ಮೈಸೂರು, (ಆಗಸ್ಟ್ 20): ವಿಶ್ವವಿಖ್ಯಾತ ಮೈಸೂರು ದಸರಾ ಅಂದರೆ ಥಟ್ಟನೆ ನೆನಪಾಗೋದು ಜಂಬೂಸವಾರಿಯ ಗಜಪಡೆ. ದಸರಾ ಅಂದರೆ ಅದು ಗಜಪಡೆಗಳ ಕಲರವ. ಚಿನ್ನದ ಅಂಬಾರಿಯಲ್ಲಿ ನಾಡದೇವತೆ ತಾಯಿ ಚಾಮುಂಡೇಶ್ವರಿ ಉತ್ಸವಮೂರ್ತಿ ಹೊತ್ತು ಸಾಗುವ ಅಂಬಾರಿ ಆನೆಯನ್ನು ನೋಡಲು ಎರಡು ಕಣ್ಣುಗಳು ಸಾಲುವುದಿಲ್ಲ. ಅದರಲ್ಲೂ ದೈತ್ಯ ಅರ್ಜುನ ಆನೆಯ ರಾಜಗಾಂಭೀರ್ಯ ನಡಿಗೆ ಎಂತವರನ್ನು ಭಕ್ತಿಯಲ್ಲಿ ಭಾವಪರವಶಗೊಳಿಸುತಿತ್ತು. ಆದ್ರೆ ಈಗ ಎಲ್ಲರ ನೆಚ್ಚಿನ ಅರ್ಜುನ ನೆನಪು ಮಾತ್ರ. ಕಾಡಾನೆಯ ಜೊತೆ ವೀರಾವೇಶದಿಂದ ಹೋರಾಡಿದ ಅರ್ಜುನ ವೀರಮರಣವನ್ನಪ್ಪಿದ್ದು ಈಗ ಇತಿಹಾಸ. ಇದೀಗ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮತ್ತೆ ದಸರಾ ಕಲರವ ಆರಂಭವಾಗಿದೆ. ಅಚ್ಚು ಮೆಚ್ಚಿನ ಅರ್ಜುನನಿಲ್ಲದ ಮೊದಲ ದಸರೆಗೆ ಎಲ್ಲರೂ ಸಜ್ಜಾಗಿದ್ದರೆ. ಈ ಮಧ್ಯೆ ಅರ್ಜುನ ಆನೆಯ ಸ್ಥಾನವನ್ನು ತುಂಬಲು ಇದೇ ಮೊದಲ ಬಾರಿಗೆ ದಸರಾ ಅಖಾಡಕ್ಕೆ ಕಾಡಿನಿಂದ ನಾಡಿಗೆ ಅರ್ಜುನನಷ್ಟೇ ಸಾಮರ್ಥ್ಯ ಹೊಂದಿರುವ ಯಂಗ್ ಟಸ್ಕರ್ ಏಕಲವ್ಯ ಎಂಟ್ರಿಯಾಗುತ್ತಿದ್ದಾನೆ.
ಈ ಬಾರಿ ದಸರೆಗೆ ಒಟ್ಟು 18 ಆನೆಗಳನ್ನು ಗುರುತಿಸಲಾಗಿದೆ. ಅದರಲ್ಲಿ 14 ಆನೆಗಳು ಮೈಸೂರು ದಸರೆಯಲ್ಲಿ ಸಕ್ರಿಯವಾಗಿ ಭಾಗಿಯಾಗುತ್ತಿವೆ. ಇನ್ನು ನಾಲ್ಕು ಆನೆಗಳನ್ನು ಮೀಸಲು ಆನೆಗಳನ್ನಾಗಿ ಆಯ್ಕೆ ಮಾಡಲಾಗಿದೆ. ಒಂದು ವೇಳೆ ಈ 14 ಆನೆಗಳ ಆರೋಗ್ಯದಲ್ಲಿ ಏನಾದರೂ ವ್ಯತ್ಯಯ, ವ್ಯತ್ಯಾಸಗಳಾದರೆ ಮೀಸಲು ಆನೆಗಳನ್ನು ಬಳಸಲು ತೀರ್ಮಾನಿಸಲಾಗಿದೆ. ಇನ್ನು ದಸರೆಯ ಆ 18 ಆನೆಗಳ ಪಟ್ಟಿ ಇಲ್ಲಿದೆ.
