AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಡಾ ಹಗರಣದಲ್ಲಿ ನೇರವಾಗಿ ಸಿಎಂ ಸಿದ್ದರಾಮಯ್ಯ ಭಾಗಿ: ಪ್ರಲ್ಹಾದ್ ಜೋಶಿ

ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ಹಾಗೂ ಮುಡಾ ಹಗರಣ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿರುವ ಅವರು, ಕಾಂಗ್ರೆಸ್ ಸರ್ಕಾರ ಕಡುಭ್ರಷ್ಟ ಎಂದು ಕಿಡಿಕಾರಿದ್ದಾರೆ.

ಮುಡಾ ಹಗರಣದಲ್ಲಿ ನೇರವಾಗಿ ಸಿಎಂ ಸಿದ್ದರಾಮಯ್ಯ ಭಾಗಿ: ಪ್ರಲ್ಹಾದ್ ಜೋಶಿ
ಪ್ರಲ್ಹಾದ್ ಜೋಶಿ
ಶಿವಕುಮಾರ್ ಪತ್ತಾರ್
| Updated By: Ganapathi Sharma|

Updated on: Jul 13, 2024 | 12:55 PM

Share

ಹುಬ್ಬಳ್ಳಿ, ಜುಲೈ 13: ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ಮುಡಾದಲ್ಲಿ ಹಗರಣ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಅಹಿಂದ ಅಹಿಂದ ಎಂದುಕೊಂಡು ಎಸ್​ಸಿ ಎಸ್​​ಟಿ ಹಣ ಗ್ಯಾರಂಟಿ ಯೋಜನೆಗಳಿಗೆ ಉಪಯೋಗ ಮಾಡಿದ್ದಾರೆ. ಸಿದ್ದರಾಮಯ್ಯ ಕಡುಭ್ರಷ್ಟ ಅಪ್ರಾಮಾಣಿಕ ಎಂದು ಟೀಕಿಸಿದರು.

ಪ್ರಧಾನಿ ಮೋದಿ, ಜೋಶಿ ರಾಜೀನಾಮೆ ಕೊಡಬೇಕು ಎಂಬ ಲಾಡ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ಇಂತಹ ಚಿಲ್ಲರೆ ಹೇಳಿಕೆಗಳಿಗೆ ಮತ್ತು ಅಸಂಬದ್ಧ ಹೇಳಿಕೆಗಳಿಗೆ ಉತ್ತರ ಕೊಡಲ್ಲ. ಮೋದಿ ಏನು ಸೈಟ್ ತಗೊಂಡಿದ್ದಾರೆಯೇ ಎಂದು ಪ್ರಶ್ನಿಸಿದರು.

ಇದು ದಪ್ಪ ಚರ್ಮದ ಸರ್ಕಾರ ಎಂದು ಟೀಕಿಸಿದ ಜೋಶಿ, ಸಿದ್ದರಾಮಯ್ಯ ರಾಜೀನಾಮೆ ಕೊಡಲೇಬೇಕು ಎಂದು ಆಗ್ರಹಿಸಿದ್ದಾರೆ.

