2019ರ ಚುನಾವಣೆಯಲ್ಲಿ ಚಲುವಣ್ಣ ಸಹಾಯ ಮಾಡಿದ್ರು: ಅಚ್ಚರಿ ಮೂಡಿಸಿದ ದರ್ಶನ್ ಹೇಳಿಕೆ
ಮಂಡ್ಯ ಲೋಕಸಭಾ ಕ್ಷೇತ್ರ ಚುನಾವಣೆ ಸಾಕಷ್ಟು ಚರ್ಚೆಯಲ್ಲಿದೆ. ಕಾಂಗ್ರೆಸ್ನಿಂದ ಸ್ಟಾರ್ ಚಂದ್ರು ಸ್ಪರ್ಧಿಸಿದ್ದರೇ, ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಸ್ವರ್ಧಿಸಿದ್ದಾರೆ. ಈ ನಡುವೆ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಇಳಿದ ಚಾಲೆಂಜಿಂಗ್ ಸ್ಟಾರ್ ದರ್ಶನ ಅವರ ಹೇಳಿಕೆ ರಾಜಕೀಯ ಪಡಸಾಲೆಯಲ್ಲಿ ಚರ್ಚೆಗೆ ಕಾರಣವಾಗಿದೆ.
ಮಂಡ್ಯ ಏಪ್ರಿಲ್ 23: ಚುನಾವಣೆ ಹೊತ್ತಿನಲ್ಲಿ ಜನಪ್ರತಿನಿಧಿಗಳ ನಡೆ-ನುಡಿ ಚರ್ಚೆಗೆ ಬರುವುದು ಸರ್ವೆ ಸಾಮಾನ್ಯ. ಈ ಬಾರಿಯ 2024ರ ಲೋಕಸಭೆ ಚುನಾವಣೆಯಲ್ಲೂ (Lok Sabha Election) ಕೂಡ ಇದು ಮರುಕಳಿಸಿದೆ. ಆದರೆ ಈ ಬಾರಿ ಸ್ಟಾರ್ ನಟನ ಹೇಳಿಕೆ ಮತ್ತು ನಡೆ ಚರ್ಚೆಗೆ ಗ್ರಾಸವಾಗಿದೆ. ಮಂಡ್ಯ ಲೋಕಸಭಾ ಕ್ಷೇತ್ರದಿಂದ (Mandya Lok Sabha Constituency) ಕಾಂಗ್ರೆಸ್ (Congress) ಅಭ್ಯರ್ಥಿ ಸ್ಟಾರ್ ಚಂದ್ರು (Star Chandru) ಪರವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ ಮಾಡುತ್ತಿದ್ದಾರೆ. ಸಹಜವಾಗಿ ಇದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಬಿಜೆಪಿ ನಾಯಕಿ ಸುಮಲತಾ ಅಂಬರೀಶ್ ಅವರ ಬೆಂಬಲಿಗ ನಟ ದರ್ಶನ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ. ಪ್ರಚಾರದ ವೇಳೆ ನಟ ದರ್ಶನ (Darshan) ಆಡಿದ ಮಾತು ಶಾಕ್ ನೀಡಿದೆ.
ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರವಾಗಿ ನಟ ದರ್ಶನ ಇಂದು (ಏ.23) ಮಂಡ್ಯ ಜಿಲ್ಲೆಯ ನಾಗಲಮಂಗಲ ತಾಲೂಕಿನ ಬೆಳ್ಳೂರು ಗ್ರಾಮದಲ್ಲಿ ರೋಡ್ ಶೋ ನಡೆಸಿದರು. ಪ್ರಚಾರದ ಭಾಷಣದ ವೇಳೆ ಸಚಿವ ಚಲುವರಾಯಸ್ವಾಮಿ ಕೈ ಬಲಪಡಿಸಲು ಸ್ಟಾರ್ಚಂದ್ರುಗೆ ಮತ ನೀಡಿ. “2019ರ ಚುನಾವಣೆಯಲ್ಲಿ ಚಲುವಣ್ಣ ನಮಗೆ ಸಹಾಯ ಮಾಡಿದ್ದರು. ಆ ಋಣವನ್ನು ನಾನು ಸಾಯುವವರೆಗೂ ಮರೆಯಲ್ಲ. ಚಲುವಣ್ಣ ಮಾಡಿದ ಸಹಾಯ 7 ಜನ್ಮವಾದರೂ ತೀರಿಸಲು ಆಗಲ್ಲ. ಇದೇ ನಾನು ಇಂದು ಕಾಂಗ್ರೆಸ್ ಪರ ಬಂದಿರುವುದಕ್ಕೆ ಒಂದೇ ಕಾರಣ” ಎಂಬ ನಟ ದರ್ಶನ ಅವರ ಹೇಳಿಕೆ, 2019ರ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಗೆಲ್ಲಲು ಕಾಂಗ್ರೆಸ್ ಮುಖಂಡ, ಸಚಿವ ಚಲುವರಾಯಸ್ವಾಮಿ ಸಹಾಯ ಮಾಡಿದ್ರಾ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.
