ಮಗುವನ್ನು ಬಲಿಪಡೆದ ಚಿಪ್ಸ್ ಪ್ಯಾಕೆಟ್, ಇದ್ದ ಏಕೈಕ ಪುತ್ರನನ್ನ ಕಳೆದುಕೊಂಡ ಪೋಷಕರು

ಸಾಮಾನ್ಯವಾಗಿ ಮಕ್ಕಳನ್ನು ಆಕರ್ಷಿಸಲು ತಿಂಡಿ ಪ್ಯಾಕೆಟ್‌ಗಳ ಒಳಗೆ ಸಣ್ಣಪುಟ್ಟ ಪ್ಲಾಸ್ಟಿಕ್ ಆಟಿಕೆಗಳನ್ನು ಇಡಲಾಗುತ್ತದೆ. ಆದ್ರೆ, ಮಕ್ಕಳ ಆಕರ್ಷಣೆಗಾಗಿ ಜಂಕ್ ಫುಡ್ ಪ್ಯಾಕೆಟ್‌ಗಳಲ್ಲಿ ನೀಡಲಾಗುವ ಉಡುಗೊರೆಗಳು ಎಷ್ಟೊಂದು ಅಪಾಯಕಾರಿ ಎಂಬುದಕ್ಕೆ ಮೈಸೂರು ಜಿಲ್ಲೆಯಲ್ಲಿ ಕಂದಮ್ಮನ ಪ್ರಾಣ ಪಕ್ಷಿ ಹಾರಿ ಹೋಗಿರುವುದೇ ಸಾಕ್ಷಿಯಾಗಿದೆ. ಚಿಪ್ಸ್ ಪ್ಯಾಕೆಟ್ ನಲ್ಲಿದ್ದ ಪ್ಲಾಸ್ಟಿಕ್ ಬಾಲ್ ಏನು ಅರಿಯದೆ ಮೂರು ವರ್ಷದ ಮಗುವನ್ನು ಬಲಿಪಡೆದುಕೊಂಡಿದೆ.

ಮಗುವನ್ನು ಬಲಿಪಡೆದ ಚಿಪ್ಸ್ ಪ್ಯಾಕೆಟ್, ಇದ್ದ ಏಕೈಕ ಪುತ್ರನನ್ನ ಕಳೆದುಕೊಂಡ ಪೋಷಕರು
ಮುಕುಂದ್ ಮಯೂರ್
Edited By:

Updated on: Aug 03, 2026 | 3:53 PM

ಮೈಸೂರು, (ಆಗಸ್ಟ್ 02): ಚಿಪ್ಸ್ ಪ್ಯಾಕೆಟ್‌ನಲ್ಲಿದ್ದ ಪ್ಲಾಸ್ಟಿಕ್​ ಬಾಲ್ ಗಂಟಲಿಗೆ ಸಿಲುಕಿ ಮಗು ಸಾವನ್ನಪ್ಪಿರುವ ಘಟನೆ ಮೈಸೂರು (mysuru) ಜಿಲ್ಲೆಯ ಹುಣಸೂರು ತಾಲೂಕಿನ ಗೌರಿಪುರದಲ್ಲಿ ಘಟನೆ ಶನಿವಾರ ನಡೆದಿದೆ. ಗೌರಿಪುರ ಗ್ರಾಮದ ಸಂತೋಷ್-ಐಶ್ವರ್ಯ ದಂಪತಿಯ ಮೂರು ವರ್ಷದ ಏಕೈಕ ಪುತ್ರ ಮುಕುಂದ್ ಮಯೂರ್ ಸಾವನ್ನಪ್ಪಿದ್ದಾನೆ. ಚಿಪ್ಸ್​​ನೊಂದಿಗೆ ಆ ಪ್ಲಾಸ್ಟಿಕ್ ಬಾಲ್ ಅನ್ನು ಬಾಯಿಗೆ ಹಾಕಿ ನುಂಗಿದ್ದಾನೆ. ತಕ್ಷಣವೇ ಆ ಬಾಲ್ ಗಂಟಲಿಗೆ ಅಡ್ಡವಾಗಿ ಸಿಕ್ಕಿಕೊಂಡು ಮಗು ಉಸಿರಾಡಲು ಪರದಾಡಿ ಒದ್ದಾಡತೊಡಗಿದೆ. ​ಪರಿಸ್ಥಿತಿಯ ಗಂಭೀರತೆ ಅರಿತ ಮನೆಯವರು ಕೂಡಲೇ ಮಗುವನ್ನು ಹುಣಸೂರಿನ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮಗು ಮಾರ್ಗಮಧ್ಯದಲ್ಲೇ ಉಸಿರುಗಟ್ಟಿ ಸಾವನ್ನಪ್ಪಿದೆ.

ಇದ್ದ ಒಂದೇ ಮಗುವನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಗ್ರಾಮದಲ್ಲಿ ಶೋಕ ಆವರಿಸಿದೆ. ಇನ್ನು ಈ ದುರ್ಘಟನೆಗೆ ನೇರ ಹೊಣೆಯಾರು ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ. ಮಗುವಿನ ಅಕಾಲಿಕ ಸಾವಿನ ಸುದ್ದಿ ತಿಳಿದು ಸುತ್ತಮುತ್ತಲಿನ ಗ್ರಾಮಸ್ಥರು ಮೃತನ ಮನೆ ಬಳಿಗೆ ಧಾವಿಸಿ ಕಂಬನಿ ಮಿಡಿದ್ದಾರೆ.

