ಮೈಸೂರು ದಸರಾಗೆ ದಕ್ಷಿಣ ಭಾರತದ ಎಲ್ಲ ಸಿಎಂಗಳಿಗೆ ಆಹ್ವಾನ: ಅದ್ಧೂರಿ ಆಚರಣೆಗೆ ಸಿಎಂ ಡಿಕೆಶಿ ಪ್ಲ್ಯಾನ್

ಮೈಸೂರು ದಸರಾವನ್ನು ಈ ಬಾರಿ ಅದ್ಧೂರಿಯಾಗಿ ಆಚರಿಸಲು ಸರ್ಕಾರ ಸಿದ್ಧತೆ ಆರಂಭಿಸಿದೆ. ದಕ್ಷಿಣ ಭಾರತದ ಎಲ್ಲ ಸಿಎಂಗಳಿಗೆ ಆಹ್ವಾನ, ಏರ್‌ಶೋ, ಡ್ರೋನ್ ಶೋ, ಸೇನಾಪಡೆಗಳ ಭಾಗವಹಿಸುವಿಕೆ ಸೇರಿದಂತೆ ಹಲವು ಹೊಸ ಕಾರ್ಯಕ್ರಮಗಳನ್ನು ಆಯೋಜಿಸಲು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಮೈಸೂರು ದಸರಾಗೆ ದಕ್ಷಿಣ ಭಾರತದ ಎಲ್ಲ ಸಿಎಂಗಳಿಗೆ ಆಹ್ವಾನ: ಅದ್ಧೂರಿ ಆಚರಣೆಗೆ ಸಿಎಂ ಡಿಕೆಶಿ ಪ್ಲ್ಯಾನ್
ಮೈಸೂರು ದಸರಾಗೆ ಗಜಪಡೆ ಸಿದ್ಧತೆ ಹಾಗೂ ಸಿಎಂ ಡಿಕೆ ಶಿವಕುಮಾರ್
Image Credit source: tv9
Edited By:

Updated on: Sep 04, 2026 | 2:21 PM

ಮುಖ್ಯಾಂಶಗಳು

  • ಮೈಸೂರು ದಸರಾಗೆ ದಕ್ಷಿಣ ಭಾರತದ ಸಿಎಂಗಳಿಗೆ ಆಹ್ವಾನ
  • ಏರ್‌ಶೋ, ಡ್ರೋನ್ ಶೋ ಆಯೋಜನೆಗೆ ಚರ್ಚೆ
  • ಸೇನಾಪಡೆಗಳಿಂದ ಸ್ತಬ್ಧಚಿತ್ರ, ಕವಾಯತು ಪ್ರದರ್ಶನ

ಬೆಂಗಳೂರು, ಸೆಪ್ಟೆಂಬರ್ 4: ನಾಡಹಬ್ಬ ಮೈಸೂರು ದಸರಾವನ್ನು ಈ ಬಾರಿ ಮತ್ತಷ್ಟು ಅದ್ಧೂರಿಯಾಗಿ ಆಚರಿಸಲು ರಾಜ್ಯ ಸರ್ಕಾರ ಸಿದ್ಧತೆ ಆರಂಭಿಸಿದೆ. ದಸರಾ ಮಹೋತ್ಸವಕ್ಕೆ ದಕ್ಷಿಣ ಭಾರತದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳನ್ನು ಆಹ್ವಾನಿಸಲು ತೀರ್ಮಾನಿಸಲಾಗಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಯ ಶಕ್ತಿ ಭವನದಲ್ಲಿ ಗುರುವಾರ ಸಂಜೆ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ದಸರಾ ಮಹೋತ್ಸವದಲ್ಲಿ ವಿವಿಧ ರಾಜ್ಯಗಳ ಕಲಾತಂಡಗಳ ಪ್ರದರ್ಶನಕ್ಕೂ ಅವಕಾಶ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ. ದೇಶದ ವಿವಿಧ ಭಾಗಗಳ ಕಲಾ ವೈವಿಧ್ಯತೆಯನ್ನು ನಾಡಹಬ್ಬದ ವೇದಿಕೆಯಲ್ಲಿ ಪರಿಚಯಿಸುವ ಉದ್ದೇಶದಿಂದ ರಾಜ್ಯಗಳ ಕಲಾತಂಡಗಳನ್ನು ಆಹ್ವಾನಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಮೈಸೂರು ದಸರಾಗೆ ಸೇನಾಪಡೆ, ಇಸ್ರೋ, ಡಿಆರ್‌ಡಿಒಗೆ ಆಹ್ವಾನ

