ಪುರಾತನ ಕಾಲದ ಸೇತುವೆಯನ್ನು ರಕ್ಷಿಸುವಂತೆ ರಾಷ್ಟ್ರಪತಿ, ಪ್ರಧಾನಿ ಮೊರೆ ಹೋದ ಕೊಡಗಿನ ವಕೀಲರು
ಮೈಸೂರು ಮತ್ತು ಕೊಡಗು ಜಿಲ್ಲೆಗಳ ಗಡಿ ಭಾಗದಲ್ಲಿರುವ ಕುಶಾಲನಗರ ಅರಣ್ಯ ತಪಾಸಣಾ ಗೇಟ್ ಬಳಿ 1848ರಲ್ಲಿ ಬ್ರಿಟಿಷರು ನಿರ್ಮಿಸಿದ ಸೇತುವೆಯನ್ನು ಸಂರಕ್ಷಣೆ ಹಾಗೂ ಅಭಿವೃದ್ಧಿ ಮಾಡುವಂತೆ ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿ ಕಚೇರಿಗೆ ಕೊಡಗಿನ ಇಬ್ಬರು ವಕೀಲರು ಪತ್ರ ಬರೆದಿದ್ದಾರೆ.
ಮೈಸೂರು, ಅ.12: ಕೊಡಗು-ಮೈಸೂರು ಜಿಲ್ಲೆಗಳನ್ನು ಬೆಸೆಯುವ ಪುರಾತನ ಕಾಲದ ಸೇತುವೆಯನ್ನು (Old Bridge) ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಕೊಡಗಿನ ಇಬ್ಬರು ವಕೀಲರು ರಾಷ್ಟ್ರಪತಿ (Draupadi Murmu) ಹಾಗೂ ಪ್ರಧಾನಮಂತ್ರಿ (Narendra Modi) ಕಚೇರಿಯ ನೆರವು ಕೋರಿ ಹೋರಾಟಕ್ಕೆ ಮುಂದಾಗಿದ್ದಾರೆ. 1848 ರಲ್ಲಿ ಕುಶಾಲನಗರ ಪಟ್ಟಣದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಸೇತುವೆಯನ್ನು ಸಂರಕ್ಷಿಸುವಂತೆ ಕೋರಿ ವಕೀಲರಾದ ಎನ್‌ಪಿ ಅಮೃತೇಶ್ ಮತ್ತು ದೀಕ್ಷಾ ಎನ್ ಅಮೃತೇಶ್ ಅವರು ರಾಷ್ಟ್ರಪತಿ ಮತ್ತು ಪಿಎಂಒ ಕಚೇರಿಗೆ ಸಂಪರ್ಕಿಸಿದ್ದಾರೆ.
ಮೈಸೂರು ಮತ್ತು ಕೊಡಗು ಜಿಲ್ಲೆಗಳ ಗಡಿ ಭಾಗದಲ್ಲಿರುವ ಕುಶಾಲನಗರ ಅರಣ್ಯ ತಪಾಸಣಾ ಗೇಟ್ ಬಳಿ 1848ರಲ್ಲಿ ಬ್ರಿಟಿಷರು ನಿರ್ಮಿಸಿದ ಸೇತುವೆಯನ್ನು ಪ್ರಾಚೀನ ಸ್ಮಾರಕ ಎಂದು ಘೋಷಿಸುವಂತೆ ಆಗ್ರಹಿಸಿ ಹೈಕೋರ್ಟ್ ವಕೀಲರೂ ಆದ ಸಾಮಾಜಿಕ ಕಾರ್ಯಕರ್ತ ಎನ್.ಪಿ.ಅಮೃತೇಶ್ ಅವರು ಪುರಾತತ್ವ ಮತ್ತು ವಸ್ತು ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆಗೆ ಪತ್ರ ಬರೆದಿದ್ದಾರೆ.
1848 ರಲ್ಲಿ ಉದ್ಘಾಟನೆಗೊಂಡ ಸೇತುವೆ
ಇನ್ನು ಸೇತುವೆಗೆ ತುರ್ತು ಸಂರಕ್ಷಣೆ ಅಗತ್ಯವಿದೆ ಎಂದು ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಸೇತುವೆಗೆ ಜನವರಿ 1, 1846 ರಂದು ಅಂದಿನ ಕೊಡಗು ಅಧೀಕ್ಷಕ ಕ್ಯಾಪ್ಟನ್ ಡಬ್ಲ್ಯೂಸಿ ಒನ್ಸ್ಲೋ ಅವರು ಅಡಿಪಾಯವನ್ನು ಹಾಕಿದರು. 1848 ರಲ್ಲಿ ಅಂದಿನ ಕೊಡಗು-ಮೈಸೂರು ಕಮಿಷನರ್ ಅಗಿದ್ದ ಮಾರ್ಕ್ ಕಬ್ಬನ್ ಅವರು ಉದ್ಘಾಟನೆ ಮಾಡಿದ್ದರು. ಇದಕ್ಕೆ ಫ್ರೇಜರ್ ಪೇಟ್ ಬ್ರಿಡ್ಜ್ ಎಂದು ನಾಮಕರಣ ಮಾಡಲಾಯಿತು.
