ನಾನು ಕೂಡ ಹಿಂದೂ: ಮಂದಿರ ಕಟ್ಟಿಸಿದ್ದೀವಿ ಎಂದ ಸಿಎಂ ಸಿದ್ದರಾಮಯ್ಯ
ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಆರೋಪ ಪ್ರಕರಣ ರಾಜಕೀಯ ವಲಯದಲ್ಲಿ ದೊಡ್ಡ ಸಂಚಲನ ಸೃಷ್ಟಿ ಮಾಡಿದೆ. ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅಪಪ್ರಚಾರ ನಡೆಯುತ್ತಿದೆ ಎಂದು ಆರೋಪಿಸಿ ಇದೀಗ ಬಿಜೆಪಿ ಬೃಹತ್ ಹೋರಾಟಕ್ಕೆ ಧುಮುಕಿದೆ. ರಾಜಕೀಯ ಲಾಭಕ್ಕಾಗಿ ಹೀಗೆ ಮಾಡುತ್ತಿದ್ದಾರೆ ಎಂದು ಬಿಜೆಪಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಮೈಸೂರು, ಸೆಪ್ಟೆಂಬರ್ 01: ಹಿಂದೂಗಳು (Hindu) ಎಂದರೆ ಅಪಪ್ರಚಾರ, ಸುಳ್ಳು ಹೇಳುವುದು ಮತ್ತು ರಾಜಕೀಯ ಮಾಡುವುದಲ್ಲ. ನಾನು ಕೂಡ ಹಿಂದೂ. ನಮ್ಮೂರಲ್ಲೂ ನಾವೇ ರಾಮಮಂದಿರ ನಿರ್ಮಾಣ ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ರಾಜಕೀಯ ಲಾಭಕ್ಕಾಗಿ ಹೀಗೆ ಮಾಡುತ್ತಿದ್ದಾರೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಹಮ್ಮಿಕೊಂಡಿರುವ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಮೈಸೂರು ಜಿಲ್ಲಾ ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ತಮ್ಮ ಹುಟ್ಟೂರು ಸಿದ್ದರಾಮನಹುಂಡಿಗೆ ಭೇಟಿ ನೀಡಿದರು. ಕರ್ನಾಟಕ ಪಬ್ಲಿಕ್ ಶಾಲೆ ಉದ್ಘಾಟನಾ ಕಾರ್ಯಕ್ರಮ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ರಾಜಕೀಯವಾಗಿ ನಡೆದುಕೊಳ್ಳುತ್ತಿದ್ದಾರೆ. ಇದರಿಂದ ರಾಜಕೀಯ ಲಾಭ ಸಿಗುತ್ತದೆ ಅಂತಾ ಮಾಡುತ್ತಿದ್ದಾರೆ, ಆದರೆ ಅವರಿಗೆ ಲಾಭ ಸಿಗಲ್ಲ ಎಂದು ಅವರು ಹೇಳಿದರು.
ಇದನ್ನೂ ಓದಿ: ಬಿಜೆಪಿಯಿಂದ ಇಂದು ಧರ್ಮಸ್ಥಳ ಚಲೋ ಬೃಹತ್ ಸಮಾವೇಶ: ವೀರೇಂದ್ರ ಹೆಗ್ಗಡೆ ಭೇಟಿಯಾದ ಆರ್ ಅಶೋಕ್
ಧರ್ಮಸ್ಥಳ ಕೇಸ್ನಲ್ಲಿ ಎಸ್ಐಟಿ ರಚಿಸಿದಾಗ ಏಕೆ ಮಾತನಾಡಲಿಲ್ಲ. ಈಗ ಮಾಡುತ್ತಿರುವ ಬಿಜೆಪಿ ನಾಯಕರದ್ದು ಡೋಂಗಿತನ. ಶ್ರೀಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದೇವೆ. ಧರ್ಮಸ್ಥಳ ವಿಚಾರದಲ್ಲಿ ರಾಜಕಾರಣ ಮಾಡಿದವರು ಯಾರು? ಬಿಜೆಪಿಯವರಿಗೆ ಸುಳ್ಳು ಹೇಳುವುದು ಬಿಟ್ಟು ಬೇರೆ ಏನಾದರೂ ಬರುತ್ತಾ? ಮನುಷ್ಯತ್ವ ಇಲ್ಲದಿದ್ದರೆ ಏನಂತ ಕರೆಯಬೇಕು ಎಂದು ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.