ಇದನ್ನೂ ಓದಿ: ಮಳೆ ಅಬ್ಬರಕ್ಕೆ ಗುಡ್ಡ ಕುಸಿದು ತೀರ್ಥಹಳ್ಳಿಯಲ್ಲಿ ದುರಂತ: ಮಗು ಸೇರಿ ಒಂದೇ ಕುಟುಂಬದ ಮೂವರು ದುರ್ಮರಣ

ಇನ್ಮುಂದೆಯಾದರೂ ಇಂತಹ ತಿಂಡಿ-ತಿನಿಸುಗಳ ಜೊತೆ ಕಂಪನಿಗಳು ಆಕರ್ಷಣೆಗಾಗಿ ಯಾವುದೇ ರೀತಿಯ ಆಟಿಕೆಗಳು ಅಥವಾ ಪ್ಲಾಸ್ಟಿಕ್ ವಸ್ತುಗಳನ್ನು ಹಾಕದಂತೆ ಕಠಿಣ ನಿಯಮ ಜಾರಿಗೆ ತರಬೇಕು. ಈ ಬಗ್ಗೆ ಸಂಬಂಧಪಟ್ಟ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ. ಆಗ ಮಾತ್ರ ಇಂತಹ ಘಟನೆಗಳಿಗೆ ಬ್ರೇಕ್ ಹಾಕಬಹುದಾಗಿದೆ.

ಆಗಿದ್ದೇನು? ಶನಿವಾರ ಮಗು ಅಳುತ್ತಿದ್ದುದನ್ನು ಕಂಡು ಸಂಬಂಧಿಕರ ಮಕ್ಕಳು ಗೌರಿಪುರದ ಅಂಗಡಿಯಲ್ಲಿ ಚಿಪ್ಸ್ ಪ್ಯಾಕೆಟ್ ಕೊಡಿಸಿದ್ದಾರೆ. ಚಿಪ್ಸ್ ಪ್ಯಾಕೆಟ್‌ನಲ್ಲಿ ಮಕ್ಕಳ ಆಕರ್ಷಣೆಗಾಗಿ ಇದ್ದ ಪ್ಲಾಸ್ಟಿಕ್ ಬಾಲ್ ಅನ್ನು ಮಗು ಚಿಪ್ಸ್​​ನೊಂದಿಗೆ ನುಂಗಿದೆ. ಆಗ ಪ್ಲಾಸ್ಟಿಕ್ ಬಾಲ್ ಗಂಟಲಿಗೆ ಸಿಲುಕಿ ಮಗು ಒದ್ದಾಡಿದೆ. ಮಗು ಒದ್ದಾಡುವುದನ್ನು ಗಮನಿಸಿದ ಪೋಷಕರು ತಕ್ಷಣ ಹುಣಸೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮಾರ್ಗ ಮಧ್ಯ ಮಗು ಉಸಿರುಗಟ್ಟಿ ಸಾವನ್ನಪ್ಪಿದೆ ಎಂದು ಪೋಷಕರ ಸಂಬಂಧಿಕರು ಮಾಹಿತಿ ನೀಡಿದ್ದಾರೆ.

ಕೃಷಿಕನಾದ ಸಂತೋಷ್ ಹಾಗೂ ಐಶ್ವರ್ಯ ದಂಪತಿಗೆ ಮದುವೆಯಾಗಿ, ಐದು ವರ್ಷದ ನಂತರ ಗಂಡು ಮಗು ಜನಿಸಿತ್ತು‌. ಎಲ್​ಕೆಜಿ ಓದುತ್ತಿದ್ದ 5 ವರ್ಷದ ಮುಕುಂದ್ ಮಯೂರ್, ತಾತನಾದ ಶಂಕರ್ ನಾಯಕ ಅವರ ಪತ್ನಿ ಸಹೋದರನಾದ ರಾಜನಾಯಕರ ಮನೆಯಲ್ಲಿ ಗುರುವಾರ ಕಾರ್ಯಕ್ರಮ ಇದ್ದುದರಿಂದ, ಅಂದು ಕುಟುಂಬ ಸಮೇತ ರಾಜನಾಯಕರ ಮನೆಯಲ್ಲಿ ಇದ್ದರು. ಗುರುವಾರ ಸಂಜೆ ಕಾರ್ಯ ಮುಗಿಸಿ ಸಂತೋಷ್ ಹಾಗೂ ಐಶ್ವರ್ಯ ಹುಣಸೂರಿನ ಗೌರಿಪುರಕ್ಕೆ ಹೋಗುವಾಗ, ರಾಜನಾಯಕ ಅವರು ಎರಡು ದಿವಸ ಮಗು ಇದ್ದು ಹೋಗಲಿ ಎಂದು ಉಳಿಸಿಕೊಂಡಿದ್ದರು. ಆದ್ರೆ, ವಿಧಿ ಬಾಲಿನಲ್ಲಿ ಬಂದು ಮಗುವನ್ನು ಬಲಿಪಡೆದುಕೊಂಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:15 pm, Sun, 2 August 26

ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More
Loading...
Unable to load recommendations.
Follow Us