ಚಾಮುಂಡಿಬೆಟ್ಟ ಪ್ರಾಧಿಕಾರ ಸಮರ.. ರಾಜಮನೆತನ ವರ್ಸಸ್​ ಸರ್ಕಾರ!

ಸಿಎಂ ಸಿದ್ದರಾಮಯ್ಯ ಮೈಸೂರಲ್ಲಿ ಮತ್ತೆ ಸಂಚಲನ ಮೂಡಿಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಿಂದ ಬರೋಬ್ಬರಿ 5 ಬಾರಿ ಶಾಸಕರಾಗಿದ್ದ ಅವರು, ಚಾಮುಂಡಿ ಬೆಟ್ಟದ ಅಭಿವೃದ್ಧಿಗಾಗಿ ಪ್ರಾಧಿಕಾರ ರಚಿಸಿದ್ದಾರೆ. ಮೈಸೂರು ರಾಜಮನೆತನದ ವಿರೋಧದ ನಡುವೆಯೂ ಮೊದಲ ಸಭೆ ನಡೆಸಿ ಪ್ರಾಧಿಕಾರದ ಚಟುವಟಿಕೆಗಳಿಗೆ ನಾಂದಿ ಹಾಡಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ.

ಚಾಮುಂಡಿಬೆಟ್ಟ ಪ್ರಾಧಿಕಾರ ಸಮರ.. ರಾಜಮನೆತನ ವರ್ಸಸ್​ ಸರ್ಕಾರ!
ಸಿದ್ದರಾಮಯ್ಯ , ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 03, 2024 | 10:37 PM

ಮೈಸೂರು, ಸೆ.03: ಮುಡಾ ಹಗರಣ, ಸಿಎಂ ಬದಲಾವಣೆ ಗದ್ದಲದ ‌ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸಿಕ್ಕಾಪಟ್ಟೆ ಜೋಶ್‌ನಲ್ಲಿದ್ದಾರೆ. ‌ನಿನ್ನೆ(ಸೆ.02) ರಾತ್ರಿ ಮೈಸೂರಿಗೆ ಆಗಮಿಸಿದ್ದ ಸಿದ್ದು, ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಮೊದಲ ಸಭೆ ನಡೆಸಿ ಯಶಸ್ವಿಯಾಗಿದ್ದಾರೆ. ಚಾಮುಂಡಿ ಬೆಟ್ಟ(Chamundi Hills)ದಸಮಗ್ರ ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದ ಸಿದ್ದರಾಮಯ್ಯ, ಈಗಾಗಲೇ ಅಧಿಕೃತ ಆದೇಶವನ್ನೂ ಹೊರಡಿಸಿದ್ದರು. ಆದ್ರೆ, ಪ್ರಾಧಿಕಾರ ರಚನೆಗೆ ರಾಜಮನೆತನದ ವಿರೋಧ ವ್ಯಕ್ತವಾಗಿತ್ತು.

ಪ್ರಾಧಿಕಾರ ರಚನೆ ಪ್ರಶ್ನಿಸಿ ಕೋರ್ಟ್​ ಮೊರೆ ಹೋಗಿದ್ದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್

ಪ್ರಾಧಿಕಾರ ರಚನೆ ಪ್ರಶ್ನಿಸಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ನ್ಯಾಯಾಲಯದ ಮೊರೆ ಹೋಗಿದ್ದರು. ಚಾಮುಂಡೇಶ್ವರಿ ದೇವಾಲಯವು ನಮ್ಮ ಖಾಸಗಿ ಆಸ್ತಿ ಎಂದು ಹಕ್ಕೊತ್ತಾಯ ಮಂಡಿಸಿದ್ದರು. ಇದೆಲ್ಲದರ ನಡುವೆ ಇಂದು(ಮಂಗಳವಾರ) ಪ್ರಾಧಿಕಾರದ ಮೊದಲ ಸಭೆ ನಡೆದಿದೆ. ಇನ್ನು ಪ್ರಾಧಿಕಾರದ ವಿಚಾರವಾಗಿ ಹೈಕೋರ್ಟ್ ತಡೆ ನೀಡಿತ್ತು. ಆದ್ರೆ, ನ್ಯಾಯಾಲಯ ತಡೆಯಾಜ್ಞೆ ತೆರವುಗೊಳಿಸಿದೆ ಎಂದು‌ ಖುದ್ದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:ಚಾಮುಂಡಿ ಬೆಟ್ಟದ ಅಭಿವೃದ್ಧಿ ಮತ್ತು ಭಕ್ತಾದಿಗಳ ಸವಲತ್ತಿಗೆ ಪ್ರಾಧಿಕಾರ ರಚಿಸಲಾಗಿದೆ: ಸಿದ್ದರಾಮಯ್ಯ

