ಮುಟ್ಟುಗೋಲು ಹಾಕಿರುವ ಮುಡಾ ಸೈಟ್ ಮಾಹಿತಿ ಬಹಿರಂಗಪಡಿಸಲು ಆಗ್ರಹಿಸಿ ಇಡಿಗೆ ಪತ್ರ ಬರೆದ ಸ್ನೇಹಮಯಿ ಕೃಷ್ಣ
ಮುಡಾ ಹಗರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯಕ್ಕೆ ಸ್ನೇಹಮಯಿ ಕೃಷ್ಣ ಪತ್ರ ಬರೆದಿದ್ದು, ವಶಪಡಿಸಿಕೊಂಡಿರುವ 252 ಸೈಟ್‌ಗಳ ಮಾಹಿತಿಯನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ. ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳ ವಿವರಗಳನ್ನು ಬಹಿರಂಗಪಡಿಸುವಂತೆ ಮತ್ತು ಆಸ್ತಿಗಳಲ್ಲಿ ಫಲಕಗಳನ್ನು ಅಳವಡಿಸುವಂತೆ ಕೋರಿದ್ದಾರೆ. ಅಕ್ರಮಗಳನ್ನು ತಡೆಯುವುದಕ್ಕಾಗಿ ಈ ಕ್ರಮ ಅನಿವಾರ್ಯ ಎಂದು ಅವರು ಪ್ರತಿಪಾದಿಸಿದ್ದಾರೆ.

ಮೈಸೂರು, ಜುಲೈ 17: ಕರ್ನಾಟಕ ರಾಜಕೀಯದಲ್ಲಿ (Karnataka Policits) ಸಂಚಲನಕ್ಕೆ ಕಾರಣವಾಗಿದ್ದ ಮುಡಾ ಹಗರಣದ (MUDA Scam) ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯಕ್ಕೆ ಇತ್ತೀಚೆಗೆ ಮತ್ತಷ್ಟು ಮಹತ್ವದ ಅಂಶಗಳು ತಿಳಿದುಬಂದಿತ್ತು. ಮೊದಲಿಗೆ ಸುಮಾರು 300 ಕೋಟಿ ರೂ ಮೌಲ್ಯದ 160 ಆಸ್ತಿ ಮುಟ್ಟುಗೋಲು ಹಾಕಿಕೊಂಡಿದ್ದ ಇ.ಡಿ, ನಂತರ ಮತ್ತೆ 92 ಸೈಟ್ಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಒಬ್ಬನೇ ವ್ಯಕ್ತಿಗೆ ಅಕ್ರಮವಾಗಿ 30 ರಿಂದ 40 ನಿವೇಶನಗಳನ್ನು ಹಂಚಿಕೆ ಮಾಡಿರುವುದನ್ನು ಇತ್ತೀಚೆಗೆ ಪತ್ತೆಮಾಡಿತ್ತು. ಇದೀಗ, ಮುಟ್ಟುಗೋಲು ಹಾಕಿಕೊಂಡಿರುವ 252 ಸೈಟುಗಳ ಮಾಹಿತಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಬೇಕು ಎಂದು ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದಿದ್ದಾರೆ.
ಇ.ಡಿ ಮುಟ್ಟುಗೋಲು ಹಾಕಿಕೊಂಡಿರುವ ಸ್ವತ್ತುಗಳಲ್ಲಿ ಅವುಗಳ ವಿವರಗಳ ಫಲಕಗಳನ್ನು ಅಳವಡಿಸಲು, ಮುಟ್ಟುಗೋಲು ಹಾಕಿಕೊಂಡಿರುವ ಸ್ವತ್ತುಗಳ ವಿವರಗಳನ್ನು ಮಾಧ್ಯಮಗಳ ಮೂಲಕ ಪ್ರಕಟಿಸಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಿದ ಆಯುಕ್ತರಿಗೆ ಕೂಡಲೇ ಸೂಕ್ತ ಸೂಚನೆ ನೀಡಬೇಕು ಎಂದು ಸ್ನೇಹಮಯಿ ಕೃಷ್ಣ ಮನವಿ ಮಾಡಿದ್ದಾರೆ.
ಸ್ನೇಹಮಯಿ ಕೃಷ್ಣ ಇ.ಡಿಗೆ ಬರೆದ ಪತ್ರದಲ್ಲೇನಿದೆ?
