
ಬೆಂಗಳೂರು, (ಸೆಪ್ಟೆಂಬರ್ 22): ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿ ಕಾಂಗ್ರೆಸ್ ಶಾಸಕ ಬಿ.ಕೆ ಸಂಗಮೇಶ್ ಗೆ ಬಿಗ್ ರಿಲೀಫ್ ಸಿಕ್ಕಿದೆ. 2010ರ ಕೊಲೆಯತ್ನ ಪ್ರಕರಣದಲ್ಲಿ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಶಾಸಕ ಬಿ.ಕೆ ಸಂಗಮೇಶ್ ಸೇರಿದಂತೆ ಐವರನ್ನು ನಿರ್ದೋಷಿ ಎಂದು ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ಇಂದು (ಸೆಪ್ಟೆಂಬರ್ 22) ಆದೇಶ ಹೊರಡಿಸಿದೆ. ನ್ಯಾಯಾಧೀಶರಾದ ಕೆ.ಬಿ.ಶಿವಪ್ರಸಾದ್ ತೀರ್ಪು ಪ್ರಕಟಿಸಿದ್ದು, ಸಂಗಮೇಶ್ ಸೋದರರು, ಮಕ್ಕಳ ಮೇಲಿದ್ದ ಆರೋಪ ರದ್ದುಗೊಂಡಿದೆ.
2010ರಲ್ಲಿ ಭದ್ರಾವತಿ ಹಳದಮ್ಮ ದೇವಸ್ಥಾನ ಉದ್ಘಾಟನೆ ವೇಳೆ ಗಲಾಟೆ ನಡೆದಿತ್ತು. ಈ ಗಲಾಟೆಯ ಸಮಯದಲ್ಲಿ ಮಹೇಶ್ ಎಂಬುವರಿಗೆ ಸಂಗಮೇಶ್ ಸಂಗಡಿಗರಿಂದ ಹಲ್ಲೆಯಾಗಿದೆ ಎಂಬ ಆರೋಪ ಮಾಡಿದ್ದು, ಈ ಬಗ್ಗೆ ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ದೂರಿನ ಮೇರೆಗೆ ಶಾಸಕ ಬಿಕೆ ಸಂಗಮೇಶ್, ಬಿಕೆ ಮೋಹನ್, ಬಸವರಾಜ್, ಜಗದೀಶ್ ಮತ್ತು ಗಣೇಶ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಳಿಕ ಪೊಲೀಸರು ತನಿಖೆ ನಡೆಸಿ ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಇನ್ನು ಈ ಪ್ರಕರಣದ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಎಲ್ಲಾ ಸಾಕ್ಷ್ಯಗಳನ್ನು ಪರಿಶೀಲಿಸಿ ತೀರ್ಪು ನೀಡಿದೆ. ಆರೋಪಿಗಳ ವಿರುದ್ಧದ ಆರೋಪಗಳು ಸಾಬೀತಾಗಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಆದ್ದರಿಂದ ಶಾಸಕ ಬಿಕೆ ಸಂಗಮೇಶ್ ಮತ್ತು ಇತರ ಆರೋಪಿಗಳನ್ನು ನಿರ್ದೋಷಿಗಳು ಎಂದು ಘೋಷಿಸಿ ಖುಲಾಸೆಗೊಳಿಸಿದೆ.
2010ರಲ್ಲಿ ನಡೆದ ಘಟನೆಯಿಂದ ಪ್ರಾರಂಭವಾದ ಈ ಪ್ರಕರಣ ಅನೇಕ ವರ್ಷಗಳ ಕಾಲ ನ್ಯಾಯಾಲಯದಲ್ಲಿ ನಡೆಯಿತು. ದೇವಸ್ಥಾನ ಉದ್ಘಾಟನೆ ಸಮಾರಂಭದ ಸಮಯದಲ್ಲಿ ನಡೆದ ಗಲಾಟೆಯಲ್ಲಿ ಮಹೇಶ್ ಗಾಯಗೊಂಡಿದ್ದಾರೆ ಎಂಬುದು ಆರೋಪವಾಗಿತ್ತು. ಪೊಲೀಸರು ತನಿಖೆ ನಡೆಸಿ ಐದು ಜನರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದರು. ವಿಚಾರಣೆಯ ಸಮಯದಲ್ಲಿ ಸಾಕ್ಷಿಗಳನ್ನು ಪರಿಶೀಲಿಸಲಾಯಿತು. ದಾಖಲೆಗಳನ್ನು ಪರಿಶೀಲಿಸಲಾಯಿತು. ಅಂತಿಮವಾಗಿ ಕೋರ್ಟ್ ಆರೋಪಗಳು ಸಾಬೀತಾಗಿಲ್ಲ ಎಂದು ತೀರ್ಮಾನಕ್ಕೆ ಬಂದು ಪ್ರಕರಣದಲ್ಲಿ ಐವರನ್ನು ಖುಲಾಸೆಗೊಳಿಸಿದೆ.