- TV9 Kannada Kannada News Photos Navaratri Special: Davangere Temple Adorns Goddess Kannika Parameshwari with 9.5 Lakh in Currency Notes
ದೇವಿಗೆ ಹಣದಿಂದಲೇ ಸಿಂಗಾರ: 9.50 ಲಕ್ಷ ನೋಟಿನ ಅಲಂಕಾರದಲ್ಲಿ ಕಂಗೊಳಿಸಿದ ಪರಮೇಶ್ವರಿ
ದಾವಣಗೆರೆಯಲ್ಲಿ ಶತಮಾನಗಳಿಂದ ಕನ್ನಿಕಾ ಪರಮೇಶ್ವರಿ ದೇವಿಗೆ ವಿಶೇಷ ಧನಲಕ್ಷ್ಮಿ ಪೂಜೆ ಮಾಡಿಕೊಂಡು ಬರಲಾಗುತ್ತಿದೆ. ದೇವಿಯನ್ನು ಲಕ್ಷಾಂತರ ರೂ ಮೌಲ್ಯದ ಹಣದ ನೋಟುಗಳಿಂದ ಅಲಂಕರಿಸಲಾಗುತ್ತದೆ. ಇದು ಹಣ್ಣು-ಕಾಯಿ ಬದಲಿಗೆ ಕಾಂಚಾಣ ಮೂಲಕ ಭಕ್ತಿ ಸಮರ್ಪಿಸುವ ವಿಶಿಷ್ಟ ಸಂಪ್ರದಾಯವನ್ನು ಇಲ್ಲಿ ಕಾಣಬಹುದು. ಇಲ್ಲಿವೆ ನೋಡಿ ಫೋಟೋಸ್.
Updated on: Oct 21, 2026 | 6:51 PM

ಕಳೆದ ಒಂದು ಶತಮಾನಗಳಿಂದ ದಾವಣಗೆರೆಯಲ್ಲಿ ಕನ್ನಿಕಾ ಪರಮೇಶ್ವರಿ ದೇವಿಗೆ ವಿಶೇಷ ಪೂಜೆ ಮಾಡಲಾಗುತ್ತಿದೆ. ಹಣ್ಣು ಕಾಯಿ, ಅರಿಶಿನ, ಕುಂಕುಮ ಹೀಗೆ ಹಲವು ಸಾಮಾಗ್ರಿಗಳಿಂದ ಪೂಜಾ ಮಾಡುವುದನ್ನು ನೋಡಿದ್ದೇವೆ. ಆದರೆ ಈ ದೇವಿಯ ವಿಶೇಷತೆಯೇ ಬೇರೆ. ಕಾಂಚಾಣ ಅಂದರೆ ದೇವಿಗೆ ಬಲು ಇಷ್ಟವಂತೆ. ಹೀಗಾಗಿ ಗರಿಗರಿ ನೋಟುಗಳಿಂದ ದೇವಿಗೆ ಸಿಂಗಾರ ಮಾಡಿರುವುದನ್ನು ಕಾಣಬಹುದು.

ದಾವಣಗೆರೆಯ ಹಳೇ ನಗರದಲ್ಲಿ ಕನ್ನಿಕಾ ಪರಮೇಶ್ವರಿ ದೇವಸ್ಥಾನವಿದ್ದು, ನಗರದ ಬಹುತೇಕ ಜನರು ಭೇಟಿ ನೀಡುತ್ತಾರೆ. ಇನ್ನು ಇಲ್ಲಿ ನಿರಂತರವಾಗಿ ವಿಶೇಷ ಪೂಜೆಗಳು ನಡೆಯುತ್ತವೆ.

ದಸರಾ ಸಂದರ್ಭದಲ್ಲಿ ಒಂಬತ್ತು ದಿನಗಳ ಕಾಲ ನಿರಂತರವಾಗಿ ಪೂಜೆಗಳು ನಡೆಯುತ್ತವೆ. ಅರಿಶಿನ ಕುಂಕುಮ, ಮಂತ್ರಾಕ್ಷತೆ, ಮುತ್ತಿನ ಅಲಂಕಾರ, ವಿಳ್ಯದೆಲೆ ಹೀಗೆ ಒಂದೊಂದು ದಿನ ಒಂದೊಂದು ಪೂಜೆ ನಡೆಯುತ್ತಿದೆ. ಕೊನೆಯದಾಗಿ ಧನಲಕ್ಷ್ಮಿ ಪೂಜೆ ಮಾಡಲಾಗುತ್ತದೆ.