ಇದನ್ನೂ ಓದಿ: ಈ ಬಾರಿ ಅದ್ಧೂರಿ ದಸರಾ ಆಚರಣೆ: ಅ 3 ರಂದು ಉದ್ಘಾಟನೆ, ಅ 12 ಕ್ಕೆ ಜಂಬೂಸವಾರಿ
ಇದರಲ್ಲಿ ಈ ಬಾರಿ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿರುವುದು 39 ವರ್ಷದ ಏಕಲವ್ಯ ಆನೆ.
ಏಕಲವ್ಯ ಆನೆ ಸೆರೆ ಸಿಕ್ಕಿದ್ದು 2022ರಲ್ಲಿ. ಚಿಕ್ಕಮಗಳೂರು ತಾಲ್ಲೂಕಿನ ಮೂಡಿಗರೆಯಲ್ಲಿ ಏಕಲವ್ಯನನ್ನು ಸೆರೆ ಹಿಡಿಯಾಲಾಗಿತ್ತು. ಒಂದು ಆನೆ ಕಾಡಿನಿಂದ ನಾಡಿಗೆ ನಿರಂತರವಾಗಿ ಲಗ್ಗೆಯಿಡುತ್ತಿತ್ತು ಕಣ್ಮುಚ್ಚಿ ಬಿಡುವಷ್ಟರಲ್ಲಿ ಕಬ್ಬಿನ ಗದ್ದಗೆ ನುಗ್ಗಿ ಕಬ್ಬು ತಿಂದು ತೇಗುತ್ತಿತ್ತು. ಇನ್ನು ಭತ್ತದ ಗದ್ದೆ ಎಲ್ಲೇ ಇರಲಿ ಹುಡುಕಿಕೊಂಡು ಹೊರಟು ಬಿಡುತ್ತಿತ್ತು. ಮೂಡಿಗರೆ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಆ ಆನೆ ನಡೆದಿದ್ದೇ ದಾರಿ ಎನ್ನುವಂತಾಗಿತ್ತು. ರೈತರಿಗೆ ಏನು ಮಾಡಬೇಕು ಅಂತಾ ದಿಕ್ಕೇ ತೋಚುತ್ತಿರಲಿಲ್ಲ. ಆದ್ರೆ ಆ ಆನೆಯ ಒಂದು ವಿಶೇಷತೆ ಅಂದರೆ ಅದು ಕಾಡಿನಿಂದ ನಾಡಿಗೆ ಬಂದು ತನ್ನ ಪಾಡಿಗೆ ತಾನು ಕಬ್ಬು, ಭತ್ತ ತಿಂದು ವಾಪಸ್ಸಾಗುತ್ತಿತ್ತು. ಅದನ್ನು ಹೊರತುಪಡಿಸಿ ಯಾರ ಮೇಲೂ ದಾಳಿ ಮಾಡುತ್ತಿರಲಿಲ್ಲ. ಯಾವುದೇ ವಸ್ತು ಮನೆ ಗಾಡಿಯನ್ನು ನಾಶ ಮಾಡುತ್ತಿರಲಿಲ್ಲ. ತಾನಾಯ್ತು ತನ್ನ ಕಬ್ಬು, ಭತ್ತ ಆಯ್ತು ಅಂತಾ ಇತ್ತು. ಆದರೂ ಆನೆ ಕಂಡರೆ ಜನರಿಗೆ ಭಯ ಇದ್ದೇ ಇರುತ್ತದೆ. ಜೊತೆಗೆ ಈ ಆನೆ ಕೈಗೆ ಬಂದ ಬೆಳೆ ಬಾಯಿಗೆ ಬಾರದಂತೆ ಮಾಡಿಬಿಟ್ಟಿತ್ತು. ಈ ಹಿನ್ನೆಲೆಯಲ್ಲಿ ಈ ಆನೆಯನ್ನು ಹಿಡಿಯಲೇ ಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಪಟ್ಟು ಹಿಡಿದು ಬಿಟ್ಟರು.
