್ತಿತ್ತು. ಸದ್ಯ ಕೊಡಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಒಳ ಹರಿವಿನ ಪ್ರಮಾಣ 19,488 ಕ್ಯೂಸೆಕ್ ಗೆ‌ ಏರಿಕೆಯಾಗಿದೆ. ಅಲ್ಲದೆ 4 ದಿನದಲ್ಲೆ ಜಲಾಶಯ ನೀರಿನ ಮಟ್ಟ 11 ಅಡಿ ಏರಿಕೆಯಾಗಿದೆ‌. ಇದರೊಂದಿಗೆ ಜಲಾಶಯದಲ್ಲಿ 100 ಅಡಿ ನೀರು ಸಂಗ್ರವಾದಂತಾಗಿದೆ.

ಇದನ್ನೂ ಓದಿ: ಜಲಪಾತಗಳಿಗೆ ಜೀವ ಕಳೆ ತಂದ ಮುಂಗಾರು: ಪ್ರವಾಸಿಗರನ್ನ ಸೆಳೆಯುತ್ತಿದೆ ಮಾಗೋಡು ಫಾಲ್ಸ್

ಸಾಮಾನ್ಯವಾಗಿ ‌ಜೂನ್‌ ತಿಂಗಳಲ್ಲಿ‌ ಡ್ಯಾಂ ಒಳ ಹರಿವು ಹೆಚ್ಚಾಗುತ್ತಿತ್ತು. ಕೆಲವೊಮ್ಮೆ ಜೂನ್ ನಲ್ಲಿ ಮಳೆ‌ ಕೈಕೊಟ್ಟಿದ್ದೂ ಉಂಟು. ಆದರೆ ಹಲವು ವರ್ಷಗಳ ಬಳಿಕ ಮೇ ತಿಂಗಳಿನಲ್ಲೇ 19 ಸಾವಿರ ಕ್ಯೂಸೆಕ್ ನೀರು ಹರಿದು ಬರ್ತಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ‌ ಮಳೆ ಮುಂದುವರೆದಿರೋದು‌ ನೋಡಿದ್ರೆ ಜೂನ್ 2 ನೇ ವಾರದಲ್ಲೇ ಜಲಾಶಯ ಸಂಪೂರ್ಣ ಭರ್ತಿಯಾಗುವ ನಿರೀಕ್ಷೆಗಳಿವೆ.

ಮುಂಗಾರು ಆರಂಭದಲ್ಲಿಯೇ ಉತ್ತಮ ಮಳೆಯಾಗುತ್ತಿರುವುದು ರೈತರ ಮುಖದಲ್ಲಿ ಮಂದಹಾಸ ತಂದಿದೆ. ಹಲವು ವರ್ಷಗಳ ಬಳಿಕ ಮೇ ತಿಂಗಳಿನಲ್ಲಿ ಈ ಮಟ್ಟದ ಒಳಹರಿವು ಇದೆ. ಕಳೆದ ನಾಲ್ಕು ದಿನದ ಹಿಂದೆ ನೀರಿನ ಮಟ್ಟ 89 ಅಡಿಗೆ ಕುಸಿದಿತ್ತು. ಇದರಿಂದ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುತ್ತೆ ಎಂದು ಅಲ್ಲಿನ ಜನರು ಆತಂಕಕ್ಕೊಳಗಾಗಿದ್ದರು.

124.80 ಅಡಿ ಗರಿಷ್ಠ ಮಟ್ಟ ಸಂಗ್ರಹ ಸಾಮರ್ಥ್ಯ ಹೊಂದಿರುವ ಕೆಆರ್‌ಎಸ್‌ನಲ್ಲಿ 100.10 ಅಡಿ ನೀರಿದೆ. 49.452 ಟಿಎಂಸಿ (TMC) ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿದ್ದು ಸದ್ಯ 22.222 ಟಿಎಂಸಿ ನೀರು ಸಂಗ್ರಹವಾಗಿದೆ. ಸದ್ಯ 19,448 ಕ್ಯುಸೆಕ್ ಒಳಹರಿವು ಇದ್ದರೆ, 670 ಕ್ಯೂಸೆಕ್ ಹೊರಹರಿವು ಇದೆ.

ಒಟ್ಟಿನಲ್ಲಿ ಮೇ ತಿಂಗಳಲ್ಲೇ ಕಾವೇರಿ ಒಡಲಿಗೆ ಜೀವಕಳೆ‌ ಬಂದಿದ್ದು, ಮಂಡ್ಯ ಜಿಲ್ಲೆಯ ರೈತರ ಸಂತಸಕ್ಕೆ‌ ಕಾರಣವಾಗಿದ್ರೆ, ಮತ್ತೊಂದೆಡೆ ಸಿಲಿಕಾನ್ ಸಿಟಿ ಬೆಂಗಳೂರಿನ ಆತಂಕ‌ ದೂರ ಮಾಡಿದೆ.