
ಮಂಡ್ಯ, ಮೇ 25: ಮಂಡ್ಯ (Mandya) ಜಿಲ್ಲೆಯ ನಾಗಮಂಗಲ ತಾಲೂಕು ಕಂದಾಯ ಇಲಾಖೆಯಲ್ಲಿ ನಡೆದಿರುವ ಬಗರ್‌ಹುಕುಂ ಭೂ ಮಂಜೂರಾತಿ ಹಗರಣದ ಲೋಕಾಯುಕ್ತ ತನಿಖೆ ವೇಳೆ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಶಾಮೀಲಾಗಿ ನಡೆಸಿದ್ದ ಭೂ ಮಾಫಿಯಾದ ಜಾಲವು ಬರೋಬ್ಬರಿ 1,000 ಎಕರೆ ಸರ್ಕಾರಿ ಜಮೀನನ್ನು ನುಂಗಿ ನೀರು ಕುಡಿದಿರುವುದು ತನಿಖೆಯಲ್ಲಿ ಬಯಲಾಗಿದೆ. ಅರ್ಹತೆ ಇಲ್ಲದ ಸ್ಥಳೀಯ ಪ್ರಭಾವಿಗಳಿಗೆ, ಹಣ ಕೊಟ್ಟ ಖದೀಮರಿಗೆ ಹಾಗೂ ಹೊರ ರಾಜ್ಯದ ವ್ಯಕ್ತಿಗಳಿಗೂ ಕಾನೂನು ಬಾಹಿರವಾಗಿ ನಕಲಿ ದಾಖಲೆ ಸೃಷ್ಟಿಸಿ ಮಂಜೂರಾತಿ ಖಾತೆ ಮಾಡಿಕೊಡಲಾಗಿತ್ತು ಎಂಬುದನ್ನು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಬಹಿರಂಗಪಡಿಸಿದ್ದಾರೆ.
ಈ ಮಹಾ ವಂಚನೆಯಲ್ಲಿ ಭಾಗಿಯಾಗಿರುವ ಇಲಾಖೆಯ ಸಣ್ಣ ನೌಕರರಿಂದ ಹಿಡಿದು ಉನ್ನತ ಅಧಿಕಾರಿಗಳವರೆಗೂ ಯಾರನ್ನೂ ಬಿಡುವುದಿಲ್ಲ, ಎಲ್ಲರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಉಪಲೋಕಾಯುಕ್ತರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ದೇಶದ ಅತ್ಯಂತ ಭ್ರಷ್ಟ ರಾಜ್ಯಗಳ ಪೈಕಿ ಕರ್ನಾಟಕಕ್ಕೆ 5ನೇ ಸ್ಥಾನ: ಉಪಲೋಕಾಯುಕ್ತ ನ್ಯಾ. ಬಿ. ವೀರಪ್ಪ
ಈ ಹಿಂದೆ ಜನವರಿಯಲ್ಲಿ ಲೋಕಾಯುಕ್ತ ಪೊಲೀಸರು ನಾಗಮಂಗಲ ತಾಲೂಕು ಕಚೇರಿ ಸೇರಿದಂತೆ ಹಲವೆಡೆ ಏಕಕಾಲದಲ್ಲಿ ದಾಳಿ ನಡೆಸಿ ದಾಖಲೆಗಳನ್ನು ಜಪ್ತಿ ಮಾಡಿ ಐವರನ್ನು ಬಂಧಿಸಿದ್ದರು. ತದನಂತರ ಹಗರಣದ ತೀವ್ರತೆ ಹೆಚ್ಚಿರುವ ಅನುಮಾನ ಕಂಡುಬಂದುದರಿಂದ ವಿಸ್ತೃತ ತನಿಖೆಗೆ ಆದೇಶಿಸಲಾಗಿತ್ತು. ಅಧಿಕಾರಿಗಳು ಮೂಲ ದಾಖಲೆಗಳ ಪುಟಗಳನ್ನೇ ಹರಿದು, ತಿದ್ದುಪಡಿ ಮಾಡಿ ಈ ಗೋಲ್‌ಮಾಲ್ ಎಸಗಿದ್ದಾರೆ. ಸದ್ಯ ಎಎಸ್‌ಪಿ ನೇತೃತ್ವದ ತಂಡ ಸಂಪೂರ್ಣ ವರದಿಯನ್ನು ಸಿದ್ಧಪಡಿಸುತ್ತಿದ್ದು, ಮತ್ತಷ್ಟು ಭ್ರಷ್ಟ ಅಧಿಕಾರಿಗಳಿಗೆ ಜೈಲು ಫಿಕ್ಸ್ ಎನ್ನಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:31 am, Mon, 25 May 26