ಮೋಹನ್ದಾಸ್ ಪೈ ವಿರುದ್ಧ ನಾರಾಯಣಗೌಡ ಕಿಡಿ: ಮೀಸಲಾತಿ ವಿಧೇಯಕ ಮಂಡನೆಗೆ ಸರ್ಕಾರಕ್ಕೆ 15 ದಿನ ಗಡುವು
ಕನ್ನಡಿಗರಿಗೆ ಉದ್ಯೋಗ ಮೀಸಲಾತಿಯ ಕರಡು ಮಸೂದೆ ಜಾರಿಗೆ ತರುವುದಾಗಿ ಘೋಷಿಸಿದ ತಕ್ಷಣವೇ ದೊಡ್ಡ ಪ್ರಮಾಣದಲ್ಲಿ ವಿರೋಧ ವ್ಯಕ್ತಗೊಂಡಿತ್ತು. ಪ್ರಮುಖ ಉದ್ಯಮಿಗಳು ಆಕ್ಷೇಪ ಎತ್ತಿದ್ದರು. ನೆರೆ ರಾಜ್ಯದ ಸರ್ಕಾರಗಳೂ ಇದರ ಬಗ್ಗೆ ತಕರಾರು ಎತ್ತಿದ್ದವು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ, ಮಸೂದಗೆ ತಾತ್ಕಾಲಿಕ ತಡೆಹಿಡಿದಿದೆ. ಆದ್ರೆ, ಇತ್ತ ಕನ್ನಡಪರ ಸಂಘಟನೆಗಳು ರಾಜ್ಯ ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದು, 15 ದಿನ ಗಡುವು ನೀಡಿದೆ.
ಬೆಂಗಳೂರು, ಜುಲೈ 18: ಕರ್ನಾಟಕದಲ್ಲಿರುವ ಖಾಸಗಿ ಕೈಗಾರಿಕೆಗಳು ಹಾಗೂ ಇತರೆ ಸಂಸ್ಥೆಗಳ ಆಡಳಿತಾತ್ಮಕ ಹುದ್ದೆಗಳಲ್ಲಿ ಕನ್ನಡಿಗರಿಗೆ ಶೇ.50 ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಲ್ಲಿ ಶೇ.75 ಮೀಸಲಾತಿ (Karnataka Jobs Reservation) ನಿಗದಿಪಡಿಸುವ ಕರಡು ಮಸೂದೆಗೆ ಸರ್ಕಾರ ತಾತ್ಕಾಲಿಕ ತಡೆ ನೀಡಿದೆ. ಸಂಪುಟ ಅನುಮೋದನೆ ನೀಡಲಾಗಿದ್ದ ಮಸೂದೆ ಕುರಿತು ಮುಂದಿನ ದಿನಗಳಲ್ಲಿ ಮತ್ತೊಂದು ಬಾರಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಕಚೇರಿಯಿಂದ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ. ಇದರ ಬೆನ್ನಲ್ಲೇ ಇತ್ತ ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಇಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ (Narayana Gowda) ಮಾತನಾಡಿ, ಯಾವುದೇ ಬ್ಲ್ಯಾಕ್ ಮೇಲ್ಗೆ ಹೆದರಬೇಡಿ. ವಿಧೇಯಕ ಮಂಡನೆಗೆ ನಿರ್ಣಯ ಮಾಡಬೇಕೆಂದು ಸರ್ಕಾರಕ್ಕೆ 15 ದಿನ ಗಡುವು ನೀಡಿದ್ದಾರೆ.
15 ದಿನಗಳ ಗಡುವು: ಇಲ್ಲದಿದ್ದರೆ ದಂಗೆ
ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 15 ದಿನಗಳ ಗಡುವು ನೀಡುತ್ತೇವೆ. ಅಷ್ಟರೊಳಗೆ ವಿಧೇಯಕ ಮಂಡನೆಗೆ ನಿರ್ಣಯ ತೆಗೆದುಕೊಳ್ಳದಿದ್ದರೆ ರಾಜ್ಯಾದ್ಯಂತ ದಂಗೆ ಎಳಲು ಕರೆ ನೀಡುತ್ತೇವೆ. ಜುಲೈ 25ರಂದು ಸಂಘಟನೆಯ ಸಭೆ ಕರೆದಿದ್ದೇವೆ. ಮುಂದಿನ ನಡೆ ಕುರಿತಂತೆ ಸಭೆಯಲ್ಲಿ ನಿರ್ಣಯ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಕಳೆದ 40 ವರ್ಷಗಳಿಂದ ಕನ್ನಡ ನೆಲದ ಮಕ್ಕಳಿಗೆ ಉದ್ಯೋಗ ಸಿಗಬೇಕು ಎಂದು 40 ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಆದರು ಕೂಡ ನಮ್ಮ ಬೇಡಿಕೆ ಈಡೇರುತ್ತಿಲ್ಲ. ಜುಲೈ 1 ರಂದು ಪ್ರತಿಭಟನೆ ಮಾಡಿ ಸಿಎಂ ಅವರನ್ನು ಭೇಟಿ ಮಾಡಿದ್ದೇವು. ಅಂದು ನಮ್ಮ ಸರ್ಕಾರ ಕನ್ನಡ ಪರವಾಗಿ ಇದೆ ನಮ್ಮ ಬೆಂಬಲ ಇದೆ. ಅಡ್ವೊಕೇಟ್ ಜನರಲ್ ಅವರನ್ನು ಕರೆಯಿಸಿ ಈ ಬಗ್ಗೆ ನಿರ್ಣಯ ಕೈಗೊಳ್ಳುವುದಾಗಿ ಹೇಳಿದ್ದರು ಎಂದರು.
ಸೋಮವಾರ ಸಚಿವ ಸಂಪುಟದಲ್ಲಿ ಕನ್ನಡಿಗರ ಮೀಸಲಾತಿಗಾಗಿ ರಾಜ್ಯ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದ್ದರು. ನಿನ್ನೆ ಸಿದ್ಧರಾಮಯ್ಯರನ್ನು ಭೇಟಿ ಮಾಡಿ ನಾನು ಅಭಿನಂದಿಸಿದ್ದೆ. ಆ ಸಂದರ್ಭದಲ್ಲಿ ನಾವು ಕನ್ನಡಿಗರ ಪರ ಇದ್ದೇವೆ ಅಂದಿದ್ದರು. ಅದೇ ಸಾಯಂಕಾಲ ಖಾಸಗಿ ಕ್ಷೇತ್ರದಲ್ಲಿ ಕನ್ನಡಿಗರ ವಿಧೇಯಕಕ್ಕೆ ತಡೆ ಹಿಡಿಯಲಾಗಿದೆ ಅಂತ ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: ಕನ್ನಡಿಗರಿಗೆ ಉದ್ಯೋಗ ಮೀಸಲಾತಿ: ಯು ಟರ್ನ್ ಸರ್ಕಾರ ಎಂದು ಗುಡುಗಿದ ವಿಜಯೇಂದ್ರ
ಕನ್ನಡಿಗರು ನಿಮ್ಮ ಜೊತೆಯಲ್ಲಿ ಇದ್ದೇವೆ. ನಾಳೆ ಸಂಪುಟದಲ್ಲಿ ಸಾಧಕ ಬಾಧಕಗಳ ಬಗ್ಗೆ ಚರ್ಚೆ ಮಾಡಿ. ಆದಷ್ಟು ಬೇಗ ಸದನದಲ್ಲಿ ನಿರ್ಣಯವಾಗಿ ಕಾಯ್ದೆ ಆಗಬೇಕು. ಆಗ ಬೇಕಾದರೆ ಯಾರು ಬೇಕಾದರು ಕಾನೂನು ಹೋರಾಟ ಮಾಡಲಿ ಎಂದಿದ್ದಾರೆ.
ಉದ್ಯಮಿ ಮೋಹನ್ದಾಸ್ ಪೈ ವಿರುದ್ಧ ಟಿ.ಎ.ನಾರಾಯಣಗೌಡ ಕಿಡಿ
ಕರ್ನಾಟಕದ ನೆಲದಲ್ಲಿ ಕೋಟ್ಯಂತರ ರೂ. ಆದಾಯ ಮಾಡಿದ್ದೀರಾ. ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸಿದ್ದೀರಿ ಎಂದು ಉದ್ಯಮಿ ಮೋಹನ್ದಾಸ್ ಪೈ ವಿರುದ್ಧ ಕಿಡಿಕಾರಿದ್ದಾರೆ. ಬೇರೆ ರಾಜ್ಯಕ್ಕೆ ಕಂಪನಿಗಳನ್ನು ಸ್ಥಳಾಂತರ ಮಾಡುತ್ತೇವೆ ಅಂತಾ ಹೇಳ್ತಾರೆ. ಬೇರೆ ರಾಜ್ಯಗಳಲ್ಲಿ ಸ್ಥಳೀಯ ಭಾಷಿಕರಿಗೆ ಮೀಸಲಾತಿ ಕೇಳಲ್ವಾ? ಯಾವುದೇ ಬ್ಲ್ಯಾಕ್ಮೇಲ್ಗೆ ಹೆದರಬೇಡಿ ಅಂತಾ ಸಿಎಂಗೆ ಹೇಳ್ತೇವೆ. ನಾವು ಕನ್ನಡಿಗರು ನಿಮ್ಮ ಜೊತೆಗಿದ್ದೇವೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.