ಒಂದೂವರೆ ವರ್ಷದಲ್ಲಿ ಸರ್ಕಾರ ಭಯಂಕರ ಬ್ರಷ್ಟಾಚಾರ ಎಸಗಿದೆ. ರಾಹುಲ್ ಗಾಂಧಿ, ಇನ್ನಿತರ ನಾಯಕರಿಂದ ಭಯಂಕರ ಬ್ರಷ್ಟಾಚಾರ ಶುರುವಾಗಿದೆ. ಸಾವಿರಾರು ಕೋಟಿ ಸಂಗ್ರಹ ಮಾಡಿ ತೆಲಂಗಾಣಕ್ಕೆ ಆಗಾಗ ಕೊಟ್ಟಿದ್ದಾರೆ ಎಂದು ಆರೋಪಿಸಿದಾಗ ಕಾಂಗ್ರೆಸ್ ಆಕ್ಷೇಪ ಮಾಡಿತ್ತು. ಒಂದು ಸಾವಿರ ಕೋಟಿ ಹಣ ಸಂಗ್ರಹ ಆಗಿದೆ ಎಂದು ನಾನು ಮೊದಲೇ ಹೇಳಿದ್ದೆ. ಇದಕ್ಕೆ ಕಾಂಗ್ರೆಸ್ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ನೂರಾರು ಜನರಿಗೆ ಟ್ರಾನ್ಸಫರ್ ಮಾಡಿದ್ದಾರೆ. ನಿನ್ನೆ ಕೆಲ ಅಧಿಕಾರಿಗಳು ಸಿಕ್ಕಿದ್ದರು. ಬೆಂಗಳೂರಿನಲ್ಲಿ ಕೆಲ ಪ್ರಮುಖ ಅಧಿಕಾರಿಗಳು ಸಿಕ್ಕಿದ್ದರು. ಎಲ್ಲ ಹಣ ಹೈದರಾಬಾದ್ ಕಂಪನಿಗಳಿಗೆ ಹಣ ಹೋಗಿದೆ. ಇದು ಸಿದ್ದರಾಮಯ್ಯ, ಡಿಕೆ ಶಿವಕುಮಾರ್​​ಗೆ ಗೊತ್ತಿದ್ದೇ ಮಾಡಿದ್ದು ಎಂದು ಜೋಶಿ ಆರೋಪಿಸಿದರು.

ಯಾವುದೇ ಆರೋಪ ಇಲ್ಲದೆ ನಮ್ಮ ಮೇಲೆ 40 ಪರ್ಸೆಂಟ್ ಕಮಿಷನ್ ಅರೋಪ ಮಾಡಿರು. ಇದು 100 ಪರ್ಸೆಂಟ್ ಸರ್ಕಾರ. 100 ಪರ್ಸೆಂಟ್ ಕರಪ್ಟ್ ಸರ್ಕಾರ ಎಂದು ಜೋಶಿ‌ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ: ಮಾಜಿ ಸಚಿವ ಬಿ ನಾಗೇಂದ್ರ ಜಾರಿ ನಿರ್ದೇಶನಾಲಯ ವಶಕ್ಕೆ

ಈ ಹಗರಣಗಳ ಬಗ್ಗೆ ರಾಹುಲ್ ಗಾಂಧಿ ಇವತ್ತಿನವರೆಗೂ ಒಂದು ಮಾತಾಡಿಲ್ಲ. ಇದಕ್ಕೆ ರಾಹುಲ್ ಗಾಂಧಿ ಹಾಗೂ ಸಿದ್ದರಾಮಯ್ಯ ಇಬ್ಬರೂ ಜವಾಬ್ದಾರರು. 40 ದಿನ ಆದರೂ ನಾಗೇಂದ್ರಗೆ ನೋಟಿಸ್ ಕೊಟ್ಟಿರಲಿಲ್ಲ. ಇಡಿ ಎಂಟ್ರಿ ಆದಾಗ ನೋಟಿಸ್ ಕೊಟ್ಟಿದ್ದಾರೆ. ಐಶಾರಾಮಿ ಹೊಟೆಲ್​​ಗೆ ಕರೆದು ವಿಚಾರಣೆ ಮಾಡುವ ನಾಟಕ ಮಾಡಿದರು. ಐಷಾರಾಮಿ ಹೊಟೆಲ್ ಬಿಲ್ ಕಟ್ಟಿದ್ದು ಕೂಡಾ ಎಸ್​ಐಟಿ ಎಂದು ಜೋಶಿ ಕಿಡಿಕಾರಿದರು.

ಮಿಸ್ಟರ್ ಮೋದಿ, ಮಿಸ್ಟರ್ ಯಡಿಯೂರಪ್ಪ ಎನ್ನುತ್ತೀರಲ್ಲಾ ಮಿಸ್ಟರ್ ಸಿದ್ದರಾಮಯ್ಯನವರೇ, ನಿಮ್ಮ ಸರ್ಕಾರದಲ್ಲಿ ಏನು ನಡೆದಿದೆ ಎಂದು ಪ್ರಶ್ನಿಸಿದ ಜೋಶಿ, ಸಿದ್ದರಾಮಯ್ಯ ಸರ್ಕಾರ ಪರಮ ಕಡು ಭ್ರಷ್ಟ ಸರ್ಕಾರ ಎಂದು ಟೀಕಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