ಧನಲಕ್ಷ್ಮಿ ಪೂಜೆ ಅಂದರೆ ಕಾಂಚಾಣ ಕಡ್ಡಾಯ. ಮೇಲಾಗಿ ಶ್ರೀಮಂತರು, ವ್ಯಾಪಾರಿಗಳೇ ಜಾಸ್ತಿ ಭಕ್ತರಿದ್ದು, ಗರಿಗರಿ ನೋಟುಗಳಿಂದ ದೇವಿ ಸಿಂಗಾರ ಮಾಡಲಾಗುತ್ತದೆ. 10, 20, 50, 100, 200, 500 ಮತ್ತು ಎರಡು ಸಾವಿರ ರೂ ನೋಟುಗಳನ್ನ ಬಳಸಿಕೊಂಡು ಬರೋಬರಿ 9.50 ಲಕ್ಷ ರೂ.ಯಿಂದ ದೇವಿಗೆ ಸಿಂಗಾರ ಮಾಡಲಾಗಿದೆ.

ಇನ್ನು ಸಪ್ತ ಸಾಗರದಂತೆ, ಸಪ್ತ ಬಾಗಿಲುಗಳು ಎಂಬ ಪರಿಕಲ್ಪನೆಯಲ್ಲಿ ಅಲಂಕಾರ ಮಾಡಲಾಗಿದೆ. ಸ್ವರ್ಗ ಪ್ರಾಪ್ತವಾಗಬೇಕೆಂದರೆ ಏಳು ಬಾಗಿಲು ದಾಟಬೇಕಂತೆ. ಹಾಗಾಗಿ ಅದೇ ಪರಿಕಲ್ಪನೆಯಲ್ಲಿ ಸಪ್ತ ಬಾಗಿಲು ಮಾಡಲಾಗಿದೆ.

ದೇವಿಯ ಈ ಅಲಂಕಾರ ಮಾಡಲು ಮೂರು ದಿನ ಸಮಯ ಹಿಡಿದಿದೆ. ಮೇಲಾಗಿ ಇದು ಭಕ್ತರಿಂದ ಸಂಗ್ರಹಿಸಿದ ಹಣ. ಪೂಜೆಗೆ ಬಳಸಿದ ಈ ಹಣ ಎಲ್ಲವು ದೇವಸ್ಥಾನದ ಸಮಿತಿಗೆ ಸೇರುತ್ತದೆ. ಮೇಲಾಗಿ ವ್ಯಾಪಾರದಲ್ಲಿ ವೃದ್ಧಿ ಕಾಣಲಿ ಎಂಬ ಉದ್ದೇಶದಿಂದ ಧನಲಕ್ಷ್ಮಿ ಪೂಜೆ ಮಾಡಲಾಗಿದೆ ಎಂಬುದು ದೇವಸ್ಥಾನ ಸಮಿತಿಯ ಮಾತು.

ಬಸವರಾಜ್ ದೊಡಮನಿ. 2007ರಿಂದ ಟಿವಿ9 ಕನ್ನಡದ ದಾವಣಗೆರೆ ಜಿಲ್ಲಾ ವರದಿಗಾರರಾಗಿದ್ದಾರೆ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳದಲ್ಲಿ. ತಂದೆ ಗಂಗಪ್ಪ ದೊಡಮನಿ ಕೃಷಿಕ. ತಾಯಿ ಲಕ್ಕಮ್ಮ ದೊಡಮನಿ. ಇವರದ್ದು ನಾಟಿ ವೈದ್ಯರ ಕುಟುಂಬ. ಜನ ಜಾನುವಾರುಗಳು ರೋಗಕ್ಕೆ ಔಷಧಿ ನೀಡುವುದು ಇವರ ಕುಟುಂಬದ ಕಾಯಕ. 2000 ನಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ವೃತ್ತಿ ಜೀವನ ಆರಂಭವಾಗಿದ್ದು ಕನ್ನಡ ಪ್ರಭ ಪತ್ರಿಕೆಯಿಂದ. ಧಾರವಾಡ ಜಿಲ್ಲಾ ವರದಿಗಾರನಾಗಿ ಸೇವೆ. ಹತ್ತಕ್ಕೂ ಹೆಚ್ಚು ಲೋಕಸಭೆ ಹಾಗೂ ವಿಧಾನ ಸಭೆ ಸದನದ ವರದಿ ಮಾಡಿದ ಅನುಭವ. ಪುಸ್ತಕ ಓದುವುದು, ಜಾನಪದ ಕಲೆ ಉಳಿವಿಗೆ ದಾಖಲೆ ಸಂಗ್ರಹಿಸಿವುದು ಇವರ ಹವ್ಯಾಸ.
Read More