‘‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿನ ನಿವೇಶನಗಳ ಹಂಚಿಕೆ ಅಕ್ರಮಗಳ ಸಂಬಂಧ ತಾವು (ಇಡಿ) ತನಿಖೆ ನಡೆಸುತ್ತಿರುವುದು ಸರಿಯಷ್ಟೆ. ಇದುವರೆಗೂ ನಡೆಸಿದ ತನಿಖೆಯಿಂದ ಸಂಗ್ರಹವಾಗಿರುವ ಸಾಕ್ಷ್ಯಾಧಾರಗಳನ್ನು ಆಧರಿಸಿ, 50:50 ಅನುಪಾತದಲ್ಲಿ ಹಂಚಿಕೆ ಮಾಡಿರುವ ಸಾವಿರಾರು ನಿವೇಶನಗಳಲ್ಲಿ ಮೊದಲಿಗೆ 160, ಇತ್ತಿಚೆಗೆ 92 ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಂಡಿರುವುದು ಸರಿಯಷ್ಟೆ. ಆದರೆ ಸದರಿ ನಿವೇಶನಗಳ ಸಂಖ್ಯೆ, ಅಳತೆ, ಬಡಾವಣೆಗಳ ಮತ್ತು ಹಾಲಿ ಯಾರ ಹೆಸರಿನಲ್ಲಿದೆ ಎಂಬ ಮಾಹಿತಿಯನ್ನು ಹೆಚ್ಚು ಪ್ರಚಾರ ಮಾಡಿಲ್ಲದಿರುವುದರಿಂದ ಮತ್ತು ಸದರಿ ಸ್ವತ್ತುಗಳಲ್ಲಿ ಮುಟ್ಟುಗೋಲು ಹಾಕಿಕೊಂಡಿರುವ ವಿವರಗಳ ಫಲಕವನ್ನು ಹಾಕಿಲ್ಲದಿರುವುದರಿಂದ, ಕೆಲವರು ಅಮಾಯಕರಿಗೆ ಸದರಿ ನಿವೇಶನಗಳನ್ನು ಮಾರಾಟ ಮಾಡುವ, ಸದರಿ ಸ್ವತ್ತುಗಳಲ್ಲಿ ಆಕ್ರಮವಾಗಿ ಕಟ್ಟಡಗಳನ್ನು ಕಟ್ಟುವ ಕೆಲಸಗಳನ್ನು ಮಾಡುತ್ತಿದ್ದಾರೆ. ಆದ್ದರಿಂದ ನಿಮ್ಮ ಸಂಸ್ಥೆಯಿಂದ ಮುಟ್ಟುಗೋಲು ಹಾಕಿಕೊಂಡಿರುವ ಸ್ವತ್ತುಗಳಲ್ಲಿ ಮೊಟ್ಟುಗೋಲು ಹಾಕಿಕೊಂಡಿರುವ ವಿವರಗಳ ಫಲಕಗಳನ್ನು ಅಳವಡಿಸಬೇಕು. ಸಂಸ್ಥೆ ಮುಟ್ಟುಗೋಲು ಹಾಕಿಕೊಂಡಿರುವ ಸ್ವತ್ತುಗಳ ವಿವರಗಳನ್ನು ಮಾಧ್ಯಮಗಳ ಮೂಲಕ ಪ್ರಕಟಿಸಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಿದ ಆಯುಕ್ತರಿಗೆ ಕೂಡಲೇ ಸೂಕ್ತ ಸೂಚನೆ ನೀಡಲು ಮನವಿ ಮಾಡಿಕೊಳ್ಳುತ್ತೇನೆ’’ ಎಂದು ಇ.ಡಿಗೆ ಬರೆದ ಪತ್ರದಲ್ಲಿ ಸ್ನೇಹಮಯಿ ಕೃಷ್ಣ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಮುಡಾ ಹಗರಣದ ಮತ್ತಷ್ಟು ಕರ್ಮಕಾಂಡ ಬಯಲು: ಒಬ್ಬನೇ ವ್ಯಕ್ತಿಗೆ 30ಕ್ಕೂ ಹೆಚ್ಚು ಸೈಟ್ ಹಂಚಿಕೆ, ಇಡಿ ತನಿಖೆಯಲ್ಲಿ ಪತ್ತೆ
ಕರ್ನಾಟಕ ರಾಜಕಾರಣ ಸೇರಿದಂತೆ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ಮುಡಾ ಹಗರಣದ ಹೋರಾಟದಲ್ಲಿ ಸ್ನೇಹಮಯಿ ಕೃಷ್ಣ ಮುಂಚೂಣಿಯಲ್ಲಿರುವವರು. ಮೊದಲಿಗೆ ಈ ಹಗರದಣದ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿ ಗಮನ ಸೆಳೆದಿದ್ದರು. ನಂತರ ಹಗರಣದ ತನಿಖೆಯನ್ನು ಲೋಕಾಯುಕ್ತ ಹಾಗೂ ಇ.ಡಿ ಸಹ ಕೈಗೆತ್ತಿಕೊಂಡಿವೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:54 pm, Thu, 17 July 25