ಚಾಮುಂಡಿಬೆಟ್ಟ ಚಲೋಗೂ ಬಿಜೆಪಿ ಪ್ಲ್ಯಾನ್: ಇವರಿಂದ ಹಿಂದುತ್ವ ಗಟ್ಟಿಯಾಗಲ್ಲ ಎಂದ ಸಿಎಂ
ಇನ್ನು ಚಾಮುಂಡಿಬೆಟ್ಟ ಚಲೋಗೂ ಬಿಜೆಪಿಯಿಂದ ಪ್ಲ್ಯಾನ್ ವಿಚಾರವಾಗಿ ಮಾತನಾಡಿದ್ದು, ಹಿಂದುತ್ವ ಗಟ್ಟಿ ಆಗುತ್ತೆಂದು ಬಿಜೆಪಿ ಈ ಯಾತ್ರೆ ಪ್ಲ್ಯಾನ್ ಮಾಡುತ್ತಿದೆ. ಇವರಿಂದ ಹಿಂದುತ್ವ ಗಟ್ಟಿಯಾಗಲ್ಲ. ಅಮಾನವೀಯ ನಡವಳಿಕೆ ತೋರುವವರು ಹಿಂದೂಗಳಲ್ಲ. ಮನುಷ್ಯತ್ವ ಇರುವವರು ಹಿಂದೂಗಳು ಎಂದು ವಾಗ್ದಾಳಿ ಮಾಡಿದರು.
ಬಿಜೆಪಿಯವರು ದಸರಾದಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಅವರ ಮನೆಯನ್ನೂ ರಾಜಕೀಯಕ್ಕೆ ಬೇಕಾದರೆ ಬಳಸಿಕೊಳ್ಳುತ್ತಾರೆ. ಸುಳ್ಳು ಹೇಳುವುದು ಬಿಟ್ಟು ಬಿಜೆಪಿಗೆ ಏನು ಗೊತ್ತು? ಬಿಜೆಪಿ ಹೋರಾಟದಿಂದ ದಸರಾ ಮೇಲೆ ಕೆಟ್ಟ ಪರಿಣಾಮ ಬೀರಲ್ಲ. ಹಿಂದೂಗಳೆಲ್ಲಾ ಬಿಜೆಪಿ ಜೊತೆ ಇಲ್ಲ ಎಂದಿದ್ದಾರೆ.
ಇದನ್ನೂ ಓದಿ: ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ರನ್ನು ಆಹ್ವಾನಿಸಿದ್ದೇಕೆ: ಮೌನಮುರಿದ ಸಿಎಂ ಸಿದ್ದರಾಮಯ್ಯ
ಇನ್ನು ದಸರಾ ಉದ್ಘಾಟನೆ ವಿಚಾರವಾಗಿ ಮಾತನಾಡಿದ ಅವರು, ಮುಷ್ತಾಕ್ಗೆ ಗೌರವ ಕೊಡಲು ದಸರಾ ಉದ್ಘಾಟನೆ ಮಾಡಿಸ್ತಿದ್ದೇವೆ. ದಸರಾ ನಾಡಹಬ್ಬ ಅಲ್ವಾ. ಹಿಂದೂ, ಮುಸಲ್ಮಾನರು, ಕ್ರಿಶ್ಚಿಯನ್ನರು ಸೇರಿ ಎಲ್ಲರೂ ಆಚರಿಸ್ತಾರೆ ಎಂದಿದ್ದಾರೆ.
ದಸರಾ ಎಲ್ಲರಿಗೂ ಸೇರಿದ್ದು: ಸಿದ್ದರಾಮಯ್ಯ
ಚಾಮುಂಡಿಬೆಟ್ಟ ಹಿಂದೂಗಳ ಆಸ್ತಿ ಏನಲ್ಲ ಎಂಬ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಡಿ.ಕೆ.ಶಿವಕುಮಾರ್ ಹೇಳಿದ್ದು ನನಗೆ ಗೊತ್ತಿಲ್ಲ. ಮೈಸೂರಿನ ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿನೇ ಇರಬಹುದು, ಈಗ ವಿಚಾರ ಇರುವುದು ದಸರಾ, ಚಾಮುಂಡಿ ಬೆಟ್ಟದ್ದು ಅಲ್ಲ. ದಸರಾ ನಾಡಹಬ್ಬ, ಇದು ಎಲ್ಲರಿಗೂ ಸೇರಿದ್ದು. ದಸರಾ ವಿಚಾರ ಬಗ್ಗೆ ಮಾತ್ರ ಚರ್ಚೆಯಲ್ಲಿದೆ, ಚಾಮುಂಡಿ ಬೆಟ್ಟದ್ದಲ್ಲ ಎಂದು ಅವರು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