ಯಾವಾಗ ಗ್ರಾಮಸ್ಥರ ಒತ್ತಾಯ ಹೆಚ್ಚಾಯ್ತೋ ಅರಣ್ಯ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿತು. ಆನೆ ಹಿಡಿಯಲು ತಜ್ಞರ ತಂಡವನ್ನು ರಚಿಸಿತು. ತಂಡದಲ್ಲಿ ಒಬ್ಬರಲ್ಲ ಮೂವರು ವೈದ್ಯರನ್ನು ಹಾಕಿಕೊಳ್ಳಲಾಯ್ತು. ನುರಿತ ಅಧಿಕಾರಿಗಳು, ಜೊತೆಗೆ ಡಾ ಮುಜೀಬ್, ಡಾ ವಸೀಂ, ಡಾ ರಮೇಶ್ ಹತ್ತಾರು ಸಿಬ್ಬಂದಿಗಳು ಆನೆ ಸೆರೆಗೆ ಮುಂದಾದರು. ಮೊದಲು ಆನೆಯ ಚಲನವಲನದ ಬಗ್ಗೆ ನಿಗಾ ಇಡಲಾಯಿತು. ಆನೆ ಯಾವಾಗ ಬರುತ್ತದೆ ? ಯಾವ ಕಡೆ ಹೋಗುತ್ತದೆ ? ಆನೆಯ ಆಕಾರ, ಗುಣ, ಸ್ವಭಾವ ಎಲ್ಲದರ ಬಗ್ಗೆ ಮಾಹಿತಿ ಕಲೆ ಹಾಕಲಾಯಿತು. ಇದಾದ ನಂತೆ 2022ರಲ್ಲಿ ಆ ಆನೆಯ ಸೆರೆಗೆ ಮಹೂರ್ತ ಫಿಕ್ಸ್ ಆಯ್ತು. ಅಂದುಕೊಂಡಂತೆ ಆನೆಯನ್ನು ಸೆರೆ ಹಿಡಿಯಲಾಯ್ತು.
ಇದನ್ನೂ ಓದಿ: ದೇಶದ ಪ್ರಮುಖ ವ್ಯಕ್ತಿಯೊಬ್ಬರು ದಸರಾ ಅತಿಥಿಯಾಗಿ ಬರುತ್ತಾರೆ: ಸಚಿವ ಹೆಚ್ಕೆ ಪಾಟೀಲ್
ಆನೆಯನ್ನೇನೋ ಸೆರೆ ಹಿಡಿಯಲಾಯ್ತು ಆದ್ರೆ ಅರಣ್ಯ ಇಲಾಖೆಯವರಿಗೆ ಅಚ್ಚರಿ ಕಾದಿತ್ತು. ಯಾಕಂದ್ರೆ ಆ ಆನೆ ನೋಡಲು ಎಷ್ಟು ದೈತ್ಯವಾಗಿತ್ತೋ ಅಷ್ಟೇ ಸೌಮ್ಯವಾಗಿತ್ತು. ಸಾಮಾನ್ಯವಾಗಿ ಕಾಡಾನೆಗಳನ್ನು ಸೆರೆ ಹಿಡಿಯುವುದಕ್ಕಿಂತ ಸೆರೆ ಹಿಡಿದ ನಂತರ ಅವುಗಳನ್ನು ಪಳಗಿಸುವುದು ಹರಸಾಹಸ. ಆದ್ರೆ ಈ ಆನೆ ವಿಚಾರದಲ್ಲಿ ಅದು ವ್ಯತಿರಿಕ್ತವಾಗಿತ್ತು. ಸೆರೆ ಸಿಕ್ಕ ಆನೆ ಅದಾಗಲೇ ತರಬೇತಿ ಪಡೆದಂತಹ ಆನೆಯಂತೆ ವರ್ತಿಸುತ್ತಿತ್ತು. ಇದು ಎಲ್ಲರ ಅಚ್ಚರಿಗೆ ಕಾರಣವಾಯ್ತು. ಇದಕ್ಕಾಗಿಯೇ ಅರಣ್ಯ ಇಲಾಖೆ ಆ ಆನೆಗೆ ಏಕಲವ್ಯ ಅಂತಾ ನಾಮಕರಣ ಮಾಡಿದ್ರು. ಕಾರಣ ಈ ಆನೆ ಅದಾಗಲೇ ಎಲ್ಲವನ್ನೂ ಕಲಿತಿತ್ತು. ಆದ್ರೆ ಕಾಡಿನಲ್ಲಿ ಅದನ್ನು ಕಲಿಸಿದವರು ಯಾರು ಅನ್ನೋದು ಗೊತ್ತಿರಲಿಲ್ಲ. ಹೀಗಾಗಿ ಏಕಲವ್ಯ ಹೆಸರು ನಾಮಕರಣ ಮಾಡಲಾಯ್ತು. ಇದಾದ ನಂತರ ಏಕಲವ್ಯನ ಜವಾಬ್ದಾರಿಯನ್ನು ಮಾವುತ ಸೃಜನ್ ಹಾಗೂ ಕಾವಾಡಿ ಹಿದಾಯತ್‌ಗೆ ನೀಡಲಾಯಿತು. ಯಾವಾಗ ಏಕಲವ್ಯನಿಗೆ ನಿಜ ಗುರುಗಳು ಸಿಕ್ಕರೋ ಆಗ ಆತನ ಖದರ್ ಬದಲಾಗಿ ಹೋಯ್ತು. ಪುಟಕ್ಕಿಟ್ಟ ಚಿನ್ನದಂತೆ ಏಕಲವ್ಯ ಶೈನ್ ಆದ. ಯಾವ ಮಟ್ಟಿಗೆ ಎಂದರೆ ಸೆರೆ ಸಿಕ್ಕ ಎರಡೇ ವರ್ಷಕ್ಕೆ ಆತ ವಿಶ್ವವಿಖ್ಯಾತ ಮೈಸೂರು ದಸರೆಯ ಪ್ರಮುಖ ಆಕರ್ಷಣೆಯಾಗಿದ್ದು ಮಾತ್ರವಲ್ಲ ಖ್ಯಾತ ಅರ್ಜುನ ಆನೆಯ ಉತ್ತರಾಧಿಕಾರಿ ಅನ್ನುವಷ್ಟರ ಮಟ್ಟಿಗೆ ಆತ ರೆಡಿಯಾದ.
ಅರ್ಜುನನಿಗೆ ಅರ್ಜುನ ಆನೆಯ ಸಾಟಿ. ಆತನ ದಂತ, ಆತನ ಮುಖಚರ್ಯ, ಆತನ ಮೈಮಾಟ, ಆತ ಅಂಬಾರಿ ಹೊತ್ತು ಸಾಗುವಾಗಿನ ರಾಜಠೀವಿ, ಅಬ್ಬಾ…. ಅರ್ಜುನ ಅಂಬಾರಿ ಹೊತ್ತು ಸಾಗುತ್ತಿದ್ದರೆ ಗತಕಾಲದ ವೈಭವ ಮರುಕಳಿಸುತಿತ್ತು. ಆದ್ರೆ ಅರ್ಜುನ ಕಾಡಾನೆ ದಾಳಿಯಿಂದ ಮೃತಪಟ್ಟ ನಂತರ ಆತನ ಸ್ಥಾನವನ್ನು ಯಾರು ತುಂಬಲು ಸಾಧ್ಯವೇ ಇಲ್ಲ ಅನ್ನುವ ಪರಿಸ್ಥಿತಿ ಇತ್ತು. ಆದ್ರೆ ಇದೀಗ ಆ ಸ್ಥಾನ ತುಂಬಲು ಏಕಲವ್ಯ ಸಜ್ಜಾಗಿದ್ದಾನೆ. ಏಕಲವ್ಯನಿಗೆ ಅರ್ಜುನನಿಗಿದ್ದ ಎಲ್ಲಾ ಅರ್ಹತೆಗಳು ಇವೆ. 39ನೇ ವಯಸ್ಸಿನಲ್ಲೇ ಆತನ ದೇಹದ ಬೆಳವಣಿಗೆ ಅದ್ಬುತವಾಗಿದೆ. ಆತನ ದಂತಗಳು ಆಕರ್ಷಕವಾಗಿವೆ. ಕಿವಿ, ಕಣ್ಣು, ಮುಖ ಲಕ್ಷಣವಾಗಿದೆ. ದಸರಾ ಅಂಬಾರಿ ಆನೆಗೆ ಇರಬೇಕಾದ ಬೆನ್ನು ಹಾವಭಾವ ಎಲ್ಲವೂ ಏಕಲವ್ಯನಿಗಿದೆ.
