AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು ಝೂನಲ್ಲಿ ಎರಡು ದಿನಗಳ ಹಿಂದೆ ಮರಿಗೆ ಜನ್ಮ ನೀಡಿದ್ದ ಹೆಣ್ಣು ಜೀಬ್ರಾ ‘ಪ್ರಾಚಿ’ ನಿಧನ

ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದ 10 ವರ್ಷದ ಹೆಣ್ಣು ಜೀಬ್ರಾ 'ಪ್ರಾಚಿ' ಕರುಳಿನ ಕಾಯಿಲೆಯಿಂದ ನಿಧನವಾಗಿದೆ. ಹೆರಿಗೆಯ ನಂತರ ಉಂಟಾದ ತೀವ್ರ ಆರೋಗ್ಯ ಸಮಸ್ಯೆಗಳಿಂದ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ. ಇಸ್ರೇಲ್‌ನಿಂದ ತರಲಾಗಿದ್ದ ಪ್ರಾಚಿ, ಮೃಗಾಲಯದ ಪ್ರಮುಖ ಆಕರ್ಷಣೆಯಾಗಿತ್ತು. ಇದೀಗ ಹುಟ್ಟಿದ ಪುಟ್ಟ ಮರಿಗೆ ಮೃಗಾಲಯದ ಸಿಬ್ಬಂದಿ ವಿಶೇಷ ಕಾಳಜಿ ವಹಿಸಿ ಆರೈಕೆ ಮಾಡುತ್ತಿದ್ದಾರೆ, ಪ್ರವಾಸಿಗರ ಮನಗೆದ್ದ ಪ್ರಾಚಿ ಇಲ್ಲವಾಗಿರುವುದು ಮೃಗಾಲಯದಲ್ಲಿ ದುಃಖಕ್ಕೆ ಕಾರಣವಾಗಿದೆ.

ಮೈಸೂರು ಝೂನಲ್ಲಿ ಎರಡು ದಿನಗಳ ಹಿಂದೆ ಮರಿಗೆ ಜನ್ಮ ನೀಡಿದ್ದ ಹೆಣ್ಣು ಜೀಬ್ರಾ 'ಪ್ರಾಚಿ' ನಿಧನ
ಮೈಸೂರು ಝೂನಲ್ಲಿ ಎರಡು ದಿನಗಳ ಹಿಂದೆ ಮರಿಗೆ ಜನ್ಮ ನೀಡಿದ್ದ ಹೆಣ್ಣು ಜೀಬ್ರಾ ಪ್ರಾಚಿ ನಿಧನ
ಭಾವನಾ ಹೆಗಡೆ
|

Updated on: Feb 09, 2026 | 11:22 AM

Share

ಮೈಸೂರು, ಫೆಬ್ರುವರಿ 09: ನಗರದ ಚಾಮರಾಜೇಂದ್ರ ಮೃಗಾಲಯದಲ್ಲಿ (Mysore Zoo) ಹೆಣ್ಣು ಜೀಬ್ರಾ “ಪ್ರಾಚಿ” ಸಾವನ್ನಪ್ಪಿದೆ. ಕರುಳಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದ 10 ವರ್ಷದ ಪ್ರಾಚಿ, ಎರಡು ದಿನಗಳ ಹಿಂದೆ ಹೆಣ್ಣು ಮರಿಗೆ ಜನ್ಮ ನೀಡಿತ್ತು. ನಂತರ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದೆ.