ದಸರಾ ಕಾರ್ಯಕ್ರಮಗಳಲ್ಲಿ ಭಾರತೀಯ ಸೇನಾಪಡೆಗಳ ತಂಡಗಳು ಭಾಗವಹಿಸುವಂತೆ ಆಹ್ವಾನಿಸಲು ಸೂಚಿಸಲಾಗಿದೆ. ಭೂಸೇನೆ, ವಾಯುಸೇನೆ ಹಾಗೂ ನೌಕಾಪಡೆಗಳಿಂದ ಸ್ತಬ್ಧಚಿತ್ರ ಮತ್ತು ಕವಾಯತು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ತಂಡಗಳನ್ನು ಕಳುಹಿಸುವಂತೆ ಮನವಿ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಇದರ ಜತೆಗೆ ಭಾರತೀಯ ಸೇನಾಪಡೆಗಳು, ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ಚಲನಚಿತ್ರ ವಾಣಿಜ್ಯ ಮಂಡಳಿ, ಇಸ್ರೋ, ಡಿಆರ್‌ಡಿಒ ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಸಂಸ್ಥೆಗಳಿಗೆ ನಾಡಹಬ್ಬ ದಸರಾಗೆ ಆಹ್ವಾನ ನೀಡಲು ಸೂಚಿಸಲಾಗಿದೆ.

ಮೈಸೂರು ದಸರಾ: ಏರ್‌ಶೋ, ಡ್ರೋನ್ ಶೋ ಆಯೋಜನೆಗೆ ಚರ್ಚೆ

ಮೈಸೂರು ದಸರಾ ಸಂದರ್ಭದಲ್ಲಿ ಏರ್‌ಶೋ ನಡೆಸುವ ಕುರಿತು ಕೇಂದ್ರ ರಕ್ಷಣಾ ಸಚಿವರೊಂದಿಗೆ ಚರ್ಚಿಸುವ ಬಗ್ಗೆ ಸಭೆಯಲ್ಲಿ ತಿಳಿಸಲಾಗಿದೆ. ಏರ್‌ಶೋ ಜತೆಗೆ ಡ್ರೋನ್ ಶೋ ಆಯೋಜಿಸುವ ಬಗ್ಗೆಯೂ ಸಮಾಲೋಚನೆ ನಡೆದಿದೆ. ವಿವಿಧ ದೇಶಗಳ ರಾಯಭಾರಿಗಳು ಹಾಗೂ ಅಧಿಕಾರಿಗಳನ್ನು ದಸರಾ ಮಹೋತ್ಸವಕ್ಕೆ ಆಹ್ವಾನಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಮೂಲಕ ಮೈಸೂರು ದಸರಾಕ್ಕೆ ಅಂತರರಾಷ್ಟ್ರೀಯ ಮಟ್ಟದ ಮೆರುಗು ನೀಡಲು ಸರ್ಕಾರ ಮುಂದಾಗಿದೆ.

ಮೈಸೂರು ದಸರಾದಲ್ಲಿ ಚಿತ್ರಸಂತೆ, ವಿಂಟೇಜ್ ಕಾರ್ ರ‍್ಯಾಲಿಗೆ ಆದ್ಯತೆ

ಈ ಬಾರಿಯ ದಸರಾ ಸಂದರ್ಭದಲ್ಲಿ ಹಲವು ಹೊಸ ಹಾಗೂ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಡಿಕೆ ಶಿವಕುಮಾರ್ ಸೂಚಿಸಿದ್ದಾರೆ. ಚಿತ್ರಸಂತೆ, ಫ್ಲೀ ಮಾರ್ಕೆಟ್, ವಿಂಟೇಜ್ ಕಾರ್ ರ‍್ಯಾಲಿ, ರಂಗೋಲಿ ಸ್ಪರ್ಧೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ.

ರಾಜ್ಯದ ಎಲ್ಲ ಭಾಗಗಳನ್ನು ಪ್ರತಿನಿಧಿಸುವ ಕಲಾತಂಡಗಳಿಗೆ ದಸರಾ ಕಾರ್ಯಕ್ರಮಗಳಲ್ಲಿ ಅವಕಾಶ ಕಲ್ಪಿಸುವಂತೆಯೂ ಸೂಚಿಸಲಾಗಿದೆ. ವಿವಿಧ ಜಿಲ್ಲೆಗಳ ಕಲಾ ಪರಂಪರೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ದಸರಾ ವೇದಿಕೆಯಲ್ಲಿ ಪ್ರದರ್ಶಿಸುವ ಉದ್ದೇಶ ಹೊಂದಲಾಗಿದೆ.