ಇದೆಲ್ಲಕ್ಕಿಂತ ಮುಖ್ಯವಾಗಿ ಏಕಲವ್ಯ ಯಾರಿಗೂ ತೊಂದರೆ ನೀಡದೆ ಹೇಳಿದ ಮಾತನ್ನು ಚಾಚು ತಪ್ಪದೇ ಪಾಲಿಸುವ ಗುರು ಮೆಚ್ಚಿದ ಶಿಷ್ಯನಾಗಿದ್ದಾನೆ. ಮಾವುತ ಸೃಜನ್ ಕಾವಾಡಿ ಹಿದಾಯತ್ ಹೇಳುವ ಮಾತನ್ನು ಅಪ್ಪಿ ತಪ್ಪಿಯೂ ಮೀರುವುದಿಲ್ಲ. ಯಾವುದೇ ಕಾರಣಕ್ಕೂ ಬೇರೆ ಆನೆಗಳ, ಮಾವುತರ, ಕಾವಾಡಿಗಳ ತಂಟೆಗೆ ಹೋಗುವುದಿಲ್ಲ. ಕೋಪ ಮಾಡಿಕೊಳ್ಳುವುದಿಲ್ಲ. ಇನ್ನು ವಿಶೇಷ ಅಂದ್ರೆ ಹುಷಾರು ತಪ್ಪಿದಾಗ ಅಥವಾ ಗಾಯ ಹುಣ್ಣುಗಳಾದಾಗ ಏಕಲವ್ಯ ಮಗುವಿನಂತೆ ಚಿಕಿತ್ಸೆಗೆ ಸ್ಪಂದಿಸುತ್ತಾನೆ. ಕೊಟ್ಟ ಔಷಧಿಯನ್ಜು ಹಠ ಮಾಡದೆ ಕುಡಿಯುತ್ತಾನೆ. ಹುಷಾರಾದ ನಂತರ ಚಿಕಿತ್ಸೆ ನೀಡಿದ ವೈದ್ಯರಿಗೆ ಸಲಾಂ ಹೊಡೆದು ಅವರನ್ನು ತನ್ನ ಬೆನ್ನ ಮೇಲೆ ಹೊತ್ತು ತಿರುಗಿಸುತ್ತಾನೆ. ಈ ಎಲ್ಲಾ ಕಾರಣದಿಂದಾಗಿ ಏಕಲವ್ಯ ಆನೆ ಈಗ ಎಲ್ಲರ ಅಚ್ಚು ಮೆಚ್ಚಾಗಿದ್ದಾನೆ.
ಅರ್ಜುನ ಆನೆಗೆ ಅರ್ಜುನ ಆನೆಯೇ ಸಾಟಿ. ಆತ ಕನ್ನಡಿಗರ ಹೃದಯ ಸಿಂಹಾಸನದಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದಿದ್ದಾನೆ. ಆದರೆ ಬದಲಾವಣೆ ಜಗದ ನಿಯಮ. ಇಲ್ಲಿ ಯಾವುದು ಶಾಶ್ವತ ಅಲ್ಲ. ಹೊಸ ನೀರು ಬಂದಾಗ ಹಳೆ ನೀರು ಕೊಚ್ಚಿ ಹೋಗುವುದು ಸಹಜ. ಅದರಂತೆ ಇದೀಗ ಎಲ್ಲರ ಕಣ್ಣ ಮುಂದೆ ಏಕಲವ್ಯ ಅರ್ಜುನ ಆನೆಯ ಸ್ಥಾನ ತುಂಬುವ ಭರವಸೆ ಮೂಡಿಸಿದ್ದಾನೆ. ಆತ ಆ ಭರವಸೆಯನ್ನು ಈಡೇರಿಸಲಿ. ವಿಶ್ವವಿಖ್ಯಾತ ಮೈಸೂರು ದಸರೆಯಲ್ಲಿ ಮುಂದೊಂದು ದಿನ ಅಂಬಾರಿ ಆನೆಯಾಗಿ ನಾಡದೇವತೆ ತಾಯಿ ಚಾಮುಂಡೇಶ್ವರಿ ಉತ್ಸವಮೂರ್ತಿಯನ್ನು ಹೊತ್ತು ಮೆರೆಸಲಿ. ನಾಡಿನ ಜನರ ಪ್ರೀತಿಗೆ ಪಾತ್ರನಾಗಲಿ ಅನ್ನೋದೆ ಟಿವಿ9ನ ಶುಭ ಹಾರೈಕೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.