ಇಸ್ರೇಲ್​ನಿಂದ ಬಂದಿದ್ದ ಪ್ರಾಚಿ

ಪ್ರಾಚಿಯನ್ನು 2018ರ ಸೆಪ್ಟೆಂಬರ್ 4ರಂದು ಇಸ್ರೇಲ್‌ನ ರಾಮತ್ ಗ್ಯಾನ್‌ನಲ್ಲಿರುವ ಮೃಗಾಲಯದಿಂದ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ತರಲಾಗಿತ್ತು. ಕಳೆದ 10 ವರ್ಷಗಳಿಂದ ಮೃಗಾಲಯದ ಪ್ರಮುಖ ಆಕರ್ಷಣೆಯಾಗಿದ್ದ ಪ್ರಾಚಿ, ಇಲ್ಲಿಯವರೆಗೆ ಐದು ಮರಿಗಳಿಗೆ ಜನ್ಮ ನೀಡಿದ್ದು, ಇತ್ತೀಚೆಗೆ ಆರನೇ ಮರಿಯನ್ನು ಹೆತ್ತಿತ್ತು. ಹೆರಿಗೆ ನಂತರ ಪ್ರಾಚಿಯ ಆರೋಗ್ಯದಲ್ಲಿ ಗಂಭೀರ ಸಮಸ್ಯೆಗಳು ಕಾಣಿಸಿಕೊಂಡಿದ್ದು, ಕರುಳಿನ ಕಾಯಿಲೆಯಿಂದ ಬಳಲುತ್ತಿತ್ತು. ಮೃಗಾಲಯದ ಪಶುವೈದ್ಯರು ಮತ್ತು ಸಿಬ್ಬಂದಿ ನಿರಂತರ ಚಿಕಿತ್ಸೆ ನೀಡಿ ಮತ್ತು ಆರೈಕೆ ಮಾಡಿದರೂ, ಎರಡು ದಿನಗಳ ಬಳಿಕ ಚಿಕಿತ್ಸೆ ಫಲಿಸದೆ ಪ್ರಾಚಿ ಮೃತಪಟ್ಟಿದೆ.

ಇದನ್ನೂ ಓದಿ ಪ್ರವಾಸಿಗರೇ ಮೈಸೂರಿಗೆ ಹೋದ್ರೆ ‘ಮಧುವನ’ ಕ್ಕೆ ಭೇಟಿ ನೀಡಲೇಬೇಕು: ಇಲ್ಲಿ ಏನಿದೆ ಗೊತ್ತಾ?

ಪುಟ್ಟ ಮರಿಯ ಆರೈಕೆ ಮಾಡುತ್ತಿರುವ ಝೂ ಸಿಬ್ಬಂದಿ

ಪ್ರಾಚಿ ಸಾವಿನಿಂದ ಮೃಗಾಲಯದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದ್ದು, ಕೆಲವೇ ದಿನಗಳ ಹಿಂದೆ ಮರಿ ಜನನದ ಸಂಭ್ರಮ ಕಂಡಿದ್ದ ಮೃಗಾಲಯ ಇದೀಗ ದುಃಖಕ್ಕೆ ಒಳಗಾಗಿದೆ. ಪ್ರಾಚಿಗೆ ಜನಿಸಿದ ಹೆಣ್ಣು ಮರಿ ಸಂಪೂರ್ಣ ಆರೋಗ್ಯವಾಗಿದ್ದು, ಮೃಗಾಲಯದ ಸಿಬ್ಬಂದಿ ಹಾಲುಣಿಸಿ ವಿಶೇಷ ಆರೈಕೆ ನೀಡುತ್ತಿದ್ದಾರೆ. ಪಶುವೈದ್ಯರ ನಿಗಾದಲ್ಲಿ ಮರಿಯನ್ನು ಬೆಳೆಸಲಾಗುತ್ತಿದೆ. ಮರಣೋತ್ತರ ಪರೀಕ್ಷೆಯ ನಂತರ ನಿಯಮಾನುಸಾರ ಪ್ರಾಚಿಯ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ತನ್ನ ವಿಶಿಷ್ಟ ಮೈಬಣ್ಣ ಮತ್ತು ಪಟ್ಟೆಗಳಿಂದ ಪ್ರವಾಸಿಗರು, ಮಕ್ಕಳ ಮನ ಗೆದ್ದಿದ್ದ ಪ್ರಾಚಿ ಶಾಶ್ವತವಾಗಿ ಕಣ್ಮುಚ್ಚಿದ್ದಾಳೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.