ಗ್ಯಾರಂಟಿಯಿಂದಾಗಿ ಸಮಸ್ಯೆ ಎಂದು ನಮ್ಮವರೇ ಕೆಲವರು ಹೇಳ್ತಾರೆ: ಮಲ್ಲಿಕಾರ್ಜುನ ಖರ್ಗೆ ಬೇಸರ
ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಗಳನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮರ್ಥಿಸಿಕೊಂಡಿದ್ದಾರೆ. ಜನರು ಯೋಜನೆಗಳ ಪ್ರಯೋಜನ ಪಡೆದ ನಂತರವೂ ಸರ್ಕಾರವನ್ನು ಟೀಕಿಸುತ್ತಿರುವುದಕ್ಕೆ ಅವರು ಬೇಸರ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷದವರೇ ಕೆಲವರು ಅಪಸ್ವರ ಎತ್ತುತ್ತಿದ್ದಾರೆ ಎಂದೂ ಅವರು ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಗ್ಯಾರಂಟಿಗಳಿಂದಾಗಿ ಸರ್ಕಾರಕ್ಕೆ ಹಣಕಾಸಿನ ಸಮಸ್ಯೆ ಆಗಿಲ್ಲ ಎಂದರು.

ಮೈಸೂರು, ಜುಲೈ 19: ಕರ್ನಾಟಕ ಕಾಂಗ್ರೆಸ್ (Congress) ಸರ್ಕಾರವು ಉಚಿತ ಗ್ಯಾರಂಟಿ ಯೋಜನೆಗಳನ್ನು ಸಾಮಾನ್ಯ ಜನರಿಗಾಗಿ ಮಾಡಿದೆ. ಆದರೂ, ಜನರು ಅವುಗಳ ಪ್ರಯೋಜನ ಪಡೆದ ನಂತರ ಸರ್ಕಾರವನ್ನು ದೂರುವ ಕೆಲಸ ಮಾಡುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಬೇಸರ ವ್ಯಕ್ತಪಡಿಸಿದರು. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶದಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳನ್ನು ನಮಗಾಗಿ ನಾವು ಮಾಡಿಲ್ಲ. ಜನಸಾಮಾನ್ಯರಿಗಾಗಿ ಮಾಡಿದ್ದೇವೆ. ನೀವೆಲ್ಲ ಇದರ ಪ್ರಯೋಜನ ಪಡೆಯುತ್ತಿದ್ದೀರಿ. ಎಲ್ಲ ಪಕ್ಷದವರು ಪ್ರಯೋಜನ ಪಡೆಯುತ್ತಾರೆ. ಆಮೇಲೆ, ಅಭಿವೃದ್ಧಿ ಆಗುತ್ತಿಲ್ಲ. ರಾಜ್ಯ ಬರ್ಬಾದ್ ಆಗುತ್ತಿದೆ ಎಂದು ಟೀಕಿಸುತ್ತಾರೆ. ನಮ್ಮ ಪಕ್ಷದವರೇ ಕೆಲವರು ಆಗಾಗ ನನ್ನನ್ನು ಭೇಟಿಯಾದಾಗ ಹೀಗೆ ಹೇಳುತ್ತಿರುತ್ತಾರೆ ಎಂದರು.
ಗ್ಯಾರಂಟಿ ಯೋಜನೆಗಳನ್ನು ನಾವು ಕಾಂಗ್ರೆಸ್ನವರಿಗಷ್ಟೇ ನೀಡುತ್ತಿಲ್ಲ. ಎಲ್ಲ ವರ್ಗದ ಜನ, ಎಲ್ಲ ಪಕ್ಷದವರು ಅದರ ಪ್ರಯೋಜನ ಪಡೆಯುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಂದಾಗಿ ಸರ್ಕಾರದ ಬೊಕ್ಕಸ ಖಾಲಿ ಆಗಿಲ್ಲ ಎಂದು ಖರ್ಗೆ ಹೇಳಿದರು.