ಆದ್ರೆ, ಇದನ್ನು ಪ್ರಮೋದದೇವಿ ಒಡೆಯರ್ ಹಾಗೂ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಲ್ಲಗೆಳೆದಿದ್ದಾರೆ. ಈ ಸಭೆ ಕಾನೂನು ಬಾಹಿರ. ನಮಗೂ ಸಭೆಗೆ ಆಹ್ವಾನ ನೀಡಲಾಗಿತ್ತು. ಆದರೆ, ಇದು ಕಾನೂನುಬಾಹಿರ ಸಭೆ ಹಿನ್ನೆಲೆ ನಾವು ಭಾಗಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸದ್ದೇವು ಎಂದಿದ್ದಾರೆ. ಇನ್ನು ಇದನ್ನು ಲೆಕ್ಕಿಸದೆ ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಮೊದಲ ಸಭೆ ನಡೆಸಿದರು. ಆ ಮೂಲಕ ರಾಜವಂಶಸ್ಥರಿಗೂ ಟಾಂಗ್ ಕೊಟ್ಟಿದ್ದಾರೆ.

ರಾಜವಂಶಸ್ಥರು ಹಾಗೂ ಸಿದ್ದರಾಮಯ್ಯ ನಡುವಿನ ಕಾನೂನು ಸಂಘರ್ಷಕ್ಕೆ ಮೂರು ದಶಕಗಳ ಇತಿಹಾಸ

ಜೊತೆಗೆ ದೇಗುಲದ ಧಾರ್ಮಿಕ ಪರಂಪರೆ, ಪ್ರವಾಸೋದ್ಯಮ ಹಾಗೂ ಭಕ್ತರಿಗೆ ಮೂಲಸೌಕರ್ಯ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಭರವಸೆ ನೀಡಿದರು. ಇನ್ನು ರಾಜವಂಶಸ್ಥರು ಹಾಗೂ ಸಿದ್ದರಾಮಯ್ಯ ನಡುವಿನ ಕಾನೂನು ಸಂಘರ್ಷಕ್ಕೆ ಮೂರು ದಶಕಗಳ ಇತಿಹಾಸವಿದೆ. ಚಾಮುಂಡೇಶ್ವರಿ ಪ್ರಾಧಿಕಾರ ರಚನೆ ಮಾಡಿರೋದೇ ರಾಜವಂಶಸ್ಥರ ವಿಶೇಷ ಅಧಿಕಾರ ಕಸಿದುಕೊಳ್ಳುವುದಕ್ಕೆ, ಚಾಮುಂಡಿಬೆಟ್ಟಕ್ಕೆ ಕೈ ಹಾಕಿದ್ದರಿಂದಲೇ ಮುಡಾ ಹಗರಣದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ. ಆದ್ರೆ, ಇದಕ್ಕೆಲ್ಲಾ ಸಿಎಂ ಡೋಂಟ್ ಕೇರ್ ಅಂದಿದ್ದಾರೆ.

ಇನ್ನು ನಾಡದೇವತೆ ಕ್ಷೇತ್ರದ ಪ್ರಾಧಿಕಾರಕ್ಕೆ ಮೊದಲ ಸಭೆಯ ಮೂಲಕ ಅಧಿಕೃತ ಚಾಲನೆ ದೊರಕಿದೆ. ಸಾಕಷ್ಟು ಗೊಂದಲ, ಪರ- ವಿರೋಧದ ನಡವೆ ಆರಂಭವಾಗಿರುವ ಈ ಪ್ರಾಧಿಕಾರ. ಭಕ್ತರ ಪಾಲಿಗೆ ಎಷ್ಟರ ಮಟ್ಟಿಗೆ ಅನುಕೂಲ ಆಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