ಮೈಸೂರು ದಸರಾ: ಟಿಕೆಟ್ ಪಡೆದವರಿಗೆ ಸೂಕ್ತ ಆಸನ ವ್ಯವಸ್ಥೆ

ದಸರಾ ಕಾರ್ಯಕ್ರಮಗಳಿಗೆ ಟಿಕೆಟ್ ಪಡೆದುಕೊಳ್ಳುವವರಿಗೆ ಸೂಕ್ತ ಆಸನ ವ್ಯವಸ್ಥೆ ಕಲ್ಪಿಸುವಂತೆ ಸಿಎಂ ಸೂಚಿಸಿದ್ದಾರೆ. ಟಿಕೆಟ್ ಪಡೆದ ಪ್ರೇಕ್ಷಕರಿಗೆ ಯಾವುದೇ ತೊಂದರೆಯಾಗದಂತೆ ಆಸನ ವ್ಯವಸ್ಥೆಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
Mysuru Dasara 2026: CM DK Shivakumar Holds Meeting With Officials Regarding Preparation
ದಸರಾ ಕಾರ್ಯಕ್ರಮಗಳ ಮೇಲ್ವಿಚಾರಣೆಯನ್ನೂ ವ್ಯವಸ್ಥಿತವಾಗಿ ನಡೆಸಲು ತೀರ್ಮಾನಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಜೊತೆಗೆ ಪ್ರತಿದಿನ ಒಬ್ಬ ಸಚಿವರನ್ನು ಕಾರ್ಯಕ್ರಮಗಳ ಮೇಲ್ವಿಚಾರಣೆಗೆ ನಿಯೋಜಿಸುವಂತೆ ಸಭೆಯಲ್ಲಿ ನಿರ್ದೇಶನ ನೀಡಲಾಗಿದೆ.

ಮೈಸೂರು ದಸರಾಕ್ಕೆ ಹೊಸ ಪ್ರಚಾರ ತಂತ್ರ

ಮೈಸೂರು ಅರಮನೆ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳ ಕುರಿತು ಕಿರುಚಿತ್ರಗಳನ್ನು ನಿರ್ಮಿಸಿ ವ್ಯಾಪಕ ಪ್ರಚಾರ ನೀಡುವಂತೆ ಡಿಕೆ ಶಿವಕುಮಾರ್ ಸೂಚಿಸಿದ್ದಾರೆ. ದಸರಾ ಮಹೋತ್ಸವದ ಜತೆಗೆ ಮೈಸೂರಿನ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ವೈಭವವನ್ನು ದೇಶ-ವಿದೇಶಗಳಲ್ಲಿ ಪರಿಚಯಿಸುವ ಉದ್ದೇಶದಿಂದ ಪ್ರಚಾರ ಕಾರ್ಯ ಕೈಗೊಳ್ಳಲು ಸೂಚಿಸಲಾಗಿದೆ.

ಇದನ್ನೂ ಓದಿ: ಮೈಸೂರು ದಸರಾ: ಗಜಪಡೆಯ ತೂಕ ಮಾಪನ ಕಾರ್ಯ; ಮೊದಲ ಸ್ಥಾನ ಪಡೆದ ಶ್ರೀಕಂಠ

ಒಟ್ಟಾರೆ ಈ ಬಾರಿ ದಸರಾವನ್ನು ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ಸೇನಾಪಡೆಗಳ ಪ್ರದರ್ಶನ, ಏರ್‌ಶೋ, ಡ್ರೋನ್ ಶೋ ಹಾಗೂ ವಿಭಿನ್ನ ಸಾರ್ವಜನಿಕ ಕಾರ್ಯಕ್ರಮಗಳ ಮೂಲಕ ಮತ್ತಷ್ಟು ಆಕರ್ಷಕವಾಗಿ ರೂಪಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:59 am, Fri, 4 September 26

ಈರಣ್ಣಾ ಬಸವಾ

ಈರಣ್ಣಾ ಬಸವಾ.. ಮೂಲತಃ ವಾಣಿಜ್ಯ ನಗರಿ ಹುಬ್ಬಳ್ಳಿಯವರು. ಈರಣ್ಣಾ ಬಿ.ಕಾಮ್ ಪದವೀಧರರಾಗಿದ್ದಾರೆ. ಕಂಟೆಂಟ್ ರೈಟರ್ ಆಗಿ ವೃತ್ತಿಜೀವನ ಆರಂಭಿಸಿದ ನಂತರ ಕನ್ನಡದ ಬೇರೆ ಬೇರೆ ಸುದ್ದಿ ಮಾದ್ಯಮದಲ್ಲಿ ಸುಮಾರು ೬ ವರ್ಷ ಕಾಲ ಡೆಸ್ಕ್ ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸದ್ಯ ಸತತ ಪರಿಶ್ರಮದಿಂದ ಟಿವಿ9 ಕನ್ನಡದಲ್ಲಿ ರಾಜಕೀಯ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಹಲವು ಎಕ್ಸ್ ಕ್ಲೂಸಿವ್ ಸುದ್ದಿಗಳನ್ನು ಹೆಕ್ಕಿ ತೆಗೆದಿದ್ದಾರೆ. ಸಿಎಂ, ಡಿಸಿಎಂ ಬೀಟ್ ಜವಾಬ್ದಾರಿ ಇವರ ಮೇಲಿದ್ದು ಜನರಿಗೆ ಸಿಗಬೇಕಾದ ಅಮೂಲ್ಯ ಸುದ್ದಿಗಳನ್ನು ತಲುಪಿಸುವ ಕಾಯಕವನ್ನು ಜವಾಬ್ದಾರಿಯಿಂದ ಮಾಡುತ್ತಿದ್ದಾರೆ. ಬರವಣಿಗೆ, ಕತೆ, ಕವನ ಇವರ ಆಸಕ್ತಿಯ ಕ್ಷೇತ್ರ.

Read More
Loading...
Unable to load recommendations.
Follow Us