ವಕೀಲರು ತಮ್ಮ ಪತ್ರದಲ್ಲಿ, ಈ ಸೇತುವೆಯ ಉದ್ದ 200 ಮೀಟರ್ ಮತ್ತು ಎಂಟು ಕಲ್ಲಿನ ಕಂಬಗಳಿಂದ ಬೆಂಬಲಿತವಾಗಿದೆ, ಪ್ರತಿಯೊಂದು ಕಲ್ಲನ್ನು 40 ಅಡಿ ಅಗಲ 30 ಅಡಿ ಅಂತರದಲ್ಲಿ ಇರಿಸಲಾಗಿದೆ. ಗೋಪುರಗಳ ಆಕಾರದಲ್ಲಿ ನಿರ್ಮಿಸಲಾದ ಕಂಬಗಳು ಮತ್ತು ಮರಳು, ಮೊಟ್ಟೆಯ ಚಿಪ್ಪು ಮತ್ತು ಸುಣ್ಣದ ವಿಶಿಷ್ಟ ಮಿಶ್ರಣದಿಂದ ಪ್ಲ್ಯಾಸ್ಟೆಡ್ ಮಾಡಲಾಗಿದ್ದು, ಪ್ರವಾಹದ ಸಮಯದಲ್ಲಿ ಹೆಚ್ಚುವರಿ ನೀರನ್ನು ನಿಯಂತ್ರಿಸಲು ಕವಾಟಗಳು, ದೊಡ್ಡ ರಂಧ್ರಗಳನ್ನು ಮಾಡಲಾಗಿದೆ. ಸೇತುವೆಯ ರಕ್ಷಣಾತ್ಮಕ ಗೋಡೆಗಳು, ಅರಮನೆಯ ನಿರ್ಮಾಣಗಳನ್ನು ಹೋಲುತ್ತವೆ, ಇಂದಿಗೂ ಬಲಿಷ್ಠವಾಗಿ ನಿಂತಿವೆ. ಈ ಸೇತುವೆ ಹಿಂದಿನ ಯುಗದ ವಾಸ್ತುಶಿಲ್ಪದ ವೈಭವವನ್ನು ಹೋಲುತ್ತದೆ ಎಂದು ವಿವರಿಸಿದ್ದಾರೆ.
ಹೊಸ ಸೇತುವೆಗೆ ಹೋಲಿಸಿದರೆ ಹಳೆಯ ಸೇತುವೆ ಇನ್ನೂ ಚೆನ್ನಾಗಿದೆ. 2001-02ರ ಅವಧಿಯಲ್ಲಿ ಹೊಸ ಸೇತುವೆ ನಿರ್ಮಾಣಗೊಂಡು ಬಳಕೆಗೆ ಮುಕ್ತವಾದ ನಂತರದಿಂದ ಹಳೆ ಸೇತುವೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ದುಃಖಕರವೆಂದರೆ, ಕಳಪೆ ನಿರ್ವಹಣೆಯು ಈ ವಾಸ್ತುಶಿಲ್ಪದ ಅದ್ಭುತಕ್ಕೆ ಹಾನಿಯನ್ನುಂಟುಮಾಡುತ್ತಿದೆ ಎಂದು ಅಮೃತೇಶ್ ವಿವರಿಸಿದ್ದಾರೆ. ಈ ಸೇತುವೆಯನ್ನು ಆಂಗ್ಲೋ-ಇಂಡಿಯನ್ ಶೈಲಿಯಲ್ಲಿ ನಿರ್ಮಿಸಲಾಗಿದೆ ಎಂದು ಪುರಾತತ್ವ, ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತ ದೇವರಾಜು ತಿಳಿಸಿದ್ದಾರೆ. ಈ ಸ್ಮಾರಕದ ಬಗ್ಗೆ ನಮಗೆ ವರದಿ ಬಂದಿದೆ. ಅದರ ಸಂರಕ್ಷಣೆ ಕುರಿತು ನಾವು ನೀರಾವರಿ ಇಲಾಖೆಗೆ ಪತ್ರ ಬರೆಯುತ್ತೇವೆ ಮತ್ತು ಅಗತ್ಯವಿರುವ ಎಲ್ಲ ಬೆಂಬಲವನ್ನು ನೀಡಲು ನಾವು ಸಿದ್ಧರಿದ್ದೇವೆ. ನೀರಾವರಿ ಇಲಾಖೆ ನಮ್ಮ ಇಲಾಖೆಗೆ ಹಣ ಬಿಡುಗಡೆ ಮಾಡಿದರೆ ಸಂರಕ್ಷಣಾ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಸಿದ್ಧರಿದ್ದೇವೆ ಎಂದು ದೇವರಾಜು ಅವರು ತಿಳಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:50 pm, Thu, 12 October 23