ಇದನ್ನೂ ಓದಿ: ‘ಏನೇನೋ ಅಂದ್ಕೊಬೇಡಿ’; ಮಂಡ್ಯದಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಕ್ಕೆ ದರ್ಶನ್ ಸ್ಪಷ್ಟನೆ
ದರ್ಶನ ಅವರ ಈ ಹೇಳಿಕೆ ಚರ್ಚೆಗೆ ಕಾರಣವಾಗಿದೆ. ಹೌದು 2019ರಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಇತ್ತು. 2019ರ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಪುತ್ರ ನಿಖಿಲ ಕುಮಾರಸ್ವಾಮಿ ಸ್ಪರ್ಧಿಸಿದ್ದರು. ನಿಖಿಲ ಕುಮಾರಸ್ವಾಮಿ ವಿರುದ್ಧ ಪಕ್ಷೇತರವಾಗಿ ಸುಮಲತಾ ಅಂಬರೀಶ್ ಸ್ಪರ್ಧಿಸಿದರು. ಸುಮಲತಾ ಅಂಬರೀಶ್ ಅವರ ಪರವಾಗಿ ನಟ ದರ್ಶನ ಕೂಡ ಪ್ರಚಾರಕ್ಕೆ ಇಳಿದಿದ್ದರು. ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ಹಣಾಹಣಿಯಿಂದ ಕೂಡಿತ್ತು. ಈ ಚುನಾವಣೆಯಲ್ಲಿ ಬಿಜೆಪಿ ಸುಮಲತಾ ಅಂಬರೀಶ ಅವರಿಗೆ ಬೆಂಬಲ ವ್ಯಕ್ತಪಡಿಸಿತ್ತು. ಅಂತಿಮವಾಗಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಗೆದ್ದರು. ಸುಮಲತಾ ಅಂಬರೀಶ್ ಅವರ ಗೆಲವಿಗೆ ಕೇವಲ ಅನುಕಂಪದ ಅಲೆ, ಬಿಜೆಪಿ ಬೆಂಬಲ, ಸ್ಟಾರ್ ನಟರ ಪ್ರಚಾರ ಮಾತ್ರಚಲ್ಲದೆ, ಕಾಂಗ್ರೆಸ್ ನಾಯಕ ಚಲುವರಾಯಸ್ವಾಮಿ ಬೆಂಬಲ ಕೂಡ ಸುಮಲತಾ ಗೆಲುವಿಗೆ ಸಹಾಯವಾಯ್ತು ಎಂಬ ಮಾತಿಗೆ ನಟ ದರ್ಶನ ಹೇಳಿಕೆ ಪುಷ್ಠಿ ನೀಡುತ್ತಿದೆ.
ನರೇಂದ್ರಣ್ಣ ಮಾಡಿದ ಸಹಾಯ ನೆನಪಿಸಿಕೊಳ್ಳುತ್ತೇನೆ
ಇನ್ನು ನಟ ದರ್ಶನ ಗುರುವಾರ (ಏ.18) ರಂದು ಸ್ಟಾರ್ ಚಂದ್ರು ಅವರ ಪರ ಪ್ರಾಚಾರ ಮಾಡುತ್ತಾ, “ಐದು ವರ್ಷಗಳ ಹಿಂದೆ ನರೇಂದ್ರಣ್ಣ ಮಾಡಿದ ಸಹಾಯ ನೆನಪಿಸಿಕೊಳ್ಳುತ್ತೇನೆ” ಎಂದು ಹೇಳಿದ್ದರು. ಈ ಮೂಲಕ ಕಾಂಗ್ರೆಸ್ ಶಾಸಕ ನರೇಂದ್ರ ಸ್ವಾಮಿ ಕೂಡ ಸುಮಲತಾ ಅವರಿಗೆ ಬೆಂಬಲಿಸಿದ್ದರಾ ಎಂಬ ಪ್ರಶ್ನೆ ಉದ್ಭವವಾಗಿದೆ. ಈ ಮೂಲಕ ಕಾಂಗ್ರೆಸ್ ನಾಯಕರು ಮೈತ್ರಿ ಧರ್ಮಕ್ಕೆ ಎರಡು ಬಗೆದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರಿಗೆ ಬೆಂಬಲ ಸೂಚಿಸಿದ್ದರು ಎಂದು ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:11 pm, Tue, 23 April 24