ಸಿದ್ದರಾಮಯ್ಯ ಇದ್ದಾಗ ಲಕ್ಷ್ಮೀ ಕಾಲುಕುಂಟಿಕೊಂಡು ಬಿದ್ದಿರುತ್ತಾಳೆ: ಖರ್ಗೆ
ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ದಿವಾಳಿಯಾಗಿದೆ ಎಂಬ ಪ್ರತಿಪಕ್ಷದವರ ಆರೋಪ ಸುಳ್ಳಿನಿಂದ ಕೂಡಿದೆ. ಸರ್ಕಾರದಲ್ಲಿ ದುಡ್ಡಿಲ್ಲ ಎಂದಾದರೆ, ಶಾಸಕರಿಗೆ 50 ಕೋಟಿ ರೂಪಾಯಿ ಅನುದಾನ ಬಿಡುಗಡೆ ಹೇಗೆ ಸಾಧ್ಯ ಎಂದು ಖರ್ಗೆ ಪ್ರಶ್ನಿಸಿದರು. ಅದೃಷ್ಟವಶಾತ್, ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗ ಕರ್ನಾಟಕದಲ್ಲಿ ದುಡ್ಡಿಗೆ ಬರ ಉಂಟಾಗುವುದಿಲ್ಲ. ಲಕ್ಷ್ಮೀ ಕಾಲು ಕುಂಟಿಕೊಂಡು ಬಿದ್ದಿರುತ್ತಾಳೆ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದರೆ, ಸರ್ಕಾರದಲ್ಲಿ ಹಣ ಇರುವುದಿಲ್ಲ ಎಂದು ಖರ್ಗೆ ಟೀಕಿಸಿದರು.
ಗ್ಯಾರಂಟಿ ಯೋಜನೆಗಳನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರ ಬಹಳ ಚೆನ್ನಾಗಿ, ಮಾದರಿಯಾಗಿ ಅನುಷ್ಠಾನಗೊಳಿಸಿದೆ. ದೇಶದ ವಿವಿಧ ಕಡೆಗಳಿಗೆ ನಾನು ಪ್ರವಾಸ ಮಾಡುತ್ತಿರುತ್ತೇನೆ. ಎಲ್ಲಿಯೂ ಈ ರೀತಿ ಯೋಜನೆಗಳು ಅನುಷ್ಠಾನವಾಗಿರುವುದನ್ನು ಕಂಡಿಲ್ಲ. ಕೆಲವು ರಾಜ್ಯಗಳಲ್ಲಿ ಬಿಜೆಪಿ ಕೂಡ ಗ್ಯಾರಂಟಿಗಳನ್ನು ನೀಡಿದೆ. ಆದರೆ ಎಲ್ಲಿಯೂ ಸರಿಯಾಗಿ ಅನುಷ್ಠಾನವಾಗಿಲ್ಲ ಎಂದು ಖರ್ಗೆ ದೂರಿದರು.
ಸಂವಿಧಾನ ಬದಲಾವಣೆ ಮಾಡಲು ಬಿಡಲ್ಲ: ಖರ್ಗೆ
ದೇಶದ ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಸೋತಿರಬಹುದು. ಆದರೆ ದೇಶದ ಕೋಟ್ಯಂತರ ಜನರು ನಮ್ಮ ಪರ ಇದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಜನ ನಮಗೆ ಇನ್ನೂ 10 ಸ್ಥಾನಗಳನ್ನು ಕೊಟ್ಟಿದ್ದರೆ ಮೋದಿ ಎಲ್ಲಿ ಅಧಿಕಾರಕ್ಕೆ ಬರುತ್ತಿದ್ದರು ಎಂದು ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.
ಇದನ್ನೂ ಓದಿ: ಕಾಂಗ್ರೆಸ್ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಭರ್ಜರಿ ಕೊಡುಗೆ! ಅಭಿವೃದ್ಧಿಗೆ ಅನುದಾನ ಘೋಷಣೆ
ಅಲ್ಲದೆ, ಸಂವಿಧಾನ ಬದಲಾವಣೆ ಮಾಡಲು ಬಿಜೆಪಿ, ಆರ್ಎಸ್ಎಸ್ ಹುನ್ನಾರ ಮಾಡುತ್ತಿವೆ. ಅದಕ್ಕೆ ಅವಕಾಶ ಕೊಡಲ್ಲ. ನರೇಂದ್ರ ಮೋದಿ ಅಹಂಕಾರ, ದುರಹಂಕಾರ ಇರುವ ಮನುಷ್ಯ. ಒಂದಲ್ಲ ಒಂದು ದಿನ ಕೆಳಗೆ ಬೀಳಬೇಕು, ಬೀಳುತ್ತಾರೆ ನೋಡಿ ಎಂದು ಖರ್ಗೆ ವಾಗ್ದಾಳಿ ನಡೆಸಿದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