ಪಾರಿವಾಳಕ್ಕೆ ಆಹಾರ ಹಾಕುವುದಕ್ಕೆ ಬ್ರೇಕ್: ಮೈಸೂರು ದಸರಾ ಆನೆಗಳಿಗೆ ಸಂಕಷ್ಟ!
ಪಾರಿವಾಳಗಳಿಗೆ ಕಾಳು ಹಾಕುವುದಕ್ಕೆ ದಿಢೀರ್ ಬ್ರೇಕ್ ಹಾಕಿದ ಪರಿಣಾಮ ಆಹಾರವಿಲ್ಲದೆ ಪಾರಿವಾಳಗಳು ಪರದಾಡುತ್ತಿವೆ. ಆಹಾರಕ್ಕಾಗಿ ಪಾರಿವಾಳಗಳು ಆನೆಗಳ ಹಿಂದೆ ಮುಂದೆ ಸುತ್ತುತ್ತಿವೆ. ಆನೆಗಳು, ಮಾವುತರಿಗೆ ಪಾರಿವಾಳಗಳನ್ನು ಓಡಿಸುವುದೇ ದೊಡ್ಡ ತಲೆ ನೋವಾಗಿದೆ. ಪಾರಿವಾಳಗಳಿಂದ ದಸರಾ ಗಜಪಡೆಗೆ ಕಿರಿ ಕಿರಿ ಉಂಟಾಗಿದೆ.
ಮೈಸೂರು, ಸೆ.24: ಮೈಸೂರು ಅರಮನೆ (Mysuru Palace) ಮುಂಭಾಗದಲ್ಲಿ ಪಾರಿವಾಳಗಳಿಗೆ (Pigeon) ಕಾಳು ಹಾಕುವುದನ್ನು ನಿಲ್ಲಿಸಬೇಕೆಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Krishnadatta Chamaraja Wadiyar) ಅವರ ನೇತೃತ್ವದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಹೀಗಾಗಿ ಅರಮನೆ ಮುಂಭಾಗದಲ್ಲಿ ಪಾರಿವಾಳಗಳಿಗೆ ಕಾಳು ಹಾಕಲಾಗುತ್ತಿಲ್ಲ. ಆದರೆ ಇದರಿಂದ ದಸರಾ ಆನೆಗಳಿಗೆ (Dasara Elephants) ಸಂಕಷ್ಟ ಎದುರಾಗಿದೆ. ವಿಶ್ವವಿಖ್ಯಾತ ಮೈಸೂರು ಅರಮನೆ ಬಳಿ ಪಾರಿವಾಳಗಳಿಗೆ ಆಹಾರ ಹಾಕುವುದಕ್ಕೆ ಬ್ರೇಕ್ ಬಿದ್ದಿರುವುದರಿಂದ ಗಜಪಡೆ ಆಹಾರಕ್ಕೆ ಪಾರಿವಾಳಗಳು ಮುಗಿ ಬಿದ್ದಿವೆ.
ಪಾರಿವಾಳಗಳಿಂದ ದಸರಾ ಗಜಪಡೆಗೆ ಕಿರಿ ಕಿರಿ ಉಂಟಾಗಿದೆ. ಆಹಾರಕ್ಕಾಗಿ ಪಾರಿವಾಳಗಳು ಆನೆಗಳ ಹಿಂದೆ ಮುಂದೆ ಸುತ್ತುತ್ತಿವೆ. ಆನೆಗಳಿಗೆ ಆಹಾರ ನೀಡುವಾಗ ಪರಿವಾಳಗಳು ಮುಗಿಬೀಳುತ್ತಿವೆ. ಆನೆಗಳು, ಮಾವುತರಿಗೆ ಪಾರಿವಾಳಗಳನ್ನು ಓಡಿಸುವುದೇ ದೊಡ್ಡ ತಲೆ ನೋವಾಗಿದೆ. ಪದೇ ಪದೇ ಪಾರಿವಾಳಗಳು ಆನೆ ಬಳಿ ಕೂರುತ್ತಿರುವುದರಿಂದ ಆನೆಗಳಿಗೂ ಸಂಕಟವಾಗುತ್ತಿದೆ. ಪಾರಿವಾಳಗಳನ್ನು ಓಡಿಸಿ ಮಾವುತ ಕಾವಾಡಿಗಳು ಹೈರಾಣಾಗುತ್ತಿದ್ದಾರೆ.
ಪಾರಿವಾಳಗಳಿಗೆ ಕಾಳು ಹಾಕುವುದಕ್ಕೆ ದಿಢೀರ್ ಬ್ರೇಕ್ ಹಾಕಿದ ಪರಿಣಾಮ ಆಹಾರವಿಲ್ಲದೆ ಪಾರಿವಾಳಗಳು ಪರದಾಡುತ್ತಿವೆ. ಈ ಹಿಂದೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಬಳಿ ಪಕ್ಷಿ ಪ್ರಿಯರು ಕಾಳು ಹಾಕುತ್ತಿದ್ದರು. ಆದರೆ ಈಗ ಕಾಳು ಹಾಕುತ್ತಿದ್ದವರಿಗೂ ಹಾಕಬೇಡಿ ಎಂದು ನಿರ್ಬಂಧ ಹೇರಲಾಗಿದೆ. ಸಂಸದ ಯದುವೀರ್ ನೇತೃತ್ವದಲ್ಲಿ ಸಭೆ ನಡೆಸಿ ನಿರ್ಧಾರ ಮಾಡಲಾಗಿದೆ. ಪಾರಿವಾಳಗಳ ಆಹಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡದೆ ದಿಢೀರ್ ಆಗಿ ಕಾಳು ಹಾಕುವುದನ್ನು ರದ್ದು ಮಾಡಲಾಗಿದೆ. ಪಾರಿವಾಳಗಳಿಗೆ ಪರ್ಯಾಯ ವ್ಯವಸ್ಥೆ ಮಾಡದಿದ್ದರೆ ಗಜಪಡೆಗೆ ಮತ್ತಷ್ಟು ಸಮಸ್ಯೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಮೈಸೂರು ಅರಮನೆ ಮುಂದೆ ಪಾರಿವಾಳಗಳಿಗೆ ಆಹಾರ ಹಾಕುವುದು ಬಂದ್: ಯದುವೀರ್ ನೇತೃತ್ವದ ಸಭೆ ಯಶಸ್ವಿ
ಪಾರಿವಾಳಗಳಿಂದ ಅಸ್ತಮ, ಅಲರ್ಜಿ, ಮಕ್ಕಳಿಗೆ ಸಮಸ್ಯೆ ಆಗುತ್ತದೆ. ಹೀಗಾಗಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕಿದೆ. ಚಾಮರಾಜ ಒಡೆಯರ್, ಅಂಬೇಡ್ಕರ್ ಪ್ರತಿಮೆಗಳಿಗೆ ಹಾನಿಯಾಗುತ್ತದೆ. ಪಾರಿವಾಳಗಳಿಗೆ ಕಾಳು ಹಾಕುವುದನ್ನು ನಿಲ್ಲಿಸುವುದಕ್ಕೆ ಕಾನೂನು ಆಗಬೇಕಿದೆ. ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂದ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತೆ. ಸಾರ್ವಜನಿಕ ಆರೋಗ್ಯ ಕಾಳಜಿಯಿಂದ ಪಾರಿವಾಳಗಳಿಗೆ ಅಹಾರ ಹಾಕುವುದನ್ನು ನಿಲ್ಲಿಸಬೇಕು ಎಂದು ಸಂಸದ ಯದುವೀರ್ ಓಡೆಯರ್ ತಿಳಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